ADVERTISEMENT

ಸೈನಾ, ಕಶ್ಯಪ್‌ ಭಾರತದ ಭರವಸೆ

ಇಂದಿನಿಂದ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2015, 19:30 IST
Last Updated 2 ಮಾರ್ಚ್ 2015, 19:30 IST

ಬರ್ಮಿಂಗ್‌ಹ್ಯಾಮ್‌ (ಪಿಟಿಐ): ಸಯ್ಯದ್‌ ಮೋದಿ ಗ್ರ್ಯಾಂಡ್‌ ಪ್ರಿಕ್ಸ್‌ ಗೋಲ್ಡ್‌ ಟೂರ್ನಿಯಲ್ಲಿ ಗೆಲುವು ದಾಖಲಿಸಿರುವ ಸೈನಾ ನೆಹ್ವಾಲ್ ಹಾಗೂ ಪರುಪಳ್ಳಿ ಕಶ್ಯಪ್ ಮಂಗಳವಾರದಿಂದ ಇಲ್ಲಿ ಆರಂಭವಾಗಲಿರುವ ಪ್ರತಿಷ್ಠಿತ ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಭರವಸೆ ಎನಿಸಿದ್ದಾರೆ.

2014ರಲ್ಲಿ ಸೈನಾ ಇಂಡಿಯಾ ಓಪನ್‌, ಆಸ್ಟ್ರೇಲಿಯಾ ಓಪನ್‌, ಚೀನಾ ಓಪನ್‌ನಲ್ಲಿ ಗೆಲುವು ದಾಖಲಿಸಿದ್ದರು. ಈ ಖುತುವಿನ ಆರಂಭದಲ್ಲೇ ಸಯ್ಯದ್ ಮೋದಿ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದರು.  ಆದರೆ ಆಲ್‌ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನಲ್ಲಿ ಸೈನಾ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ಈ ಬಾರಿ ಪ್ರಶಸ್ತಿಯ ಕನಸಿನೊಂದಿಗೆ ಆಡಲಿದ್ದಾರೆ.

2010ರಲ್ಲಿ ಸೈನಾ ಇದೇ ಟೂರ್ನಿಯಲ್ಲಿ ಫೈನಲ್ ತಲುಪಿದ್ದರು. ‘ನಾನು ಇಲ್ಲಿ ಒಮ್ಮೆಯೂ ಪ್ರಶಸ್ತಿ ಗೆದ್ದುಕೊಂಡಿಲ್ಲ. ಸೆಮಿಫೈನಲ್‌ ತಲುಪಲು ಮಾತ್ರ ಸಾಧ್ಯವಾಗಿದೆ.  ಈ ವರ್ಷ ಪ್ರಶಸ್ತಿಯ ಕನಸು ಈಡೇರುವ ನಿರೀಕ್ಷೆ ಇದೆ’ ಎಂದು ಸೈನಾ ಹೇಳಿದ್ದಾರೆ.

‘ಹೋದ ತಿಂಗಳಿನಿಂದಲೇ ಬೆಂಗಳೂರಿನಲ್ಲಿ ಕಠಿಣ ಅಭ್ಯಾಸ ನಡೆಸಿದ್ದೇನೆ. ದೇವರ ದಯದಿಂದ ಫಿಟ್ನೆಸ್‌ ಸಮಸ್ಯೆ ಇಲ್ಲ. ಆದ್ದರಿಂದ ಗೆಲ್ಲುವ ಎಲ್ಲ ಪ್ರಯತ್ನ ನಡೆಸಲಿದ್ದೇನೆ’ ಎಂದು ಹೇಳಿದ್ದಾರೆ.

ಚೀನಾದ ಯಿಹಾನ್‌ ವಾಂಗ್‌ ಎದುರು ಪೈಪೋಟಿ ನಡೆಸುವ ಮೊದಲು ಸೈನಾ ಎರಡು ಅರ್ಹತಾ ಸುತ್ತಿನ ಪಂದ್ಯದಲ್ಲಿ ಆಡಲಿದ್ದಾರೆ.
ಆದರೆ ಪರುಪಳ್ಳಿ ಕಶ್ಯಪ್‌ ಆರಂಭಿಕ ಸುತ್ತಿನಲ್ಲೇ ಆರನೇ ಶ್ರೇಯಾಂಕದ ಪ್ರಬಲ ಪ್ರತಿಸ್ಪರ್ಧಿ ಚುವು ತಿಯೆನ್‌ ಚೆನ್‌  ಎದುರು ಆಡಲಿದ್ದಾರೆ.
ಯುವ ಆಟಗಾರ ಕೆ. ಶ್ರೀಕಾಂತ್‌ ಮೊದಲ ಸುತ್ತಿನಲ್ಲಿ ಜಪಾನ್‌ನ ಕೆಂಟೊ ಮೊಮೊಟ ಎದುರು ಆಡಲಿದ್ದಾರೆ.

ಇಂಡೊನೇಷ್ಯನ್‌ ಮಾಸ್ಟರ್ಸ್‌ನಲ್ಲಿ ಗೆಲುವು ದಾಖಲಿಸಿದ್ದ ಎಚ್‌.ಎಸ್‌ ಪ್ರಣಯ್‌ ಫ್ರಾನ್ಸ್‌ನ ಬ್ರೈಸ್‌ ಲೆವೆರ್ಡ್ಸ್‌ ಸವಾಲು ಎದುರಿಸಲಿದ್ದಾರೆ.
ಭರವಸೆಯ ಆಟಗಾರ್ತಿ ಪಿ.ವಿ ಸಿಂಧು  ಮೊದಲ ಸುತ್ತಿನಲ್ಲೇ ಪ್ರಬಲ ಸ್ಪರ್ಧಿ ಹಾಗೂ ಹಾಲಿ ವಿಶ್ವ ಚಾಂಪಿಯನ್‌ ಕರೊಲಿನಾ ಮರಿನ್‌ ಎದುರು ಪೈಪೋಟಿ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.