ADVERTISEMENT

ಪ್ರೀ ಕ್ವಾರ್ಟರ್‌ಗೆ ಲಗ್ಗೆಯಿಟ್ಟ ಸಿಂಧು

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌; ಪ್ರಣವ್‌–ಸಿಕ್ಕಿ ಜೋಡಿಗೆ ಜಯಭೇರಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2017, 19:53 IST
Last Updated 22 ಆಗಸ್ಟ್ 2017, 19:53 IST
ಪ್ರೀ ಕ್ವಾರ್ಟರ್‌ಗೆ ಲಗ್ಗೆಯಿಟ್ಟ ಸಿಂಧು
ಪ್ರೀ ಕ್ವಾರ್ಟರ್‌ಗೆ ಲಗ್ಗೆಯಿಟ್ಟ ಸಿಂಧು   

ಗ್ಲಾಸ್ಗೊ: ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದುಕೊಂಡಿದ್ದ ಭಾರತದ ಪಿ.ವಿ ಸಿಂಧು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಮಂಗಳವಾರ ಪ್ರೀ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ ಸಿಂಧು ಎರಡನೇ ಸುತ್ತಿನ ಪಂದ್ಯದಲ್ಲಿ 21–16, 21–14ರಲ್ಲಿ ಕೊರಿಯಾದ ಕಿಮ್‌ ಹ್ಯೊ ಮಿನ್ ಅವರನ್ನು ಮಣಿಸಿದರು. 49ನಿಮಿಷಗಳ ಕಾಲ ನಡೆದ ಪೈಪೋಟಿಯಲ್ಲಿ ಸಿಂಧು ಮೇಲುಗೈ ಸಾಧಿಸಿದರು.

ಈ ಹಿಂದಿನ ಟೂರ್ನಿಗಳಲ್ಲಿ ನಡೆದಿದ್ದ ಐದು ಪಂದ್ಯಗಳ ಮುಖಾಮುಖಿಯಲ್ಲಿ ಸಿಂಧು ಅವರು, ಕಿಮ್ ಎದುರು ನಾಲ್ಕರಲ್ಲಿ ಜಯಿಸಿದ್ದರು. 2013 ಮತ್ತು 2014ರ ಆವೃತ್ತಿಗಳಲ್ಲಿ ಎರಡು ಬಾರಿ ಕಂಚು ಜಯಿಸಿದ್ದ ಸಿಂಧು ಇಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿದ್ದಾರೆ. ಮುಂದಿನ ಸುತ್ತಿನಲ್ಲಿ ಸಿಂಧು ರಷ್ಯಾದ ಇವಾಗ್ನಿವಾ ಕೋಸ್ಟಸ್ಕಯಾ ಅಥವಾ ಹಾಂಕಾಂಗ್‌ನ 13ನೇ ಶ್ರೇಯಾಂಕದ ಚೆವುಂಗ್‌ ನಗನ್ ಯಿ ವಿರುದ್ಧ ಆಡಲಿದ್ದಾರೆ.

ADVERTISEMENT

ಸಿಂಗಪುರ ಓಪನ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದ ಬಿ. ಸಾಯಿಪ್ರಣೀತ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಶುಭಾರಂಭ ಮಾಡಿದ್ದಾರೆ.  ಸಾಯಿಪ್ರಣೀತ್ ಅವರು 21–18, 21–17ರಲ್ಲಿ ನೇರ ಗೇಮ್‌ಗಳಿಂದ ಹಾಂಕಾಂಗ್‌ನ ವೀ ನಾನ್‌ ಅವರನ್ನು ಸೋಲಿಸಿದರು.

ಆರಂಭದಲ್ಲಿ 5–9, 10–13, 14–16ರಲ್ಲಿ ಹಿಂದೆ ಇದ್ದ ಪ್ರಣೀತ್‌ ಬಳಿಕ ಮೊದಲ ಗೇಮ್‌ನ ಅಂತಿಮ ಹಂತದಲ್ಲಿ ಮಿಂಚುವ ಮೂಲಕ ಅಮೋಘ ಸ್ಮ್ಯಾಷ್ ಮತ್ತು ರಿಟರ್ನ್ಸ್‌ಗಳಿಂದ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದರು. ಎರಡನೇ ಗೇಮ್‌ನಲ್ಲಿ ಕೂಡ 10–13, 15–17ರಲ್ಲಿ ತೀವ್ರ ಸ್ಪರ್ಧೆ ನೀಡಿದ್ದ ಪ್ರಣೀತ್‌ ಚುರುಕಿನ ಆಟದಿಂದ ಗೇಮ್‌ ಗೆದ್ದುಕೊಂಡರು. 48 ನಿಮಿಷದ ಪೈಪೋಟಿಯಲ್ಲಿ ಭಾರತದ ಆಟಗಾರ  ಮೇಲುಗೈ ಸಾಧಿಸಿದರು.  ಅವರು ಮುಂದಿನ ಸುತ್ತಿನಲ್ಲಿ ಇಂಡೊನೇಷ್ಯಾದ ಅಂಥೋಣಿ ಸಿನಿಸುಕಾ ಗಿಂಟಿಂಗ್ ಮೇಲೆ ಆಡಲಿದ್ದಾರೆ.

ಪ್ರಣವ್‌–ಸಿಕ್ಕಿ ಜೋಡಿಗೆ ಜಯ: ಭಾರತದ ಅಗ್ರಗಣ್ಯ ಮಿಶ್ರ ಡಬಲ್ಸ್ ಜೋಡಿ ಪ್ರಣವ್ ಜೆರಿ ಚೋಪ್ರಾ ಮತ್ತು ಎನ್‌.ಸಿಕ್ಕಿ ರೆಡ್ಡಿ 21–12, 21–19ರಲ್ಲಿ ಇಂಡೋ–ಮಲೇಷ್ಯನ್ ಜೋಡಿ ಪ್ರಜಕ್ತಾ ಸಾವಂತ್‌ ಮತ್ತು ಯೋಗೇಂದ್ರನ್ ಕೃಷ್ಣನ್‌ ವಿರುದ್ಧ ಗೆದ್ದರು. ಸೈಯ್ಯದ್ ಮೋದಿ ಗ್ರ್ಯಾನ್ ಪ್ರಿ ಗೋಲ್ಡ್ ಟೂರ್ನಿಯಲ್ಲಿ ಗೆಲುವು ದಾಖಲಿಸಿದ್ದ ಭಾರತದ ಜೋಡಿ ಎರಡೂ ಗೇಮ್‌ಗಳಲ್ಲಿ ಪ್ರಾಬಲ್ಯ ಮೆರೆಯಿತು.

ಅಶ್ವಿನಿ–ಸುಮೀತ್‌ಗೆ ಸೋಲು: ಭಾರತದ ಇನ್ನೊಂದು ಮಿಶ್ರ ಡಬಲ್ಸ್ ಜೋಡಿ ಬಿ. ಸುಮೀತ್ ರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ 17–21, 21–18, 5–21ರಲ್ಲಿ 13ನೇ ಶ್ರೇಯಾಂಕದ ಚೀನಾದ ವಾಂಗ್‌ ಯಿಯು ಮತ್ತು ಹುವಾಂಗ್‌ ದೊಂಗಪಿಂಗ್‌ ಮೇಲೆ ಸೋಲು ಅನುಭವಿಸಿದೆ.

ಸೈಯ್ಯದ್ ಮೋದಿ ಗ್ರ್ಯಾನ್‌ಪ್ರಿ ಗೋಲ್ಡ್ ಟೂರ್ನಿಯಲ್ಲಿ ಫೈನಲ್ ತಲುಪಿದ್ದ ಈ ಜೋಡಿ ಅಂತಿಮ ಗೇಮ್‌ನಲ್ಲಿ ಸುಲಭದಲ್ಲಿ ಗೆಲುವು ಬಿಟ್ಟುಕೊಟ್ಟಿತು. ಸಾತ್ವಿಕ್‌ ಸಾಯಿರಾಜ್‌  ರಣಕಿರೆಡ್ಡಿ ಮತ್ತು ಕೆ. ಮನೀಷಾ ಜೋಡಿ 20–22, 18–21ರಲ್ಲಿ ಡೆನ್ಮಾರ್ಕ್‌ನ ಮತಿಯಾಸ್‌ ಕ್ರಿಸ್ಟಿಯನ್‌ಸೆನ್‌ ಮತ್ತು ಸಾರಾ ಥಗೆನ್ಸನ್ ಮೇಲೆ ಸೋತಿದೆ.

ರಿತುಪರ್ಣಾಗೆ ಜಯ: ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ರಿತುಪರ್ಣಾ ದಾಸ್‌ ಜಯ ದಾಖಲಿಸಿದ್ದಾರೆ. ಪಂದ್ಯ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಫಿನ್ಲೆಂಡ್‌ನ ಅರಿಜಿ ಮಿಕ್ಕೆಲಾ ಗಾಯಗೊಂಡು ಪಂದ್ಯದಿಂದ ಹಿಂದೆಸರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.