ADVERTISEMENT

ಆತ್ಮವಿಶ್ವಾಸದ ಕಡಲಲ್ಲಿ ಕೋಲಾರದ ವಿಶ್ವಾಸ್

​ಪ್ರಜಾವಾಣಿ ವಾರ್ತೆ
Published 29 ಮೇ 2016, 19:30 IST
Last Updated 29 ಮೇ 2016, 19:30 IST
ಆತ್ಮವಿಶ್ವಾಸದ ಕಡಲಲ್ಲಿ ಕೋಲಾರದ ವಿಶ್ವಾಸ್
ಆತ್ಮವಿಶ್ವಾಸದ ಕಡಲಲ್ಲಿ ಕೋಲಾರದ ವಿಶ್ವಾಸ್   

ಹದಿನಾರು ವರ್ಷಗಳ ಹಿಂದಿನ ಮಾತು. ಒಂದು ವಿದ್ಯುದಾಘಾತ ಆ ಬಾಲಕನ ಇಡೀ ಬದುಕನ್ನೇ ಕತ್ತಲಕೂಪಕ್ಕೆ ತಳ್ಳಿತ್ತು. ಕೆಲವೇ ಕ್ಷಣಗಳಲ್ಲಿ ನಡೆದ ಘಟನೆಯಲ್ಲಿ ಆ ಹುಡುಗ ತನ್ನ ಎರಡೂ ಕೈಗಳ ಜೊತೆಗೆ ತನ್ನ ತಂದೆಯನ್ನೂ ಕಳೆದುಕೊಂಡಿದ್ದ. ಆದರೆ ಆ ಹುಡುಗನ ಬದುಕುವ ಆಸೆ, ಆತ್ಮವಿಶ್ವಾಸವನ್ನು ಯಾವ ಹಂತದಲ್ಲಿಯೂ ಕಡಿಮೆಯಾಗಲಿಲ್ಲ. ಅದರ ಫಲವಾಗಿ ಇವತ್ತು ರಾಷ್ಟ್ರಮಟ್ಟದ ಈಜುಪಟುವಾಗಿ ಬೆಳೆದು ನಿಂತಿದ್ದಾನೆ.

ಆ ಹುಡುಗನ ಹೆಸರು ವಿಶ್ವಾಸ್. ಈಗ 26 ವರ್ಷ ವಯಸ್ಸು. ಕಷ್ಟನಷ್ಟಗಳ ನಡುವೆಯೂ ಬಿ.ಕಾಂ ಪದವಿ ಪೂರೈಸಿದ ನಂತರವೂ ನೌಕರಿ ಕೊಡಲು ಯಾರೂ ಮುಂದೆ ಬರದಿದ್ದಾಗ. ವಿಶ್ವಾಸ್ ಆಯ್ಕೆ ಮಾಡಿಕೊಂಡಿದ್ದು ಈಜು ಕ್ರೀಡೆಯನ್ನು. ಇದೀಗ ಅವರು ಪ್ಯಾರಾ ಈಜು ಕ್ರೀಡೆಯಲ್ಲಿ ಕರ್ನಾಟಕ ತಂಡದಲ್ಲಿ ಮಿಂಚುತ್ತಿದ್ದಾರೆ. ರಾಷ್ಟ್ರಮಟ್ಟದಲ್ಲಿ ಬೆಳ್ಳಿಪದಕ ಕೊರಳಿಗೇರಿಸಿಕೊಂಡ ವಿಶ್ವಾಸ್ ಕೆನಡಾದಲ್ಲಿ ನಡೆಯುವ ಅಂತರರಾಷ್ಟ್ರೀಯ ಪ್ಯಾರಾ ಈಜುಕೂಟಕ್ಕೆ  ಹೋಗಲು ಸಿದ್ಧತೆ ನಡೆಸಿದ್ದಾರೆ.

ಹತ್ತನೇ ವಯಸ್ಸಿಗೆ ಬಂದೆರಗಿದ ಆಘಾತ: ಕೋಲಾರದ ಮಧ್ಯಮ ವರ್ಗದ ಕುಟುಂಬದ ವಿಶ್ವಾಸ್‌ ಅವರ ಅಂದದ ಬಾಲ್ಯ ಕೂಡ ಎಲ್ಲ ಮಕ್ಕಳಂತೆಯೇ ಇತ್ತು. ಆದರೆ ಅದು ಅವರ ಹತ್ತನೇ ವಯಸ್ಸಿನಲ್ಲಿ ಮುರುಟಿತು. ಅವರ ತಂದೆ ಸತ್ಯನಾರಾಯಣ ಮೂರ್ತಿ ಅವರು  ಮನೆ ಕಟ್ಟಿಸುತ್ತಿದ್ದರು. ಮೊದಲ ಅಂತಸ್ತಿನ ಟೆರೆಸ್‌ಗೆ  ನೀರು ಹಾಕುತ್ತಿದ್ದ ವಿಶ್ವಾಸ್ ಕಾಲು ಜಾರಿ ಮನೆಯ ಮುಂದೆ ಹಾದು ಹೋಗಿದ್ದ ವಿದ್ಯುತ್ ತಂತಿಯ ಮೇಲೆ ಬಿದ್ದರು.

ಅವರನ್ನು ರಕ್ಷಿಸಲು ಧಾವಿಸಿದ ಸತ್ಯನಾರಾಯಣ ರಾವ್‌ ಕಟ್ಟಿಗೆಯಿಂದ ವಿದ್ಯುತ್ ತಂತಿಯನ್ನು ಕಿತ್ತು ಹಾಕುವ ಪ್ರಯತ್ನ ಮಾಡಿದರು. ಆದರೆ ತಂತಿಯಲ್ಲಿ ಪ್ರವಹಿಸುತ್ತಿದ್ದ ವಿದ್ಯುತ್ ಅವರನ್ನು ಬಲಿ ತೆಗೆದುಕೊಂಡಿತು. ಬಾಲಕ ವಿಶ್ವಾಸನ ಕೈಗಳು ಮುರುಟಿಹೋದವು. ತಾಯಿಯ ಆಸರೆಯಲ್ಲಿ ಬೆಳೆದ ವಿಶ್ವಾಸ್ ಬಾಯಿ ಮತ್ತು ಕಾಲುಗಳಿಂದ ಬರೆವಣಿಗೆ ಕಲಿತರು. ತೋಳು ಗಳಿಲ್ಲದಿದ್ದರೂ ತಮ್ಮ ಬದುಕಿನ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡು ಮುನ್ನುಗ್ಗಿದರು.

ಬಿ.ಕಾಂ ಪದವಿ ಪಡೆದರು. ಜೊತೆಗೆ ಟೈಪಿಂಗ್ ಮತ್ತು ಲೆಕ್ಕಪತ್ರ ನಿರ್ವಹಣೆಯನ್ನೂ ಕಲಿತರು. ತಮ್ಮ ಕುಟುಂಬಕ್ಕೆ ನೆರವಾಗಲು ಅವರಿಗೆ ಒಂದು ನೌಕರಿ ಬೇಕಾಗಿತ್ತು. ಹಲವೆಡೆ  ಸಂದರ್ಶನ ನೀಡಿದರು. ಆದರೆ  ಎಲ್ಲ ಕಡೆಯೂ ‘ಆಮೇಲೆ ತಿಳಿಸುತ್ತೇವೆ’ ಎಂಬ ಉತ್ತರ ಮಾತ್ರ ಸಿಕ್ಕಿತು. ಇದರಿಂದ ತೀವ್ರ ನಿರಾಸೆಗೊಂಡ ವಿಶ್ವಾಸ್‌ ಬದುಕಿಗೆ ತಿರುವು ನೀಡಿದ್ದು ಈಜು.

‘2012ರಲ್ಲಿ ಆಸ್ತಾ ಸ್ವಸಹಾಯ ಸಂಸ್ಥೆಯ ಟ್ರಸ್ಟಿ ಸುನಿಲ್ ಜೈನ್ ಅವರು ನನಗೆ ಈಜು ಆರಂಭಿಸುವಂತೆ ಸಲಹೆ ನೀಡಿದರು. ಕರ್ನಾಟಕ ಪ್ಯಾರಾ ಈಜು ಸಂಸ್ಥೆಯ ಉಪಾಧ್ಯಕ್ಷ ಮತ್ತು ಪ್ಯಾರಾ ಈಜುಪಟು ಸಿಂಧಿಯಾ ಅವರ ಪರಿಚಯವಾಯಿತು. ಅಲ್ಲಿಂದ ಈಜು ಕಲಿಯಲು ಆರಂಭಿಸಿದೆ. ಅಂತರರಾಷ್ಟ್ರೀಯ ಪ್ಯಾರಾ ಈಜುಪಟು ಶರತ್ ಗಾಯಕವಾಡ್ ಮತ್ತಿತರರು ಮಾಡುತ್ತಿದ್ದ ಸಾಧನೆಯಿಂದ ನಾನು ಕೂಡ ಉತ್ತೇಜಿತನಾದೆ’ ಎಂದು ವಿಶ್ವಾಸ್ ಹೇಳುತ್ತಾರೆ.

ಈಜಿನ ಜೊತೆಗೆ ಅವರು ನೃತ್ಯ ಮತ್ತು ಕರಾಟೆ ಕೂಡ ಅಭ್ಯಾಸ ಮಾಡಲಾರಂಭಿಸಿದರು. ಇದರಿಂದ ಅವರ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಿತು.  2014ರಲ್ಲಿ ಅವರು ರಾಷ್ಟ್ರೀಯ ಪ್ಯಾರಾ ಈಜು ಚಾಂಪಿಯನ್‌ಷಿಪ್‌ನ ಎಸ್‌–6 ವಿಭಾಗದಲ್ಲಿ ನಾಲ್ಕನೆ ಸ್ಥಾನ ಪಡೆದರು. ಬೆಳಗಾವಿಯಲ್ಲಿ 2015ರಲ್ಲಿ ರಾಷ್ಟ್ರೀಯ ಪ್ಯಾರಾ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕು ಬೆಳ್ಳಿ ಪದಕಗಳನ್ನು ಗೆದ್ದುಕೊಂಡರು. 

50 ಮೀಟರ್ಸ್ ಫ್ರೀಸ್ಟೈಲ್‌ (54.82ಸೆ), 100 ಮೀಟರ್ಸ್ ಬ್ಯಾಕ್‌ಸ್ಟ್ರೋಕ್ (2ನಿ, 12.87ಸೆ), ಬ್ಯಾಕ್‌ಸ್ಟ್ರೋಕ್‌ (2ನಿ 12.87ಸೆ), 100 ಮೀಟರ್ಸ್ ಬಟರ್‌ಫ್ಲೈ (2ನಿ, 6.47ಸೆ) ವಿಭಾಗಗಳಲ್ಲಿ ಅವರು ಉತ್ತಮ ಸಾಧನೆ ಮಾಡಿದರು. ಇದೇ ಆಗಸ್ಟ್‌ನಲ್ಲಿ ಕೆನಡಾದಲ್ಲಿ ನಡೆಯುವ ಅಂತರರಾಷ್ಟ್ರೀಯ ಪ್ಯಾರಾ ಈಜುಕೂಟಕ್ಕೆ ಹೋಗಲು ಅವರು ಸಿದ್ಧತೆ ನಡೆಸಿದ್ದಾರೆ.  ಅವರಿಗೆ ‘ಬುಕ್ ಎ ಸ್ಮೈಲ್’ ಸಂಸ್ಥೆ  ಪ್ರಾಯೋಜಕತ್ವ ನೀಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.