ADVERTISEMENT

ಹಾಕಿ ದಿಗ್ಗಜ ಶಾಹಿದ್‌ ನಿಧನ

​ಪ್ರಜಾವಾಣಿ ವಾರ್ತೆ
Published 20 ಜುಲೈ 2016, 19:30 IST
Last Updated 20 ಜುಲೈ 2016, 19:30 IST

ನವದೆಹಲಿ (ಪಿಟಿಐ): ಅನಾರೋಗ್ಯದಿಂದ ಬಳಲುತ್ತಿದ್ದ ಭಾರತದ ಹಾಕಿ ದಿಗ್ಗಜ ಮತ್ತು ಡ್ರಿಬ್ಲಿಂಗ್‌ ಪರಿಣತ ಮಹಮ್ಮದ್‌ ಶಾಹಿದ್‌ (56) ಅವರು ಬುಧವಾರ ಗುಡಗಾಂವ್‌ನಲ್ಲಿ ನಿಧನ ಹೊಂದಿದ್ದಾರೆ.

ಕೆಲವು ತಿಂಗಳುಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಒಂದು ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
‘ಶಾಹಿದ್ ಅವರು ಬೆಳಿಗ್ಗೆ 10.45ರ ಸುಮಾರಿಗೆ ನಿಧನ ಹೊಂದಿದರು. ಪಾರ್ಥಿವ ಶರೀರದ ಅಂತಿಮ ಸಂಸ್ಕಾರ ಹುಟ್ಟೂರು ವಾರಣಾಸಿಯಲ್ಲಿ ಗುರುವಾರ ನಡೆಯಲಿದೆ’ ಎಂದು ಅವರ ಪುತ್ರ ಮಹಮ್ಮದ್‌ ಸೈಫ್‌ ತಿಳಿಸಿದ್ದಾರೆ.

1980ರ ಮಾಸ್ಕೊ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡ ಚಿನ್ನ ಜಯಿಸಿತ್ತು. ಆಗ ಶಾಹಿದ್ ಅವರು ತಂಡದಲ್ಲಿದ್ದರು. ಭಾರತ 1982ರ ದೆಹಲಿ ಮತ್ತು 1986ರ ಸೋಲ್‌ ಏಷ್ಯನ್‌ ಕ್ರೀಡಾಕೂಟಗಳಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಗೆದ್ದುಕೊಂಡಿತ್ತು. ಆಗೂ ಶಾಹಿದ್ ಅವರು ತಂಡದ ಸದಸ್ಯರಾಗಿದ್ದರು. ಫಾರ್ವರ್ಡ್‌ ಆಟಗಾರನಾಗಿದ್ದ ಶಾಹಿದ್ ಅವರು 1979ರಲ್ಲಿ ರಾಷ್ಟ್ರೀಯ ಜೂನಿಯರ್ ತಂಡಕ್ಕೆ ಪದಾರ್ಪಣೆ ಮಾಡಿದ್ದರು.

ಅದೇ ವರ್ಷ ಕ್ವಾಲಾಲಂಪುರದಲ್ಲಿ ಜರುಗಿದ ನಾಲ್ಕು ರಾಷ್ಟ್ರಗಳ ಹಾಕಿ ಸರಣಿಯಲ್ಲಿ ಸೀನಿಯರ್ ತಂಡವನ್ನು ಪ್ರತಿನಿಧಿಸಿದ್ದರು. ಆಗ ವಾಸುದೇವನ್‌ ಭಾಸ್ಕರನ್ ಭಾರತ ತಂಡದ ನಾಯಕರಾಗಿದ್ದರು.

1980ರಲ್ಲಿ ಕರಾಚಿಯಲ್ಲಿ ನಡೆದ ಚಾಂಪಿಯನ್‌ ಟ್ರೋಫಿ ಹಾಕಿ ಟೂರ್ನಿಯಲ್ಲಿ ಅತ್ಯುತ್ತಮ ಫಾರ್ವರ್ಡ್‌ ಆಟಗಾರ ಗೌರವ ಪಡೆದಿದ್ದರು. ಅಂತರರಾಷ್ಟ್ರೀಯ ಹಾಕಿಯಿಂದ ನಿವೃತ್ತಿಯಾದ ಬಳಿಕ ಇಂಡಿಯನ್‌ ರೈಲ್ವೆ ನಲ್ಲಿ ಕ್ರೀಡಾ ಅಧಿಕಾರಿಯಾಗಿ ಕೆಲಸ ಮಾಡಿದ್ದರು. ಇವರಿಗೆ 1981ರಲ್ಲಿ ಅರ್ಜುನ ಮತ್ತು 1986ರಲ್ಲಿ ಪದ್ಮಶ್ರೀ ಪ್ರಶಸ್ತಿಗಳು ಲಭಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.