ADVERTISEMENT

ಸುದೀಪ್‌, ವೃದ್ಧಿಮಾನ್‌ ಜೊತೆಯಾಟದ ಸೊಗಸು

ರಣಜಿ: ಮೊದಲ ದಿನ ಬಂಗಾಳ 312 ರನ್‌; ವಿನಯ್‌, ಶರತ್‌ಗೆ ತಲಾ ಮೂರು ವಿಕೆಟ್‌

ಪ್ರಮೋದ ಜಿ.ಕೆ
Published 8 ಅಕ್ಟೋಬರ್ 2015, 20:06 IST
Last Updated 8 ಅಕ್ಟೋಬರ್ 2015, 20:06 IST

ಬೆಂಗಳೂರು: ಆರಂಭದಲ್ಲಿ ವಿಕೆಟ್‌ ಕಳೆದುಕೊಂಡು ಪರದಾಡಿದ ಬಂಗಾಳ ತಂಡಕ್ಕೆ ಸುದೀಪ್‌ ಚಟರ್ಜಿ ಮತ್ತು ವೃದ್ಧಿಮಾನ್‌ ಸಹಾ ಜವಾಬ್ದಾರಿಯುತ ಜೊತೆಯಾಟವಾಡಿ ನೆರವಾದರು. ಆದ್ದರಿಂದ ಈ ತಂಡಕ್ಕೆ ಕರ್ನಾಟಕ ಎದುರಿನ  ರಣಜಿ ಪಂದ್ಯದಲ್ಲಿ ಮೊದಲ ದಿನ ಉತ್ತಮ ಮೊತ್ತ ಕಲೆ ಹಾಕಲು ಸಾಧ್ಯವಾಯಿತು.

‘ನಮ್ಮ ತಂಡ ರಣಜಿ ಟ್ರೋಫಿ ಜಯಿ ಸದೇ 25 ವರ್ಷಗಳು ಉರುಳಿವೆ. ಈ ವರ್ಷ ಚಾಂಪಿಯನ್‌ ಆಗುವುದೇ  ಗುರಿ’ ಎಂದು ಬಂಗಾಳ ತಂಡದ ನಾಯಕ ಮನೋಜ್‌ ತಿವಾರಿ ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದರು. ಅದರಂತೆ ಯೇ ಈ ತಂಡ ಗುರುವಾರ ರನ್‌ ಕಲೆ ಹಾಕಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾದ ನಾಲ್ಕು ದಿನಗಳ ಪಂದ್ಯ ದಲ್ಲಿ ಟಾಸ್‌ ಜಯಿಸಿದ ರಾಜ್ಯ ತಂಡದ ನಾಯಕ ವಿನಯ್‌ ಕುಮಾರ್‌ ಮೊದಲು ಫೀಲ್ಡಿಂಗ್‌ ಆಯ್ಕೆಮಾಡಿಕೊಂಡರು.

ಹೋದ ವಾರ ಗುವಾಹಟಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್‌ ಜಯಿಸಿ ಬ್ಯಾಟಿಂಗ್‌ ಆಯ್ದುಕೊಂಡಿದ್ದ ಕರ್ನಾಟಕ 187 ರನ್‌ಗೆ ಆಲೌಟ್‌ ಆಗಿತ್ತು. ಅಸ್ಸಾಂ ಇನಿಂಗ್ಸ್‌ ಮುನ್ನಡೆ ಪಡೆದು ಮೂರು ಪಾಯಿಂಟ್ಸ್‌ ಪಡೆದುಕೊಂಡಿತ್ತು. ಹಿಂ ದಿನ ತಪ್ಪು ಮರುಕಳಿಸಬಾರದು ಎನ್ನುವ ಉದ್ದೇಶದಿಂದ ವಿನಯ್‌ ಇಲ್ಲಿ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡರು.

ಆದರೆ ಬಂಗಾ ಳವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವ ಅವರ ಲೆಕ್ಕಾಚಾರಕ್ಕೆ ಫಲ ಲಭಿಸಲಿಲ್ಲ. ಆರಂಭಿಕ ಕ್ರಮಾಂಕದ ಬ್ಯಾಟ್ಸ್‌ ಮನ್‌ಗಳ ವೈಫಲ್ಯದ ನಡುವೆಯೂ ಬಂಗಾಳ ಮೊದಲ ಇನಿಂಗ್ಸ್‌ನಲ್ಲಿ 88 ಓವರ್‌ಗಳಲ್ಲಿ ಒಂಬತ್ತು ವಿಕೆಟ್‌ ಕಳೆದುಕೊಂಡು 312 ರನ್‌ ಗಳಿಸಿದೆ. 

ಆರಂಭಿಕ ಆಘಾತ: ದಿನದ ಆರಂಭದಲ್ಲಿ ರಾಜ್ಯ ತಂಡ ನಡೆಸಿದ ಕರಾರುವಾಕ್ಕಾದ ಬೌಲಿಂಗ್‌ಗೆ ಬಂಗಾಳದ ಆರಂಭಿಕ ಬ್ಯಾಟ್ಸ್‌ಮನ್‌ಗಳು ತತ್ತರಿಸಿ ಹೋದರು. ಬಂಗಾಳ ಮೊದಲ 41 ರನ್‌ ಗಳಿಸು ವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್‌ ಗಳನ್ನು ಕಳೆದುಕೊಂಡಿದ್ದು ಇದಕ್ಕೆ ಸಾಕ್ಷಿ.

ರಣಜಿಗೆ ಪದಾರ್ಪಣೆ ಮಾಡಿದ ನಾವೀದ್‌ ಅಹ್ಮದ್‌ (3), ಅಭಿಷೇಕ್‌ ದಾಸ್‌ (6) ವೇಗಿ ವಿನಯ್ ಬೌಲಿಂಗ್‌ ನಲ್ಲಿ ವಿಕೆಟ್‌ ಒಪ್ಪಿಸಿದರು. ಶ್ರೀವತ್ಸ ಗೋಸ್ವಾಮಿ ಅನಗತ್ಯವಾಗಿ ರನ್‌ಔಟ್‌ ಆದರು. ಇದಕ್ಕೆ ಕಾರಣವಾಗಿದ್ದು ವಿನಯ್‌ ಚಾಣಾಕ್ಷತನ. ಏಳನೇ ಓವರ್‌ನಲ್ಲಿ ಶ್ರೀವತ್ಸ ಚೆಂಡನ್ನು ರಕ್ಷಣಾತ್ಮಕವಾಗಿ ಎದುರಿಸಿ ಕ್ರೀಸ್‌ ಬಿಟ್ಟು ಕೊಂಚ ಮುಂದೆ ಬಂದಿದ್ದರು.

ಇದನ್ನು ಸೂಕ್ಷ್ಮವಾಗಿ ಗಮನಿಸಿದ ವಿನಯ್‌ ವಿಕೆಟ್‌ಗೆ ನೇರವಾಗಿ ಚೆಂಡನ್ನು ಎಸೆದು ಶ್ರೀವತ್ಸ ಅವರನ್ನು ಪೆವಿಲಿ ಯನ್‌ಗೆ ಕಳುಹಿಸಿದರು. ಇದರಿಂದ ರಾಜ್ಯದ ಆಟಗಾರರು ಸಂಭ್ರಮಿಸಿದರೆ ವೀಕ್ಷಕ ವಿವರಣೆ ನೀಡುತ್ತಿದ್ದ ರೋಹನ್‌ ಗಾವಸ್ಕರ್‌ ಮಾತ್ರ ‘ಶ್ರೀವತ್ಸಗೆ ಮತ್ತೆ ಬ್ಯಾಟ್‌ ಮಾಡಲು ಅವಕಾಶ ಕೊಡ ಬೇಕಿತ್ತು’ ಎಂದು ಹೇಳಿದರು.

ಬಂಗಾಳ ತಂಡದ ಆರಂಭಿಕ ಸ್ಥಿತಿ ಯನ್ನು ನೋಡಿದರೆ ತಂಡ ನೂರು ರನ್‌ ಗಳಿಸುವುದೇ ಅನುಮಾನವಿತ್ತು. ಸುದೀಪ್‌ ಮತ್ತು ಅನುಭವಿ ವೃದ್ಧಿಮಾನ್‌ ಸಹಾ ಅವರಿಂದ ಮೂಡಿಬಂದ ಸೊಗ ಸಾದ ಆಟ ತಂಡವನ್ನು ಸಂಕಷ್ಟದಿಂದ ಪಾರು ಮಾಡಿತು. ಈ ಜೋಡಿ ಐದನೇ ವಿಕೆಟ್‌ಗೆ 173 ರನ್‌ಗಳನ್ನು ಕಲೆ ಹಾಕಿತು.

ಇದು ರಾಜ್ಯ ತಂಡದ ಎದುರು ಐದನೇ ವಿಕೆಟ್‌ಗೆ ಬಂಗಾಳದ ಅತ್ಯುತ್ತಮ ಎರಡನೇ ಜೊತೆಯಾಟವೆನಿ ಸಿತು. 1990–91ರಲ್ಲಿ ಕೋಲ್ಕತ್ತದಲ್ಲಿ ನಡೆದಿದ್ದ ಪಂದ್ಯದಲ್ಲಿ ಎಸ್.ಜೆ. ಕಲ್ಯಾಣಿ ಮತ್ತು ಸೌರವ್‌ ಗಂಗೂಲಿ 185 ರನ್‌ ಕಲೆ ಹಾಕಿದ್ದು ಹೆಚ್ಚು ರನ್‌ ಜೊತೆಯಾಟವೆನಿಸಿದೆ.

ಲೆಗ್‌ ಸ್ಪಿನ್ನರ್‌ ಶ್ರೇಯಸ್‌ ಗೋಪಾಲ್‌ ಮಾಡಿದ ಮೊದಲ ಓವರ್‌ನಲ್ಲಿ ವೃದ್ಧಿಮಾನ್‌ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್‌ ಸೇರಿದಂತೆ 14 ರನ್‌  ಬಾರಿಸಿದರು. ಒಟ್ಟು 132 ಎಸೆತಗಳನ್ನು ಎದುರಿಸಿದ ವೃದ್ಧಿಮಾನ್‌ ಹತ್ತು ಬೌಂಡರಿ ಮತ್ತು ಒಂದು ಸಿಕ್ಸರ್‌ ಸಿಡಿಸಿದರು. ಅಷ್ಟೇ ಅಲ್ಲ ಸುದೀಪ್‌ ಚಟರ್ಜಿ ಆಟಕ್ಕೆ ಉತ್ತಮ ಬೆಂಬಲ ನೀಡಿದರು.

ಎಡಗೈ ಬ್ಯಾಟ್ಸ್‌ಮನ್‌ ಚಟರ್ಜಿ ಆರಂಭದಲ್ಲಿ ನಿಧಾನವಾಗಿ ರನ್‌ ಗಳಿಸಿ ದರೂ ನಂತರ ವೇಗದ ಆಟಕ್ಕೆ ಮುಂದಾ ದರು. 247 ಎಸೆತಗಳನ್ನು ಎದುರಿಸಿ 16 ಬೌಂಡರಿಗಳು ಸೇರಿದಂತೆ 145 ರನ್‌ ಗಳಿಸಿದರು. ಇವರಿಬ್ಬರ ಜೊತೆಯಾಟದ ಜುಗಲ್‌ಬಂದಿ ರಾಜ್ಯ ತಂಡವನ್ನು ನಿರಾಸೆಗೆ ದೂಡಿತು.

2012–13ರಲ್ಲಿ ಹೈದರಾಬಾದ್‌ ಎದುರು ಪದಾರ್ಪಣೆ ಮಾಡಿದ್ದ ಚಟರ್ಜಿ ರಣಜಿಯಲ್ಲಿ ಬಾರಿಸಿದ ಎರಡನೇ ಶತಕ ಇದಾಗಿದೆ. ಹೋದ ವರ್ಷ ಬರೋಡ ಎದುರು 192 ರನ್‌ ಗಳಿಸಿದ್ದರು. ಇದರ ಜೊತೆಗೆ ರಣಜಿ ಟೂರ್ನಿಯಲ್ಲಿ ಒಟ್ಟು ಒಂದು ಸಾವಿರ ರನ್ ಗಳಿಸಿದ ಸಾಧನೆಯನ್ನೂ ಮಾಡಿದರು.

ಇವರ ಜೊತೆಯಾಟವನ್ನು ಮುರಿ ಯಲು ವಿನಯ್‌ ಹಲವಾರು ಪ್ರಯೋಗ ಗಳನ್ನು ಮಾಡಿದರು. ಸಾಂದರ್ಭಿಕ ಸ್ಪಿನ್ನರ್‌ ಕರುಣ್‌ , ಸಮರ್ಥ್‌ ಅವರನ್ನು ಕಣಕ್ಕಿಳಿಸಿದರೂ ಫಲ ಲಭಿಸಲಿಲ್ಲ. 62ನೇ ಓವರ್‌ನಲ್ಲಿ ಸಹಾ ಅವರನ್ನು ಔಟ್ ಮಾಡಿ ಶ್ರೇಯಸ್‌ 48.1 ಓವರ್‌ಗಳ ಜೊತೆಯಾಟಕ್ಕೆ ಅಂತ್ಯ ಹಾಡಿದರು.

ಬಂಗಾಳ ತಂಡದ ಐದನೇ ವಿಕೆಟ್‌ ಉರುಳಿದ ಬಳಿಕ ನಂತರದ ಬ್ಯಾಟ್ಸ್‌ ಮನ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಇರಲಿಲ್ಲ. ಲಕ್ಷ್ಮಿರತನ್‌ ಶುಕ್ಲಾ (24), ಪ್ರಗ್ಯಾನ್‌ ಓಜಾ (5) ಮತ್ತು ವೀರ ಪ್ರತಾಪ್‌ (14) ಬೇಗನೆ ಹೊರನಡೆದರು. ಈ ತಂಡ ಕೊನೆಯ 48 ರನ್‌ ಗಳಿಸುವ ಅಂತರದಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು.

80 ಓವರ್‌ಗಳು ಪೂರ್ಣಗೊಂಡ ಹೊಸ ಚೆಂಡು ಪಡೆದ ವಿನಯ್‌ಗೆ ಒಂದು ವಿಕೆಟ್‌ ಲಭಿಸಿತು. ಅವರು ಒಟ್ಟು ಮೂರು ವಿಕೆಟ್‌ ಪಡೆದರು. ಬಲಗೈ ವೇಗಿ ಶರತ್‌ ಕೂಡಾ ಮೂರು ವಿಕೆಟ್‌ ಕಬಳಿ ಸಿದರು.  ಹಿಂದಿನ ಪಂದ್ಯಕ್ಕಿಂತಲೂ ರಾಜ್ಯ ತಂಡ ಬಂಗಾಳ ಎದುರು ಉತ್ತಮ ಫೀಲ್ಡಿಂಗ್‌ ಮಾಡಿತು.

ಆದರೆ ಆರಂಭದಲ್ಲಿ ಗಳಿಸಿದ್ದ ಹಿಡಿತವನ್ನು ಕೊನೆಯ ವರೆಗೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ರಾಜ್ಯದ ಬೌಲರ್‌ಗಳು ದಿನದ ಕೊನೆಯ ಅವಧಿಯಲ್ಲಿ ಹೆಚ್ಚು ರನ್‌ ನೀಡದಂತೆ ಎಚ್ಚರ ವಹಿಸಿದ್ದು ಸಮಾಧಾನದ ಅಂಶ. ಒಂದು ವೇಳೆ ಆರಂಭದ ಮುನ್ನಡೆ ಉಳಿಸಿಕೊಂಡಿದ್ದರೆ ಇನ್ನು ಬೇಗನೆ ಬಂಗಾಳವನ್ನು ಕಟ್ಟಿ ಹಾಕಬಹುದಿತ್ತು.

*
ಸ್ಕೋರ್‌ಕಾರ್ಡ್‌
ಬಂಗಾಳ ಮೊದಲ ಇನಿಂಗ್ಸ್  312 ಕ್ಕೆ 9 (88 ಓವರ್‌ಗಳಲ್ಲಿ)

ನಾವೇದ್‌ ಅಹ್ಮದ್ ಸಿ ರಾಬಿನ್‌ ಉತ್ತಪ್ಪ ಬಿ ವಿನಯ್‌ ಕುಮಾರ್‌  03
ಅಭಿಷೇಕ್‌ ದಾಸ್‌ ಸಿ ಸಿ.ಎಂ. ಗೌತಮ್‌ ಬಿ ವಿನಯ್‌ ಕುಮಾರ್‌  06
ಶ್ರೀವತ್ಸ ಗೋಸ್ವಾಮಿ ರನ್‌ಔಟ್‌ (ವಿನಯ್‌ ಕುಮಾರ್‌)  02
ಸುದೀಪ್‌ ಚಟರ್ಜಿ ಸಿ ಶಿಶಿರ್‌ ಭವಾನೆ ಬಿ ಎಚ್‌.ಎಸ್‌. ಶರತ್‌  145
ಮನೋಜ್‌ ತಿವಾರಿ ಸಿ ಆರ್‌. ಸಮರ್ಥ್‌ ಬಿ ಎಚ್‌.ಎಸ್‌. ಶರತ್‌  07
ವೃದ್ಧಿಮಾನ್‌ ಸಹಾ ಸಿ ರಾಬಿನ್ ಉತ್ತಪ್ಪ ಬಿ ಶ್ರೇಯಸ್‌ ಗೋಪಾಲ್‌  90
ಲಕ್ಷ್ಮಿರತನ್‌ ಶುಕ್ಲಾ ಸಿ ಮನೀಷ್‌ ಪಾಂಡೆ ಬಿ ಅಭಿಮನ್ಯು ಮಿಥುನ್‌  24
ಪ್ರಗ್ಯಾನ್‌ ಓಜಾ ಬಿ ವಿನಯ್‌ ಕುಮಾರ್‌  05
ವೀರಪ್ರತಾಪ್‌ ಸಿಂಗ್‌ ಸಿ ವಿನಯ್‌ ಕುಮಾರ್‌ ಬಿ ಎಚ್‌.ಎಸ್‌. ಶರತ್‌  14
ಅಶೋಕ್‌ ದಿಂಡಾ  ಬ್ಯಾಟಿಂಗ್‌  04
ಇತರೆ: (ವೈಡ್‌–6, ಬೈ–1, ಲೆಗ್‌ ಬೈ–5)  12

ವಿಕೆಟ್‌ ಪತನ: 1– 14 (ದಾಸ್‌; 4.1), 2–15 (ಅಹ್ಮದ್‌; 4.5), 3–26 (ಗೋಸ್ವಾಮಿ; 6.5), 4–41 (ತಿವಾರಿ; 13.3), 5–214 (ಸಹಾ; 61.4), 6–264 (ಶುಕ್ಲಾ; 71.6), 7–289 (ಓಜಾ; 80.6), 8–295 (ಚಟರ್ಜಿ; 85.2), 9–312 (ವೀರಪ್ರತಾಪ್‌; 87.6)

ADVERTISEMENT

ಬೌಲಿಂಗ್‌: ಆರ್‌. ವಿನಯ್‌ ಕುಮಾರ್‌ 22–3–80–3, ಅಭಿಮನ್ಯು ಮಿಥುನ್‌ 16.4–3–46–1, ಎಚ್‌.ಎಸ್‌. ಶರತ್‌ 19.2–3–47–3, ಶ್ರೇಯಸ್‌ ಗೋಪಾಲ್‌ 16–0–70–1, ಜೆ. ಸುಚಿತ್‌ 10–1–39–0, ಕರುಣ್ ನಾಯರ್‌ 2–0–14–0, ಆರ್‌. ಸಮರ್ಥ್‌ 2–0–10–0.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.