ADVERTISEMENT

ಭಾರತಕ್ಕೆ ಚೀನಾ ಸವಾಲು

ಬ್ಯಾಡ್ಮಿಂಟನ್: ಕ್ವಾರ್ಟರ್‌ಫೈನಲ್‌ ಪಂದ್ಯ ಇಂದು

ಪಿಟಿಐ
Published 25 ಮೇ 2017, 19:30 IST
Last Updated 25 ಮೇ 2017, 19:30 IST
ಕೆ. ಶ್ರೀಕಾಂತ್‌
ಕೆ. ಶ್ರೀಕಾಂತ್‌   

ಗೋಲ್ಡ್ ಕೋಸ್ಟ್‌, ಆಸ್ಟ್ರೇಲಿಯಾ (ಪಿಟಿಐ): ಲೀಗ್‌ ಹಂತದಲ್ಲಿ ತಲಾ ಒಂದು ಸೋಲು ಮತ್ತು ಗೆಲುವಿನ ಮೂಲಕ ನಾಕೌಟ್ ಹಂತ ಪ್ರವೇಶಿಸಿರುವ ಭಾರತ ತಂಡದವರು ಸುದಿರ್ಮನ್ ಕಪ್‌ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್‌ ಪಂದ್ಯಕ್ಕೆ ಸಜ್ಜಾಗಿದ್ದಾರೆ.

ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ತಂಡ ಬಲಿಷ್ಠ ಚೀನಾದ ಸವಾಲನ್ನು ಮೆಟ್ಟಿ ನಿಲ್ಲಬೇಕಾಗಿದೆ. ಸುದಿರ್ಮನ್ ಕಪ್‌ನಲ್ಲಿ ಈ ಹಿಂದೆ 2011ರಲ್ಲಿ ಭಾರತ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿತ್ತು. ಆಗಲೂ ತಂಡಕ್ಕೆ ಚೀನಾ ಎದುರಾಳಿಯಾಗಿತ್ತು. ಆ ಪಂದ್ಯದಲ್ಲಿ ಭಾರತ 1–3ರ ಸೋಲು ಕಂಡಿತ್ತು. 10 ಬಾರಿ ಪ್ರಶಸ್ತಿ ಗೆದ್ದಿರುವ ಚೀನಾ ತಂಡ ಈ ಬಾರಿಯೂ ಬಲಿಷ್ಠವಾಗಿದೆ. ಒಲಿಂಪಿಯನ್ ಲಿನ್ ಡ್ಯಾನ್‌ ಮತ್ತು  ಚೆನ್ ಲಾಂಗ್ ಅವರನ್ನು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಮಣಿಸುವುದು ಭಾರತಕ್ಕೆ ಸವಾಲಾಗಲಿದೆ.

ಭಾರತದ ಸಿಂಗಲ್ಸ್‌ ಆಟಗಾರರ ಪೈಕಿ ಕಿದಂಬಿ ಶ್ರೀಕಾಂತ್‌ ಮಾತ್ರ ಲಿನ್‌ ಡ್ಯಾನ್‌ ವಿರುದ್ಧ ಗೆದ್ದ ಸಾಧನೆ ಮಾಡಿದ್ದಾರೆ. 2014ರ ಚೀನಾ ಓಪನ್‌ ಟೂರ್ನಿಯ ಫೈನಲ್‌ನಲ್ಲಿ ಲಿನ್‌ ಅವರನ್ನು ಶ್ರೀಕಾಂತ್ ಮಣಿಸಿದ್ದರು. ರಿಯೊ ಒಲಿಂಪಿಕ್ಸ್‌ನಲ್ಲಿ  ಬೆಳ್ಳಿ ಪದಕ ಗೆದ್ದಿರುವ ಪಿ.ವಿ.ಸಿಂಧು ಅವರಿಗೆ ಮಹಿಳೆಯರ ಸಿಂಗಲ್ಸ್‌ನಲ್ಲಿ ಕಠಿಣ ಸವಾಲು ಎದುರಾಗಲಿದೆ.

ADVERTISEMENT

ಶುಕ್ರವಾರದ ಪಂದ್ಯದಲ್ಲಿ ಅವರು ವಿಶ್ವದ ಆರನೇ ಕ್ರಮಾಂಕದ ಆಟಗಾರ್ತಿ ಸುನ್‌ ಯೂ ಅಥವಾ ಏಳನೇ ನಂಬರ್ ಆಟಗಾರ್ತಿ ಹಿ ಬಿಂಜಿಯಾವೊ ಅವರನ್ನು ಎದುರಿಸಬೇಕಾಗಿದೆ. ಕಳೆದ ತಿಂಗಳು ನಡೆದ ಏಷ್ಯಾ ಚಾಂಪಿಯನ್‌ಷಿಪ್‌ನಲ್ಲಿ ಬಿಂಜಿಯಾವೊ ವಿರುದ್ಧ ಸೋಲುಂಡಿರುವ ಸಿಂಧು ಕಳೆದ ವರ್ಷ ವಿಶ್ವ ಸೂಪರ್ ಸೀರೀಸ್‌ನ ಫೈನಲ್‌ನಲ್ಲಿ ಸೂನ್‌ ವಿರುದ್ಧವೂ ಪರಾಭವಗೊಂಡಿದ್ದರು.

ಮಹಿಳೆಯರ ಡಬಲ್ಸ್‌ನಲ್ಲಿ ಸಮಬಲದ ಹೋರಾಟ ಕಂಡುಬರುವ ಸಾಧ್ಯತೆ ಇದೆ. ವಿಶ್ವದ ನಾಲ್ಕನೇ ಕ್ರಮಾಂಕದ ಜೋಡಿ ಕ್ವಿಂಚೆನ್ ಮತ್ತು ಜಿಯಾ ಇಫಾನ್ ಅವರನ್ನು ಭಾರತರ ಅಶ್ವಿನಿ ಪೊನ್ನಪ್ಪ ಹಾಗೂ ಸಿಕ್ಕಿ ರೆಡ್ಡಿ ಹೇಗೆ ಎದುರಿಸುವರು ಎಂಬ ಕುತೂಹಲ ಮೂಡಿದೆ.

ಮಿಶ್ರ ಡಬಲ್ಸ್‌ನಲ್ಲಿ ಅಶ್ವಿನಿ ಮತ್ತು ಯುವ ಆಟಗಾರ ಸಾತ್ವಿಕ್ ಸಾಯಿರಾಜ್‌ ಟೂರ್ನಿಯಲ್ಲಿ ಈ ವರೆಗೆ ಉತ್ತಮ ಆಟ ಆಡಿದ್ದಾರೆ. ನಾಕೌಟ್ ಪಂದ್ಯದಲ್ಲಿ ಈ ಜೋಡಿ ವಿಶ್ವದ ಎರಡನೇ ನಂಬರ್ ಜೋಡಿ ಲು ಕಾಯ್‌ ಮತ್ತು ಹುವಾಂಗ್‌ ಯಾಕಿಯಾಂಗ್ ಅವರನ್ನು ಎದುರಿಸಬೇಕಾಗಿದೆ. ಪುರುಷರ ಡಬಲ್ಸ್‌ನಲ್ಲಿ ಬಿ.ಸುಮಿತ್‌ ರೆಡ್ಡಿ ಮತ್ತು ಮನು ಅತ್ರಿ ವಿಶ್ವದ ಮೂರನೇ ನಂಬರ್‌ ಜೋಡಿ ಲ್ಯು ಯೂಚೆನ್‌–ಲಿ ಜುನ್‌ಹ್ಯು ಅಥವಾ ಜಾಂಗ್ ನನ್‌–ಫು ಹೈಫಿಯೆಂಗ್ ಜೋಡಿ ವಿರುದ್ಧ ಸೆಣಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.