ADVERTISEMENT

‘ಗೇಲ್‌ ಅಬ್ಬರ ನಿಯಂತ್ರಿಸಲು ಯೋಜನೆ ರೂಪಿಸಿಲ್ಲ’

ಭಾರತ ತಂಡದ ನಾಯಕ ಎಂ.ಎಸ್‌.ದೋನಿ ಅಭಿಮತ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2015, 9:28 IST
Last Updated 5 ಮಾರ್ಚ್ 2015, 9:28 IST
‘ಗೇಲ್‌ ಅಬ್ಬರ ನಿಯಂತ್ರಿಸಲು ಯೋಜನೆ ರೂಪಿಸಿಲ್ಲ’
‘ಗೇಲ್‌ ಅಬ್ಬರ ನಿಯಂತ್ರಿಸಲು ಯೋಜನೆ ರೂಪಿಸಿಲ್ಲ’   

ಪರ್ತ್‌ (ಪಿಟಿಐ): ‘ವೆಸ್ಟ್‌ ಇಂಡೀಸ್‌ ತಂಡದ ಕ್ರಿಸ್‌ಗೇಲ್‌ ಮತ್ತು ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್‌ ಅವರಂತಹ ಸ್ಫೋಟಕ ಬ್ಯಾಟ್ಸ್‌ಮನ್‌ಗಳ ರನ್‌ಗಳಿಕೆಗೆ ಕಡಿವಾಣ ಹಾಕಲು ನಾವು ಯಾವುದೇ ಯೋಜನೆಗಳನ್ನು ರೂಪಿಸುವುದಿಲ್ಲ’ ಎಂದು ಭಾರತ ತಂಡದ ನಾಯಕ ಮಹೇಂದ್ರ ಸಿಂಗ್‌ ದೋನಿ ತಿಳಿಸಿದ್ದಾರೆ.

ಭಾರತ ತಂಡ ಶುಕ್ರವಾರ ನಡೆಯುವ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ತಂಡದ ಸವಾಲು ಎದುರಿಸಲಿದೆ. ಈ ಪಂದ್ಯದಲ್ಲಿ ಜಿಂಬಾಬ್ವೆ ಎದುರು ದ್ವಿಶತಕದ ಸಾಧನೆ ಮಾಡಿದ್ದ ಗೇಲ್‌ ಅವರನ್ನು ನಿಯಂತ್ರಿಸುವುದು ದೋನಿಗೆ ಈಗ ತಲೆನೋವಾಗಿ ಪರಿಣಮಿಸಿದೆ.
‘ಯಾವುದೇ ಮುಚ್ಚುಮರೆ ಇಲ್ಲದೆ ಹೇಳುತ್ತೇನೆ. ಗೇಲ್‌, ಡಿವಿಲಿಯರ್ಸ್‌ ಮತ್ತು ನ್ಯೂಜಿಲೆಂಡ್ ತಂಡದ ನಾಯಕ ಬ್ರೆಂಡನ್‌ ಮೆಕ್ಲಮ್‌ ಅವರು ಫಾರ್ಮ್‌ನಲ್ಲಿದ್ದಾಗ ನಿಸ್ಸಂದೇಹವಾಗಿ ಅವರ ಬ್ಯಾಟ್‌ನಿಂದ ರನ್‌ ಮಳೆ ಸುರಿಯುತ್ತದೆ.  ಆಗ ಅವರನ್ನು ನಿಯಂತ್ರಿಸಲು ಯಾವ ಯೋಜನೆ ರೂಪಿಸಿದರೂ ಫಲ ನೀಡುವುದಿಲ್ಲ. ಅವರು ಪ್ರತಿ ಎಸೆತವನ್ನು ಸಿಕ್ಸರ್‌ಗೆ ಅಟ್ಟುವಾಗ ಹೇಗೆ ಫೀಲ್ಡಿಂಗ್‌ಗೆ ನಿಯೋಜಿಸುತ್ತೀರಿ. ಅವರು ಶಾರ್ಟ್‌ ಪಿಚ್‌ ಎಸೆತಗಳನ್ನು ಲೀಲಾಜಾಲವಾಗಿ ಬೌಂಡರಿಗಟ್ಟಿಬಿಡುತ್ತಾರೆ. ಹೀಗಿದ್ದಾಗ ಬೌಲರ್‌ಗಳು ವಿಭಿನ್ನ ತಂತ್ರ ಅಳವಡಿಸಿಕೊಳ್ಳಬೇಕು’ ಎಂದು ದೋನಿ ತಿಳಿಸಿದ್ದಾರೆ.

‘ಕ್ರಿಸ್‌ ಗೇಲ್‌ ಮತ್ತು ಡಿವಿಲಿಯರ್ಸ್‌ ಅವರು ಕ್ರೀಸ್‌ನಲ್ಲಿದ್ದಾಗ ನಾವು ಬೌಲರ್‌ಗಳಿಗೆ ಹೆಚ್ಚು ಸ್ವಾತಂತ್ರ್ಯ ನೀಡಬೇಕು. ಆಗ ಅವರು ಭಿನ್ನ ರೀತಿಯ ಎಸೆತಗಳನ್ನು ಹಾಕಿ ಅವರನ್ನು ಕಟ್ಟಿಹಾಕ ಬಹುದು. ಇದನ್ನು ಬಿಟ್ಟು ಬೇರೆ ಯಾವುದೇ ಯೋಜನೆ ರೂಪಿಸಿದರೂ ಅದು ವ್ಯರ್ಥ ಪ್ರಯತ್ನ ’ ಎಂದು ಮಹಿ ಹೇಳಿದ್ದಾರೆ.

‘ಗೇಲ್‌, ಡಿವಿಲಿಯರ್ಸ್‌, ಮೆಕ್ಲಮ್‌ ಅವರಂತಹ ಬ್ಯಾಟ್ಸ್‌ಮನ್‌ಗಳು ಕ್ರೀಸ್‌ನಲ್ಲಿದ್ದಾಗ ನಾಯಕನ ಜತೆ ಬೌಲರ್‌ಗಳೂ ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಬೇಕು.  ಜತೆಗೆ ತಮ್ಮ ಯೋಜನೆಗೆ ಅನುಗುಣವಾಗಿ ಕ್ಷೇತ್ರರಕ್ಷಕರನ್ನೂ ನಿಯೋಜಿಸಿ ಕೊಳ್ಳಬೇಕು. ಹೀಗೆ ಒಗ್ಗಟ್ಟಾಗಿ ಆಡಿದಾಗ ಮಾತ್ರ ಇವರನ್ನು ಬೇಗನೇ  ಪೆವಿಲಿಯನ್‌ಗೆ ಅಟ್ಟಬಹುದು’ ಎಂದು ದೋನಿ ಅಭಿಪ್ರಾಯಪಟ್ಟಿದ್ದಾರೆ.

ಗೇಲ್‌ ಫಿಟ್‌: ವೆಸ್ಟ್‌ ಇಂಡೀಸ್‌ ವಿರುದ್ಧದ ಈ ಹಿಂದಿನ ಯಾವ ಪಂದ್ಯಗಳಲ್ಲೂ ಭಾರತ ಗೇಲ್‌ ಭಯದೊಂದಿಗೆ ಕಣಕ್ಕಿಳಿದಿರಲಿಲ್ಲ. ಆದರೆ ಜಿಂಬಾಬ್ವೆ ಎದುರಿನ ಪಂದ್ಯದಲ್ಲಿ ಎಡಗೈ ಬ್ಯಾಟ್ಸ್‌ಮನ್‌ ಅಬ್ಬರಿಸಿದ ರೀತಿ ನೋಡಿ ತಂಡ ಅಲ್ಪ ಆತಂಕಕ್ಕೊಳಗಾಗಿರುವುದು ಸುಳ್ಳಲ್ಲ.
ಹಿಂದಿನ ಎರಡು ದಿನಗಳಿಂದ ಗೇಲ್‌ ನೆಟ್‌ ಪ್ರಾಕ್ಟೀಸ್‌ಗೂ ಬಂದಿಲ್ಲ. ಇದನ್ನು ನೋಡಿದರೆ ಅವರು ಮತ್ತೆ ಬೆನ್ನು ನೋವಿಗೆ ಒಳಗಾಗಿರಬಹುದು ಎಂಬ ಅನುಮಾನ ಮೂಡಿದೆ. ಆದರೆ ಡರೆನ್‌ ಸಮಿ ಇದನ್ನು ನಿರಾಕರಿಸಿದ್ದಾರೆ.

‘ಗೇಲ್‌ ಪೂರ್ಣವಾಗಿ ಫಿಟ್‌ ಆಗಿದ್ದಾರೆ. ಅವರು ಈ ಹಿಂದೆ ಸಾಕಷ್ಟು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಭಾರತದ ಎದುರಿನ  ಪಂದ್ಯದಲ್ಲೂ ಅವರು ಅಬ್ಬರಿಸಲಿದ್ದಾರೆ’ ಎಂದು ಸಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.