ADVERTISEMENT

ಲೋಧಾ ಶಿಫಾರಸು ಭಾಗಶಃ ಜಾರಿಗೆ ಬಿಸಿಸಿಐ ಒಪ್ಪಿಗೆ

ಪಿಟಿಐ
Published 26 ಜುಲೈ 2017, 19:30 IST
Last Updated 26 ಜುಲೈ 2017, 19:30 IST

ನವದೆಹಲಿ: ಕ್ರಿಕೆಟ್ ಆಡಳಿತದಲ್ಲಿ ಸುಧಾರಣೆಗಾಗಿ ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ ಸಮಿತಿಯ ಶಿಫಾರಸುಗಳನ್ನು ಭಾಗಶ: ಜಾರಿಗೆ ತರಲು ಬಿಸಿಸಿಐ ಒಪ್ಪಿಕೊಂಡಿದೆ. ಆದರೆ ಅದರಲ್ಲಿ ಐದು ಪ್ರಮುಖ  ಶಿಫಾರಸುಗಳ ಜಾರಿಗೆ ಸಮ್ಮತಿಸಿಲ್ಲ.

ಬುಧವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ  ಲೋಧಾ ಸಮಿತಿ ಶಿಫಾರಸು ಜಾರಿ ಕುರಿತು ಚರ್ಚೆ ನಡೆಯಿತು. ಸುಪ್ರೀಂ ಕೋರ್ಟ್‌ ಸೂಚನೆ ನೀಡಿರುವ ಪ್ರಕಾರ ಶಿಫಾರಸುಗಳ ಜಾರಿಗೆ ಸರ್ವಾನುಮತದ ಅನುಮೋದನೆ ಲಭಿಸಿತು. ಆದರೆ ಲೋಧಾ ಸಮಿತಿಯು ಮಾಡಿರುವ ಹತ್ತು ಶಿಫಾರಸುಗಳಲ್ಲಿ ಐದನ್ನು ಮಾತ್ರ ಒಪ್ಪಿಕೊಂಡಿದೆ.

ಒಂದು ರಾಜ್ಯ ಒಂದು ಮತ ಚಲಾವಣೆ ಹಕ್ಕು, 70 ವರ್ಷ ದಾಟಿದವರು ಬಿಸಿಸಿಐ ಮತ್ತು ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೆ ಪದಾಧಿರಿಗಳಾಗುವಂತಿಲ್ಲ, ಒಂದು ಅವಧಿಗೆ ಪದಾಧಿಕಾರಿಯಾದವರು ನಂತರ ಸತತವಾಗಿ ಅಧಿಕಾರ ವಹಿಸಿಕೊಳ್ಳುವಂತಿಲ್ಲ. ಎರಡು ಅವಧಿಗಳ ನಡುವೆ ಮೂರು ವರ್ಷಗಳ ಅಂತರ ಇರಬೇಕು, ಒಬ್ಬ ವ್ಯಕ್ತಿ ಒಂದು ಸಂಸ್ಥೆಯಲ್ಲಿ ಗರಿಷ್ಠ ಒಂಬತ್ತು ವರ್ಷ ಪದಾಧಿಕಾರಿಯಾಗಬಹುದು ಎಂಬ ಶಿಫಾರಸುಗಳನ್ನು ಜಾರಿ ಮಾಡಲು ಒಪ್ಪಿಕೊಂಡಿಲ್ಲ. ಸುಪ್ರೀಂ ಕೋರ್ಟ್ ನೀಡಿರುವ ಆಗಸ್ಟ್ 18ರೊಳಗಿನ ಅವಧಿಯಲ್ಲಿ ಈ ಶಿಫಾರಸುಗಳನ್ನು ಜಾರಿಗೊಳಿಸಲು ಬಹಳಷ್ಟು ಅಡೆತಡೆಗಳಿವೆ ಎಂದು ಬಿಸಿಸಿಐ ತಿಳಿಸಿದೆ. ಇವುಗಳಲ್ಲದೇ; ರಾಷ್ಟ್ರೀಯ ಆಯ್ಕೆ ಸಮಿತಿಯಲ್ಲಿ ಸದಸ್ಯರ ಸಂಖ್ಯೆಯ ನಿಗದಿ ಮತ್ತು ಸಚಿವರು ಮತ್ತು ಸರ್ಕಾರಿ ಅಧಿಕಾರಿಗಳು ಬಿಸಿಸಿಐ ಮತ್ತು ರಾಜ್ಯ ಸಂಸ್ಥೆಗಳ ಪದಾಧಿಕಾರಿಗಳಾಗುವಂತಿಲ್ಲ ಎಂಬ ಶಿಫಾರಸುಗಳನ್ನು ಮರು ಪರಿಶೀಲಿಸಬೇಕು ಎಂದು ಬಿಸಿಸಿಐ  ಆಗ್ರಹಿಸಿದೆ.

ADVERTISEMENT

‘ರೈಲ್ವೆ ಇಲಾಖೆ ಮತ್ತು ಸರ್ವಿಸಸ್‌ ತಂಡಗಳು ನಮಗೆ ಬೇಕು. ಆದ್ದರಿಂದ ಪೂರ್ಣಪ್ರಮಾಣದ ಸದಸ್ಯತ್ವವನ್ನು ನೀಡಬೇಕು. ಒಂದು ರಾಜ್ಯ, ಒಂದು ಮತ ಶಿಫಾರಸು ಮರು ಪರಿಶೀಲನೆಯಾಗಬೇಕು. ಆದರೆ, ಆಗ ಈ ಎರಡೂ ಇಲಾಖೆಗಳಿಂದ ಸರ್ಕಾರಿ ಅಧಿಕಾರಿಗಳು ಅಥವಾ ಸಚಿವರು ಪ್ರತಿನಿಧಿಗಳಾಗಿ ಬಿಸಿಸಿಐಗೆ ನೇಮಕವಾಗುತ್ತಾರೆ. ಆಗ ಸರ್ಕಾರಿ ನೌಕರರು ಮಂಡಳಿಯ ಆಡಳಿತದಲ್ಲಿ ಭಾಗವಹಿಸುವಂತಿಲ್ಲ ಎಂಬ ಶಿಫಾರಸು  ಈ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ’ ಎಂದು ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಹೇಳಿದರು.

‘ರಾಷ್ಟ್ರೀಯ ತಂಡದ ಆಯ್ಕೆ ಸಮಿತಿಯಲ್ಲಿ ಐವರು ಸದಸ್ಯರನ್ನು ನೇಮಕ ಮಾಡುವ ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ ಇಷ್ಟು ದೊಡ್ಡ ದೇಶದ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡಲು  ಐದು ಸದಸ್ಯರ ಸಂಖ್ಯೆ ಕಡಿಮೆ ಎಂದು ಕೆಲವು ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ. ಒಂಬುಡ್ಸ್‌ಮನ್ ನೇಮಕಕ್ಕಾಗಿ ಕೆಲವು ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಅಲ್ಲದೇ ಹಿತಾಸಕ್ತಿ ಸಂಘರ್ಷ ನಿಯಮದ ಕುರಿತು ಕೆಲವು ಸದಸ್ಯರಲ್ಲಿ ಭಿನ್ನಾಭಿಪ್ರಾಯವಿದೆ’ ಎಂದು ಚೌಧರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.