ADVERTISEMENT

ಅವಕಾಶಕ್ಕಾಗಿ ಕನ್ನಡಿಗರ ಕಸರತ್ತು...

ಪ್ರಮೋದ ಜಿ.ಕೆ
Published 30 ಜುಲೈ 2017, 19:30 IST
Last Updated 30 ಜುಲೈ 2017, 19:30 IST
ಅವಕಾಶಕ್ಕಾಗಿ ಕನ್ನಡಿಗರ ಕಸರತ್ತು...
ಅವಕಾಶಕ್ಕಾಗಿ ಕನ್ನಡಿಗರ ಕಸರತ್ತು...   

ಕರ್ನಾಟಕದಲ್ಲಿ ಸೈಕ್ಲಿಂಗ್ ವಿಷಯ ಬಂದಾಗಲೆಲ್ಲಾ ಮೊದಲು ನೆನಪಾಗುವುದೇ ಉತ್ತರ ಕರ್ನಾಟಕದ ಪ್ರತಿಭೆಗಳು. ಈ ಭಾಗದ ಹಲವಾರು ಸೈಕ್ಲಿಸ್ಟ್‌ಗಳು ಈಗಾಗಲೇ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಹೆಸರು ಮಾಡಿದ್ದಾರೆ.

ಆದರೆ ದಕ್ಷಿಣ ಕೊರಿಯಾ, ಯುನೈಟೆಡ್‌ ಅರಬ್‌ ಎಮಿರೇಟ್ಸ್‌, ಕಜಕಸ್ತಾನ, ಹಾಂಕಾಂಗ್‌, ಜಪಾನ್‌ ದೇಶಗಳ ಸ್ಪರ್ಧಿಗಳು ಹೊಂದಿರುವಷ್ಟು ಪ್ರಾವೀಣ್ಯತೆ ಮತ್ತು ವೃತ್ತಿ ಕೌಶಲ ಭಾರತದ ಸ್ಪರ್ಧಿಗಳಲ್ಲಿ ಇಲ್ಲ. ನಮ್ಮಲ್ಲಿನ ಸೈಕ್ಲಿಸ್ಟ್‌ಗಳ ಸಾಮರ್ಥ್ಯವನ್ನು ಹೆಚ್ಚಿಸುವ ಸಲುವಾಗಿ ಭಾರತ ಸರ್ಕಾರ ಟೂರ್ನಿ ಆರಂಭಕ್ಕೆ ಹಲವು ತಿಂಗಳುಗಳು ಮೊದಲೇ ತರಬೇತಿ ಕೊಡಿಸಲು ವ್ಯವಸ್ಥೆ ಮಾಡುತ್ತಿದೆ.

ಅಕ್ಟೋಬರ್‌ನಲ್ಲಿ ನವದೆಹಲಿಯಲ್ಲಿ ನಡೆಯಲಿರುವ ಏಷ್ಯಾ ಕಪ್‌ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ಗೆ ಭಾರತ ತಂಡವನ್ನು ಆಯ್ಕೆ ಮಾಡಲು ಪಟಿಯಾಲದ ನ್ಯಾಷನಲ್‌ ಇನ್‌ಸ್ಟಿಟ್ಯೂಟ್ ಆಫ್‌ ಸ್ಪೋರ್ಟ್ಸ್‌ನಲ್ಲಿ ಟ್ರಯಲ್ಸ್‌ ನಡೆಯುತ್ತಿದೆ. ರೋಡ್‌ ವಿಭಾಗದಲ್ಲಿ ಉತ್ತರ ಕರ್ನಾಟಕದ ಸಂತೋಷ ಕುರಣಿ, ಸಂದೇಶ ಉಪ್ಪಾರ ಮತ್ತು ಕೃಷ್ಣ ನಾಯ್ಕೋಡಿ, ಟ್ರ್ಯಾಕ್‌ ವಿಭಾಗದಲ್ಲಿ ರಾಜು ಭಾಟಿ ಮತ್ತು ಮೇಘಾ ಗೂಗಾಡೆ ಇದ್ದಾರೆ.

ADVERTISEMENT

ಶಿಬಿರದಲ್ಲಿ ಭಾರತದ ಒಟ್ಟು 12 ಸೈಕ್ಲಿಸ್ಟ್‌ಗಳು ಇದ್ದಾರೆ. ಹರಿಯಾಣ, ರೈಲ್ವೈಸ್‌, ರಾಜಸ್ಥಾನ ಮತ್ತು ಏರ್‌ಫೋರ್ಸ್‌ನ ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ. ಆದ್ದರಿಂದ ಈಗ ಸ್ಪರ್ಧೆಯೂ ಹೆಚ್ಚಿದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ತಲಾ ಎಂಟು ಪದಕಗಳನ್ನು ಜಯಿಸಿರುವ ಕೃಷ್ಣ ನಾಯ್ಕೋಡಿ ಸೇರಿದಂತೆ ಇತರ ಇಬ್ಬರು ಸ್ಪರ್ಧಿಗಳು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸ ಹೊಂದಿದ್ದಾರೆ.

ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಗುಬ್ಬೇವಾಡದ ಕೃಷ್ಣ ಅವರು 2014ರಲ್ಲಿ ಕಜಕಸ್ತಾನದಲ್ಲಿ ನಡೆದ ಏಷ್ಯನ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಪದಕ ಜಯಿಸಿದ್ದರು. ಅದೇ ವರ್ಷ ಟ್ರ್ಯಾಕ್ ವಿಭಾಗದ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಪಡೆದಿದ್ದರು.

ಜಮಖಂಡಿಯ ಕುಂಬಾಳಹಳ್ಳಿಯ ಸಂತೋಷ ಕೂಡ ಹಲವಾರು ಪದಕಗಳನ್ನು ಕೊರಳಿಗೇರಿಸಿಕೊಂಡಿದ್ದಾರೆ. 2012ರಲ್ಲಿ ಪುಣೆಯಲ್ಲಿ ನಡೆದ ಎಂ.ಟಿ.ಬಿ. ಗುಡ್ಡಗಾಡು ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಪಾಲ್ಗೊಂಡಿದ್ದರು. ನಂತರದ ವರ್ಷ ತಿರುವನಂತಪುರದಲ್ಲಿ ನಡೆದ 15 ಕಿ.ಮೀ. ಗುಡ್ಡಗಾಡು ಸ್ಪರ್ಧೆಯಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದರು. ಟೈಮ್‌ ಟ್ರಯಲ್ಸ್‌ ವಿಭಾಗದಲ್ಲಿ ಈ ಸಾಧನೆ ಮಾಡಿದ್ದರು.

2014ರಲ್ಲಿ ಜಮಖಂಡಿಯಲ್ಲಿ ಜರುಗಿದ್ದ ರಾಷ್ಟ್ರೀಯ ಸೈಕ್ಲಿಂಗ್‌ನ 17 ವರ್ಷದ ಒಳಗಿನವರ ವಿಭಾಗದಲ್ಲಿ ಕಂಚು, 2015ರಲ್ಲಿ ಪುಣೆಯಲ್ಲಿ ನಡೆದ 30 ಕಿ.ಮೀ. ಸ್ಪರ್ಧೆಯಲ್ಲಿ ಬೆಳ್ಳಿ, ಅದೇ ವರ್ಷ ಟೈಮ್‌ ಟ್ರಯಲ್ಸ್‌ ಸ್ಪರ್ಧೆಯಲ್ಲಿ ಬೆಳ್ಳಿ ಪಡೆದುಕೊಂಡಿದ್ದರು. ಹೋದ ವರ್ಷ ನಡೆದ ರಾಷ್ಟ್ರೀಯ ಟೂರ್ನಿಯ ಟ್ರ್ಯಾಕ್‌ ಸ್ಪರ್ಧೆಯಲ್ಲಿ ಕಂಚು ಜಯಿಸಿದ್ದರು.

ಹೀಗೆ ಪ್ರತಿ ವರ್ಷ ಒಂದಲ್ಲಾ ಒಂದು ಟೂರ್ನಿಗಳಲ್ಲಿ ಪದಕಗಳನ್ನು ಗೆಲ್ಲುತ್ತಿರುವ ಸಂತೋಷ ಈ ಬಾರಿಯೂ ಭಾರತ ತಂಡದಲ್ಲಿ ಸ್ಥಾನಕ್ಕಾಗಿ ಕಸರತ್ತು ನಡೆಸುತ್ತಿದ್ದಾರೆ. ಫಿಟ್‌ನೆಸ್‌ಗೆ ಹೆಚ್ಚು ಒತ್ತು ಕೊಡುತ್ತಿದ್ದಾರೆ.

‘ಏಷ್ಯಾ ಕಪ್‌ ಸೈಕ್ಲಿಂಗ್‌ನಲ್ಲಿ ಭಾರತದ ಸ್ಪರ್ಧಿಗಳು ಉತ್ತಮ ಸಾಮರ್ಥ್ಯ ತೋರಬೇಕು ಎನ್ನುವ ಕಾರಣಕ್ಕೆ ಟೂರ್ನಿ ಆರಂಭಕ್ಕೆ ಸಾಕಷ್ಟು ಸಮಯ ಇರುವಾಗಲೇ ತರಬೇತಿ ಆರಂಭಿದ್ದೇವೆ. ನಿತ್ಯ 80ರಿಂದ 100 ಕಿ.ಮೀ. ಸೈಕಲ್‌ ತುಳಿದು ಅಭ್ಯಾಸ ಮಾಡುತ್ತಿದ್ದೇವೆ. ಬೆಳಿಗ್ಗೆ ಐದು ಗಂಟೆಗೆ ಅಭ್ಯಾಸ ಆರಂಭವಾಗುತ್ತದೆ. ಆಯಾ ದಿನದ ನಿಗದಿತ ಗುರಿ ಮುಗಿದ ಬಳಿಕವಷ್ಟೇ ಅಭ್ಯಾಸ ಮುಗಿಸುತ್ತೇವೆ’ ಎಂದು ಸಂತೋಷ ಕುರಣಿ ‘ಪ್ರಜಾವಾಣಿ’ಗೆ ತಿಳಿಸಿದರು. ಶಿಬಿರದಲ್ಲಿರುವ ಸೈಕ್ಲಿಸ್ಟ್‌ಗಳಿಗೆ ಏರ್‌ ಫೋರ್ಸ್‌ನ ಸೈಕ್ಲಿಂಗ್ ಕೋಚ್‌ ಚೆರಿನ್‌ ತರಬೇತಿ ನೀಡುತ್ತಿದ್ದಾರೆ.

ಹಾವೇರಿ ಜಿಲ್ಲೆಯ ಶಿಗ್ಗಾವಿಯ ಸಂದೇಶ ಉಪ್ಪಾರ ಎರಡು ವರ್ಷಗಳ ಹಿಂದೆ ಪುಣೆಯಲ್ಲಿ ನಡೆದಿದ್ದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು ಮೂರು ಪದಕಗಳನ್ನು ಜಯಿಸಿದ್ದರು.

2013ರಲ್ಲಿ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಆರಂಭಿಸಿದ ಸಂದೇಶ ಎರಡೇ ವರ್ಷಗಳಲ್ಲಿ ಮೊದಲ ಪದಕ ಜಯಿಸಿದರು. ಹೋದ ವರ್ಷ ಲೂಧಿಯಾನದಲ್ಲಿ ಜರುಗಿದ ಸ್ಪರ್ಧೆಯ ವೈಯಕ್ತಿಕ ಪರ್ಸ್ಯೂಟ್‌ ವಿಭಾಗದಲ್ಲಿ ಕಂಚು ಪಡೆದಿದ್ದರು.

ದೆಹಲಿಯಲ್ಲಿ ಹೋದವರ್ಷ ನಡೆದ ಏಷ್ಯಾ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ ತಂಡ ವಿಭಾಗದಲ್ಲಿ ಭಾರತ ಕಂಚು ಜಯಿಸಿತ್ತು. ಆಗ ಸಂದೇಶ ತಂಡದಲ್ಲಿದ್ದರು.

‘ಎನ್‌ಐಎಸ್‌ನಲ್ಲಿ ಗುಣಮಟ್ಟದ ಆಹಾರ ಕೊಡುತ್ತಾರೆ. ಹಸಿ ತರಕಾರಿ, ಕಾಳು, ಪೌಷ್ಠಿಕಾಂಶ ಆಹಾರ ನೀಡುತ್ತಾರೆ. ಜೊತೆಗೆ ನಾವೂ ಫಿಟ್‌ನೆಸ್‌ಗೆ ಒತ್ತು ಕೊಟ್ಟು ಅಭ್ಯಾಸ ಮಾಡಬೇಕು. ನಿತ್ಯ ಒಂದೇ ರೀತಿಯ ದಿನಚರಿ ರೂಢಿಸಿಕೊಂಡರೆ ಪೆಡಲ್‌ ತುಳಿಯುವ ವೇಗ ಹೆಚ್ಚಿಸಿಕೊಳ್ಳಬಹುದು’ ಎಂದು ರೈಲ್ವೆಯಲ್ಲಿ ಉದ್ಯೋಗಿಯಾಗಿರುವ ಸಂದೇಶ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.