ADVERTISEMENT

ರಾಹುಲ್ ಅರ್ಧಶತಕದ ಆಸರೆ

ಭಾರತ ಮತ್ತು ಶ್ರೀಲಂಕಾ ಮಂಡಳಿ ಅಧ್ಯಕ್ಷರ ನಡುವಣ ಅಭ್ಯಾಸ ಪಂದ್ಯ

ಪಿಟಿಐ
Published 21 ಜುಲೈ 2017, 19:30 IST
Last Updated 21 ಜುಲೈ 2017, 19:30 IST
ರಾಹುಲ್ ಅರ್ಧಶತಕದ ಆಸರೆ
ರಾಹುಲ್ ಅರ್ಧಶತಕದ ಆಸರೆ   

ಕೊಲಂಬೊ:  ಕರ್ನಾಟಕದ ಕೆ.ಎಲ್. ರಾಹುಲ್  ಮತ್ತು ಚೈನಾಮನ್ ಬೌಲರ್ ಕುಲದೀಪ್ ಯಾದವ್ ಅವರ ಅಮೋಘ ಆಟದ ಬಲದಿಂದ ಭಾರತ ತಂಡವು ಶುಕ್ರವಾರ ಆರಂಭವಾದ ಶ್ರೀಲಂಕಾ ಮಂಡಳಿ ಅಧ್ಯಕ್ಷರ ತಂಡದ ಎದುರಿನ ಅಭ್ಯಾಸ ಪಂದ್ಯದ ಮೊದಲ ದಿನದ ಗೌರವ ಪಡೆಯಿತು.

ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕೆಯ ತಂಡವು ಕುಲದೀಪ್(14ಕ್ಕೆ4) ಅವರ ಬೌಲಿಂಗ್‌ಗೆ ತತ್ತರಿಸಿತು. 55.5 ಓವರ್‌ಗಳಲ್ಲಿ 187 ರನ್‌ಗಳನ್ನು ಗಳಿಸಿ ಸರ್ವಪತನವಾಯಿತು.

ನಂತರ ಬ್ಯಾಟಿಂಗ್ ಮಾಡಿದ ಭಾರತ ತಂಡವು ಭುಜದ ಗಾಯಕ್ಕೆ ಶಸ್ತ್ರಚಿಕಿತ್ಸೆ ನಂತರ ಸುಮಾರು ಎರಡು ತಿಂಗಳ ವಿಶ್ರಾಂತಿ ಪಡೆದಿದ್ದ ರಾಹುಲ್ (54; 58ಎ, 7ಬೌಂ) ಅರ್ಧಶತಕ ಬಾರಿಸಿದರು. ಅದರಿಂದಾಗಿ ದಿನದಾಟದ ಕೊನೆಗೆ 30 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 135 ರನ್ ಗಳಿಸಿದೆ.

ADVERTISEMENT

ಪಂದ್ಯದಲ್ಲಿ ಭಾರತ ತಂಡದ ಎಂಟು ಮಂದಿ ಬೌಲರ್‌ಗಳೂ ಕಣಕ್ಕಿಳಿದು ತಮ್ಮ ಅದೃಷ್ಟವನ್ನು ಪಣಕ್ಕೊಡ್ಡಿದ್ದರು. ಆದರೆ,  ಕಾನ್ಪುರದ ಹುಡುಗ ಕುಲದೀಪ್ ಕೈಮೇಲಾಯಿತು. ಅವರೊಂದಿಗೆ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ (31ಕ್ಕೆ3) ಅವರೂ ಮಿಂಚಿದರು. ಮಧ್ಯಮವೇಗದ ಬೌಲರ್‌ಗಳ ಪೈಕಿ ಮೊಹಮ್ಮದ್ ಶಮಿ (9ಕ್ಕೆ2) ಒಬ್ಬರೇ ಯಶಸ್ಸಿಯಾದರು.

ಶಮಿ ಅವರು  ಎದುರಾಳಿ ತಂಡಕ್ಕೆ ಆರಂಭದಲ್ಲಿಯೇ ಪೆಟ್ಟು ನೀಡಿದರು. ಮೂರನೇ ಓವರ್‌ನಲ್ಲಿಯೇ ಜಯನ್ ಕುಶಾಲ ಸಿಲ್ವಾ ನಿರ್ಗಮಿಸಿದರು. ನಂತರ  ದಿಮುತ ಗುಣತಿಲಕ (74; 97ಎ, 11ಬೌಂ) ಮತ್ತು  ನಾಯಕ ಲಾಹಿರು ತಿರುಮನ್ನೆ (59; 125ಎ, 5ಬೌಂ, 2ಸಿ) ಇಬ್ಬರೂ ಸೇರಿ ಎರಡನೇ ವಿಕೆಟ್‌ಗೆ 139 ರನ್‌ ಸೇರಿಸಿದರು.

8ನೇ ಓವರ್‌ನಲ್ಲಿ ಜಡೇಜ ಅವರ ಚುರುಕಿನ ಫೀಲ್ಡಿಂಗ್ ಮತ್ತು ನಿಖರ ಥ್ರೋಗೆ ತಿರುಮನ್ನೆ ರನ್‌ಔಟ್ ಆದರು. ಅದರೊಂದಿಗೆ ಅಮೋಘ ಜೊತೆಯಾಟ ಮುರಿದುಬಿತ್ತು. ನಂತರ ಬಂದ ಬ್ಯಾಟ್ಸ್‌ಮನ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಜಡೇಜ ಮತ್ತು ಕುಲದೀಪ್ ಯಾದವ್ ಅವರ ದಾಳಿ ರಂಗೇರಿತು.

ರಾಹುಲ್ ಮಿಂಚು
ಹೋದ ಫೆಬ್ರುವರಿ–ಮಾರ್ಚ್‌ನಲ್ಲಿ  ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಸರಣಿಯಲ್ಲಿ  ಶ್ರೇಷ್ಠ ಆಟಗಾರ ಗೌರವ ಗಳಿಸಿದ್ದರು. ಆದರೆ ಗಾಯದಿಂದಾಗಿ  ಐಪಿಎಲ್, ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್ ಟೂರ್ನಿ ಮತ್ತು  ವೆಸ್ಟ್ ಇಂಡೀಸ್‌ನಲ್ಲಿ ನಡೆದಿದ್ದ ಸರಣಿಯಲ್ಲಿ ಆಡಿರಲಿಲ್ಲ. ಈಗ ತಂಡಕ್ಕೆ ಮರಳಿರುವ ಅವರು ಮೊದಲ ಅವಕಾಶದಲ್ಲಿಯೇ  ಆಕರ್ಷಕ ಬ್ಯಾಟಿಂಗ್ ಮಾಡಿದರು.

ಮುರಳಿ ವಿಜಯ್ ಅನುಪಸ್ಥಿತಿಯಲ್ಲಿ ಅಭಿನವ್ ಮುಕುಂದ್ ಅವರಿಗೆ ಅವಕಾಶ ನೀಡಲಾಗಿದೆ. ಆದರೆ ಅವರು ಸೊನ್ನೆ ಸುತ್ತಿದರು. ಚೇತೇಶ್ವರ್ ಪೂಜಾರ ಕೇವಲ 12 ರನ್ ಗಳಿಸಿ ನಿರ್ಗಮಿಸಿದರು. ನಾಯಕ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಕ್ರೀಸ್‌ನಲ್ಲಿದ್ದಾರೆ.

ಸಂಕ್ಷಿಪ್ತ ಸ್ಕೋರು
ಮೊದಲ ಇನಿಂಗ್ಸ್‌:
ಶ್ರೀಲಂಕಾ ಮಂಡಳಿ ಅಧ್ಯಕ್ಷರ ಇಲೆವನ್: 55.5 ಓವರ್‌ಗಳಲ್ಲಿ 187 (ಧನುಷ್ಕಾ ಗುಣತಿಲಕ 74, ತಿರಿಮಾನ್ನೆ 59, ಸಂದನ್ ವೀರಕ್ಕೊಡಿ 10, ಮೊಹಮ್ಮದ್ ಶಮಿ 9ಕ್ಕೆ2, ರವೀಂದ್ರ ಜಡೇಜ 31ಕ್ಕೆ3, ಕುಲದೀಪ್ ಯಾದವ್ 14ಕ್ಕೆ4) ಭಾರತ: 30 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 135 (ಕೆ.ಎಲ್. ರಾಹುಲ್ 54, ವಿರಾಟ್ ಕೊಹ್ಲಿ ಬ್ಯಾಟಿಂಗ್ 34,  ಅಜಿಂಕ್ಯ ರಹಾನೆ ಬ್ಯಾಟಿಂಗ್ 30, ವಿಶ್ವಾನಂದ ಫರ್ನಾಂಡೊ 21ಕ್ಕೆ2)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.