ADVERTISEMENT

ಅನುಕೂಲ್‌ ದಾಳಿಗೆ ಬೆದರಿದ ನ್ಯೂಗಿನಿ

ಪೃಥ್ವಿ ಅರ್ಧಶತಕ; ಕ್ವಾರ್ಟರ್‌ ಫೈನಲ್‌ಗೆ ಭಾರತ

ಪಿಟಿಐ
Published 16 ಜನವರಿ 2018, 19:44 IST
Last Updated 16 ಜನವರಿ 2018, 19:44 IST
ಪಪುವಾ ನ್ಯೂ ಗಿನಿ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಗಳಿಸಿದ ಭಾರತದ ಪೃಥ್ವಿ ಶಾ ಬ್ಯಾಟಿಂಗ್‌ ವೈಖರಿ  ಐಸಿಸಿ ಚಿತ್ರ
ಪಪುವಾ ನ್ಯೂ ಗಿನಿ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಗಳಿಸಿದ ಭಾರತದ ಪೃಥ್ವಿ ಶಾ ಬ್ಯಾಟಿಂಗ್‌ ವೈಖರಿ ಐಸಿಸಿ ಚಿತ್ರ   

ಮೌಂಟ್‌ ಮೌಂಗಾನುಯಿ: ಅನುಕೂಲ್‌ ರಾಯ್‌ (14ಕ್ಕೆ5) ದಾಳಿಗೆ ಮಂಗಳವಾರ ಬೇ ಓವಲ್‌ ಕ್ರೀಡಾಂಗಣದಲ್ಲಿ ಪಪುವಾ ನ್ಯೂ ಗಿನಿ ಬ್ಯಾಟ್ಸ್‌ಮನ್‌ಗಳು ಬೆಚ್ಚಿದರು.

ರಾಯ್‌, ಸ್ಪಿನ್‌ ಮೋಡಿಯ ಬಲದಿಂದ ಭಾರತ ತಂಡ 19 ವರ್ಷದೊಳಗಿನವರ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ತನ್ನ ಎರಡನೇ ಹಣಾಹಣಿಯಲ್ಲಿ 10 ವಿಕೆಟ್‌ಗಳ ಜಯಭೇರಿ ಮೊಳಗಿಸಿತು. ಈ ಗೆಲುವಿನೊಂದಿಗೆ ‘ಬಿ’ ಗುಂಪಿನ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಪೃಥ್ವಿ ಶಾ ಪಡೆ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಮೊದಲು ಬ್ಯಾಟ್‌ ಮಾಡಿದ ನ್ಯೂ ಗಿನಿ 21.5 ಓವರ್‌ಗಳಲ್ಲಿ 64ರನ್‌ಗಳಿಗೆ ಆಲೌಟ್‌ ಆಯಿತು. ಭಾರತ 8 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ ಗುರಿ ತಲುಪಿತು.

ADVERTISEMENT

ಬ್ಯಾಟಿಂಗ್‌ ವೈಫಲ್ಯ:

ಬ್ಯಾಟಿಂಗ್‌ ಆರಂಭಿಸಿದ ’ಕ್ರಿಕೆಟ್‌ ಕೂಸು’ ನ್ಯೂ ಗಿನಿಗೆ ಮೂರನೇ ಓವರ್‌ನಲ್ಲಿ ಆಘಾತ ಎದುರಾಯಿತು. ಐದನೇ ಎಸೆತದಲ್ಲಿ ಶಿವಂ ಮಾವಿ, ಇಗೊ ಮಹುರುಗೆ (4) ಪೆವಿಲಿಯನ್‌ ಹಾದಿ ತೋರಿಸಿದರು. ಹೇಗಿ ತೌವು ಏಳನೇ ಓವರ್‌ನ ಐದನೇ ಎಸೆತದಲ್ಲಿ ಮಾವಿಗೆ ವಿಕೆಟ್‌ ನೀಡಿದರು. ಮರು ಎಸೆತದಲ್ಲಿ ವಿಕೆಟ್‌ ಕೀಪರ್‌ ಅತಾಯ್‌ (13; 26ಎ, 2ಬೌಂ) ರನ್‌ಔಟ್‌ ಆದರು. ಆಗ ತಂಡದ ಖಾತೆಯಲ್ಲಿ ಇದ್ದದ್ದು 26 ರನ್‌.

ರಾಯ್‌ ಸ್ಪಿನ್‌ ಮೋಡಿ:

ಆ ನಂತರ ಅನುಕೂಲ್‌ ರಾಯ್ ವಿಕೆಟ್‌ ಬೇಟೆಯಾಡಿದರು. ಅವರು ಒವಿಯಾ ಸ್ಯಾಮ್‌ (15), ಸಿನಲ್ ಅರುವಾ (12), ಕೆವಾವು ತವು (2), ಜೇಮ್ಸ್‌ ತವು (0) ಮತ್ತು ಸೆಮೊ ಕಮೆಯೆ   ಅವರನ್ನು ಸ್ಪಿನ್‌ ಬಲೆಯಲ್ಲಿ ಬಂಧಿಸಿ ಭಾರತಕ್ಕೆ ಮೇಲುಗೈ ತಂದುಕೊಟ್ಟರು. ಈ ಮೂಲಕ ಮೊದಲ ಬಾರಿಗೆ ಪಂದ್ಯವೊಂದರಲ್ಲಿ ಐದು ವಿಕೆಟ್‌ ಕೆಡವಿದ ಸಾಧನೆಯನ್ನೂ ತಮ್ಮದಾಗಿಸಿಕೊಂಡರು. ನ್ಯೂ ಗಿನಿ ತಂಡ ಕೊನೆಯಲ್ಲಿ 4ರನ್‌ ಗಳಿಸುವಷ್ಟರಲ್ಲಿ 6 ವಿಕೆಟ್‌ ಕಳೆದುಕೊಂಡಿತು!

ಆಸ್ಟ್ರೇಲಿಯಾ ಎದುರಿನ ಮೊದಲ ಪಂದ್ಯದಲ್ಲಿ ಮಿಂಚಿದ್ದ ಕಮಲೇಶ್‌ ನಾಗರಕೋಟಿ ಮತ್ತು ಅರ್ಷ್‌ದೀಪ್‌ ಕೂಡ ಕರಾಹೊ ಬಳಗದ ಬ್ಯಾಟಿಂಗ್‌ ಶಕ್ತಿಗೆ ಪೆಟ್ಟು ನೀಡಿದರು.


(ಪಪುವಾ ನ್ಯೂ ಗಿನಿ ವಿರುದ್ಧದ ಪಂದ್ಯದಲ್ಲಿ ಐದು ವಿಕೆಟ್‌ ಉರುಳಿಸಿದ ಅನುಕುಲ್‌ ರಾಯ್‌  ಐಸಿಸಿ ಚಿತ್ರ)

ಪೃಥ್ವಿ ಮಿಂಚು:

ಪೃಥ್ವಿ ಮತ್ತು ಮಂಜೋತ್ ಕಾಲ್ರಾ ಭಾರತವನ್ನು ಸುಲಭವಾಗಿ ಗೆಲುವಿನ ದಡ ಮುಟ್ಟಿಸಿದರು. ಆಸ್ಟ್ರೇಲಿಯಾ ಎದುರು 180ರನ್‌ಗಳ ಜೊತೆಯಾಟ ಆಡಿದ್ದ ಈ ಜೋಡಿ ನ್ಯೂಗಿನಿ ಬೌಲರ್‌ಗಳ ಮೇಲೆ ಸವಾರಿ ಮಾಡಿತು.

ಮೊದಲ ಪಂದ್ಯದಲ್ಲಿ ಮಿಂಚಿದ್ದ ನಾಯಕ ಪೃಥ್ವಿ, ಬೇ ಓವಲ್‌ನಲ್ಲೂ ಅಬ್ಬರಿಸಿದರು. 36 ನಿಮಿಷಗಳ ಕಾಲ ಕ್ರೀಸ್‌ನಲ್ಲಿದ್ದ ಅವರು ಅಂಗಳದಲ್ಲಿ ಬೌಂಡರಿಗಳ ಚಿತ್ತಾರ ಬಿಡಿಸಿದರು. 39 ಎಸೆತಗಳನ್ನು ಎದುರಿಸಿದ ಪೃಥ್ವಿ 57ರನ್‌ ಗಳಿಸಿ ಅಜೇಯರಾಗುಳಿದರು. ಬೌಂಡರಿಗಳ (12) ಮೂಲಕವೇ 48ರನ್‌ ಬಾರಿಸಿದರು. 9 ಎಸೆತಗಳನ್ನು ಎದುರಿಸಿದ ಮಂಜೋತ್‌, ಒಂದು ಬೌಂಡರಿ ಸಹಿತ 9 ರನ್‌ ಕಲೆಹಾಕಿದರು.

ಸಂಕ್ಷಿಪ್ತ ಸ್ಕೋರ್‌: ಪಪುವಾ ನ್ಯೂ ಗಿನಿ: 21.5 ಓವರ್‌ಗಳಲ್ಲಿ 64 (ಸಿಮನ್‌ ಅಥಾಯ್‌ 13, ಇಗೊ ಮಹುರು 4, ಒವಿಯಾ ಸ್ಯಾಮ್‌ 15, ವಾಗಿ ಕರಾಹೊ 6, ಸಿನಲ ಅರುವಾ 12; ಶಿವಂ ಮಾವಿ 16ಕ್ಕೆ2, ಕಮಲೇಶ್‌ ನಾಗರಕೋಟಿ 17ಕ್ಕೆ1, ಅನುಕೂಲ್‌ ರಾಯ್‌ 14ಕ್ಕೆ5, ಅರ್ಷದೀಪ್‌ ಸಿಂಗ್‌ 10ಕ್ಕೆ1).

ಭಾರತ: 8 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 67 (ಪೃಥ್ವಿ ಶಾ ಔಟಾಗದೆ 57, ಮಂಜೋತ್‌ ಕಾಲ್ರಾ ಔಟಾಗದೆ 9).

ಫಲಿತಾಂಶ: ಭಾರತಕ್ಕೆ 10 ವಿಕೆಟ್‌ ಜಯ ಹಾಗೂ ಕ್ವಾರ್ಟರ್‌ ಫೈನಲ್‌ ಪ್ರವೇಶ.

ಪಂದ್ಯ ಶ್ರೇಷ್ಠ: ಅನುಕೂಲ್‌ ರಾಯ್‌.

****

ಪೃಥ್ವಿಗೆ ಅಗ್ರಸ್ಥಾನ

ಭಾರತ ತಂಡದ ನಾಯಕ ಪೃಥ್ವಿ ಈ ಬಾರಿಯ ಟೂರ್ನಿಯಲ್ಲಿ ಗರಿಷ್ಠ ರನ್‌ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು ಎರಡು ಪಂದ್ಯಗಳಿಂದ 151ರನ್‌ ಕಲೆಹಾಕಿದ್ದಾರೆ. ಆಸ್ಟ್ರೇಲಿಯಾ ಎದುರಿನ ಮೊದಲ ಪಂದ್ಯದಲ್ಲಿ 94ರನ್‌ ಬಾರಿಸಿದ್ದು ಅವರ ಗರಿಷ್ಠ ಮೊತ್ತ ಎನಿಸಿದೆ.

******

ಪೃಥ್ವಿ  ಅರ್ಧಶತಕ

ರನ್‌: 57*

ನಿಮಿಷ: 36

ಎಸೆತ: 39

ಬೌಂಡರಿ: 12

ಸ್ಟ್ರೈಕ್‌ರೇಟ್‌: 146.15

****

ಅನುಕೂಲ್‌ ರಾಯ್‌

ಓವರ್‌: 6.5

ಮೇಡನ್‌: 2

ಕೊಟ್ಟ ರನ್‌: 14

ವಿಕೆಟ್‌: 5

ಇಕಾನಮಿ: 2.04

*****

ಈ ಬಾರಿಯ ವಿಶ್ವಕಪ್‌ನಲ್ಲಿ ಪೃಥ್ವಿ ಸಾಧನೆ

ರನ್‌: 151

ಪಂದ್ಯ: 2

ಗರಿಷ್ಠ: 94

ಸರಾಸರಿ: 151.00

ಸ್ಟ್ರೈಕ್‌ರೇಟ್‌: 108.63

ಅರ್ಧಶತಕ: 2

ಬೌಂಡರಿ: 20

ಸಿಕ್ಸರ್‌: 2

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.