ADVERTISEMENT

ಭಾರತ–ಸ್ಪೇನ್‌ ಪಂದ್ಯ ಡ್ರಾ

​ಪ್ರಜಾವಾಣಿ ವಾರ್ತೆ
Published 3 ಜುಲೈ 2016, 19:30 IST
Last Updated 3 ಜುಲೈ 2016, 19:30 IST

ವಲೆನ್ಸಿಯಾ (ಪಿಟಿಐ): ಬಲಿಷ್ಠ ಸ್ಪೇನ್‌ ತಂಡಕ್ಕೆ ಪ್ರಬಲ ಪೈಪೋಟಿ ಒಡ್ಡಿದ ಭಾರತ  ಇಲ್ಲಿ ನಡೆಯುತ್ತಿರುವ ಆರು ರಾಷ್ಟ್ರಗಳ ಆಹ್ವಾನಿತ ಹಾಕಿ ಸರಣಿಯ ಪಂದ್ಯದಲ್ಲಿ ಡ್ರಾ ಮಾಡಿಕೊಂಡಿದೆ.

ಭಾನುವಾರ ನಡೆದ ಉಭಯ ತಂಡಗಳ ನಡುವಣ ರೌಂಡರ್‌ ರಾಬಿನ್‌ ಲೀಗ್‌ ಹೋರಾಟ 1–1 ಗೋಲುಗಳಿಂದ ಡ್ರಾ ಆಯಿತು.
ಶನಿವಾರ ನಡೆದ ಪಂದ್ಯದಲ್ಲಿ 3–3 ಗೋಲುಗಳಿಂದ ಅರ್ಜೆಂಟೀನಾ ವಿರುದ್ಧ ಡ್ರಾ ಮಾಡಿಕೊಂಡಿದ್ದ ಸರ್ದಾರ್‌ ಸಿಂಗ್‌ ಬಳಗ ಸ್ಪೇನ್‌ ವಿರುದ್ಧ ಆರಂಭದಿಂದಲೇ ವೇಗದ ಆಟಕ್ಕೆ ಒತ್ತು ನೀಡಿ ಆಡಿತು.

ಭಾರತಕ್ಕೆ  ಐದನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ ಅವಕಾಶ ಲಭಿಸಿತ್ತು. ಆದರೆ ಸರ್ದಾರ್‌ ಬಳಗದ ಗೋಲು ಗಳಿಸುವ ಆಸೆಗೆ ಸ್ಪೇನ್‌ ತಂಡದ ಗೋಲ್‌ ಕೀಪರ್‌ ಕ್ವಿಕೊ ಕಾರ್ಟೆಸ್‌ ಅಡ್ಡಿಯಾದರು.

ಇದರ ಬೆನ್ನಲ್ಲೇ ಸ್ಪೇನ್‌ ತಂಡ ಪೆನಾಲ್ಟಿ ಕಾರ್ನರ್‌ ಅವಕಾಶ ಸೃಷ್ಟಿಸಿ ಕೊಂಡಿತ್ತು. ಎದುರಾಳಿ ತಂಡದ ಆಟಗಾರ ಬಾರಿಸಿದ ಚೆಂಡನ್ನು ಭಾರತದ ಗೋಲ್‌ಕೀಪರ್‌ ಪಿ.ಆರ್‌. ಶ್ರೀಜೇಶ್‌ ಅಮೋಘ ರೀತಿಯಲ್ಲಿ ತಡೆದರು.

ಕೆಲ ನಿಮಿಷಗಳ ಬಳಿಕ ಸರ್ದಾರ್‌ ಬಳಗಕ್ಕೆ ಮತ್ತೊಮ್ಮೆ ಪೆನಾಲ್ಟಿ ಅವಕಾಶ ಲಭ್ಯವಾಯಿತು. ತಲ್ವಿಂದರ್‌ ಸಿಂಗ್‌ ಈ ಅವಕಾಶವನ್ನು ಕೈಚೆಲ್ಲಿದರು.
ಆ ಬಳಿಕ ಆಕ್ರಮಣಕಾರಿ ಆಟಕ್ಕೆ ಮುಂದಾದ ಸ್ಪೇನ್‌ ತಂಡದ ರಕ್ಷಣಾ ವಿಭಾಗದ ಆಟಗಾರರು ಪದೇ ಪದೇ ಭಾರತದ ಆವರಣದೊಳಗೆ ನುಗ್ಗಿ ಸರ್ದಾರ್‌ ಬಳಗದ ಮೇಲೆ ಒತ್ತಡ ಹೇರುವ ತಂತ್ರ ಅನುಸರಿಸಿದರು.

18ನೇ ನಿಮಿಷದಲ್ಲಿ ಕರ್ನಾಟಕದ ಆಟಗಾರ ಡ್ರ್ಯಾಗ್‌ ಫ್ಲಿಕ್‌ ಪರಿಣತ ವಿ.ಆರ್‌. ರಘುನಾಥ್‌ ಗೋಲು ಗಳಿಸಿ  ಭಾರತದ ಪಾಳಯದಲ್ಲಿ ಖುಷಿಯ ಅಲೆ ಏಳುವಂತೆ ಮಾಡಿದರು.

ಆ ಬಳಿಕವೂ ಮಿಂಚಿನ ಆಟ ಆಡಿದ ಭಾರತ ತಂಡ ಹಲವು ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಸೃಷ್ಟಿಸಿಕೊಂಡಿತ್ತು. ಆದರೆ ಸರ್ದಾರ್‌ ಬಳಗದ ಆಟಗಾರರ ಪ್ರಯತ್ನಗಳಿಗೆ ಎದುರಾಳಿ ತಂಡದ ಗೋಲ್‌ಕೀಪರ್‌ ಅಡ್ಡಿಯಾದರು. ಹೀಗಾಗಿ ಪಂದ್ಯ ಡ್ರಾ ಆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.