ADVERTISEMENT

ಸನ್‌ರೈಸರ್ಸ್‌ಗೆ ಕಿಂಗ್ಸ್ ಸವಾಲು

ಮೊಹಾಲಿಯಲ್ಲಿ ವಿಲಿಯಮ್ಸನ್–ಅಶ್ವಿನ್ ಮುಖಾಮುಖಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2018, 19:30 IST
Last Updated 18 ಏಪ್ರಿಲ್ 2018, 19:30 IST
ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡದ ಕೆ.ಎಲ್‌. ರಾಹುಲ್‌ (ಎಡ) ಮತ್ತು ಕ್ರಿಸ್‌ ಗೇಲ್‌
ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡದ ಕೆ.ಎಲ್‌. ರಾಹುಲ್‌ (ಎಡ) ಮತ್ತು ಕ್ರಿಸ್‌ ಗೇಲ್‌   

ಮೊಹಾಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 11ನೇ ಆವೃತ್ತಿಯ ಟೂರ್ನಿಯ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದರುವ ಸನ್‌ರೈಸರ್ಸ್‌ ಹೈದರಾಬಾದ್ ತಂಡವು ಗುರುವಾರ ಕಿಂಗ್ಸ್ ಇಲೆವನ್ ತಂಡವನ್ನು ಎದುರಿಸಲಿದೆ.

ಕೇನ್ ವಿಲಿಯಮ್ಸನ್ ನಾಯಕತ್ವದ ಸನ್‌ರೈಸರ್ಸ್‌ ಹೈದರಾಬಾದ್ ತಂಡವು ಇದುವರೆಗೆ ಆಡಿರುವ ಮೂರು ಪಂದ್ಯಗಳಲ್ಲಿಯೂ ಜಯಿಸಿದೆ. ತಂಡದ ಬೌಲರ್‌ಗಳು ಉತ್ತಮವಾಗಿ ಆಡಿರುವುದು ಈ ಗೆಲುವುಗಳಿಗೆ ಕಾರಣವಾಗಿತ್ತು. ಆದರೆ ಕಿಂಗ್ಸ್ ಇಲೆವನ್ ಪಂಜಾಬ್ ತಂಡವು ಬ್ಯಾಟಿಂಗ್‌ನಲ್ಲಿ ಹೆಚ್ಚು ಬಲಿಷ್ಠವಾಗಿದೆ. ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದಿದೆ. ಹೋದ ವಾರ ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ ಆರ್‌ಸಿಬಿ ಎದುರು ಕಿಂಗ್ಸ್‌ ತಂಡವು ಸೋತಿತ್ತು. ಡೆಲ್ಲಿ ಡೇರ್‌ಡೆವಿಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ ತಂಡಗಳ ಎದುರು ಗೆದ್ದಿತ್ತು.

ಆರ್. ಅಶ್ವಿನ್ ನಾಯಕತ್ವದ ಕಿಂಗ್ಸ್‌ ತಂಡದಲ್ಲಿ ಕನ್ನಡಿಗರಾದ ಕೆ.ಎಲ್. ರಾಹುಲ್, ಮಯಂಕ್ ಅಗರವಾಲ್, ಕರುಣ್ ನಾಯರ್ ಅವರು ಉತ್ತಮ ಲಯದಲ್ಲಿರುವ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ. ಕಳೆದ ಪಂದ್ಯದಲ್ಲಿ ಅವಕಾಶ ಪಡೆದಿದ್ದ ಕ್ರಿಸ್‌ ಗೇಲ್ ಕೂಡ ಮಿಂಚಿದ್ದು ತಂಡದ ಬಲ ಹೆಚ್ಚಿದಂತಾಗಿದೆ. ಆದರೆ ಅನುಭವಿ ಆಲ್‌ರೌಂಡರ್ ಯುವರಾಜ್ ಸಿಂಗ್ ಬ್ಯಾಟ್‌ನಿಂದ ಹೆಚ್ಚು ರನ್‌ಗಳು ಹರಿದಿಲ್ಲ. ಅವರು ಮೂರು ಪಂದ್ಯಗಳಲ್ಲಿ ಕ್ರಮವಾಗಿ 12, 4 ಮತ್ತು 20 ರನ್‌ಗಳನ್ನು ಗಳಿಸಿದ್ದಾರೆ. ಇದರಿಂದಾಗಿ ಮಧ್ಯಮ ಕ್ರಮಾಂಕದಲ್ಲಿ ತಂಡವು ಆತಂಕ ಎದುರಿಸುತ್ತಿದೆ. ಸನ್‌ರೈಸರ್ಸ್‌ ತಂಡದ ಬೌಲಿಂಗ್ ಪಡೆಯ ಮುಂದೆ ದೊಡ್ಡ ಮೊತ್ತ ಗಳಿಸುವುದು ಆತಿಥೇಯ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಸವಾಲಾಗಬಹುದು.

ADVERTISEMENT

ಸನ್‌ರೈಸರ್ಸ್ ತಂಡದ ಮಧ್ಯಮವೇಗಿ ಭುವನೇಶ್ವರ್ ಕುಮಾರ್, ಸ್ಪಿನ್ನರ್‌ಗಳಾದ ರಶೀದ್ ಖಾನ್, ಬಿಲ್ಲಿ ಸ್ಟಾನ್‌ಲೇಕ್, ಸಿದ್ಧಾರ್ಥ್ ಕೌಲ್, ಶಕೀಬ್ ಅಲ್ ಹಸನ್ ಮತ್ತು ಸಂದೀಪ್ ಶರ್ಮಾ ಅವರು ಕಳೆದ ಪಂದ್ಯಗಳಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ್ದರು. ತಂಡದ ಬ್ಯಾಟಿಂಗ್ ವಿಭಾಗವೂ ಉತ್ತಮವಾಗಿದೆ. ನಾಯಕ ಕೇನ್‌, ವೃದ್ಧಿಮಾನ್ ಸಹಾ, ಶಿಖರ್ ಧವನ್ ಮತ್ತು ಮನೀಷ್ ಪಾಂಡೆ ಪ್ರಮುಖರಾಗಿದ್ದಾರೆ. ಯೂಸುಫ್ ಪಠಾಣ್, ದೀಪಕ್ ಹೂಡಾ ಮತ್ತು ಶಕೀಬ್ ಮಧ್ಯಮ ಕ್ರಮಾಂಕವನ್ನು ಶಕ್ತಿಯುತಗೊಳಿಸಿದ್ದಾರೆ. ಪಂಜಾಬ್ ತಂಡದ 17 ವರ್ಷದ ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್, ಮಧ್ಯಮವೇಗಿ ಮೋಃಇತ್, ಶರ್ಮಾ, ಆ್ಯಂಡ್ರ್ಯೂ ಟೈ ಅವರ ದಾಳಿಯನ್ನು ಸನ್‌ರೈಸರ್ಸ್‌ ತಂಡಕ್ಕೆ ಮೆಟ್ಟಿ ನಿಂತರೆ ಮತ್ತೊಂದು ಯಶಸ್ಸು ಸಿಗಬಹುದು.

ಪಂದ್ಯ ಆರಂಭ: ರಾತ್ರಿ 8
ನೇರಪ್ರಸಾರ: ಸ್ಟಾರ್ ನೆಟ್‌ವರ್ಕ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.