ADVERTISEMENT

ಮೂರನೇ ದಿನವೇ ಜಯದ ಮಾಲೆ

ರಣಜಿ: ಆಫ್‌ಸ್ಪಿನ್ನರ್‌ ಗೌತಮ್‌ಗೆ ಐದು ವಿಕೆಟ್‌, ಕರ್ನಾಟಕದ ದಾಳಿಗೆ ಮತ್ತೆ ಬೆಚ್ಚಿದ ದೆಹಲಿ

ಪ್ರಮೋದ ಜಿ.ಕೆ
Published 22 ಅಕ್ಟೋಬರ್ 2016, 19:30 IST
Last Updated 22 ಅಕ್ಟೋಬರ್ 2016, 19:30 IST
ದೆಹಲಿ ವಿರುದ್ಧ ಐದು ವಿಕೆಟ್‌ ಪಡೆದ ಕರ್ನಾಟಕದ ಕೆ. ಗೌತಮ್‌ ಬೌಲಿಂಗ್‌ ವೈಖರಿ  ಪ್ರಜಾವಾಣಿ ಚಿತ್ರ
ದೆಹಲಿ ವಿರುದ್ಧ ಐದು ವಿಕೆಟ್‌ ಪಡೆದ ಕರ್ನಾಟಕದ ಕೆ. ಗೌತಮ್‌ ಬೌಲಿಂಗ್‌ ವೈಖರಿ ಪ್ರಜಾವಾಣಿ ಚಿತ್ರ   

ಕೋಲ್ಕತ್ತ: ದೆಹಲಿ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 90 ರನ್‌ಗೆ ಆಲೌಟ್‌ ಮಾಡಿ ಭರವಸೆ ಮೂಡಿಸಿದ್ದ ಕರ್ನಾಟಕ ತಂಡ ನಿರೀಕ್ಷೆಗೂ ಮೊದಲೇ ಗೆಲುವಿನ ಉಡುಗೊರೆ ನೀಡಿತು.

ಈಡನ್ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆದ ‘ಬಿ’ ಗುಂಪಿನ ರಣಜಿ ಪಂದ್ಯದಲ್ಲಿ ದೆಹಲಿ ತಂಡವನ್ನು ಎರಡೂವರೆ ದಿನಗಳಲ್ಲಿಯೇ ಸೋಲಿಸಿತು. ಜೊತೆಗೆ ಒಂದು ಬೋನಸ್ ಸೇರಿದಂತೆ ಒಟ್ಟು ಏಳು ಪಾಯಿಂಟ್ಸ್‌ ತನ್ನದಾಗಿಸಿಕೊಂಡಿತು. ಇದು ಈ ಬಾರಿಯ ರಣಜಿ ಟೂರ್ನಿಯಲ್ಲಿ ಕರ್ನಾಟಕ ಪಡೆದ ಮೊದಲ ಗೆಲುವು. ಜಾರ್ಖಂಡ್‌ ಎದುರಿನ ಪಂದ್ಯ ಡ್ರಾ ಆಗಿತ್ತು. ತಂಡದ ಖಾತೆಯಲ್ಲಿ ಒಟ್ಟು 10 ಪಾಯಿಂಟ್ಸ್‌ ಇವೆ.

ಕರ್ನಾಟಕ ಶುಕ್ರವಾರದ ಅಂತ್ಯಕ್ಕೆ 414 ರನ್ ಗಳಿಸಿ 324 ರನ್‌ಗಳ ಮುನ್ನಡೆ ಹೊಂದಿತ್ತು. ಅನುಭವಿ ಗೌತಮ್‌ ಗಂಭೀರ್, ಉನ್ಮುಕ್ತ್ ಚಾಂದ್‌, ನಿತೀಶ್‌ ರಾಣಾ ಮತ್ತು ಹಿಂದಿನ ಎರಡು ಪಂದ್ಯಗಳಿಂದ ಒಂದು ಶತಕ ಹಾಗೂ ಒಂದು ತ್ರಿಶತಕ ಹೊಡೆದಿದ್ದ ರಿಷಬ್‌ ಪಂತ್‌ ಅವರನ್ನು ಹೊಂದಿದ್ದ ದೆಹಲಿ ತಂಡ ಎರಡನೇ ಇನಿಂಗ್ಸ್‌ನಲ್ಲಿಯೂ ಹಿಂದಿನ ತಪ್ಪುಗಳನ್ನೇ ಮುಂದುವರಿ ಸಿತು.  ಈ ತಂಡ 164 ರನ್ ಗಳಿಸುವಷ್ಟ ರಲ್ಲಿ ಮತ್ತೊಮ್ಮೆ ಆಲೌಟ್‌ ಆಯಿತು.

ಬೌಲರ್‌ಗಳ ಶ್ರಮಕ್ಕೆ ಒಲಿದ ಜಯ: ಅನುಭವಿ ಆಟಗಾರರನ್ನು ಒಳಗೊಂಡಿದ್ದ ದೆಹಲಿ ತಂಡ ಮಾಜಿ ಚಾಂಪಿಯನ್‌ ಕರ್ನಾಟಕಕ್ಕೆ ಕಠಿಣ ಪೈಪೋಟಿ ಒಡ್ಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ರಾಜ್ಯದ ಬೌಲರ್‌ಗಳ ಯೋಜನಾಬದ್ಧ ದಾಳಿಗೆ ಉತ್ತರ ಕೊಡಲು ಎದುರಾಳಿ ಆಟಗಾರರಿಗೆ ಸಾಧ್ಯವಾಗಲಿಲ್ಲ.

ಅನುಭವಿ ವೇಗಿ ಅಭಿಮನ್ಯು ಮಿಥುನ್‌ ಮತ್ತು ಆಫ್‌ ಸ್ಪಿನ್ನರ್‌ ಕೆ. ಗೌತಮ್‌ ಅವರು ಶನಿವಾರ ಬೇಗನೆ ವಿಕೆಟ್‌ಗಳನ್ನು ಉರುಳಿಸಿದರು. ದಿನದಾಟ ಆರಂಭವಾಗಿ 15 ನಿಮಿಷ ಗಳಲ್ಲಿ ಎರಡು ವಿಕೆಟ್‌ಗಳು ಹೋದವು. ನಾಯಕ ಗಂಭೀರ್ ಮತ್ತು ಧ್ರುವ ಶೊರೆ ಐದನೇ ಓವರ್‌ನಲ್ಲಿ ಕ್ರಮವಾಗಿ ಮೊದಲ, ಎರಡನೇ ಎಸೆತದಲ್ಲಿ ಔಟಾದರು. ಈ ಎರಡೂ ವಿಕೆಟ್‌ಗಳನ್ನು ಮಿಥುನ್‌ ಉರುಳಿಸಿದರು.

ಹೀಗೆ ಆರಂಭವಾದ ದೆಹಲಿ ತಂಡದ ‘ಪೆವಿಲಿಯನ್‌ ಪರೇಡ್‌’ 43ನೇ ಓವರ್‌ನಲ್ಲಿ ಮುಗಿಯಿತು. ಭೋಜನ ವಿರಾಮದ ವೇಳೆಗೆ ಏಳು ಬ್ಯಾಟ್ಸ್‌ಮನ್‌ಗಳು ಔಟಾಗಿದ್ದರಿಂದ ಕರ್ನಾಟಕಕ್ಕೆ ಗೆಲುವು ಖಚಿತವಾಗಿತ್ತು.

ಮೊದಲ ಬಾರಿಗೆ ತಂಡವನ್ನು ಮುನ್ನಡೆಸಿದ ನಾಯಕ ಕರುಣ್‌ ಅವರ ಪ್ರಬುದ್ಧ ನಿರ್ಧಾರ ಕೂಡ ಕರ್ನಾಟಕದ ಈ ಗೆಲುವಿಗೆ ಕಾರಣವಾಯಿತು. ಟಾಸ್‌ ಜಯಿಸಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು ಮತ್ತು ಸೂಕ್ತ ಸಮಯದಲ್ಲಿ ಬೌಲಿಂಗ್‌ನಲ್ಲಿ ಬದಲಾವಣೆ ಮಾಡಿದ್ದರಿಂದ ಕರುಣ್‌ ಯೋಜನೆಗಳಿಗೆ ಫಲ ಲಭಿಸಿತು.

ಮಿಥುನ್ ಅತ್ಯಂತ ಕರಾರುವಾಕ್ಕಾಗಿ ಬೌಲ್‌ ಮಾಡುವ ಜೊತೆಗೆ ಎದುರಾಳಿ ತಂಡದ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಿದರು.  ನಾಲ್ಕು ಓವರ್‌ಗಳು ಪೂರ್ಣಗೊಳ್ಳುವಷ್ಟರಲ್ಲಿ ಮತ್ತೆ ತಂತ್ರ ಹೂಡಿದ ಕರುಣ್‌ ಅವರು ಮಿಥುನ್‌ ಬದಲು ಇನ್ನೊಬ್ಬ ವೇಗಿ ಸ್ಟುವರ್ಟ್‌ ಬಿನ್ನಿ ಅವರನ್ನು ಕಣಕ್ಕಿಳಿಸಿದರು. ಈ ಯೋಜನೆಗೆ ಫಲ ಲಭಿಸಲಿಲ್ಲ. ಆದರೆ ಕೆ.  ಗೌತಮ್‌ ಬೌಲ್‌ ಮಾಡಲು ಆರಂಭಿಸಿದ ಬಳಿಕ ದೆಹಲಿ ತಂಡದಲ್ಲಿ ನಡುಕ ಉಂಟಾಯಿತು.

ವೈಫಲ್ಯವೇ ಸ್ಫೂರ್ತಿಯಾಯಿತು:  ಒಂದು ನಿರಾಸೆ ಎನೆಲ್ಲಾ ಪಾಠಗಳನ್ನು ಕಲಿಸುತ್ತದೆ ಎನ್ನುವುದಕ್ಕೆ ಈ ಪಂದ್ಯದಲ್ಲಿ ಗೌತಮ್‌ ತೋರಿದ ಸಾಮರ್ಥ್ಯ ಸಾಕ್ಷಿಯಾಯಿತು. ದೆಹಲಿ ಎದುರು ಅವರು ಪ್ರಮುಖ ಐದು ವಿಕೆಟ್‌ಗಳನ್ನು ಉರುಳಿಸಿ ಪಂದ್ಯ ಶ್ರೇಷ್ಠ ಗೌರವ ಪಡೆದರು.

ಗೌತಮ್‌ 2012ರಲ್ಲಿ ಮೊದಲ ಬಾರಿಗೆ ರಣಜಿ ತಂಡದಲ್ಲಿ ಸ್ಥಾನ ಪಡೆದು ಅಷ್ಟೇ ಬೇಗ ತಂಡದಿಂದ ಹೊರಬಿದ್ದಿದ್ದರು. ಮತ್ತೆ ತಂಡದಲ್ಲಿ ಸ್ಥಾನ ಗಳಿಸಲು ಪ್ರಯತ್ನಿಸಿ ವಿಫಲರಾಗಿದ್ದರು. ಆದರೆ ಈ ಬಾರಿ ಅವಕಾಶ ಪಡೆದು ಆಯ್ಕೆ ಸಮಿತಿ ತಮ್ಮ ಮೇಲಿಟ್ಟಿದ್ದ ನಂಬಿಕೆ ಉಳಿಸಿಕೊಂಡಿದ್ದಾರೆ.

ಪಂದ್ಯದ ಬಳಿಕ ಗೌತಮ್‌ ‘ಪ್ರಜಾವಾಣಿ’ ಜೊತೆ ಇದೇ ಅನಿಸಿಕೆ ಹಂಚಿಕೊಂಡರು. ‘ತಂಡದಲ್ಲಿ ಸ್ಥಾನ ಪಡೆಯಲು ಸ್ಪಿನ್ನರ್‌ಗಳ ನಡುವೆ ಸಾಕಷ್ಟು ಪೈಪೋಟಿಯಿದೆ. ಈಗ ಸಿಕ್ಕಿರುವ ಅವಕಾಶ ಬಳಸಿಕೊಳ್ಳದೇ ಬೇರೆ ಹಾದಿಯಿಲ್ಲ’ ಎಂದರು.

ಮೂರನೇ ದಿನದಾಟದ 20ನೇ ಓವರ್‌ನಲ್ಲಿ ಮೊದಲ ವಿಕೆಟ್ ಪಡೆದ ಗೌತಮ್‌ ನಂತರವೂ ಸ್ಪಿನ್‌ ಜಾದೂ ಮುಂದುವರಿಸಿದರು. ನಿತೀಶ್‌ ರಾಣಾ, ಉನ್ಮುಕ್ತ್‌ ಚಾಂದ್‌, ರಿಷಬ್‌ ಪಂತ್‌, ಮಿಲಿಂದ್ ಮತ್ತು ಮನನ್‌ ಶರ್ಮಾ ಅವರಿಗೆ ಹೆಚ್ಚು ಕ್ರೀಸ್‌ನಲ್ಲಿರಲು ಅವಕಾಶ ಕೊಡದೇ ಗೌತಮ್‌ ಕರ್ನಾಟಕದ ಜಯದ ಹಾದಿ ಸುಗಮ ಮಾಡಿದರು.

ಕೊನೆಯಲ್ಲಿ ಹೋರಾಟ: ಏಳು ವಿಕೆಟ್‌ಗಳು ಪತನವಾದಾಗ ದೆಹಲಿ ತಂಡದ ಖಾತೆಯಲ್ಲಿ 94 ರನ್‌ಗಳಿದ್ದವು. ಗೆಲುವು ಖಚಿತವಾಗಿದ್ದ ಕಾರಣ ಕರ್ನಾಟಕ ನಿಧಾನವಾಗಿ ಆಡುವ ತಂತ್ರಕ್ಕೆ ಮುಂದಾಯಿತು. ಈ ಅವಕಾಶ ಬಳಸಿಕೊಂಡು ವರುಣ್‌ ಸೂದ್‌ (41, 85 ನಿಮಿಷ, 47 ಎಸೆತ, 6 ಬೌಂಡರಿ, 1 ಸಿಕ್ಸರ್) ಇನಿಂಗ್ಸ್ ಅಂತರದ ಸೋಲು ತಪ್ಪಿಸಲು ಪ್ರಯತ್ನಿಸಿದರು. ಪಂದ್ಯದ ಅಂತಿಮ ಓವರ್‌ಗಳಲ್ಲಿ ಬೌಲ್‌ ಮಾಡಿದ ಲೆಗ್ ಸ್ಪಿನ್ನರ್‌ ಶ್ರೇಯಸ್ ಗೋಪಾಲ್‌ ಎರಡು ವಿಕೆಟ್ ಪಡೆದರೆ, ದೆಹಲಿ ತಂಡದ ಹತ್ತನೇ ವಿಕೆಟನ್ನು ಅರವಿಂದ್ ಉರುಳಿಸಿದರು.

ಇದು ಈ ಬಾರಿಯ ರಣಜಿ ಟೂರ್ನಿಯಲ್ಲಿ ದೆಹಲಿ ಕಂಡ ಮೊದಲ ಸೋಲು. ಮೊದಲ ಪಂದ್ಯದಲ್ಲಿ ಅಸ್ಸಾಂ ಎದುರು ಜಯ ಪಡೆದಿದ್ದ ತಂಡ ಹಿಂದಿನ ಪಂದ್ಯವನ್ನು ಮಹಾರಾಷ್ಟ್ರ ಎದುರು ಡ್ರಾ ಮಾಡಿಕೊಂಡಿತ್ತು.

ಸ್ಕೋರ್‌ಕಾರ್ಡ್‌

ದೆಹಲಿ ಮೊದಲ ಇನಿಂಗ್ಸ್‌ 90 (35.5 ಓವರ್‌ಗಳಲ್ಲಿ)

ಕರ್ನಾಟಕ ಪ್ರಥಮ ಇನಿಂಗ್ಸ್‌  414 (141.3 ಓವರ್‌ಗಳಲ್ಲಿ)
ದೆಹಲಿ ಎರಡನೇ  ಇನಿಂಗ್ಸ್‌  164 (43 ಓವರ್‌ಗಳಲ್ಲಿ)

ADVERTISEMENT

ಉನ್ಮುಕ್ತ್‌ ಚಾಂದ್‌ ಸಿ ಕರುಣ್‌ ನಾಯರ್‌ ಬಿ ಕೆ. ಗೌತಮ್‌  38
ಗೌತಮ್ ಗಂಭೀರ್‌ ಸಿ ರಾಬಿನ್‌ ಉತ್ತಪ್ಪ ಬಿ ಅಭಿಮನ್ಯು ಮಿಥುನ್‌  02
ಧ್ರುವ ಶೊರೆ ಬಿ ಅಭಿಮನ್ಯು ಮಿಥುನ್‌  00
ನಿತೀಶ್‌ ರಾಣಾ ಎಲ್‌ಬಿಡಬ್ಲ್ಯು ಬಿ ಕೆ. ಗೌತಮ್‌  28
ರಿಷಬ್‌ ಪಂತ್‌ ಸಿ ಕರುಣ್‌ ನಾಯರ್‌ ಬಿ ಕೆ. ಗೌತಮ್‌  09
ಮಿಲಿಂದ್‌ ಕುಮಾರ್‌ ಸಿ ಆರ್‌. ಸಮರ್ಥ್‌ ಬಿ ಕೆ. ಗೌತಮ್‌  00
ಮನನ್‌ ಶರ್ಮಾ ಸಿ ರಾಬಿನ್‌ ಉತ್ತಪ್ಪ ಬಿ ಕೆ. ಗೌತಮ್‌  00
ವರುಣ್‌ ಸೂದ್‌ ಔಟಾಗದೆ  41
ವಿಕಾಸ್‌ ಟೋಕಸ್‌ ಸಿ  ಅಬ್ಬಾಸ್‌ ಬಿ ಶ್ರೇಯಸ್‌ ಗೋಪಾಲ್‌  17
ಇಶಾಂತ್‌ ಶರ್ಮಾ ಸಿ ಮತ್ತು ಬಿ ಶ್ರೇಯಸ್‌ ಗೋಪಾಲ್‌  11
ಪವನ್‌ ಸುಯಾಲ್‌ ಬಿ ಎಸ್‌. ಅರವಿಂದ್‌  05
ಇತರೆ: (ನೋ ಬಾಲ್‌–1, ವೈಡ್‌–1, ಬೈ–8, ಲೆಗ್‌ ಬೈ–3)  13

ವಿಕೆಟ್‌ ಪತನ:  1–11 (ಗಂಭೀರ್‌; 4.1), 2–11 (ಧ್ರುವ; 4.2), 3–61 (ನಿತೀಶ್‌; 19.3), 4–71 (ರಿಷಬ್‌; 21.2), 5–75 (ಮಿಲಿಂದ್‌; 23.2), 6–75 (ಮನನ್‌; 23.4), 7–94 (ಉನ್ಮುಕ್ತ್‌; 25.5), 8–127 (ವಿಕಾಸ್‌; 35.2), 9–143 (ಇಶಾಂತ್‌; 39.3), 10–164 (ಪವನ್‌; 42.6).
ಬೌಲಿಂಗ್‌: ಅಭಿಮನ್ಯು ಮಿಥುನ್‌ 9–1–36–2, ಎಸ್‌. ಅರವಿಂದ್‌ 9–2–23–1, ಸ್ಟುವರ್ಟ್‌ ಬಿನ್ನಿ 10–4–25–0, ಕೆ. ಗೌತಮ್‌ 9–1–35–5, ಶ್ರೇಯಸ್‌ ಗೋಪಾಲ್ 6–0–34–2.
ಫಲಿತಾಂಶ: ಕರ್ನಾಟಕಕ್ಕೆ ಇನಿಂಗ್ಸ್‌ ಹಾಗೂ 160 ರನ್ ಜಯ.
ಪಂದ್ಯ ಶ್ರೇಷ್ಠ: ಕೆ. ಗೌತಮ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.