ADVERTISEMENT

‘ಖೇಲ್‌ ರತ್ನ’ ಗೌರವಕ್ಕೆ ಕೊಹ್ಲಿ ಹೆಸರು

​ಪ್ರಜಾವಾಣಿ ವಾರ್ತೆ
Published 3 ಮೇ 2016, 19:30 IST
Last Updated 3 ಮೇ 2016, 19:30 IST
‘ಖೇಲ್‌ ರತ್ನ’ ಗೌರವಕ್ಕೆ ಕೊಹ್ಲಿ ಹೆಸರು
‘ಖೇಲ್‌ ರತ್ನ’ ಗೌರವಕ್ಕೆ ಕೊಹ್ಲಿ ಹೆಸರು   

ನವದೆಹಲಿ (ಪಿಟಿಐ): ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರತಿಷ್ಠಿತ ರಾಜೀವ್‌ ಗಾಂಧಿ ಖೇಲ್‌ ರತ್ನ ಗೌರ ವಕ್ಕೆ ಮಂಗಳವಾರ ಭಾರತ ಟೆಸ್ಟ್‌ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರ ಹೆಸರನ್ನು ಶಿಫಾರಸು ಮಾಡಿದೆ.

ಅರ್ಜುನ ಪ್ರಶಸ್ತಿಗೆ ಮುಂಬೈನ ಪ್ರತಿಭಾನ್ವಿತ ಆಟಗಾರ ಅಜಿಂಕ್ಯ ರಹಾನೆ ಅವರ ಹೆಸರನ್ನು ಸೂಚಿಸಿದೆ.

ನಾಲ್ಕು ವರ್ಷಗಳ ಬಳಿಕ ಖೇಲ್‌ ರತ್ನ ಪುರಸ್ಕಾರಕ್ಕೆ ಕ್ರಿಕೆಟಿಗರೊಬ್ಬರ ಹೆಸರು ಶಿಫಾರಸು ಮಾಡಲಾಗಿದೆ. ಒಂದೊಮ್ಮೆ ದೆಹಲಿಯ ಬ್ಯಾಟ್ಸ್‌ಮನ್‌ ಕೊಹ್ಲಿ ಈ ಪ್ರಶಸ್ತಿಗೆ ಭಾಜನರಾದರೆ ಈ ಸಾಧನೆ ಮಾಡಿದ  ಮೂರನೇ ಕ್ರಿಕೆಟಿಗ ಎಂಬ ಶ್ರೇಯ ತಮ್ಮದಾಗಿಸಿಕೊಳ್ಳಲಿದ್ದಾರೆ.

ಸಚಿನ್‌ ತೆಂಡೂಲ್ಕರ್‌ ಮತ್ತು  ಮಹೇಂದ್ರ ಸಿಂಗ್‌ ದೋನಿ ಅವರು ಮಾತ್ರ ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ಬಲಗೈ ಬ್ಯಾಟ್ಸ್‌ಮನ್‌ ಕೊಹ್ಲಿ, ಈ ಬಾರಿ ತವರಿನಲ್ಲಿ ನಡೆದಿದ್ದ ವಿಶ್ವ ಟ್ವೆಂಟಿ–20 ಟೂರ್ನಿಯಲ್ಲಿ ಅಮೋಘ ಸಾಮರ್ಥ್ಯ ತೋರಿದ್ದರು. ಆಸ್ಟ್ರೇಲಿಯಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳ ವಿರುದ್ಧ ಶ್ರೇಷ್ಠ ಆಟ ಆಡಿ ಏಕಾಂಗಿಯಾಗಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.

ಟೂರ್ನಿಯ ಶ್ರೇಷ್ಠ ಆಟಗಾರ ಗೌರವಕ್ಕೆ ಭಾಜನರಾಗಿದ್ದ ಅವರನ್ನು ಐಸಿಸಿ,  ವಿಶ್ವ ಟ್ವೆಂಟಿ–20 ತಂಡಕ್ಕೆ ನಾಯಕನನ್ನಾಗಿ ಆಯ್ಕೆ ಮಾಡಿತ್ತು.
ಮೂಲಗಳ ಪ್ರಕಾರ ಈ ಗೌರವಕ್ಕೆ ಕೊಹ್ಲಿ ಅವರಿಗೆ ಸ್ಕ್ವಾಷ್‌ ತಾರೆ ದೀಪಿಕಾ ಪಳ್ಳಿಕಲ್‌, ಗಾಲ್ಫರ್‌, ಅನಿರ್ಬನ್‌ ಲಾಹಿರಿ, ಶೂಟರ್‌, ಜಿತು ರಾಯ್‌ ಮತ್ತು ಅಥ್ಲೀಟ್‌, ಟಿಂಟು ಲೂಕಾ ಅವರಿಂದ ತೀವ್ರ ಸ್ಪರ್ಧೆ ಎದುರಾಗಲಿದೆ.

ರಹಾನೆಗೆ  ‘ಅರ್ಜುನ’: ಮುಂಬೈ ಆಟಗಾರ ರಹಾನೆ ಹೆಸರನ್ನು ಅರ್ಜುನ ಪ್ರಶಸ್ತಿಗೆ ಸೂಚಿಸಿದೆ.  ಬಲಗೈ ಬ್ಯಾಟ್ಸ್‌ಮನ್‌ ರಹಾನೆ ಹೋದ ವರ್ಷ ನಡೆದ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಟೆಸ್ಟ್‌ ಇನಿಂಗ್ಸ್‌ವೊಂದರಲ್ಲಿ ಹೆಚ್ಚು ಕ್ಯಾಚ್‌ ಪಡೆದಿದ್ದರು. ಇದರೊಂದಿಗೆ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದರು.

ಖೇಲ್‌ ರತ್ನ ಗೌರವ ₹ 7.5 ಲಕ್ಷ ನಗದು ಮತ್ತು ಪ್ರಶಸ್ತಿ ಫಲಕ ಹೊಂದಿದ್ದರೆ, ಅರ್ಜುನ ಪ್ರಶಸ್ತಿ ಪುರಸ್ಕೃತರು ತಲಾ ₹ 5 ಲಕ್ಷ ನಗದು ಮತ್ತು ಪ್ರಶಸ್ತಿ ಫಲಕ ಪಡೆಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT