ADVERTISEMENT

ಮಂಗಳೂರು ಕ್ಲಬ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2017, 19:30 IST
Last Updated 20 ಸೆಪ್ಟೆಂಬರ್ 2017, 19:30 IST
ಬೆಂಗಳೂರಿನಲ್ಲಿ ನಡೆದ ರಾಜ್ಯ ‘ಬಿ’ ಡಿವಿಷನ್‌ ಲೀಗ್‌ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಮಂಗಳೂರು ಬ್ಯಾಸ್ಕೆಟ್‌ಬಾಲ್‌ ತಂಡದ ಆಟಗಾರರ ಸಂಭ್ರಮ (ನಿಂತವರು, ಎಡದಿಂದ) ಮೆಲ್ವರ್‌ ಲೋಬೊ, ಸೌಕಿನ್‌ ಶೆಟ್ಟಿ, ಅಶೋಕ್‌ ಬಾಂಡ, ನವೀನ್‌ ಶೆಟ್ಟಿ (ಅಧ್ಯಕ್ಷರು), ಆದಿತ್ಯ ಮಹಾಲೆ (ಕೋಚ್‌), ಶಶಾಂಕ್‌ ರೈ ಮತ್ತು ಸೂರಜ್‌ ಕೋಟಿಯಾನ್ (ಮಂಡಿಯೂರಿ ಕುಳಿತವರು), ಪ್ರಣವಿಲ್‌ ಮೆಂಜೆಸ್‌, ನಿದೀಶ್‌ ನಾಯಕ್‌, ಮೆರೆನ್‌ ರೆಬೆಲ್ಲೊ ಮತ್ತು ಬಿ.ಪ್ರಭಾಕರ್‌.
ಬೆಂಗಳೂರಿನಲ್ಲಿ ನಡೆದ ರಾಜ್ಯ ‘ಬಿ’ ಡಿವಿಷನ್‌ ಲೀಗ್‌ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಮಂಗಳೂರು ಬ್ಯಾಸ್ಕೆಟ್‌ಬಾಲ್‌ ತಂಡದ ಆಟಗಾರರ ಸಂಭ್ರಮ (ನಿಂತವರು, ಎಡದಿಂದ) ಮೆಲ್ವರ್‌ ಲೋಬೊ, ಸೌಕಿನ್‌ ಶೆಟ್ಟಿ, ಅಶೋಕ್‌ ಬಾಂಡ, ನವೀನ್‌ ಶೆಟ್ಟಿ (ಅಧ್ಯಕ್ಷರು), ಆದಿತ್ಯ ಮಹಾಲೆ (ಕೋಚ್‌), ಶಶಾಂಕ್‌ ರೈ ಮತ್ತು ಸೂರಜ್‌ ಕೋಟಿಯಾನ್ (ಮಂಡಿಯೂರಿ ಕುಳಿತವರು), ಪ್ರಣವಿಲ್‌ ಮೆಂಜೆಸ್‌, ನಿದೀಶ್‌ ನಾಯಕ್‌, ಮೆರೆನ್‌ ರೆಬೆಲ್ಲೊ ಮತ್ತು ಬಿ.ಪ್ರಭಾಕರ್‌.   

ಬೆಂಗಳೂರು: ಅಶೋಕ್‌ ಮತ್ತು ಮೆಲ್ವರ್‌ ಅವರ ಅಮೋಘ ಆಟದ ಬಲದಿಂದ ಮಂಗಳೂರು ಬ್ಯಾಸ್ಕೆಟ್‌ಬಾಲ್‌ ಕ್ಲಬ್‌ (ಎಂ.ಬಿ.ಸಿ) ತಂಡದವರು ಕರ್ನಾಟಕ ರಾಜ್ಯ ಬ್ಯಾಸ್ಕೆಟ್‌ಬಾಲ್‌ ಸಂಸ್ಥೆ ಆಶ್ರಯದ ಎಂ.ಸಿ.ಶ್ರೀನಿವಾಸ ಸ್ಮಾರಕ ರಾಜ್ಯ ‘ಬಿ’ ಡಿವಿಷನ್‌ ಲೀಗ್‌ ಟೂರ್ನಿಯಲ್ಲಿ ಟ್ರೋಫಿ ಎತ್ತಿಹಿಡಿದಿದ್ದಾರೆ.

ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಫೈನಲ್‌ ಪಂದ್ಯದಲ್ಲಿ ಮಂಗಳೂರು ಕ್ಲಬ್‌ 47–33 ಪಾಯಿಂಟ್ಸ್‌ನಿಂದ ರೈಸಿಂಗ್‌ ಸ್ಟಾರ್‌ ಮೈಸೂರು ತಂಡವನ್ನು ಪರಾಭವಗೊಳಿಸಿತು.

ಇದರೊಂದಿಗೆ ‘ಎ’ ಡಿವಿಷನ್‌ಗೆ ಅರ್ಹತೆ ಗಳಿಸಿರುವ ಎಂ.ಬಿ.ಸಿ, ಈ ಸಾಧನೆ ಮಾಡಿದ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ತಂಡ ಎಂಬ ಹಿರಿಮೆ
ತನ್ನದಾಗಿಸಿಕೊಂಡಿತು.

ADVERTISEMENT

ಆರಂಭದಿಂದಲೇ ಚುರುಕಿನ ಆಟದ ಮೂಲಕ ಗಮನ ಸೆಳೆದ ಎಂ.ಬಿ.ಸಿ ತಂಡದವರು ಮೊದಲ ಕ್ವಾರ್ಟರ್‌ನ ಅಂತ್ಯಕ್ಕೆ 12–8ರಿಂದ ಮುಂದಿದ್ದರು. ಎರಡನೇ ಕ್ವಾರ್ಟರ್‌ನಲ್ಲೂ ಈ ತಂಡದವರು ಚೆಂಡನ್ನು ನಿಖರವಾಗಿ ‘ಬುಟ್ಟಿ’ಯಲ್ಲಿ ಹಾಕುತ್ತಾ ಪಾಯಿಂಟ್ಸ್‌ ಹೆಕ್ಕಿದರು. ಎಂ.ಬಿ.ಸಿ ತಂಡದ ಅಶೋಕ್‌ ಚುರುಕಿನ ಆಟ ಆಡಿ ಎದುರಾಳಿಗಳ ರಕ್ಷಣಾ ಕೋಟೆಯನ್ನು ಭೇದಿಸಿದರು. ಅವರು 14 ಪಾಯಿಂಟ್ಸ್‌ ಗಳಿಸಿ ಮಿಂಚಿದರು.

29–14ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋದ ಎಂ.ಬಿ.ಸಿ ತಂಡದ ಆಟಗಾರರು ದ್ವಿತೀಯಾರ್ಧದಲ್ಲೂ ಗುಣಮಟ್ಟದ ಆಟ ಆಡಿ ಕ್ರೀಡಾಂಗಣದಲ್ಲಿ ಸೇರಿದ್ದ ಅಭಿಮಾನಿಗಳನ್ನು ರಂಜಿಸಿದರು.

ಮೂರನೇ ಕ್ವಾರ್ಟರ್‌ನಲ್ಲಿ 12 ಪಾಯಿಂಟ್ಸ್‌ ಹೆಕ್ಕಿದ ಎಂ.ಬಿ.ಸಿ, ಎದುರಾಳಿಗಳಿಗೆ ಕೇವಲ ಎರಡು ಪಾಯಿಂಟ್‌ ಮಾತ್ರ ಬಿಟ್ಟುಕೊಟ್ಟಿತು.ಈ ತಂಡದ ಮೆಲ್ವರ್‌ 10 ಪಾಯಿಂಟ್ಸ್‌ ಕಲೆಹಾಕಿ ಗಮನ ಸೆಳೆದರು.

ನಾಲ್ಕನೇ ಕ್ವಾರ್ಟರ್‌ನಲ್ಲಿ ರೈಸಿಂಗ್‌ ಸ್ಟಾರ್‌ ತಂಡದವರು 17–6ರ ಮುನ್ನಡೆ ಗಳಿಸಿದರೂ ಎಂ.ಬಿ.ಸಿಯ ಸವಾಲು ಮೀರಿ ನಿಲ್ಲಲು ಆಗಲಿಲ್ಲ. ರೈಸಿಂಗ್‌ ಸ್ಟಾರ್‌ ತಂಡದ ಸುಪ್ರದೀಪ್‌ 14 ಪಾಯಿಂಟ್ಸ್‌ ಸಂಗ್ರಹಿಸಿ ಸೋಲಿನ ನಡುವೆಯೂ ಗಮನ ಸೆಳೆದರು.

ಇದಕ್ಕೂ ಮೊದಲು ನಡೆದಿದ್ದ ಸೆಮಿಫೈನಲ್‌ ಪಂದ್ಯಗಳಲ್ಲಿ ರೈಸಿಂಗ್‌ ಸ್ಟಾರ್‌ ತಂಡ 52–37ರಲ್ಲಿ ಐ.ಬಿ.ಬಿ.ಸಿ ಎದುರೂ, ಮಂಗಳೂರು ಬಿ.ಸಿ 64–48ರಲ್ಲಿ ಹಲಸೂರು ಸ್ಪೋರ್ಟ್ಸ್‌ ಯೂನಿಯನ್‌ ವಿರುದ್ಧವೂ ಗೆದ್ದಿದ್ದವು. ಮಂಗಳೂರು ತಂಡದ ಶಶಾಂಕ್‌ 29 ಪಾಯಿಂಟ್ಸ್‌ ಗಳಿಸಿ ಗಮನಸೆಳೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.