ADVERTISEMENT

ಮುಂಬೈ ಇಂಡಿಯನ್ಸ್‌ಗೆ ಐಪಿಎಲ್ ಕಿರೀಟ

​ಪ್ರಜಾವಾಣಿ ವಾರ್ತೆ
Published 21 ಮೇ 2017, 20:24 IST
Last Updated 21 ಮೇ 2017, 20:24 IST
ಮುಂಬೈ ಇಂಡಿಯನ್ಸ್‌ಗೆ ಐಪಿಎಲ್ ಕಿರೀಟ
ಮುಂಬೈ ಇಂಡಿಯನ್ಸ್‌ಗೆ ಐಪಿಎಲ್ ಕಿರೀಟ   

ಹೈದರಾಬಾದ್: ಭಾನುವಾರ ರಾತ್ರಿ ಕ್ರಿಕೆಟ್‌ ಪ್ರೇಮಿಗಳನ್ನು ರೋಚಕತೆಯ ಹೊಳೆಯಲ್ಲಿ ಈಜಾಡುವಂತೆ ಮಾಡಿದ ಇಂಡಿಯನ್ ಪ್ರೀಮಿಯರ್ ಲೀಗ್ ಹತ್ತನೇ ಆವೃತ್ತಿಯ ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ಚಾಂಪಿಯನ್ ಪಟ್ಟ ಅಲಂಕರಿಸಿತು.

ಉಪ್ಪಳದ ರಾಜೀವಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ  ಕೊನೆಯ ಓವರ್‌ನಲ್ಲಿ ಎಡಗೈ ವೇಗಿ ಮಿಷೆಲ್‌ ಜಾನ್ಸನ್  ಅವರು ಕಬಳಿಸಿದ ಎರಡು ವಿಕೆಟ್‌ಗಳ ನೆರವಿನಿಂದ  ಮುಂಬೈ ತಂಡವು 1 ರನ್‌ ಅಂತರದಿಂದ ರೈಸಿಂಗ್ ಪುಣೆ ಸೂಪರ್‌ಜೈಂಟ್ ತಂಡವನ್ನು ಸೋಲಿಸಿತು. 

ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ  129 ರನ್‌ ಗಳಿಸಿತ್ತು. ಆದರೆ ಈ ಸಾಧಾರಣ ಮೊತ್ತವನ್ನು ಸಮರ್ಥಿಸಿಕೊಂಡ  ಮುಂಬೈ ಬೌಲರ್‌ಗಳು ತಂಡದ ಮಡಿಲಿಗೆ ಟ್ರೋಫಿಯ ಕಾಣಿಕೆ ನೀಡಿದರು. ಇದೇ ಮೊದಲ ಬಾರಿ ಫೈನಲ್‌ ಪ್ರವೇಶಿಸಿದ್ದ ರೈಸಿಂಗ್ ಪುಣೆ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 128 ರನ್‌ ಗಳಿಸಿತು.   ಪುಣೆ ತಂಡದ ನಾಯಕ ಸ್ಟೀವನ್ ಸ್ಮಿತ್ (51; 50ಎ 2ಬೌಂ, 2ಸಿ) ಮತ್ತು ಅಜಿಂಕ್ಯ ರಹಾನೆ (44; 38ಎ, 5ಬೌಂ) ಅವರ ದಿಟ್ಟ ಬ್ಯಾಟಿಂಗ್‌ನ ಹೊರತಾಗಿಯೂ ಜಯ ಒಲಿಯಲಿಲ್ಲ.

ADVERTISEMENT

ಕೊನೆಯ ಓವರ್‌ನ  ಹೈಡ್ರಾಮಾ
ಪುಣೆ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಎಲ್ಲ ಬಗೆಯ ನಾಟಕೀಯ ತಿರುವುಗಳು ಕಂಡು ಬಂದವು. ಆಸ್ಟ್ರೇಲಿಯಾದ ಅನುಭವಿ ವೇಗಿ ಮಿಷೆಲ್ ಜಾನ್ಸನ್‌ ಕೈಗೆ ರೋಹಿತ್ ಚೆಂಡು ನೀಡಿದ್ದಾಗ ಪುಣೆ ತಂಡದ ಗೆಲುವಿಗೆ 11 ರನ್‌ಗಳ ಅಗತ್ಯವಿತ್ತು. ಕ್ರೀಸ್‌ನಲ್ಲಿ ಅರ್ಧಶತಕ ಗಳಿಸಿದ್ದ ಆಸ್ಟ್ರೇಲಿಯಾದ ಮತ್ತೊಬ್ಬ ಆಟಗಾರ ಸ್ಟೀವನ್ ಸ್ಮಿತ್ ಮತ್ತು ಬಂಗಾಳದ ಆಟಗಾರ ಮನೋಜ್ ತಿವಾರಿ (3 ರನ್) ಇದ್ದರು. ಮೊದಲ ಎಸೆತವನ್ನು ಮನೋಜ್ ಬೌಂಡರಿಗಟ್ಟಿದಾಗ ಪುಣೆ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. 

ಮುಂಬೈ ಫ್ರಾಂಚೈಸ್ ಮಾಲೀಕರಾದ ನೀತಾ ಅಂಬಾನಿ, ಪುತ್ರ ಆಕಾಶ್ ಅಂಬಾನಿ, ಸಲಹೆಗಾರ ಸಚಿನ್ ತೆಂಡೂಲ್ಕರ್ ಅವರ ಮುಖದಲ್ಲಿ ದುಗುಡ ಆವರಿಸಿತ್ತು. ಆದರೆ ನಂತರದ ಎಸೆತದಲ್ಲಿ ಎಲ್ಲವೂ ಉಲ್ಟಾಪಲ್ಟಾ ಆಯಿತು. ಎರಡನೇ ಎಸೆತವನ್ನು ಸಿಕ್ಸರ್‌ಗೆ ಎತ್ತುವ ಪ್ರಯತ್ನದಲ್ಲಿ ತಿವಾರಿ ಅವರು ಲಾಂಗ್‌ ಆನ್‌ನಲ್ಲಿದ್ದ ಕೀರನ್ ಪೊಲಾರ್ಡ್ ಅವರಿಗೆ ಕ್ಯಾಚ್ ಆದರು.

ಮೂರನೇ ಎಸೆತದಲ್ಲಿ ಸ್ಮಿತ್ ಕೂಡ ಅಂತಹದೇ ಪ್ರಯತ್ನದಲ್ಲಿ ಅಂಬಟಿ ರಾಯುಡು ಪಡೆದ ಅಮೋಘ ಕ್ಯಾಚ್‌ಗೆ ನಿರ್ಗಮಿಸಿದರು.
ನಾಲ್ಕನೇ ಎಸೆತದಲ್ಲಿ ವಾಷಿಂಗ್ಟನ್ ಸುಂದರ್ ಅವರು ಯಾರ್ಕರ್‌ ಎದುರಿಸಿದರು. ಆದರೆ ಒಂದು ಬೈ ರನ್‌ ಸಿಕ್ಕಿತು. ಬ್ಯಾಟಿಂಗ್‌ಗೆ ಬಂದ ಕ್ರಿಸ್ಟಿಯನ್ ಐದನೇ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಅವರಿಂದ ಜೀವದಾನ ಪಡೆದರು. ಅದರಲ್ಲಿ ಎರಡು ರನ್‌ಗಳು ಲಭಿಸಿದವು.  

ಅದರಿಂದಾಗಿ ಕೊನೆಯ ಎಸೆತದಲ್ಲಿ ನಾಲ್ಕು ರನ್‌ಗಳ ಅಗತ್ಯವಿತ್ತು. ಜಾನ್ಸನ್‌ ಅವರ ಎಸೆತವನ್ನು ಕ್ರಿಸ್ಟಿಯನ್ ಡೀಪ್‌ ಸ್ಕೇರ್‌ಲೆಗ್‌ಗೆ ಹೊಡೆದರು. ಅಲ್ಲಿದ್ದ ಬದಲೀ ಫೀಲ್ಡರ್ ಜೆ. ಸುಚಿತ್ ಅವರು ತಡಬಡಾಯಿಸಿದರೂ ಚೆಂಡನ್ನು ನಿಯಂತ್ರಣಕ್ಕೆ ಪಡೆದು ಕೀಪರ್ ನತ್ತ ಥ್ರೋ ಮಾಡಿದರು. ಚುರುಕಾಗಿ ಚೆಂಡು ಪಡೆದ ಪಾರ್ಥಿವ್ ಪಟೇಲ್ ಬೇಲ್ಸ್‌ ಎಗರಿಸಿದರು. ಕ್ರಿಸ್ಟಿಯನ್ ಔಟಾದರು, ಮುಂಬೈ ಪಾಳೆಯದಲ್ಲಿ ಸಂಭ್ರಮ ಗರಿಗೆದರಿತು. 

ಜಾನ್ಸನ್‌ ಅವರಿಗಿಂತ ಮುನ್ನ  ಜಸ್‌ಪ್ರೀತ್ ಬೂಮ್ರಾ (26ಕ್ಕೆ2) ಕೂಡ ಉತ್ತಮ ದಾಳಿ ನಡೆಸಿ ಪುಣೆ ಬ್ಯಾಟ್ಸ್‌ಮನ್‌ಗಳು ಅಬ್ಬರಿಸದಂತೆ ನಿಯಂತ್ರಿಸಿದ್ದರು.  ಮುಂಬೈನಲ್ಲಿ ಕಳೆದ ವಾರ ನಡೆದಿದ್ದ ಟೂರ್ನಿಯ ಮೊದಲ ಕ್ವಾಲಿಫೈಯರ್‌ನಲ್ಲಿ ಮುಂಬೈ ತಂಡವು ಪುಣೆ ಎದುರು ಸೋತಿತ್ತು. ಇಲ್ಲಿಯೂ ಜಯದೇವ್ ಉನದ್ಕತ್ ಮತ್ತು ಆ್ಯಡಂ ಜಂಪಾ ಅವರ ಅಮೋಘ ಬೌಲಿಂಗ್ ಮುಂದೆ ಸಾಧಾರಣ ಮೊತ್ತಕ್ಕೆ ಕುಸಿದಿತ್ತು.  ತಂಡವು 79 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡಾಗ ದಿಟ್ಟ ಬ್ಯಾಟಿಂಗ್ ಮಾಡಿದ್ದ ಕೃಣಾಲ್ ಪಾಂಡ್ಯ (47 ರನ್) ಅವರು ಪಂದ್ಯಶ್ರೇಷ್ಠ ಗೌರವ ಪಡೆದರು. ಮಿಷೆಲ್ ಜಾನ್ಸನ್ (ಅಜೇಯ 13) ಬ್ಯಾಟಿಂಗ್‌ನಲ್ಲಿಯೂ ಮಹತ್ವದ ಕಾಣಿಕೆ ನೀಡಿದರು.

ಪುಣೆ ತಂಡಕ್ಕೆ ಗೆಲ್ಲುವ ಅವಕಾಶ ಇತ್ತು. ಆದರೆ ಮುಂಬೈ ಬೌಲರ್‌ಗಳ ದಿಟ್ಟ ಆಟವೇ ಮೇಲುಗೈ ಸಾಧಿಸಿತು. ಕಳೆದ ಹತ್ತು ಆವೃತ್ತಿಗಳಲ್ಲಿ ಮೂರನೇ ಬಾರಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿತು. ರೋಹಿತ್ ಶರ್ಮಾ ಅವರ ನಾಯಕತ್ವ ದಲ್ಲಿ ಈ ಮೂರು ಸಾಧನೆಗಳೂ ಮೂಡಿ ಬಂದಿದ್ದು ವಿಶೇಷ. 2009ರಲ್ಲಿ ಪ್ರಶಸ್ತಿ ಗೆದ್ದಿದ್ದ ಡೆಕ್ಕನ್‌ ಚಾರ್ಜರ್ಸ್‌ ತಂಡದಲ್ಲಿಯೂ ಬಲಗೈ ಬ್ಯಾಟ್ಸ್‌ಮನ್‌ ರೋಹಿತ್ ಇದ್ದರು.

ಸ್ಕೋರ್‌ಕಾರ್ಡ್‌
ಮುಂಬೈ ಇಂಡಿಯನ್ಸ್‌
8ಕ್ಕೆ  129   (20   ಓವರ್‌ಗಳಲ್ಲಿ)
ಲೆಂಡ್ಲ್ ಸಿಮನ್ಸ್ ಸಿ ಮತ್ತು ಬಿ ಜಯದೇವ್ ಉನದ್ಕತ್  03
ಪಾರ್ಥಿವ್ ಪಟೇಲ್ ಸಿ ಶಾರ್ದೂಲ್ ಠಾಕೂರ್ ಬಿ ಜಯದೇವ್ ಉನದ್ಕತ್ 04
ಅಂಬಟಿ ರಾಯುಡು ರನ್‌ಔಟ್ (ಸ್ಮಿತ್)  12
ರೋಹಿತ್ ಶರ್ಮಾ ಸಿ ಶಾರ್ದೂಲ್ ಠಾಕೂರ್ ಬಿ ಆ್ಯಡಂ ಜಂಪಾ  24
ಕೃಣಾಲ್ ಪಾಂಡ್ಯ ಸಿ ಅಜಿಂಕ್ಯ ರಹಾನೆ ಬಿ ಕ್ರಿಸ್ಟಿಯನ್  47
ಕೀರನ್ ಪೊಲಾರ್ಡ್ ಸಿ ಮನೋಜ್ ತಿವಾರಿ ಬಿ ಆ್ಯಡಂ ಜಂಪಾ  07
ಹಾರ್ದಿಕ್ ಪಾಂಡ್ಯ ಎಲ್‌ಬಿಡಬ್ಲ್ಯು ಬಿ ಕ್ರಿಸ್ಟಿಯನ್  10
ಕರ್ಣ ಶರ್ಮಾ ರನ್‌ಔಟ್ (ಕ್ರಿಸ್ಟಿಯನ್/ಠಾಕೂರ್)  01
ಮಿಷೆಲ್ ಜಾನ್ಸನ್ ಔಟಾಗದೆ  13
ಇತರೆ: (ಬೈ 1, ಲೆಗ್‌ಬೈ 2, ವೈಡ್‌ 5) 08
ವಿಕೆಟ್‌ ಪತನ:  1–7 (ಪಾರ್ಥಿವ್; 2.1), 2–8 (ಸಿಮನ್ಸ್; 2.4), 3–41 (ರಾಯುಡು; 7.2), 4–56 (ರೋಹಿತ್;  10.1), 5–65 (ಪೊಲಾರ್ಡ್; 10.6), 6–78 (ಹಾರ್ದಿಕ್; 13.2), 7–79 (ಕರ್ಣ; 14.1), 8–129 (ಕೃಣಾಲ್; 19.6).ಬೌಲಿಂಗ್‌:  ಜಯದೇವ್ ಉನದ್ಕತ್ 4–0–19–2, ವಾಷಿಂಗ್ಟನ್ ಸುಂದರ್ 4–0–13–0,  ಶಾರ್ದೂಲ್ ಠಾಕೂರ್ 2–0–7–0 (ವೈಡ್ 1), ಲಾಕಿ ಫರ್ಗ್ಯುಸನ್ 2–0–21–0 (ವೈಡ್ 1), ಆ್ಯಡಂ ಜಂಪಾ 4–0–32–2 (ವೈಡ್ 1), ಡ್ಯಾನಿಯಲ್ ಕ್ರಿಸ್ಟಿಯನ್ 4–0–34–2 (ವೈಡ್ 2)

ರೈಸಿಂಗ್ ಪುಣೆ ಸೂಪರ್‌ಜೈಂಟ್
6ಕ್ಕೆ  128   (20   ಓವರ್‌ಗಳಲ್ಲಿ)
ಅಜಿಂಕ್ಯ ರಹಾನೆ ಸಿ ಕೀರನ್ ಪೊಲಾರ್ಡ್ ಬಿ ಮಿಷೆಲ್ ಜಾನ್ಸನ್  44
ರಾಹುಲ್ ತ್ರಿಪಾಠಿ ಎಲ್‌ಬಿಡಬ್ಲ್ಯು ಬಿ ಜಸ್‌ಪ್ರೀತ್ ಬೂಮ್ರಾ  03
ಸ್ಟೀವನ್ ಸ್ಮಿತ್ ಸಿ ಅಂಬಟಿ ರಾಯುಡು ಬಿ ಮಿಷೆಲ್ ಜಾನ್ಸನ್  51
ಮಹೇಂದ್ರಸಿಂಗ್ ದೋನಿ ಸಿ ಪಾರ್ಥಿವ್ ಪಟೇಲ್ ಬಿ ಜಸ್‌ಪ್ರೀತ್ ಬೂಮ್ರಾ  10
ಮನೋಜ್ ತಿವಾರಿ ಸಿ ಕೀರನ್ ಪೊಲಾರ್ಡ್ ಬಿ ಮಿಷೆಲ್ ಜಾನ್ಸನ್  07
ಡ್ಯಾನಿಯಲ್ ಕ್ರಿಸ್ಟಿಯನ್ ರನ್‌ಔಟ್ (ಪಾರ್ಥಿವ್ ಪಟೇಲ್)  04
ವಾಷಿಂಗ್ಟನ್ ಸುಂದರ್ ಔಟಾಗದೆ  00
ಇತರೆ: (ಬೈ 1, ಲೆಗ್‌ಬೈ 5, ವೈಡ್ 3)) 09
ವಿಕೆಟ್‌ ಪತನ:   1–17 (ತ್ರಿಪಾಠಿ; 2.2), 2–71 (ರಹಾನೆ; 11.5), 3–98 (ದೋನಿ; 16.2), 4–123 (ತಿವಾರಿ; 19.2), 5–123 (ಸ್ಮಿತ್; 19.3), 6–128 (ಕ್ರಿಸ್ಟಿಯನ್; 19.6) .
ಬೌಲಿಂಗ್‌: ಕೃಣಾಲ್ ಪಾಂಡ್ಯ 4–0–31–0, ಮಿಷೆಲ್ ಜಾನ್ಸನ್ 4–0–26–3, ಜಸ್‌ಪ್ರೀತ್ ಬೂಮ್ರಾ 4–0–26–2, ಲಸಿತ್ ಮಾಲಿಂಗ 4–0–21–0 (ವೈಡ್ 1),  ಕರ್ಣ ಶರ್ಮಾ 4–0–18–0 (ವೈಡ್ 2).
ಫಲಿತಾಂಶ: ಮುಂಬೈ ಇಂಡಿಯನ್ಸ್‌ ತಂಡಕ್ಕೆ 1 ರನ್ ಜಯ ಮತ್ತು ಪ್ರಶಸ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.