ADVERTISEMENT

ಟೇಕ್ವಾಂಡೊ ಉತ್ತರ ಕರ್ನಾಟಕದ ಭರವಸೆಯ ಹೆಜ್ಜೆ...

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2017, 19:30 IST
Last Updated 8 ಅಕ್ಟೋಬರ್ 2017, 19:30 IST
ಟೇಕ್ವಾಂಡೊ ಉತ್ತರ ಕರ್ನಾಟಕದ ಭರವಸೆಯ ಹೆಜ್ಜೆ...
ಟೇಕ್ವಾಂಡೊ ಉತ್ತರ ಕರ್ನಾಟಕದ ಭರವಸೆಯ ಹೆಜ್ಜೆ...   

ಯಾವುದೇ ಕ್ರೀಡೆ ಬೆಳೆಯಬೇಕಾದರೆ ಹೆಚ್ಚು ಟೂರ್ನಿಗಳು ನಡೆಯಬೇಕು. ಆಗ ಸಾಕಷ್ಟು ಪಂದ್ಯಗಳಲ್ಲಿ ಆಡಲು ಅವಕಾಶ ಲಭಿಸುತ್ತದೆ. ಇದರಿಂದ ಕ್ರೀಡೆಯೂ ಸುಲಭವಾಗಿ ಬೆಳೆಯುತ್ತದೆ...’

ಧಾರವಾಡದಲ್ಲಿ ಹೋದ ವಾರ ನಡೆದ ಜವಾಹರ ನವೋದಯ ವಿದ್ಯಾಲಯಗಳ ರಾಷ್ಟ್ರ ಮಟ್ಟದ ಟೇಕ್ವಾಂಡೊ ಚಾಂಪಿಯನ್‌ಷಿಪ್‌ನಲ್ಲಿ ರೆಫರಿಯಾಗಿ ಬಂದಿದ್ದ ವಿನಾಯಕ ಎಸ್‌. ಲಮಾಣಿ ಹೀಗೆ ‘ಪ್ರಜಾವಾಣಿ’ ಜೊತೆ ಮಾತು ಆರಂಭಿಸಿದರು. ಈ ಕ್ರೀಡೆ ಉತ್ತರ ಕರ್ನಾಟಕದಲ್ಲಿ ಹೇಗೆ ಬೆಳವಣಿಗೆಯಾಗುತ್ತಿದೆ ಎನ್ನುವುದರ ಬಗ್ಗೆ ಅವರು ವಿವರಿಸುತ್ತಾ ಹೋದರು.

‘ಧಾರವಾಡ ಮತ್ತು ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಇರುವ ಜವಾಹರ ನವೋದಯ ವಿದ್ಯಾಲಯಗಳು ಟೇಕ್ವಾಂಡೊ ಕ್ರೀಡೆಗೆ ಹೆಚ್ಚು ಒತ್ತು ನೀಡುತ್ತಿವೆ. ವಿವಿಧ ವಯೋಮಾನಗಳ ಕ್ರೀಡಾಪಟುಗಳಿಗೆ ರಾಷ್ಟ್ರೀಯ ಟೂರ್ನಿಗಳ ಮೊದಲು ತರಬೇತಿ ಶಿಬಿರ ಆಯೋಜಿಸುತ್ತವೆ. ಇದರಿಂದ ಈ ಕ್ರೀಡೆಯ ಬೆಳವಣಿಗೆ ಹೆಚ್ಚಾಗಿದೆ. ವೃತ್ತಿಪರತೆ ಬರುತ್ತಿದೆ’ ಎಂದರು.

ADVERTISEMENT

ಮತ್ತೆ ಸಮಗ್ರ ಪ್ರಶಸ್ತಿ

ಮೂರು ದಿನ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಲಖನೌ, ಹೈದರಾಬಾದ್‌, ಪಟ್ನಾ. ಪುಣೆ, ಶಿಲ್ಲಾಂಗ್‌, ಹೈದರಾಬಾದ್‌ ಸೇರಿದಂತೆ ಒಟ್ಟು ಎಂಟು ವಲಯಗಳ ಸ್ಪರ್ಧಿಗಳು ಭಾಗವಹಿಸಿದ್ದರು.

ಕರ್ನಾಟಕ, ಕೇರಳ, ತೆಲಂಗಾಣ ಮತ್ತು ಪುದುಚೇರಿಯ ಕ್ರೀಡಾಪಟುಗಳು ಹೈದರಾಬಾದ್ ವಲಯವನ್ನು ಪ್ರತಿನಿಧಿಸಿದ್ದರು. ಧಾರವಾಡ, ಬೆಳಗಾವಿ ಸ್ಪರ್ಧಿಗಳೇ ಅಧಿಕವಾಗಿದ್ದ ಹೈದರಾಬಾದ್ ವಲಯದ ತಂಡ ಈ ಬಾರಿಯೂ ಸಮಗ್ರ ಪ್ರಶಸ್ತಿ ಪಡೆದುಕೊಂಡಿತು. ಹೋದ ವರ್ಷ ಕೂಡ ಇದೇ ವಲಯ ಚಾಂಪಿಯನ್‌ ಆಗಿತ್ತು.

ಧಾರವಾಡದ ಟೇಕ್ವಾಂಡೊ ಪಟುಗಳಾದ ಪಿ.ಎಂ. ನಿಖಿಲ್‌, ಕಲ್ಮೇಶ್ವರ, ವಿನಯ್‌ ಬಸವರೆಡ್ಡಿ, ನಯನ್‌ ಚೌಹಾಣ, ಆಯುಷ್‌ ಪಟೇಲ್‌, ಕಿರಣ್‌, ಎಂ.ಕೆ. ಹರ್ಷಿತ್‌, ಮಾಲತೇಶ, ಲಾವಣ್ಯಲತಾ ಚಿನ್ನದ ಪದಕಗಳನ್ನು ಜಯಿಸಿದರು. 14, 17 ಮತ್ತು 19 ವರ್ಷದ ಒಳಗಿನವರಿಗೆ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು 600 ಕ್ರೀಡಾಪಟುಗಳು ಭಾಗವಹಿಸಿದ್ದರು. ಇಲ್ಲಿ ಉತ್ತಮ ಪ್ರದರ್ಶನ ನೀಡಿದ ಸ್ಪರ್ಧಿಗಳು ಸ್ಕೂಲ್‌ ಗೇಮ್ಸ್‌ ಫೆಡರೇಷನ್‌ ಆಫ್‌ ಇಂಡಿಯಾ ಆಯೋಜಿಸುವ ಶಾಲಾ ಕ್ರೀಡಾಕೂಟದಲ್ಲಿ ಆಡಲು ಅರ್ಹತೆ ಪಡೆದುಕೊಂಡರು.

ಮೂರನೇ ಬಾರಿ ಪ್ರಶಸ್ತಿ:
2014ರಲ್ಲಿ ಧಾರವಾಡದಲ್ಲಿ ನಡೆದಿದ್ದ ಟೂರ್ನಿಯಲ್ಲಿ ಹೈದರಾಬಾದ್‌ ವಲಯ ಚಾಂಪಿಯನ್‌ ಆಗಿತ್ತು. ನಂತರ 2016ರಲ್ಲಿ ಭೋಪಾಲ್‌ನಲ್ಲಿ ಸಮಗ್ರ ಪ್ರಶಸ್ತಿ ಜಯಿಸಿತ್ತು. ಈಗ ಮೂರನೇ ಬಾರಿ ಪ್ರಶಸ್ತಿಯ ಸಾಧನೆ ಮಾಡಿತು.

ಹೈದರಾಬಾದ್ ವಲಯ ಈ ಬಾರಿ 15 ಚಿನ್ನ, 10 ಬೆಳ್ಳಿ ಮತ್ತು 15 ಕಂಚಿನ ಪದಕಗಳನ್ನು ಜಯಿಸಿತು. ಒಟ್ಟು 37 ಪದಕಗಳನ್ನು ಗೆದ್ದ ಲಖನೌ ವಲಯದವರು ರನ್ನರ್ಸ್‌ ಅಪ್‌ ಸ್ಥಾನ ಪಡೆದರು.

‘ಈ ಕ್ರೀಡೆಯಲ್ಲಿ ಮುಂಚೂಣಿಯಲ್ಲಿರುವ ಇರಾನ್‌, ದಕ್ಷಿಣ ಕೊರಿಯಾದ ಸ್ಪರ್ಧಿಗಳು ವಿಶ್ವಮಟ್ಟದಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಅವರಿಗೆ ಸರಿಸಾಟಿಯಾಗಿ ಬೆಳೆಯಲು ನಮ್ಮ ಕ್ರೀಡಾಪಟುಗಳ ವೃತ್ತಿಪರತೆ ಹೆಚ್ಚಾಗಬೇಕು. ಏಷ್ಯನ್‌ ಕ್ರೀಡಾಕೂಟ, ಏಷ್ಯನ್‌ ಚಾಂಪಿಯನ್‌ಷಿಪ್‌ ಮತ್ತು ಕಾಮನ್‌ವೆಲ್ತ್‌ ಕ್ರೀಡಾಕೂಟಗಳಲ್ಲಿ ಕಠಿಣ ಸವಾಲು ಎದುರಿಸುವ ಸಾಮರ್ಥ್ಯ ಗಳಿಸಿಕೊಳ್ಳಲು ಅದಕ್ಕೆ ತಕ್ಕ ತರಬೇತಿ ಅಗತ್ಯವಿದೆ’ ಎಂದು ವಿನಾಯಕ ಹೇಳಿದರು.

‘ಫಿಟ್‌ನೆಸ್‌ ಮುಖ್ಯವಾಗಿರುವ ಟೇಕ್ವಾಂಡೊಕ್ಕೆ ಆಹಾರದಲ್ಲಿಯೂ ಕಟ್ಟುನಿಟ್ಟು ಬೇಕಾಗುತ್ತದೆ. ನಿತ್ಯ ಬೆಳಿಗ್ಗೆ ಕನಿಷ್ಠ ನಾಲ್ಕು ಗಂಟೆ ದೈಹಿಕ ಕಸರತ್ತು ಮಾಡಬೇಕು. ಪೌಷ್ಠಿಕ ಆಹಾರ ಸೇವಿಸಬೇಕು. ಮಣಿಪುರ, ಶಿಲ್ಲಾಂಗ್‌, ಬಿಹಾರದ ಸ್ಪರ್ಧಿಗಳು ಉತ್ತಮ ಸಾಮರ್ಥ್ಯ ಹೊಂದಿದ್ದಾರೆ. ಅವರನ್ನೆಲ್ಲಾ ಸೋಲಿಸಿ ಹೈದರಾಬಾದ್‌ ವಲಯದವರು ಪ್ರಶಸ್ತಿ ಜಯಿಸಿದ್ದರಿಂದ ಉತ್ತರ ಕರ್ನಾಟಕದಲ್ಲಿ ಹೊಸ ಭರವಸೆ ಮೂಡಿದೆ’ ಎಂದ ಇನ್ನೊಬ್ಬ ರೆಫರಿ ರಾಘವ ಪೂಜಾರಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.