ADVERTISEMENT

ವಿದ್ಯಾ, ಚಂದ್ರನ್‌ಗೆ ನಿರೀಕ್ಷಿತ ವಿಜಯ

ವಿಶ್ವ ಸ್ನೂಕರ್: ಪಂಕಜ್‌ ಸಾಮರ್ಥ್ಯಕ್ಕೆ ಸಾಟಿಯಾಗದ ಹಾಂಕಾಂಗ್‌ ಆಟಗಾರ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2014, 19:30 IST
Last Updated 20 ನವೆಂಬರ್ 2014, 19:30 IST

ಬೆಂಗಳೂರು: ಎಂಟು ಬಾರಿಯ ರಾಷ್ಟ್ರೀಯ ಚಾಂಪಿಯನ್ ವಿದ್ಯಾ ಪಿಳ್ಳೈ ಮತ್ತು ಮನನ್ ಚಂದ್ರನ್‌ ಐಬಿಎಸ್‌ ಎಫ್‌ ವಿಶ್ವ ಸ್ನೂಕರ್‌ ಚಾಂಪಿಯನ್‌ ಷಿಪ್‌ನ ಗುಂಪು ಹಂತದ ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದಾರೆ.

ಕಂಠೀರವ ಒಳಾಂಗಣ ಕ್ರೀಡಾಂಗಣ ದಲ್ಲಿ ನಡೆಯುತ್ತಿರುವ ಚಾಂಪಿಯನ್‌ ಷಿಪ್‌ನಲ್ಲಿ ಎರಡನೇ ದಿನವಾದ ಗುರುವಾರ ಭಾರತಕ್ಕೆ ನಿರೀಕ್ಷಿತ ಫಲಿತಾಂಶಗಳು ಲಭಿಸಿದವು. ಮಹಿಳೆ ಯರ ‘ಸಿ’ ಗುಂಪಿನ ಪಂದ್ಯದಲ್ಲಿ ವಿದ್ಯಾ ಪಿಳ್ಳೈ 3-0ರಲ್ಲಿ ಬ್ರೆಜಿಲ್‌ನ ಫೆರ್ನಾಂಡಾ ಇರಿನೆಯು ಅವರನ್ನು ಮಣಿಸಿದರು.

ಪ್ರಶಸ್ತಿ ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿರುವ ವಿದ್ಯಾ ಮೂರೂ ಫ್ರೇಮ್‌ಗಳಲ್ಲಿ ಪ್ರಾಬಲ್ಯ ಮೆರೆದರು. ಮೊದಲ ಫ್ರೇಮ್‌ನಲ್ಲಿ ಲಭಿಸಿದ
65-26 ಅಂತರದ ಗೆಲುವು ಭಾರತದ ಆಟಗಾರ್ತಿಯಲ್ಲಿ ಅತೀವ ವಿಶ್ವಾಸ ತುಂಬಿತು. ಎರಡನೇ ಫ್ರೇಮ್‌ನಲ್ಲಿ ವಿದ್ಯಾ ‘ಶತಕ’ ಬಾರಿಸಿದರು. ಅವರು 100-14ರಲ್ಲಿ ಗೆಲುವು ಪಡೆದರು. ಮೂರನೇ ಫ್ರೇಮ್‌ನಲ್ಲಿ 85-13ರಲ್ಲಿ ಸುಲಭ ಜಯ ಲಭಿಸಿತು. ಈ ಪಂದ್ಯದಲ್ಲಿ ವಿದ್ಯಾ ಒಟ್ಟು 250 ಪಾಯಿಂಟ್ಸ್‌ ಗಳಿಸಿದರೆ, ಇರಿನೆಯು ಕಲೆ ಹಾಕಿದ್ದು 53 ಪಾಯಿಂಟ್ಸ್‌ ಮಾತ್ರ!

ಮಹಿಳಾ ವಿಭಾಗದ ಇನ್ನೊಂದು ಪಂದ್ಯದಲ್ಲಿ ಬೆಂಗಳೂರಿನ ಚಿತ್ರಾ ಮಗಿಮೈರಾಜ್‌ 3-1 (51-16, 49-70, 60-18, 76-8) ಫ್ರೇಮುಗಳಿಂದ ಬ್ರೆಜಿಲ್‌ನ ಕಾರ್ಮೆ ಲಿಟಾ ಯುಮಿಟೊ ಎದುರು ಜಯ ಸಾಧಿಸಿದರು. ಈ ಆಟಗಾರ್ತಿ ಹೋದ ವರ್ಷದ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದರು.

‘ಈ ಪಂದ್ಯದಲ್ಲಿ ಸುಲಭವಾಗಿ ಗೆಲುವು ಪಡೆಯಬಹುದಿತ್ತು. ಆದರೆ, ಯುಮಿಟೊ ಪಾಯಿಂಟ್ಸ್‌ ಗಳಿಸುವು ದಕ್ಕಿಂತ ಹೆಚ್ಚಾಗಿ ನಾನು ಪಾಯಿಂಟ್‌  ಗಳಿಸದಂತೆ ಎಚ್ಚರಿಕೆ ವಹಿಸಿದರು. ಇದು ಒಂದು ರೀತಿಯಲ್ಲಿ ನಕಾರಾತ್ಮಕ ಆಟ ಎನಿಸಿತು. ಆದ್ದರಿಂದ ಕೊಂಚ ಒತ್ತಡಕ್ಕೆ ಒಳಗಾಗಬೇಕಾಯಿತು’ ಎಂದು ಚಿತ್ರಾ ‘ಪ್ರಜಾವಾಣಿ’ ಜೊತೆ ಅನಿಸಿಕೆ ಹಂಚಿಕೊಂಡರು.

ಪುರುಷರ ವಿಭಾಗದ ಗುಂಪು ‘ಜಿ’ ಪಂದ್ಯದಲ್ಲಿ ದೆಹಲಿಯ ಮನನ್ ಚಂದ್ರನ್  4-3 (31-91, 112-1, 17-59, 28-52, 86-24,
69-42, 58-26) ಫಿಲಿಪ್ಪೀನ್ಸ್‌ನ ಅಲ್ವಿನ್ ಬಾರ್ಬೆರೊ ಅವರನ್ನು ಮಣಿಸಿ ದರು. 2009ರ ಏಷ್ಯನ್ ಒಳಾಂಗಣ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿದ್ದ ಮನನ್‌ ಇಲ್ಲಿ ಗೆಲುವಿಗಾಗಿ ಮ್ಯಾರ ಥಾನ್‌ ಹೋರಾಟ ನಡೆಸಬೇಕಾಯಿತು.

ಪಂಕಜ್‌ಗೆ ನಿರೀಕ್ಷಿತ ಜಯ: ಪ್ರಶಸ್ತಿ ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿರುವ ‘ಗೋಲ್ಡನ್‌ ಬಾಯ್‌’ ಪಂಕಜ್‌ ಅಡ್ವಾಣಿ ‘ಎಚ್‌’ ಗುಂಪಿನ ತಮ್ಮ ಎರಡನೇ ಪಂದ್ಯದಲ್ಲಿ ನಿರೀಕ್ಷಿತ ಗೆಲುವು ಪಡೆದರು.

ತವರಿನಲ್ಲಿ ಮೊದಲ ಬಾರಿಗೆ ಚಾಂಪಿಯನ್ ಎನಿಸಿಕೊಳ್ಳುವ ಆಸೆ ಹೊಂದಿರುವ ಬೆಂಗಳೂರಿನ ಆಟಗಾರ ಗುರುವಾರ ಹಾಂಕಾಂಗ್‌ನ ಚೇಯ್ ವೇಯಿ  ಎದುರು ಏಕಪಕ್ಷೀಯವಾಗಿ ಪಂದ್ಯ ಗೆದ್ದುಕೊಂಡರು. ಮೊದಲ ಫ್ರೇಮ್‌ನಲ್ಲಿ 75 ಪಾಯಿಂಟ್‌ಗಳ (99-24) ದೊಡ್ಡ ಅಂತರದ ಮುನ್ನಡೆ ಪಡೆದರು. ಆರಂಭದ ಮುನ್ನಡೆಯನ್ನು ಕೊನೆಯವರೆಗೂ ಉಳಿಸಿಕೊಂಡ ಪಂಕಜ್ ನಂತರದ ಮೂರೂ ಫ್ರೇಮ್‌ ಗಳಲ್ಲಿಯೂ ಕ್ರಮವಾಗಿ 67-39, 65-0, 86-45ರಲ್ಲಿ ಜಯ ಪಡೆದುಕೊಂಡರು.

ಚಾವ್ಲಾಗೂ ಗೆಲುವು: ಲೀಗ್‌ನ ಮೊದಲ ಪಂದ್ಯದಲ್ಲಿ ಪ್ರಯಾಸದ ಜಯ ಸಾಧಿಸಿದ್ದ ಮಧ್ಯಪ್ರದೇಶದ ಕಮಲ್ ಚಾವ್ಲಾ ಎರಡನೇ ಪಂದ್ಯದಲ್ಲಿ ಸುಲಭ ಗೆಲುವು ಒಲಿಸಿಕೊಂಡರು. ಅವರು 4-0ರಲ್ಲಿ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನ ಮಾರ್ವಾನ್ ಅಲ್ಫಲಾಸಿ ಅವರನ್ನು ಮಣಿಸಿದರು.

ಚಾವ್ಲಾ ಮೊದಲ ಫ್ರೇಮ್‌ನಲ್ಲಿ 97 ಪಾಯಿಂಟ್‌ಗಳನ್ನು ಕಲೆ ಹಾಕಿದರು. ಅಲ್ಫನಾಸಿ ಅವರಿಗೆ ಚಾವ್ಲಾ ಹಲವು ಬಾರಿ ಬ್ರೇಕ್‌ಗಳನ್ನು ನೀಡಿದರೂ ಅವಕಾಶ ಬಳಸಿಕೊಳ್ಳಲು ವಿಫಲ ರಾದರು. ಯುಎಇ ಆಟಗಾರ ಮೊದಲ ಫ್ರೇಮ್‌ನಲ್ಲಿ ‘ಸೊನ್ನೆ’ ಸುತ್ತಿದರು. ಎರಡನೇ ಫ್ರೇಮ್‌ನಲ್ಲೂ ‘ಅದೇ ರಾಗ ಅದೇ ಹಾಡು’ ಮುಂದುವರಿಯಿತು. ಏಕೆಂದರೆ, ಚಾವ್ಲಾ ಮತ್ತೆ 97 ಪಾಯಿಂಟ್ಸ್ ಗಳಿಸಿದರೆ, ಅಲ್ಫನಾಸಿ ಪಾಯಿಂಟ್ ಖಾತೆಯನ್ನೇ ತೆರೆಯಲಿಲ್ಲ!

ಮೊದಲ ಎರಡೂ ಫ್ರೇಮ್‌ಗಳಲ್ಲಿ ಎದುರಾದ ಆಘಾತದಿಂದ ಒತ್ತಡಕ್ಕೆ ಸಿಲುಕಿದ ಅಲ್ಫನಾಸಿ ಮೂರನೇ ಫ್ರೇಮ್‌ (76-41) ಗೆದ್ದುಕೊಂಡರು. ಆದರೆ, ನಾಲ್ಕು ಮತ್ತು ಐದನೇ ಫ್ರೇಮ್‌ಗಳಲ್ಲಿ ಚಾವ್ಲಾ ಜಯ ಸಾಧಿಸಿದರು. ಬೆರಳಿನ ಗಾಯದ ಸಮಸ್ಯೆಯಿಂದ ಬಳಲು ತ್ತಿರುವ ಚಾವ್ಲಾ ಬ್ಯಾಂಡೇಜ್‌ ಕಟ್ಟಿಕೊಂಡೇ ಆಡಿದರು.

ಭಾರತೀಯ ಸ್ಪರ್ಧಿಗಳ ಇತರ ಪ್ರಮುಖ ಪಂದ್ಯಗಳಲ್ಲಿ ನೀನಾ ಪ್ರವೀಣ್‌ 3-1ರಲ್ಲಿ ಬ್ರೆಜಿಲ್‌ನ ಕ್ಲಾಡಿಯಾ ಜಾರ್ಡೊ ಕೋರ್‌ಡಿಯಾರೊ ಮೇಲೂ, ಅಮಿ ಕಮಾನಿ 3-0ರಲ್ಲಿ ಬ್ರೆಜಿಲ್‌ನ ಅಲೆಕ್ಸಾಂಡ್ರಾ ಟೆರಾಮೋಟೊ ಮಿಯುಕಿ ವಿರುದ್ಧವೂ ಜಯ ಪಡೆದರು. ವರ್ಷಾ ಸಂಜೀವ್‌ಗೆ ನಿರಾಸೆ ಕಾಡಿತು.

ರಾವತ್‌ಗೆ ನಿರಾಸೆ: ಪುರುಷರ ವಿಭಾಗದ ಪಂದ್ಯಗಳಲ್ಲಿ ಭಾರತದ ಲಕ್ಷ್ಮಣ್‌ ರಾವತ್‌ ಪ್ರಬಲ ಹೋರಾಟ ತೋರಿ 3-4ರಲ್ಲಿ ಸ್ಕಾಟ್ಲೆಂಡ್‌ನ ಗ್ಯಾರಿ ಥಾಮ್ಸನ್ ಎದುರು ನಿರಾಸೆ ಕಂಡರು.

ಆತಿಥೇಯ ರಾಷ್ಟ್ರದ ಇನ್ನೊಬ್ಬ ಆಟಗಾರ ದಿವ್ಯಾ ಶರ್ಮ 3-4 ಫ್ರೇಮ್‌ ಗಳಿಂದ ಕತಾರ್‌ನ ಅಲಿ ಅಲೊಬೊ ಯಿಡಿ ವಿರುದ್ಧ ಪರಾಭವಗೊಂಡರು.

ಮಿಂಚಿದ ಹಬೀಬ್‌: ಮಾಸ್ಟರ್ಸ್ ವಿಭಾಗದಲ್ಲಿ ಭಾರತದ ರಫತ್‌ ಹಬೀಬ್‌ 3-0ರಲ್ಲಿ ಆಸ್ಟ್ರೇಲಿಯದ ಫರ್ಹಾದ್ ತೇಂಗ್ರಾ ಎದುರು ಗೆಲುವು ಪಡೆದು ಮಿಂಚಿದರು. ಆದರೆ, ಕೆ.ಎಸ್. ನವೀನ್‌ ಕುಮಾರ್‌ 0-3ರಲ್ಲಿ ಬ್ರೆಜಿಲ್‌ನ ನೊಯಿಲ್ ರಾಡ್ರಿಗಸ್‌ ಮೊರಿಯಿರಾ ಮೇಲೂ, ಎಸ್‌.ಎಚ್‌. ಕಾಮರಾಜ್‌ 0-3ರಲ್ಲಿ ಬೆಲ್ಜಿಯಂನ ರೆನಾ ಹೆಮೊಸೆಲ್ಟ್‌ ವಿರುದ್ಧವೂ ಸೋತರು.

ಗುರುವಾರ ಗೆದ್ದ ಪ್ರಮುಖರು
ಮನನ್‌ ಚಂದ್ರನ್‌, ಪಂಕಜ್‌ ಅಡ್ವಾಣಿ, ಕಮಲ್ ಚಾವ್ಲಾ, ಚಿತ್ರಾ ಮಗಿಮೈರಾಜ್‌, ವಿದ್ಯಾ ಪಿಳ್ಳೈ, ನೀನಾ ಪ್ರವೀಣ್‌.

ಸೋತ ಪ್ರಮುಖರು
ಲಕ್ಷ್ನಣ್‌ ರಾವತ್‌, ದಿವ್ಯ ಶರ್ಮ, ಕೆ.ಎಸ್‌. ನವೀನ್‌ ಕುಮಾರ್‌, ಎಸ್‌.ಎಚ್‌. ಕಾಮರಾಜ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT