ADVERTISEMENT

ಭಾರತಕ್ಕೆ ಮೂರು ಕಂಚು

ಪಿಟಿಐ
Published 18 ಜುಲೈ 2017, 19:30 IST
Last Updated 18 ಜುಲೈ 2017, 19:30 IST

ನವದೆಹಲಿ: ಅಪೂರ್ವ ಸಾಮರ್ಥ್ಯ ತೋರಿದ ಭಾರತದ ಮಹಿಳಾ ಜೂಡೊ ಸ್ಪರ್ಧಿಗಳು ಕಿರ್ಗಿಸ್ತಾನದ ಬಿಷಕೆಕ್‌ನಲ್ಲಿ ನಡೆದ ಏಷ್ಯನ್‌ ಜೂನಿಯರ್‌ ಜೂಡೊ ಚಾಂಪಿಯನ್‌ಷಿಪ್‌ನಲ್ಲಿ ಮೂರು ಕಂಚು ಗೆದ್ದಿದ್ದಾರೆ.

ಮಹಿಳೆಯರ 44 ಕೆ.ಜಿ. ವಿಭಾಗದ ಕಂಚಿನ ಪದಕದ ಪ್ಲೇ ಆಫ್‌ ಹೋರಾಟದಲ್ಲಿ ಪ್ರೀತಿ ಅವರು ಮಕಾವ್‌ನ ಐ ಚೆಂಗ್‌ ಲೀ ಅವರನ್ನು ಸೋಲಿಸಿ ಕಂಚು ತಮ್ಮದಾಗಿಸಿಕೊಂಡರು.

ಇದಕ್ಕೂ ಮುನ್ನ ನಡೆದಿದ್ದ  ಪ್ರಾಥಮಿಕ ಸುತ್ತಿನ ಪೈಪೋಟಿಯಲ್ಲಿ ಚೀನಾ ತೈಪೆಯ ತ್ಸಾಯ್‌ ಚಿ ಚೊ ಅವರನ್ನು ಮಣಿಸಿದ್ದ ಉತ್ತರಪ್ರದೇಶದ ಪ್ರೀತಿ, ಸೆಮಿಫೈನಲ್‌ ಹಣಾಹಣಿಯಲ್ಲಿ ಉಜ್ಬೆಕಿಸ್ತಾನದ ಗುಲ್ನರ್‌ ಮುರಾತ್‌ ಬಯೆವಾ ವಿರುದ್ಧ  ಸೋತಿದ್ದರು.

ADVERTISEMENT

ಪಿಂಕಿಗೆ ಕಂಚು: ಮಹಿಳೆಯರ 52 ಕೆ.ಜಿ. ವಿಭಾಗದಲ್ಲಿ ಭಾರತದ ಸವಾಲು ಎತ್ತಿಹಿಡಿದಿದ್ದ ಪಿಂಕಿ ಬಲಹರ ಕಂಚಿಗೆ ಕೊರಳೊಡ್ಡಿದರು.

ಮೊದಲ ಎರಡು ಸುತ್ತುಗಳಲ್ಲಿ ಗೆದ್ದು ಬೀಗಿದ್ದ ಪಿಂಕಿ ಅವರು ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಚೀನಾ ತೈಪೆಯ ಲಿನ್‌ ಹುನ್‌ ಹೂ ವಿರುದ್ಧ ಸೋತಿದ್ದರು.

ಮೂರನೇ ಸ್ಥಾನಕ್ಕಾಗಿ ನಡೆದ ಪ್ಲೇ ಆಫ್‌ನಲ್ಲಿ ದೆಹಲಿಯ ಪಿಂಕಿ ಅವರು ದಕ್ಷಿಣ ಕೊರಿಯಾದ ನೆವೊಂಗ್‌ ಸಾಂಗ್‌ ಅವರ ಸವಾಲು ಮೀರಿನಿಂತರು.

ಮಾನ್‌ ಮಿಂಚು: ಮಹಿಳೆಯರ 78 ಕೆ.ಜಿ. ಮೇಲ್ಪಟ್ಟವರ ವಿಭಾಗದಲ್ಲಿ ಸ್ಪರ್ಧಿಸಿದ್ದ ಟುಲಿಕಾ ಮಾನ್‌ ಕೂಡ ಕಂಚು ತಮ್ಮದಾಗಿಸಿಕೊಂಡರು.

ಪ್ರಾಥಮಿಕ ಸುತ್ತಿನ ಪೈಪೋಟಿಯಲ್ಲಿ ಚೀನಾ ತೈಪೆಯ ಲಿಂಗ್‌ ಫಾಂಗ್‌ ಚಾಂಗ್‌ ವಿರುದ್ಧ ಸೋತಿದ್ದ ದೆಹಲಿಯ ಮಾನ್‌ ಅವರು ರಿಪೆಚೇಜ್‌ ಸುತ್ತಿನಲ್ಲಿ ಮಂಗೋಲಿಯಾದ ಬಲ್ಜಿನ್ಯಾಮ್‌ ಅವರನ್ನು ಮಣಿಸಿದ್ದರು.

ಕಂಚಿನ ಪದಕಕ್ಕಾಗಿ ನಡೆದ ಹೋರಾಟದಲ್ಲಿ ಟುಲಿಕಾ, ಮಂಗೋಲಿ ಯಾದ ಸೆರ್ಜಿಮ್ಯಾಡಾಗ್‌ ಶುರೆಂಚಿಮೆಗ್‌ ವಿರುದ್ಧ ಗೆದ್ದರು.

ಈ ವರ್ಷದ ಮೇ ತಿಂಗಳಿನಲ್ಲಿ ಹಾಂಕಾಂಗ್‌ನಲ್ಲಿ ನಡೆದಿದ್ದ ಏಷ್ಯನ್‌ ಸೀನಿಯರ್‌ ಜೂಡೊ ಚಾಂಪಿಯನ್‌ ಷಿಪ್‌ನಲ್ಲಿ  ಭಾಗವಹಿಸಿದ್ದ ಮಾನ್‌ ಅವರು ಏಳನೇಯವರಾಗಿ ಸ್ಪರ್ಧೆ ಮುಗಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.