ADVERTISEMENT

ಫೈನಲ್‌ಗೆ ಕರ್ನಾಟಕ ಬಾಲಕಿಯರು

ರಾಷ್ಟ್ರೀಯ ಶಾಲಾ ಟೆನಿಸ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 19:53 IST
Last Updated 19 ಜನವರಿ 2017, 19:53 IST
ಮೈಸೂರಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಶಾಲಾ ಟೆನಿಸ್‌ ಟೂರ್ನಿಯ ಗುರುವಾರದ ಪಂದ್ಯದಲ್ಲಿ ಕರ್ನಾಟಕ ತಂಡದ ವಿದುಲಾ ಅವರು ಚೆಂಡನ್ನು ರಿಟರ್ನ್‌ ಮಾಡಿದ ರೀತಿ  ಪ್ರಜಾವಾಣಿ ಚಿತ್ರ
ಮೈಸೂರಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಶಾಲಾ ಟೆನಿಸ್‌ ಟೂರ್ನಿಯ ಗುರುವಾರದ ಪಂದ್ಯದಲ್ಲಿ ಕರ್ನಾಟಕ ತಂಡದ ವಿದುಲಾ ಅವರು ಚೆಂಡನ್ನು ರಿಟರ್ನ್‌ ಮಾಡಿದ ರೀತಿ ಪ್ರಜಾವಾಣಿ ಚಿತ್ರ   

ಮೈಸೂರು:  ಗಮನಾರ್ಹ ಪ್ರದರ್ಶನ ತೋರಿದ ಕರ್ನಾಟಕ ತಂಡದ ಬಾಲಕಿ ಯರು ಭಾರತೀಯ ಶಾಲಾ ಕ್ರೀಡಾ ಒಕ್ಕೂಟ (ಎಸ್‌ಜಿಎಫ್‌ಐ) ಆಶ್ರಯದ 62ನೇ ರಾಷ್ಟ್ರೀಯ ಶಾಲಾ ಟೆನಿಸ್‌ ಟೂರ್ನಿಯ 17 ವರ್ಷದೊಳಗಿನವರ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಮೈಸೂರು ಟೆನಿಸ್‌ ಕ್ಲಬ್‌ ಕೋರ್ಟ್‌ನಲ್ಲಿ ಗುರುವಾರ ನಡೆದ ಸೆಮಿಫೈನಲ್‌ನಲ್ಲಿ ಆತಿಥೇಯರು 2–0 ರಲ್ಲಿ ಗುಜರಾತ್‌ ತಂಡವನ್ನು ಪರಾಭವ ಗೊಳಿಸಿದರು.

ಮೊದಲ ಸಿಂಗಲ್ಸ್‌ನಲ್ಲಿ ರಾಜ್ಯ ತಂಡದ ಅಪೂರ್ವ 6–3ರಲ್ಲಿ ಭಕ್ತಿ ಎದುರು ಜಯ ಗಳಿಸಿದರು. ಈ ಮೂಲಕ 1–0 ಮುನ್ನಡೆ ದೊರಕಿಸಿಕೊಟ್ಟರು. ಎರಡನೇ ಸಿಂಗಲ್ಸ್‌ನಲ್ಲಿ ವಿದುಲಾ 6–3ರಲ್ಲಿ ಗುಜರಾತ್‌ನ ದಿವ್ಯಾ ಎದುರು ಗೆದ್ದು ಸಂಭ್ರಮಕ್ಕೆ ಕಾರಣರಾದರು.

ADVERTISEMENT

ಶುಕ್ರವಾರ ನಡೆಯಲಿರುವ ಫೈನಲ್‌ ನಲ್ಲಿ ಕರ್ನಾಟಕ ತಂಡದವರು ಛತ್ತೀಸ ಗಡ ತಂಡವನ್ನು ಎದುರಿಸಲಿದ್ದಾರೆ. ಮತ್ತೊಂದು ಸೆಮಿಫೈನಲ್‌ನಲ್ಲಿ ಛತ್ತೀಸ ಗಡ ತಂಡದವರು 2–1ರಲ್ಲಿ ಮಹಾ ರಾಷ್ಟ್ರ ಎದುರು ಗೆದ್ದು ಅಂತಿಮ ಘಟ್ಟ ಪ್ರವೇಶಿಸಿದರು.

ಇದಕ್ಕೂ ಮೊದಲು ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಕರ್ನಾಟಕ 2–0ರಲ್ಲಿ ಆಂಧ್ರಪ್ರದೇಶ ಎದುರು ಗೆಲುವು ಸಾಧಿಸಿತು. ವಿದುಲಾ 6–0ರಲ್ಲಿ ಲಕ್ಷ್ಮಿ ಎದುರೂ, ಅಪೂರ್ವ 6–0ರಲ್ಲಿ ಚಂದನಾ ವಿರುದ್ಧವೂ ಜಯ ಗಳಿಸಿದರು.

ಬಾಲಕರಿಗೆ ಸೋಲು: ಕರ್ನಾಟಕದ ಬಾಲಕರು ಕ್ವಾರ್ಟರ್‌ ಫೈನಲ್‌ ಹಂತದಲ್ಲೇ ನಿರಾಸೆ ಅನುಭವಿಸಿದರು. 17 ವರ್ಷದೊಳಗಿನವರ ವಿಭಾಗದಲ್ಲಿ ರಾಜ್ಯ ತಂಡದವರು 0–2ರಲ್ಲಿ ದೆಹಲಿ ತಂಡಕ್ಕೆ ಶರಣಾದರು. ಈಶ್ವರ್‌ ಶಶಿಧರ್‌ 0–6ರಲ್ಲಿ ರೀತಮ್‌ ಎದುರೂ, ವಿಶ್ವಾಸ್‌ 4–6ರಲ್ಲಿ ಸೌರವ್‌ ವಿರುದ್ಧವೂ ಸೋಲು ಕಂಡರು.

ಸೆಮಿಫೈನಲ್‌ ಪಂದ್ಯಗಳಲ್ಲಿ ದೆಹಲಿ ತಂಡ 2–0ರಲ್ಲಿ ಮಹಾರಾಷ್ಟ್ರ ಎದುರೂ, ಗುಜರಾತ್‌ ತಂಡ 2–0ರಲ್ಲಿ ತಮಿಳು ನಾಡು ವಿರುದ್ಧವೂ ಗೆಲುವು ಸಾಧಿಸಿದವು.
14 ವರ್ಷದೊಳಗಿನವರ ವಿಭಾಗ ದಲ್ಲಿ ಕರ್ನಾಟಕ ತಂಡದವರು 0–2ರಲ್ಲಿ ಮಧ್ಯಪ್ರದೇಶ ಎದುರು ಪರಾಭವ ಗೊಂಡರು. ಸುಮನ್‌ 0–6ರಲ್ಲಿ ಅನ್ಷು ಮಾನ್‌ ಎದುರೂ, ನಿನಾದ್‌ ರವಿ 2–6 ರಲ್ಲಿ ಕುಶ್‌ ವಿರುದ್ಧವೂ ಸೋತರು.

ಸೆಮಿಫೈನಲ್‌ ಪಂದ್ಯಗಳಲ್ಲಿ ಮಧ್ಯ ಪ್ರದೇಶ 2–0ರಲ್ಲಿ ಹರಿಯಾಣ ಎದುರೂ, ಗುಜರಾತ್‌ 2–0ರಲ್ಲಿ ಮಹಾರಾಷ್ಟ್ರ ಎದುರೂ ಜಯ ಗಳಿಸಿದವು. ಇದೇ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ತೆಲಂಗಾಣ ತಂಡ 2–0ರಲ್ಲಿ ಹರಿಯಾಣ ಎದುರೂ, ತಮಿಳುನಾಡು 2–1ರಲ್ಲಿ ಗುಜರಾತ್‌ ವಿರುದ್ಧವೂ ಗೆಲುವು ಸಾಧಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.