ADVERTISEMENT

ದಶಕದ ದಾಖಲೆ ಅಳಿಸಿದ ವಿನೋದ

ಓಟದ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡ ಮನಗೂಳಿಯ ಪ್ರತಿಭೆ

ಪ್ರಕಾಶ ಮಸಬಿನಾಳ
Published 14 ಆಗಸ್ಟ್ 2018, 19:30 IST
Last Updated 14 ಆಗಸ್ಟ್ 2018, 19:30 IST
ರಾಜ್ಯ ಮಟ್ಟದ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿನೋದಕುಮಾರ (ಸಂಗ್ರಹ ಚಿತ್ರ)
ರಾಜ್ಯ ಮಟ್ಟದ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿನೋದಕುಮಾರ (ಸಂಗ್ರಹ ಚಿತ್ರ)   

ಮನಗೂಳಿ:ಸಾಧನೆಯ ಛಲಕ್ಕೆ ಬಡತನ ಅಡ್ಡಿಯಾಗಲಾರದು. ಸತತ ಪ್ರಯತ್ನದಿಂದ ಓಟದ ಸ್ಪರ್ಧೆಯಲ್ಲಿ 10 ವರ್ಷದ ದಾಖಲೆ ಮುರಿದ ಹಿರಿಮೆ, ಪಟ್ಟಣದ ಬಿ.ಎಸ್‌.ಪಾಟೀಲ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ವಿನೋದಕುಮಾರ ಭಾವಿಮನಿಗೆ ಸಲ್ಲುತ್ತದೆ.

ಮನಗೂಳಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೇ ತಗರಗತಿ ಓದುತ್ತಿದ್ದಾಗಲೇ, ಓಟದ ಸ್ಪರ್ಧೆಯಲ್ಲಿ ಭಾಗವಹಿಸಬೇಕೆಂಬ ಉತ್ಸುಕತೆ ಹೊಂದಿ, ದೈಹಿಕ ಶಿಕ್ಷಣ ಶಿಕ್ಷಕ ಎಸ್‌.ಜಿ.ಇಬ್ರಾಹಿಂಪುರ ಮಾರ್ಗದರ್ಶನದಲ್ಲಿ ನಿತ್ಯ ಬೆಳಿಗ್ಗೆ–ಸಂಜೆ ತರಬೇತಿ ಪಡೆದ ಪ್ರತಿಭೆಯಿದು. ಶಾಲಾ ಅವಧಿಯಲ್ಲಿ ಅಧ್ಯಯನದ ಕಡೆಗೆ ಗಮನ ಹರಿಸುವುದರೊಂದಿಗೆ, ಆಟದ ಅವಧಿಯಲ್ಲಿ ಓಟದ ತರಬೇತಿಯಲ್ಲಿ ತಲ್ಲೀನ.

ಒಂದು ವರ್ಷ ಸತತ ತರಬೇತಿ ಪಡೆದ ವಿನೋದ 7ನೇ ತರಗತಿಯಲ್ಲಿ ರಾಜ್ಯ ಮಟ್ಟದ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಗಮನ ಸೆಳೆದ. 8ನೇ ತರಗತಿಯಲ್ಲೂ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದ ಈತ 1 ನಿಮಿಷ 29 ಸೆಕೆಂಡಗಳಲ್ಲಿ 600 ಮೀ ಓಡುವ ಮೂಲಕ 10 ವರ್ಷದ ದಾಖಲೆ ಮುರಿದಿದ್ದಾನೆ. (ಈ ಹಿಂದೆ ಬೆಂಗಳೂರಿನ ವಿದ್ಯಾರ್ಥಿ ಹರೀಶ 1 ನಿಮಿಷ 30 ಸೆಕೆಂಡುಗಳಲ್ಲಿ 600 ಮೀ ಓಡಿ ದಾಖಲೆ ನಿರ್ಮಿಸಿದ್ದ.) ಪುಣೆಯಲ್ಲಿ ಜರುಗಿದ್ದ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಉತ್ತಮ ಪ್ರದರ್ಶನ ನೀಡುವಲ್ಲೂ ಯಶಸ್ವಿಯಾಗಿದ್ದಾನೆ.

ವಿನೋದ ಹಾಗೂ ಶಾಲೆಯ ವಿದ್ಯಾರ್ಥಿಗಳ ಸಾಧನೆ ಗುರುತಿಸಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯು ಶಾಲೆಯ ಕ್ರೀಡಾ ಸಾಮಗ್ರಿಗಳಿಗಾಗಿ ₹ 90000, ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕರಿಗೆ ₹ 10000 ಸಹಾಯಧನ ನೀಡುವ ಮೂಲಕ ಮಕ್ಕಳಲ್ಲಿ ಕ್ರೀಡಾಸಕ್ತಿ ಪ್ರೋತ್ಸಾಹಿಸುವ ಕೆಲಸ ಮಾಡಿದೆ.

ADVERTISEMENT

ಮನಗೂಳಿಯ ಬಿ.ಎಸ್‌.ಪಾಟೀಲ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ 9ನೇ ತರಗತಿಗೆ ಪ್ರವೇಶ ಪಡೆದ ವಿನೋದಕುಮಾರ, ದೈಹಿಕ ಶಿಕ್ಷಣ ಶಿಕ್ಷಕ ಬಿ.ಎಂ.ಪಾಟೀಲರ ಮಾರ್ಗದರ್ಶನದಲ್ಲಿ ತರಬೇತಿ ಮುಂದುವರೆಸಿ, ಪ್ರೌಢಶಾಲೆಗಳ ರಾಜ್ಯ ಮಟ್ಟದ 400 ಮೀಟರ್‌ ಹಾಗೂ 800 ಮೀಟರ್‌ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಪ್ರತಿನಿಧಿಸುವ ಅರ್ಹತೆ ಪಡೆಯುವ ಮೂಲಕ ತಾಲ್ಲೂಕಿಗೆ ಕೀರ್ತಿ ತಂದಿದ್ದಾನೆ.

‘ವಿನೋದ ತನ್ನ ಕ್ರೀಡಾಸಕ್ತಿ, ನಯ–ವಿನಯ, ಮೃದು ಸ್ವಭಾವಗಳಿಂದ ಶಿಕ್ಷಕರ ಅಚ್ಚುಮೆಚ್ಚಿನ ವಿದ್ಯಾರ್ಥಿ ಎನಿಸಿಕೊಂಡಿದ್ದಾನೆ. ಅಧ್ಯಯನದಲ್ಲೂ ಹಿಂದೆ ಬಿದ್ದಿಲ್ಲ’ ಎಂದು ದೈಹಿಕ ಶಿಕ್ಷಣ ಶಿಕ್ಷಕ ಬಿ.ಎಂ.ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.