ADVERTISEMENT

ಸ್ಮಿತ್‌ ದ್ವಿಶತಕ: ಆಸ್ಟ್ರೇಲಿಯಾಗೆ ಇನಿಂಗ್ಸ್ ಮುನ್ನಡೆ

ಪಿಟಿಐ
Published 16 ಡಿಸೆಂಬರ್ 2017, 19:30 IST
Last Updated 16 ಡಿಸೆಂಬರ್ 2017, 19:30 IST
ದ್ವಿಶತಕ ದಾಖಲಿಸಿದ ಬಳಿಕ ಸಂಭ್ರಮಿಸಿದ ಸ್ಟೀವ್ ಸ್ಮಿತ್‌ –ರಾಯಿಟರ್ಸ್‌ ಚಿತ್ರ
ದ್ವಿಶತಕ ದಾಖಲಿಸಿದ ಬಳಿಕ ಸಂಭ್ರಮಿಸಿದ ಸ್ಟೀವ್ ಸ್ಮಿತ್‌ –ರಾಯಿಟರ್ಸ್‌ ಚಿತ್ರ   

ಪರ್ತ್‌: ಸ್ಟೀವ್ ಸ್ಮಿತ್ ಹಾಗೂ ಮಿಚೆಲ್‌ ಮಾರ್ಷ್‌ ನಡುವಿನ ಮುರಿಯದ ಜೊತೆಯಾಟದಿಂದ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ವಿರುದ್ಧದ ಮೂರನೇ ಆ್ಯಷಸ್ ಟೆಸ್ಟ್ ಪಂದ್ಯದಲ್ಲಿ ಶನಿವಾರ ಇನಿಂಗ್ಸ್ ಮುನ್ನಡೆ ಗಳಿಸಿದೆ.

ಶುಕ್ರವಾರ 3 ವಿಕೆಟ್‌ ಕಳೆದುಕೊಂಡು 203 ರನ್‌ ಗಳಿಸಿದ್ದ ಆಸ್ಟ್ರೇಲಿಯಾ ತಂಡ ಶನಿವಾರ ನಾಲ್ಕು ವಿಕೆಟ್‌ಗಳಿಗೆ 549ರನ್‌ ಗಳಿಸಿದೆ. ಆರು ವಿಕೆಟ್‌ಗಳು ಬಾಕಿ ಇರುವಂತೆಯೇ ಆಸ್ಟ್ರೇಲಿಯಾ 146ರ ನ್‌ಗಳ ಇನಿಂಗ್ಸ್ ಮುನ್ನಡೆ ಸಾಧಿಸಿದೆ.

ಸ್ಮಿತ್‌ಗೆ ಜೊತೆಯಾದ ಮಿಚೆಲ್‌ ಮಾರ್ಷ್‌ (ಬ್ಯಾಟಿಂಗ್‌ 181, 234ಎ, 29ಬೌಂ) ಟೆಸ್ಟ್ ಕ್ರಿಕೆಟ್‌ನಲ್ಲಿ ವೃತ್ತಿಜೀವನದ ಮೊದಲ ಶತಕ ದಾಖಲಿಸಿ ಅಂಗಳದಲ್ಲಿ ಮಿಂಚುಹರಿಸಿದರು. ಸ್ಮಿತ್‌ ಹಾಗೂ ಮಾರ್ಷ್ ಜೋಡಿ ಐದನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 301ರನ್ ಜೋಡಿಸಿದೆ. ಇದು ಇಂಗ್ಲೆಂಡ್ ತಂಡದ ವಿರುದ್ಧ ದಾಖಲಾದ ಹೆಚ್ಚು ರನ್‌ಗಳ ಜೊತೆಯಾಟ ಎನಿಸಿದೆ.

ADVERTISEMENT

ಸ್ಮಿತ್‌ ದ್ವಿಶತಕ: ಸೊಗಸಾದ ಬ್ಯಾಟಿಂಗ್‌ ಮೂಲಕ ಗಮನಸೆಳೆದ ಸ್ಮಿತ್‌ (ಬ್ಯಾಟಿಂಗ್‌ 229; 390ಎ, 28ಬೌಂ, 1ಸಿ) ಟೆಸ್ಟ್ ಕ್ರಿಕೆಟ್‌ನಲ್ಲಿ ವೈಯಕ್ತಿಕ ಎರಡನೇ ದ್ವಿಶತಕ ದಾಖಲಿಸಿದರು. ಈ ಮೂಲಕ ಈ ಋತುವಿನಲ್ಲಿ ಸಾವಿರ ರನ್‌ಗಳ ಮೈಲುಗಲ್ಲು ದಾಟಿದರು. ಈ ಹಿಂದೆ ಟೆಸ್ಟ್ ಕ್ರಿಕೆಟ್‌ನಲ್ಲಿ 215 ರನ್‌ಗಳಿಸಿದ್ದು ಅವರ ವೈಯಕ್ತಿಕ ಗರಿಷ್ಠ ಮೊತ್ತವಾಗಿತ್ತು. ಈ ದಾಖಲೆಯನ್ನು ಅವರು ಉತ್ತಮಪಡಿಸಿಕೊಂಡರು.

ಸ್ಮಿತ್ ಈ ಹಿಂದೆ ದಾಖಲಿಸಿದ 21 ಟೆಸ್ಟ್ ಶತಕಗಳಲ್ಲಿ ಇದು ಅತ್ಯಂತ ವೇಗದ ಶತಕ ಎನಿಸಿದೆ. 138 ಎಸೆತಗಳಲ್ಲಿ ಅವರು ಈ ಸಾಧನೆ ಮಾಡಿದರು.

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್‌: ಮೊದಲ ಇನಿಂಗ್ಸ್: 115.1 ಓವರ್‌ಗಳಲ್ಲಿ 403. ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌: 152 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗೆ 549 (ಸ್ಟೀವ್ ಸ್ಮಿತ್‌ ಬ್ಯಾಟಿಂಗ್‌ 229, ಶಾನ್‌ ಮಾರ್ಷ್‌ 28, ಮಿಚೆಲ್‌ ಮಾರ್ಷ್‌ ಬ್ಯಾಟಿಂಗ್‌ 181; ಮೊಯಿನ್ ಅಲಿ 104ಕ್ಕೆ1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.