ADVERTISEMENT

ಲಂಕಾ ಕ್ರಿಕೆಟ್‌: ಭ್ರಷ್ಟಾಚಾರದ ತನಿಖೆ

ಪಿಟಿಐ
Published 24 ಸೆಪ್ಟೆಂಬರ್ 2017, 19:30 IST
Last Updated 24 ಸೆಪ್ಟೆಂಬರ್ 2017, 19:30 IST

ದುಬೈ : ಶ್ರೀಲಂಕಾ ಕ್ರಿಕೆಟ್‌ನಲ್ಲಿ ನಡೆದಿದೆ ಎಂದು ಶಂಕಿಸಲಾಗಿರುವ ಅವ್ಯವಹಾರ ಮತ್ತು ಭ್ರಷ್ಟಾಚಾರದ ಬಗ್ಗೆ ತನಿಖೆಗೆ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಮುಂದಾಗಿದೆ.

ಆದರೆ ಇದಕ್ಕೆ ನಿರ್ದಿಷ್ಟ ಸರಣಿಯನ್ನು ಉಲ್ಲೇಖಿಸಲಿಲ್ಲ. ತನಿಖೆಯ ಭಾಗವಾಗಿ ಐಸಿಸಿಯ ಭ್ರಷ್ಟಾಚಾರ ತಡೆ ಘಟಕ ಈಚೆಗೆ ಶ್ರೀಲಂಕಾಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದೆ ಎಂದು ಐಸಿಸಿ ಪ್ರಧಾನ ವ್ಯವಸ್ಥಾಪಕ ಅಲೆಕ್ಸ್ ಮಾರ್ಷಲ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂವರು ಸಮಸ್ಯರು ಒಳಗೊಂಡ ತಂಡ ಶ್ರೀಲಂಕಾಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ ಎಂಬುದನ್ನು ಲಂಕಾ ಕ್ರಿಕೆಟ್ ಸಮಿತಿಯೂ ಒಪ್ಪಿಕೊಂಡಿದೆ. ಪಾಕಿಸ್ತಾನ ವಿರುದ್ಧ ಎರಡು ಟೆಸ್ಟ್‌, ಐದು ಏಕದಿನ ಮತ್ತು ಮೂರು ಟ್ವೆಂಟಿ–20 ಪಂದ್ಯಗಳನ್ನು ಆಡಲು ದುಬೈಗೆ ತೆರಳುವ ಮುನ್ನ ಶ್ರೀಲಂಕಾ ತಂಡದ ಆಟಗಾರರನ್ನು ತಂಡ ವಿಚಾರಣೆಗೆ ಒಳಪಡಿಸಿದೆ ಎಂದು ಕೂಡ ಅದು ಮಾಹಿತಿ ನೀಡಿದೆ.

ADVERTISEMENT

‘ಕ್ರಿಕೆಟ್‌ನಲ್ಲಿ ಅವ್ಯವಹಾರ ನಡೆಯಬಾರದು ಎಂಬುದು ಐಸಿಸಿಯ ಬಯಕೆ. ತನಿಖೆಯ ಕುರಿತು ಸದ್ಯ ಹೆಚ್ಚಿನದೇನನ್ನೂ ಹೇಳುವುದಿಲ್ಲ. ಪೂರಕ ಮಾಹಿತಿ ನೀಡಲು ಯಾರಾದರೂ ಮುಂದೆ ಬಂದರೆ ಮುಕ್ತವಾಗಿ ಪರಿಗಣಿಸ
ಲಾಗುವುದು’ ಎಂದು ಹೇಳಿದ್ದಾರೆ.

ಶ್ರೀಲಂಕಾ ಇತ್ತೀಚೆಗೆ ಅಸಹಜ ರೀತಿಯಲ್ಲಿ ಸೋಲುಗಳ ಸರಪಳಿಯಲ್ಲಿ ಸಿಲುಕಿತ್ತು. ಇದು ಅಲ್ಲಿನ ಹಿರಿಯ ಕ್ರಿಕೆಟಿಗರನ್ನು ಬೆಚ್ಚಿ ಬೀಳಿಸಿತ್ತು. ಆಯ್ಕೆ ಸಮಿತಿಯ ಹಿಂದಿನ ಅಧ್ಯಕ್ಷ ಪ್ರಮೋದಯ ವಿಕ್ರಮಸಿಂಘೆ ಈ ಕುರಿತು ಕಳವಳ ವ್ಯಕ್ತಪಡಿಸಿದ ಬೆನ್ನಲ್ಲೇ 40 ಮಂದಿ ಆಟಗಾರರನ್ನು ವಿಚಾರಣೆಗೆ ಒಳಪಡಿಸಲು ಶ್ರೀಲಂಕಾ ಕ್ರಿಕೆಟ್ ಸಮಿತಿ ಮುಂದಾಗಿತ್ತು. ಈ ನಿರ್ಧಾರ ಹೊರ ಬಿದ್ದ ಕೂಡಲೇ ಐಸಿಸಿ ಕೂಡ ತನಿಖೆಗೆ ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.