ADVERTISEMENT

ಭಾರತದ ನಾಕೌಟ್ ಹಂತದ ಕನಸು ಜೀವಂತ

ಸುದಿರ್ಮನ್‌ ಕಪ್ ಬ್ಯಾಡ್ಮಿಂಟನ್ ಟೂರ್ನಿ

ಪಿಟಿಐ
Published 23 ಮೇ 2017, 19:30 IST
Last Updated 23 ಮೇ 2017, 19:30 IST
ಭಾರತದ ನಾಕೌಟ್ ಹಂತದ ಕನಸು ಜೀವಂತ
ಭಾರತದ ನಾಕೌಟ್ ಹಂತದ ಕನಸು ಜೀವಂತ   

ಗೋಲ್ಡ್ ಕೋಸ್ಟ್‌, ಆಸ್ಟ್ರೇಲಿಯಾ: ಭಾರತ ಇಲ್ಲಿ ನಡೆಯುತ್ತಿರುವ ಸುದಿರ್ಮನ್ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ ಜಯ ಗಳಿಸಿ ನಾಕೌಟ್ ಹಂತಕ್ಕೆ ಏರುವ ಕನಸನ್ನು ಜೀವಂತವಾಗಿರಿಸಿತು.

ಸೋಮವಾರ ನಡೆದ ಮೊದಲ ಪಂದ್ಯದಲ್ಲಿ ಡೆನ್ಮಾರ್ಕ್ ವಿರುದ್ಧ 1–4ರಿಂದ ಸೋಲುಂಡಿದ್ದ ಭಾರತ ಮಾಜಿ ಚಾಂಪಿಯನ್‌ ಇಂಡೋನೇಷ್ಯಾವನ್ನು ಮಂಗಳವಾರ 4–1ರಿಂದ ಮಣಿಸಿತು.

ಗೆಲುವು ಅನಿವಾರ್ಯವಾಗಿದ್ದ ಪಂದ್ಯದಲ್ಲಿ ಐದನೇ ಶ್ರೇಯಾಂಕದ ಇಂಡೋನೇಷ್ಯಾ ವಿರುದ್ಧ ಕಿದಂಬಿ ಶ್ರೀಕಾಂತ್‌ ಮತ್ತು ಪಿ.ವಿ.ಸಿಂಧು ಮಿಂಚು ಹರಿಸಿದರು. ಅಶ್ವಿನಿ ಪೊನ್ನಪ್ಪ ಅಮೋಘ ಆಟವಾಡಿ ಮಹಿಳೆಯರ ಸಿಂಗಲ್ಸ್‌ ಮತ್ತು ಮಿಶ್ರ ಡಬಲ್ಸ್ ಪಂದ್ಯಗಳಲ್ಲಿ ಜಯ ಸಾಧಿಸಿದರು. ಮಿಶ್ರ ಡಬಲ್ಸ್‌ನಲ್ಲಿ ಅವರೊಂದಿಗೆ ಸಾತ್ವಿಕ್ ಸಾಯ್‌ರಾಜ್‌ ಮತ್ತು ಡಬಲ್ಸ್‌ನಲ್ಲಿ ಸಿಕ್ಕಿ ರೆಡ್ಡಿ ಕೈ ಜೋಡಿಸಿದರು. ಈ ಮಾದರಿಯ ಟೂರ್ನಿಯಲ್ಲಿ ಇಂಡೋನೇಷ್ಯಾ ವಿರುದ್ಧ ಭಾರತದ ಮೊದಲ ಜಯ ಇದು.

ADVERTISEMENT

ಭಾರತಕ್ಕೆ ಮೊದಲ ಪಂದ್ಯದಲ್ಲಿ ಗೆಲುವು ಲಭಿಸಿತು. ಈ ಅಮೋಘ ಆರಂಭಕ್ಕೆ ಕಾರಣರಾದವರು ಮಿಶ್ರ ಡಬಲ್ಸ್‌ನ ಹೊಸ ಜೋಡಿ ಅಶ್ವಿನಿ ಪೊನ್ನಪ್ಪ ಮತ್ತು ಸಾತ್ವಿಕ್ ಸಾಯ್‌ರಾಜ್‌. 22–20, 17–21 ಮತ್ತು 21–19ರಿಂದ ಟೊಂಟೊವಿ ಅಹಮ್ಮದ್‌ ಮತ್ತು ಗ್ಲೋರಿಯಾ ಇಮಾನ್ಯುವೆಲ್‌ ವಿಜಾಜ ವಿರುದ್ಧ ಇವರು ಜಯ ಸಾಧಿಸಿದರು. ಒಂದು ತಾಸು ಆರು ನಿಮಿಷದ ವರೆಗೆ ಸಾಗಿದ ಪಂದ್ಯದ ಮೊದಲ ಸೆಟ್ ಗೆದ್ದು ಬೀಗಿದ ಭಾರತದ ಜೋಡಿ ಎರಡನೇ ಸೆಟ್‌ನಲ್ಲಿ ಸೋಲುಂಡಿತು. ಆದರೂ ಸುಧಾರಿಸಿಕೊಂಡು ನಿರ್ಣಾಯಕ ಸೆಟ್‌ ನಲ್ಲಿ ಗೆದ್ದು ತಂಡದಲ್ಲಿ ಭರವಸೆ ಮೂಡಿಸಿದರು.

ಎರಡನೇ ಪಂದ್ಯದಲ್ಲೂ ಭಾರತ ವಿಜಯ ಪತಾಕೆ ಹಾರಿಸಿತು. ಕಿದಂಬಿ ಶ್ರೀಕಾಂತ್‌ ತಂದುಕೊಟ್ಟ ಜಯದ ಮೂಲಕ ಭಾರತ 2–0 ಮುನ್ನಡೆ ತನ್ನದಾಗಿಸಿಕೊಂಡಿತು. ಇತ್ತೀಚೆಗೆ ನಡೆದ ಸಿಂಗಪುರ ಓಪನ್‌ನ ಫೈನಲ್‌ ವರೆಗೆ ತಲುಪಿದ್ದ ಶ್ರೀಕಾಂತ್‌ ಈ ಪಂದ್ಯದಲ್ಲಿ ಜೊನಾಥನ್ ಕ್ರಿಸ್ಟಿ ಅವರನ್ನು 21–15, 21–16ರಿಂದ ಮಣಿಸಿದರು. ಆದರೆ ಮೂರನೇ ಪಂದ್ಯದಲ್ಲಿ ಭಾರತ ನಿರಾಸೆ ಅನುಭವಿಸಿತು.

ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯ್‌ರಾಜ್‌ ಮತ್ತು ಚಿರಾಗ್ ಶೆಟ್ಟಿ 9–21, 17–21ರ ಸೋಲುಂಡರು. ವಿಶ್ವ ಕ್ರಮಾಂಕದ ಮೊದಲ ನಂಬರ್ ಜೋಡಿ ಮಾರ್ಕಸ್‌ ಫೆರ್ನಾಲ್ಡಿ ಗೈಡ್ಯಾನ್‌ ಮತ್ತು ಕೆವಿನ್‌ ಸಂಜಯ ಸುಕಮುಳಿಜೊ ಅವರನ್ನು ಮಣಿಸಿದರು. ನಾಲ್ಕನೇ ಪಂದ್ಯದಲ್ಲಿ ಅಂಗಳಕ್ಕೆ ಇಳಿದದ್ದು  ಪಿ.ವಿ.ಸಿಂಧು.  ಸಿಂಗಲ್ಸ್‌ ಪಂದ್ಯದಲ್ಲಿ ಅವರು ಫಿಟ್ರಿ ಯಾನಿ ವಿರುದ್ಧ 21–9, 21–19ರಿಂದ ಗೆಲುವು ಸಾಧಿಸಿದರು.

ಐದನೇ ಪಂದ್ಯದಲ್ಲಿ ಭಾರತದ ಪರ ಆಡಿದವರು ಸೈಯದ್‌ ಮೋದಿ ಗ್ರ್ಯಾಂಡ್‌ ಪ್ರಿಕ್ಸ್‌ನ ಬೆಳ್ಳಿ ಪದಕ ಗೆದ್ದ ಅಶ್ವಿನಿ ಪೊನ್ನಪ್ಪ ಮತ್ತು ಸಿಕ್ಕಿ ರೆಡ್ಡಿ. ಯಾವುದೇ ಒತ್ತಡವಿಲ್ಲದೆ ರ್‌್ಯಾಕೆಟ್ ಬೀಸಿದ ಇವರಿಬ್ಬರು 21–12, 21–19ರಿಂದ ಡೆಲ್ಲಾ ಡೆಸ್ಟಿಯಾರ ಹ್ಯಾರಿಸ್‌ ಮತ್ತು ರೋಸಿಟಾ ಏಕಾ ಪುತ್ರೀಸರ್‌ ಅವರಿಗೆ ಸೋಲುಣಿಸಿದರು.

ಡೆನ್ಮಾರ್ಕ್‌ ಮತ್ತು ಭಾರತ ಈಗ ತಲಾ ಒಂದೊಂದು ಪಂದ್ಯ ಗೆದ್ದಿದ್ದು ನಾಕೌಟ್ ಹಂತದ ಚಿತ್ರಣ ಬುಧವಾರ ನಡೆಯಲಿರುವ ಡೆನ್ಮಾರ್ಕ್‌ ಮತ್ತು ಇಂಡೋನೇಷ್ಯಾ ಪಂದ್ಯದ ಫಲಿತಾಂಶ ವನ್ನು ಆಧರಿಸಿದೆ. ಈ ಪಂದ್ಯದಲ್ಲಿ ಡೆನ್ಮಾರ್ಕ್ ಸೋತರೆ ಆಡಿದ ಪಂದ್ಯಗಳು, ಗೇಮ್ಸ್‌ ಮತ್ತು ಪಾಯಿಂಟ್‌ಗಳ ಲೆಕ್ಕಾ ಚಾರ ಶುರುವಾಗಲಿದೆ. ಗುಂಪು ಒಂದು–ಡಿಯಿಂದ ಎರಡು ತಂಡಕ್ಕೆ ಮಾತ್ರ ನಾಕೌಟ್ ಹಂತಕ್ಕೇರುವ ಅವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.