ADVERTISEMENT

ಸನ್‌ರೈಸರ್ಸ್‌–ರೈಡರ್ಸ್‌ ನಡುವೆ ಹಣಾಹಣಿ

ಇಂದು ಎಲಿಮಿನೇಟರ್‌ ಪಂದ್ಯ: ಸೋತ ತಂಡ ಟೂರ್ನಿಯಿಂದ ಹೊರಕ್ಕೆ

​ಪ್ರಜಾವಾಣಿ ವಾರ್ತೆ
Published 24 ಮೇ 2016, 20:14 IST
Last Updated 24 ಮೇ 2016, 20:14 IST
ಸನ್‌ರೈಸರ್ಸ್‌–ರೈಡರ್ಸ್‌ ನಡುವೆ ಹಣಾಹಣಿ
ಸನ್‌ರೈಸರ್ಸ್‌–ರೈಡರ್ಸ್‌ ನಡುವೆ ಹಣಾಹಣಿ   

ನವದೆಹಲಿ: ಎರಡು ಸಲ ಚಾಂಪಿಯನ್‌ ಆಗಿರುವ ಕೋಲ್ಕತ್ತ ನೈಟ್ ರೈಡರ್ಸ್‌ ತಂಡ ಐಪಿಎಲ್‌ ಒಂಬತ್ತನೇ ಆವೃತ್ತಿಯಲ್ಲಿ ಪ್ರಶಸ್ತಿಯ ಕನಸು ಕಾಣುತ್ತಿದೆ.

ಗೌತಮ್‌ ಗಂಭೀರ್‌ ನಾಯಕತ್ವದ ರೈಡರ್ಸ್‌ ಬುಧವಾರ ಇಲ್ಲಿನ ಫಿರೋಜ್‌ ಷಾ ಕೋಟ್ಲಾ  ಕ್ರೀಡಾಂಗಣದಲ್ಲಿ ನಡೆಯಲಿರುವ ಎಲಿಮಿನೇಟರ್‌ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಎದುರು ಪೈಪೋಟಿ ನಡೆಸಲಿದೆ. ಪಾಯಿಂಟ್ಸ್‌ ಪಟ್ಟಿಯಲ್ಲಿ ಸನ್‌ರೈಸರ್ಸ್ ಮೂರನೇ ಸ್ಥಾನ ಮತ್ತು ರೈಡರ್ಸ್‌ ನಾಲ್ಕನೇ ಸ್ಥಾನ ಹೊಂದಿದೆ. ಉಭಯ ತಂಡಗಳು ತಲಾ 16 ಪಾಯಿಂಟ್ಸ್‌ ಕಲೆ ಹಾಕಿವೆಯಾದರೂ ರನ್‌ರೇಟ್‌ ಆಧಾರದ ಮೇಲೆ ಸನ್‌ರೈಸರ್ಸ್ ಮೇಲಿನ ಸ್ಥಾನದಲ್ಲಿದೆ.

ರೈಡರ್ಸ್‌ ತಂಡ ಐಪಿಎಲ್‌ ಟೂರ್ನಿಯ ಆರಂಭದ ಮೊದಲ ಮೂರು ಆವೃತ್ತಿಗಳಲ್ಲಿ ಲೀಗ್‌ ಹಂತದಿಂದಲೇ ಹೊರಬಿದ್ದಿತ್ತು. 2011ರಲ್ಲಿ ಪ್ಲೇ ಆಫ್‌ ಪ್ರವೇಶಿಸಿತ್ತು. 2013 ಮತ್ತು 2015ರಲ್ಲಿಯೂ ನಿರಾಸೆ ಕಾಡಿತ್ತು. ಆದರೆ, ಈ ತಂಡ ಎರಡು ಸಲ (2012 ಮತ್ತು 2014) ಐಪಿಎಲ್‌ ಟ್ರೋಫಿಗೆ ಮುತ್ತಿಕ್ಕಿದೆ. ಈ ಬಾರಿಯ ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನೇ ನೀಡಿದೆ.

ಲೀಗ್ ಹಂತದಲ್ಲಿ ಆಡಿದ ಒಟ್ಟು 14 ಪಂದ್ಯಗಳಲ್ಲಿ ಎಂಟರಲ್ಲಿ ಗೆಲುವು ಮತ್ತು ಆರು ಪಂದ್ಯಗಳಲ್ಲಿ ಸೋತಿದೆ. ಸನ್‌ರೈಸರ್ಸ್‌ ಕೂಡ ಇಷ್ಟೇ ಸೋಲು, ಗೆಲುವುಗಳನ್ನು ಕಂಡಿದೆ. ಉಭಯ ತಂಡಗಳು ಲೀಗ್‌ನಲ್ಲಿ ಎರಡು ಸಲ ಮುಖಾಮುಖಿಯಾಗಿದ್ದವು. ಈ ಎರಡೂ ಪಂದ್ಯಗಳಲ್ಲಿ ರೈಡರ್ಸ್‌ ಜಯ ಪಡೆದು ಸನ್‌ರೈಸರ್ಸ್‌ ತಂಡದ ಮೇಲೆ ಪ್ರಾಬಲ್ಯ ಸಾಧಿಸಿತ್ತು. ಆದ್ದರಿಂದ ಎಲಿಮಿನೇಟರ್‌ ಪಂದ್ಯದಲ್ಲಿ ರೈಡರ್ಸ್‌ ಗೆಲುವು ಪಡೆಯುವ ನೆಚ್ಚಿನ ತಂಡವೆನಿಸಿದೆ.
ಲೀಗ್‌ನಲ್ಲಿ ಒಂದು ಪಂದ್ಯದಲ್ಲಿ ತಪ್ಪು ಮಾಡಿದ್ದರೆ ತಿದ್ದಿಕೊಳ್ಳಲು ಅವಕಾಶವಿರುತ್ತಿತ್ತು. ಆದರೆ, ಈ ಪಂದ್ಯದಲ್ಲಿ ಸೋಲು ಕಾಣುವ ತಂಡ ಟೂರ್ನಿಯಿಂದ ಹೊರಬೀಳಲಿದೆ. ಆದ್ದರಿಂದ ಉಭಯ ತಂಡಗಳು ಎಚ್ಚರಿಕೆಯಿಂದ ಆಡಬೇಕಾದ ಅಗತ್ಯವಿದೆ.

ಮೂರನೇ ಪ್ರಶಸ್ತಿಯ ಮೇಲೆ ಕಣ್ಣು ಇಟ್ಟಿರುವ ರೈಡರ್ಸ್ ತಂಡ ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿದೆ. ನಾಯಕ ಗಂಭೀರ್‌ (14 ಪಂದ್ಯಗಳಿಂದ ಒಟ್ಟು 473 ರನ್‌), ಯೂಸುಫ್‌ ಪಠಾಣ್‌ (359 ರನ್‌), ಕರ್ನಾಟಕದ ರಾಬಿನ್ ಉತ್ತಪ್ಪ (383) ಮತ್ತು ಮನೀಷ್‌ ಪಾಂಡೆ (212) ಭರವಸೆಯ ಬ್ಯಾಟ್ಸ್‌ಮನ್‌ಗಳೆನಿಸಿದ್ದಾರೆ. ಈ ತಂಡ ಲೀಗ್‌ನ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್ ತಂಡವನ್ನು 142 ರನ್‌ಗೆ ಕಟ್ಟಿ ಹಾಕಿತ್ತು. ಎರಡನೇ ಬಾರಿ ಮುಖಾಮುಖಿಯಾದಾಗ ಮೊದಲು ಬ್ಯಾಟ್‌ ಮಾಡಿದ್ದ ರೈಡರ್ಸ್‌ 171 ರನ್‌ಗಳ ಸವಾಲಿನ ಮೊತ್ತ ಕಲೆ ಹಾಕಿತ್ತು. ಆದ್ದರಿಂದ ಸನ್‌ರೈಸರ್ಸ್‌ ಬೌಲರ್‌ಗಳಿಗೆ ರೈಡರ್ಸ್‌ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವ ಕಠಿಣ ಸವಾಲು ಇದೆ. ಪಠಾಣ್‌, ಅಂಕಿತ್‌ ರಜಪೂತ್‌, ಸ್ಪಿನ್ನರ್‌ ಸುನಿಲ್‌ ನಾರಾಯಣ್‌, ಶಕೀಬ್‌ ಅಲ್‌ ಹಸನ್ ಮತ್ತು ಕುಲದೀಪ್‌ ಯಾದವ್‌ ಚುರುಕಿನ ಬೌಲಿಂಗ್ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಚೊಚ್ಚಲ ಪ್ರಶಸ್ತಿಯ ನಿರೀಕ್ಷೆಯಲ್ಲಿ
ಪ್ರಮುಖ ಆಟಗಾರರು ಗಾಯಗೊಂಡಿರುವ ಕಾರಣ ಸನ್‌ರೈಸರ್ಸ್ ತಂಡ ಭಾರಿ ಸಂಕಷ್ಟದಲ್ಲಿದೆ. ಆದರೆ, ಈ ತಂಡ ಲೀಗ್‌ ಹಂತದಲ್ಲಿ ಆಡಿದ ಛಲದ ಹೋರಾಟ ಕ್ರಿಕೆಟ್‌ ಪ್ರೇಮಿಗಳ ಮನಸ್ಸು ಗೆದ್ದಿದೆ.

ಸನ್‌ರೈಸರ್ಸ್‌ 2013ರಿಂದ ಐಪಿಎಲ್‌ ಟೂರ್ನಿ ಆಡುತ್ತಿದೆ. ಇದಕ್ಕೂ ಮೊದಲು ಡೆಕ್ಕನ್‌ ಚಾರ್ಜರ್ಸ್‌ ತಂಡವಿತ್ತು. ಸನ್‌ರೈಸರ್ಸ್‌ ತನ್ನ ಚೊಚ್ಚಲ ಟೂರ್ನಿಯಲ್ಲಿಯೇ ಪ್ಲೇ ಆಫ್‌ ತಲುಪಿ ಭರವಸೆ ಮೂಡಿಸಿತ್ತು. ಆದರೆ, ನಂತರದ ಎರಡೂ ವರ್ಷ ಗುಂಪು ಹಂತದಲ್ಲಿಯೇ ನಿರಾಸೆ ಕಂಡಿತ್ತು. ಹೀಗೆ ಏರಿಳಿತದ ಪ್ರದರ್ಶನ ನೀಡುತ್ತಿರುವ ಡೇವಿಡ್‌ ವಾರ್ನರ್ ನಾಯಕತ್ವದ ತಂಡ ಕೂಡ ಚೊಚ್ಚಲ ಫೈನಲ್‌ ನಿರೀಕ್ಷೆಯಲ್ಲಿದೆ.

ಅನುಭವಿ ವೇಗಿ ಆಶಿಶ್‌ ನೆಹ್ರಾ ಗಾಯಗೊಂಡಿರುವ ಕಾರಣ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇದರಿಂದಾಗಿ ತಂಡದ ಬೌಲಿಂಗ್‌ ವಿಭಾಗಕ್ಕೆ ಪೆಟ್ಟು ನೀಡಿದೆ. ಆದ್ದರಿಂದ ಎಡಗೈ ವೇಗಿ ಬರೀಂದರ್ ಸ್ರಾನ್‌ ಮತ್ತು ಬಾಂಗ್ಲಾದೇಶದ ಭರವಸೆಯ ಬೌಲರ್‌ ಮುಸ್ತಫಿಜರ್‌ ರಹಮಾನ್‌ ಅವರ ಮೇಲೆ ಜವಾಬ್ದಾರಿಯಿದೆ.

ಈ ತಂಡದ ಪ್ರಮುಖ ಬ್ಯಾಟಿಂಗ್‌ ಶಕ್ತಿಯೆಂದರೆ ನಾಯಕ ವಾರ್ನರ್‌. ಲೀಗ್ ಹಂತದ 14 ಪಂದ್ಯಗಳಿಂದ ಕಲೆ ಹಾಕಿದ ಒಟ್ಟು 658 ರನ್‌ಗಳೇ ಇದಕ್ಕೆ ಸಾಕ್ಷಿ. ಇವರನ್ನು ಹೊರತುಪಡಿಸಿದರೆ, ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ (ಒಟ್ಟು 463 ರನ್‌) ಗಳಿಸಿದ್ದಾರೆ. ಆದರೆ  ಯುವರಾಜ್‌ ಸಿಂಗ್‌, ಕೇನ್‌ ವಿಲಿಯಮ್ಸನ್‌ ಮತ್ತು ದೀಪಕ್‌ ಹೂಡಾ ಅವರು ತಮ್ಮ ಸಾಮ ರ್ಥ್ಯಕ್ಕೆ ತಕ್ಕಂತೆ ರನ್ ಕಲೆ ಹಾಕಿಲ್ಲ. ಎಡಗೈ ಬ್ಯಾಟ್ಸ್‌ಮನ್‌ ಯುವರಾಜ್‌ ಈ ಬಾರಿಯ ಟೂರ್ನಿಯಲ್ಲಿ ಏಳು ಪಂದ್ಯಗಳಿಂದ ಗಳಿಸಿದ್ದು 146 ರನ್‌ ಮಾತ್ರ. ಆದ್ದರಿಂದ ಸನ್‌ರೈಸರ್ಸ್‌ ಬ್ಯಾಟಿಂಗ್ ಇನ್ನಷ್ಟು ಬಲಗೊಳ್ಳಬೇಕಿದೆ.

ಸೋತರೆ ಹೊರಕ್ಕೆ: ಪಾಯಿಂಟ್ಸ್‌ ಪಟ್ಟಿಯಲ್ಲಿ ಮೂರು ಮತ್ತು ನಾಲ್ಕನೇ ಸ್ಥಾನ ಪಡೆದಿರುವ ತಂಡಗಳು ಎಲಿಮಿನೇಟರ್‌ನಲ್ಲಿ ಆಡುತ್ತವೆ. ಈ ಪಂದ್ಯದಲ್ಲಿ ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ.

ಜಯ ಪಡೆಯುವ ತಂಡ ಎರಡನೇ ಕ್ವಾಲಿಫೈಯರ್‌ ಪಂದ್ಯವಾಡಿ ಅಲ್ಲಿ ಜಯ ಸಾಧಿಸಿದರೆ ಮಾತ್ರ ಫೈನಲ್‌ ಪ್ರವೇಶಿಸಲಿದೆ.

ಬಲಾಬಲ

ADVERTISEMENT

ಒಟ್ಟು: 06
ನೈಟ್ ರೈಡರ್ಸ್ ಜಯ : 04
ಸನ್‌ರೈಸರ್ಸ್ ಜಯ: 02

ಕೋಲ್ಕತ್ ನೈಟ್ ರೈಡರ್ಸ್  (2008–2016)
ಪಂದ್ಯ: 135
ಜಯ: 68
ಸೋಲು: 61
ಫಲಿತಾಂಶವಿಲ್ಲ: 01

ಸನ್‌ರೈಸರ್ಸ್ (2013–16)
ಪಂದ್ಯಗಳು: 59
ಗೆಲುವು: 31
ಸೋಲು: 28

ಪಂದ್ಯ ಆರಂಭ: ರಾತ್ರಿ 8ಕ್ಕೆ
ನೇರ ಪ್ರಸಾರ: ಸೋನಿ ಸಿಕ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.