ADVERTISEMENT

ಸೆಮಿಫೈನಲ್‌ಗೆ ಕೆರ್ಬರ್

ಪ್ಯಾನ್ ಫೆಸಿಫಿಕ್ ಓಪನ್‌ ಟೆನಿಸ್‌: ಮುಗುರುಜಾಗೆ ಜಯ

ಏಜೆನ್ಸೀಸ್
Published 22 ಸೆಪ್ಟೆಂಬರ್ 2017, 19:30 IST
Last Updated 22 ಸೆಪ್ಟೆಂಬರ್ 2017, 19:30 IST
ಏಂಜಲಿಕ್ ಕೆರ್ಬರ್‌  ಆಟದ ಶೈಲಿ.
ಏಂಜಲಿಕ್ ಕೆರ್ಬರ್‌ ಆಟದ ಶೈಲಿ.   

ಟೋಕಿಯೊ: ಜರ್ಮನಿಯ ಏಂಜಲಿಕ್ ಕೆರ್ಬರ್‌ ಪ್ಯಾನ್ ಫೆಸಿಫಿಕ್ ಓಪನ್ ಟೆನಿಸ್ ಟೂರ್ನಿಯಲ್ಲಿ ಶುಕ್ರವಾರ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಮಹಿಳೆಯರ ಸಿಂಗಲ್ಸ್‌ ಕ್ವಾರ್ಟರ್‌ಫೈನಲ್‌ನಲ್ಲಿ ಕೆರ್ಬರ್‌ 7–6, 7–5ರಲ್ಲಿ ನೇರ ಸೆಟ್‌ಗಳಿಂದ ಎರಡನೇ ಶ್ರೇಯಾಂಕದ ಜೆಕ್ ಗಣರಾಜ್ಯದ ಆಟಗಾರ್ತಿ ಕರೊಲಿನಾ ಪ್ಲಿಸ್ಕೋವಾಗೆ ಆಘಾತ ನೀಡಿದ್ದಾರೆ.

ಏಳನೇ ಶ್ರೇಯಾಂಕದ ಜರ್ಮನಿಯ ಆಟಗಾರ್ತಿ ಕೆರ್ಬರ್‌ ಎದುರಾಳಿಯು ಮಾಡಿದ ಎಂಟು ಡಬಲ್‌ ಫಾಲ್ಟ್‌ಗಳಿಂದ ಲಾಭ ಪಡೆದು ಜಯಿಸಿದರು. ಎರಡೂ ಸೆಟ್‌ಗಳಲ್ಲಿ ಕೊನೆಯ ಹಂತದವರೆಗೂ ತೀವ್ರ ಪೈಪೋಟಿ ಇತ್ತು. ಕೆರ್ಬರ್ ಅವರ ಶರವೇಗದ ಸರ್ವ್ ಮತ್ತು ಚುರುಕಿನ ಪಾದಚಲನೆ ನೋಡುಗರ ಚಪ್ಪಾಳೆ ಗಿಟ್ಟಿಸಿದವು. ಎದುರಾಳಿ ಆಟಗಾರ್ತಿಯ ಒತ್ತಡ ಹೆಚ್ಚಿತು.

ADVERTISEMENT

ಕೆರ್ಬರ್ ಅವರು ಹೋದ ವರ್ಷ ಆಸ್ಟ್ರೇಲಿಯಾ ಓಪನ್ ಹಾಗೂ ಅಮೆರಿಕ ಓಪನ್ ಪ್ರಶಸ್ತಿ ಗೆದ್ದಿದ್ದರು.ಇನ್ನೊಂದು ಕ್ವಾರ್ಟರ್‌ನಲ್ಲಿ ರಷ್ಯಾದ ಆಟಗಾರ್ತಿ ಪವಲಚೆಕೊವಾ 5–7, 6–3, 6–1ರಲ್ಲಿ ಜೆಕ್ ಗಣರಾಜ್ಯದ ಬಾರ್ಬರಾ ಸ್ಟ್ರೆಕೋವಾ ಅವರನ್ನು ಮಣಿಸಿ ಸೆಮಿಫೈನಲ್ ತಲುಪಿದರು.

ಅಗ್ರಶ್ರೇಯಾಂಕದ ಗಾರ್ಬೈನ್ ಮುಗುರುಜಾ 6–2, 6–4ರಲ್ಲಿ ಕರೊಲಿನಾ ಗ್ರೇಸಿಯಾ ವಿರುದ್ಧ ಗೆದ್ದರು. ಮಹಿಳೆಯರ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೆ ಏರಿದ ಬಳಿಕ ಅವರು ಮೊದಲ ಸೆಮಿಫೈನಲ್ ಪಂದ್ಯ ಆಡಲಿದ್ದಾರೆ.

ಹಾಲಿ ಚಾಂಪಿಯನ್ ಕರೊಲಿನಾ ವೋಜ್ನಿಯಾಕಿ ಪಂದ್ಯದ ಮದ್ಯದಲ್ಲಿಯೇ ಆಟವನ್ನು ತೊರೆದರು. 3–6, 7–6, 3–1ರಲ್ಲಿ ಡೊಮಿನಿಕಾ ಸಿಬುಲ್‌ಸ್ಕೊವಾ ಎದುರು ಹಿನ್ನಡೆ ಹೊಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.