ADVERTISEMENT

ಬಿಗ್‌ ಬಾಷ್‌ನಲ್ಲಿ ಮಂದಾನ

ಪಿಟಿಐ
Published 27 ಸೆಪ್ಟೆಂಬರ್ 2016, 19:30 IST
Last Updated 27 ಸೆಪ್ಟೆಂಬರ್ 2016, 19:30 IST
ಸ್ಮೃತಿ ಮಂದಾನ
ಸ್ಮೃತಿ ಮಂದಾನ   

ನವದೆಹಲಿ:  ಭಾರತದ ಪ್ರತಿಭಾನ್ವಿತ ಆಟಗಾರ್ತಿ ಸ್ಮೃತಿ ಮಂದಾನ ಅವರು ಆಸ್ಟ್ರೇಲಿಯಾದ ಪ್ರತಿಷ್ಠಿತ  ಮಹಿಳಾ ಬಿಗ್‌ ಬಾಷ್‌ ಲೀಗ್‌ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಆಡಲಿದ್ದಾರೆ.

ಈ ಸಂಬಂಧ ಬ್ರಿಸ್ಬೇನ್‌ ಹೀಟ್‌ ತಂಡ ಮಂದಾನ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ವಿಷಯವನ್ನು ಹೀಟ್‌ ಫ್ರಾಂಚೈಸ್‌ ಮಂಗಳವಾರ ಬಹಿರಂಗಪಡಿಸಿದೆ.

ಮಂದಾನ ಅವರು ಈ ಲೀಗ್‌ನಲ್ಲಿ ಆಡುತ್ತಿರುವ ಭಾರತದ ಎರಡನೇ ಆಟಗಾರ್ತಿ ಎಂಬ ಶ್ರೇಯಕ್ಕೆ ಭಾಜನರಾಗಿದ್ದಾರೆ. ಹರ್ಮನ್‌ಪ್ರೀತ್‌ ಕೌರ್‌ ಅವರು ಮೊದಲು ಈ ಸಾಧನೆ ಮಾಡಿದ್ದರು. ಅವರು ಹಾಲಿ ಚಾಂಪಿ ಯನ್‌ ಸಿಡ್ನಿ ಥಂಡರ್ಸ್‌ ತಂಡದಲ್ಲಿದ್ದಾರೆ. 20 ವರ್ಷದ ಮುಂಬೈನ ಆಟಗಾರ್ತಿ 2013ರಲ್ಲಿ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

2014ರಲ್ಲಿ ಇಂಗ್ಲೆಂಡ್‌ ವಿರುದ್ಧ ಮೊದಲ ಟೆಸ್ಟ್‌ ಆಡಿದ್ದ ಆಲ್‌ರೌಂಡರ್‌ ಮಂದಾನ ಆ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಭಾರತ ತಂಡ ಐತಿಹಾಸಿಕ ಗೆಲುವು ಗಳಿಸಲು ನೆರವಾಗಿದ್ದರು. ಈ ವರ್ಷದ ಆರಂಭದಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಟ್ವೆಂಟಿ–20 ಕ್ರಿಕೆಟ್‌ ಸರಣಿಯಲ್ಲಿ ಗಮನ ಸೆಳೆದಿದ್ದರು.

‘ಬಿಗ್‌ಬಾಷ್‌ ಲೀಗ್‌ನಲ್ಲಿ ಆಡುವ ಅವಕಾಶ ಸಿಕ್ಕಿರುವುದಕ್ಕೆ ಅತೀವ ಸಂತಸವಾಗುತ್ತಿದೆ. ಹೀಟ್ಸ್‌ ತಂಡದಲ್ಲಿರುವ ಆಸ್ಟ್ರೇಲಿಯಾದ ಅನುಭವಿ ಆಟಗಾರ್ತಿಯರ ಜೊತೆ ಆಡುವ ಅವಕಾಶಕ್ಕಾಗಿ ಎದುರು ನೋಡುತ್ತಿದ್ದೇನೆ’ ಎಂದು ಮಂದಾನ ಹೇಳಿದ್ದಾರೆ. ಮಂದಾನ ಎರಡು ಟೆಸ್ಟ್‌ ಆಡಿದ್ದು  81ರನ್‌ ಗಳಿಸಿದ್ದಾರೆ. 20 ಏಕದಿನ ಪಂದ್ಯಗಳಿಂದ 645ರನ್‌ ಪೇರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.