ADVERTISEMENT

ರಾಜೇಶ್ವರಿ ತವರಲ್ಲಿ ಗೆಲುವಿಗಾಗಿ ಪ್ರಾರ್ಥನೆ

ಡಿ.ಬಿ, ನಾಗರಾಜ
Published 22 ಜುಲೈ 2017, 20:08 IST
Last Updated 22 ಜುಲೈ 2017, 20:08 IST
ರಾಜೇಶ್ವರಿ ಗಾಯಕವಾಡ್‌
ರಾಜೇಶ್ವರಿ ಗಾಯಕವಾಡ್‌   

ವಿಜಯಪುರ: ಮಹಿಳಾ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ ಅಮೋಘ ಆಟವಾಡಿ ಭಾರತದ ಚೊಚ್ಚಲ ವಿಶ್ವಕಪ್‌ ಕನಸನ್ನು ಜೀವಂತವಾಗಿಟ್ಟ, ರಾಜೇಶ್ವರಿ ಗಾಯಕವಾಡ್‌ ತವರೂರು ವಿಜಯಪುರ ಜಿಲ್ಲೆಯಲ್ಲಿ ಸಂಭ್ರಮ ಮನೆಮಾಡಿದೆ.

ನಗರವೂ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಗೆಲುವಿಗಾಗಿ ಪ್ರಾರ್ಥನೆ ನಡೆದಿದೆ. ತಮ್ಮೂರಿನ ಹುಡುಗಿ ಅಂತಿಮ ಪಂದ್ಯದಲ್ಲೂ ಅಮೋಘ ಆಟವಾಡಲಿ, ದೇಶಕ್ಕೆ ಕೀರ್ತಿ ತರಲಿ ಎಂಬ ಹಾರೈಕೆ ಎಲ್ಲೆಡೆ ವ್ಯಕ್ತವಾಗಿದೆ.

ರಾಜೇಶ್ವರಿ ಗಾಯಕವಾಡ್‌ ವ್ಯಾಸಂಗ ನಡೆಸಿದ ಬಿಡಿಇ ಸೊಸೈಟಿಯ ಬಾಲಕಿಯರ ಪ್ರೌಢಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜು, ಅಂತಿಮ ಬಿಎ ವ್ಯಾಸಂಗ ನಡೆಸುತ್ತಿರುವ ಬಿಎಲ್‌ಡಿಇ ಸಂಸ್ಥೆಯ ಬಂಗಾರೆಮ್ಮ ಸಜ್ಜನ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ರಾಜೇಶ್ವರಿ ಉತ್ತಮ ಆಟವಾಡಲೆಂದು ಶನಿವಾರ ಶಾಲಾ–ಕಾಲೇಜಿನಲ್ಲಿ ವಿಶೇಷ ಪ್ರಾರ್ಥನೆ ಮಾಡಿದರು.

ADVERTISEMENT

ಪ್ರೌಢಶಾಲೆಯಲ್ಲಿ ವ್ಯಾಸಂಗ ನಡೆಸುವಾಗಲೇ ಕ್ರಿಕೆಟ್ ಬಾಲನ್ನು ಗಾಯಕವಾಡ್‌ ಕೈಗಿತ್ತ, ಮಾರ್ಗದರ್ಶಕರಾದ ದೈಹಿಕ ಶಿಕ್ಷಣ ಶಿಕ್ಷಕಿ ಅಂಬುಜಾ ಕೆ.ದೇಸಾಯಿ, ಮೊದಲ ತರಬೇತುದಾರರಾದ ಪ್ರೊ.ಅಶೋಕ ಜಾಧವ, ಪ್ರೋತ್ಸಾಹ ನೀಡಿದ ಇಜೇರಿ ಅಕಾಡೆಮಿ ಕಾರ್ಯದರ್ಶಿ ಬಸವರಾಜ ಇಜೇರಿ ಶುಭ ಹಾರೈಸಿದ್ದಾರೆ. ಭಾನುವಾರದ ಪಂದ್ಯ ವೀಕ್ಷಿಸಲು ಕ್ರೀಡಾಭಿಮಾನಿಗಳು ಕಾತರದಿಂದ ಕಾದಿದ್ದಾರೆ.

ಪದಾರ್ಪಣೆ:19 ವರ್ಷದೊಳಗಿನ ಮಹಿಳಾ ಕ್ರಿಕೆಟ್‌ನಲ್ಲಿ ಉತ್ತಮ ಆಟವಾಡಿದ್ದ ಅವರು 2007ರಲ್ಲಿ ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದರು. 2009ರಲ್ಲಿ ರಾಷ್ಟ್ರೀಯ ಟ್ವೆಂಟಿ–20 ಟೂರ್ನಿಯಲ್ಲಿ ಆಡಿದ್ದರು.

2014ರ ಜನವರಿಯಲ್ಲಿ ರಾಂಚಿಯಲ್ಲಿ ನಡೆದ ಚಾಲೆಂಜರ್ ಟ್ರೋಫಿಯಲ್ಲಿ ಇಂಡಿಯಾ ಬ್ಲ್ಯೂ ತಂಡದಲ್ಲಿ ಆಡಿದ್ದರು. ಬೆಂಗಳೂರಿನಲ್ಲಿ ನ್ಯೂಜಿಲೆಂಡ್‌ ವಿರುದ್ಧ 2015ರ ಜೂನ್ 28ರಂದು ನಡೆದ ಏಕದಿನ ಪಂದ್ಯದಲ್ಲಿ ಅಂತರರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡಿದರು.

*
ಥ್ರೋಯಿಂಗ್‌ನಲ್ಲಿ ರಾಜೇಶ್ವರಿ ಮುಂದಿದ್ದಳು. 9ನೇ ತರಗತಿಯಲ್ಲಿದ್ದಾಗ ಕ್ರಿಕೆಟ್‌ಗೆ ಪರಿಚಯಿಸಿದೆ. ಎಸ್ಸೆಸ್ಸೆಲ್ಸಿಗೆ ಬಂದಾಗ ತಂಡಕ್ಕೆ ಆಯ್ಕೆಯಾದಳು. ಅವಳ ಸಾಧನೆಯಿಂದ ಹೆಮ್ಮೆ ಅನಿಸುತ್ತಿದೆ.
-ಅಂಬುಜಾ ಕೆ.ದೇಸಾಯಿ,
ದೈಹಿಕ ಶಿಕ್ಷಣ ಶಿಕ್ಷಕಿ

*
ವಿಶ್ವಕಪ್‌ ಗೆದ್ದುಕೊಂಡೇ ಊರಿಗೆ ಬರ್ತೇನೆ ಎಂದು ರಾಜೇಶ್ವರಿ ಫೋನ್‌ ಮಾಡಿ ಹೇಳಿದ್ದಾಳೆ. ಚಲೋ ಆಡು, ದೇಶಕ್ಕೆ ಕೀರ್ತಿ ತಗೊಂಡು ಬಾ ಎಂದು ಹೇಳಿನಿ. ಮಗಳ ಯಶಸ್ವಿಗಾಗಿ ಎಲ್ಲರ ಜತೆ ಪ್ರಾರ್ಥಿಸುವೆ.
-ಸವಿತಾ ಗಾಯಕವಾಡ್‌
ರಾಜೇಶ್ವರಿ ತಾಯಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.