ADVERTISEMENT

ಪುಟಾಣಿಗಳಿಗೆ ಹೊರೆಯಾಗಿರುವ ಮನೆಪಾಠ

ಎ.ಎಂ.ಸುರೇಶ
Published 19 ಅಕ್ಟೋಬರ್ 2014, 19:30 IST
Last Updated 19 ಅಕ್ಟೋಬರ್ 2014, 19:30 IST

ಪ್ರಕರಣ 1
ಇನ್ನೂ 5 ವರ್ಷ ಪೂರ್ಣಗೊಳ್ಳದ ಯುಕೆಜಿಯ ತೇಜಸ್ವಿನಿ ಬೆಳಿಗ್ಗೆ 8.30ಕ್ಕೆ ಶಾಲೆಗೆ ಹೊರಡುತ್ತಾಳೆ. ಮಧ್ಯಾಹ್ನ 3ರ ನಂತರ ಮನೆಗೆ ಬರುವ ಅವಳು ಊಟ ಮಾಡಿ 5 ಗಂಟೆಗೆ ಮನೆ ಪಾಠಕ್ಕೆ ಹೋಗುತ್ತಾಳೆ. 7 ಗಂಟೆಗೆ ಮನೆಗೆ ಬರುತ್ತಿದ್ದಂತೆಯೇ ನಿದ್ದೆ ಆವರಿಸಿರುತ್ತದೆ. ಸರಿಯಾಗಿ ಊಟವನ್ನೂ ಮಾಡುವುದಿಲ್ಲ. ಬಲವಂತಕ್ಕೆ ಸ್ವಲ್ಪ ತಿಂದರೂ, ಪೋಷಕರಿಗೆ ತೃಪ್ತಿ ಇಲ್ಲ. ಊಟ ಮಾಡದೆ ಮಲಗಿದೆಯಲ್ಲಾ ಎಂಬ ಸಂಕಟ ಪೋಷಕರನ್ನು ಕಾಡುತ್ತದೆ.

ಪ್ರಕರಣ 2
ಖಾಸಗಿ ಶಾಲೆಯೊಂದರಲ್ಲಿ ಕಲಿಯುತ್ತಿರುವ ಯುಕೆಜಿಯ ಅಶ್ವಿನಿ ವಯಸ್ಸು ನಾಲ್ಕೂವರೆ ವರ್ಷ. ತಂದೆ ಖಾಸಗಿ ಸಂಸ್ಥೆಯ ಉದ್ಯೋಗಿ. ತಾಯಿ ಗೃಹಿಣಿ. ಇವರಿಗೆ 3 ವರ್ಷದ ಮತ್ತೊಂದು ಮಗು ಇದ್ದು, ಅದೂ ಶಾಲೆಗೂ ಹೋಗುತ್ತದೆ. ತಂದೆಗೆ ಕಚೇರಿಯಲ್ಲಿ ವಿಪರೀತ ಕೆಲಸ. ಮಗುವಿಗೆ ಪಾಠ ಹೇಳಿಕೊಡಲು ಸಮಯ ಇರುವುದಿಲ್ಲ. ತಾಯಿಗೆ ಮನೆ ನಿರ್ವಹಣೆ, ಮತ್ತೊಂದು ಮಗುವನ್ನು ನೋಡಿಕೊಳ್ಳುವುದೇ ಕಷ್ಟ. ತಾಯಿಗೂ ಸಮಯ ಇಲ್ಲದ ಕಾರಣ ಅಶ್ವಿನಿಯನ್ನು ಮನೆ ಪಾಠಕ್ಕೆ ಕಳಿಸುತ್ತಾರೆ. ಬೆಳಿಗ್ಗೆ ಶಾಲೆ, ಮಧ್ಯಾಹ್ನದ ನಂತರ ಮನೆಪಾಠಕ್ಕೆ ಹೋಗುವ ಅಶ್ವಿನಿಗೆ ಆಟ ಆಡಲು, ಸ್ನೇಹಿತರೊಂದಿಗೆ ಬೆರೆಯಲು ಸಮಯ ಸಿಗುತ್ತಿಲ್ಲ.

ಪ್ರಕರಣ 3
ಅಪ್ಪ - ಅಮ್ಮ ಇಬ್ಬರೂ ಕೆಲಸಕ್ಕೆ ಹೋಗುತ್ತಿರುವುದರಿಂದ 5 ವರ್ಷದ ಶ್ರುತಿಯನ್ನು ಅಜ್ಜಿ - ತಾತನ ಮನೆಯಲ್ಲಿ ಬಿಟ್ಟಿದ್ದಾರೆ. ಶಾಲೆಗೆ ಕರೆದುಕೊಂಡು ಹೋಗುವುದು, ಬರುವುದು ತಾತನ ಜವಾಬ್ದಾರಿ. ಮನೆಯಲ್ಲಿ ಹೋಂವರ್ಕ್ ಮಾಡಿಸಲು, ಹೇಳಿಕೊಡಲು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಶಾಲೆಯ ಶಿಕ್ಷಕಿಯ ಬಳಿಗೇ ಮಗುವನ್ನು ಮನೆ ಪಾಠಕ್ಕೆ ಕಳಿಸಲಾಗುತ್ತಿದೆ.

ಬೆಳಿಗ್ಗೆ 8ಕ್ಕೆ ಶಾಲೆಗೆ ಹೋಗುವ ಮಗು, ಮಧ್ಯಾಹ್ನ ಶಾಲೆಯಿಂದ ಬಂದ ಕೂಡಲೇ ಊಟ ಮಾಡಿ ಮನೆಪಾಠಕ್ಕೆ ಹೋಗಲು ಸಿದ್ಧವಾಗುತ್ತದೆ. ಮನೆಯಲ್ಲಿ ಎಲ್ಲರೊಂದಿಗೆ ಬೆರೆಯುತ್ತಾ, ಸಂತೋಷದಿಂದ ಆಟ ಆಡಲು, ಊಟ ಮಾಡಲು ಮಗುವಿಗೆ ಹೆಚ್ಚು ಸಮಯ ಸಿಗುತ್ತಿಲ್ಲ. ಅಪ್ಪ-ಅಮ್ಮ ಕೆಲಸಕ್ಕೆ ಹೋಗುವುದರಿಂದ ಅವರಿಗೂ ಮಗುವಿನ ಬೆಳವಣಿಗೆಯತ್ತ ಹೆಚ್ಚಿನ ಕಾಳಜಿ ವಹಿಸಲು ಸಾಧ್ಯವಾಗುತ್ತಿಲ್ಲ.

ಮೇಲೆ ಹೆಸರಿಸಿರುವ ನಿದರ್ಶನಗಳು ಕೇವಲ ಸಾಂಕೇತಿಕವಾದವು. ಇಂತಹ ಸಾವಿರಾರು ಪ್ರಕರಣಗಳನ್ನು ನಾವು ಕಾಣಬಹುದು. ನಗರ ಜೀವನದ ಒತ್ತಡದಿಂದಾಗಿ ಬಹುತೇಕ ಪೋಷಕರಿಗೆ ತಮ್ಮ ಮಕ್ಕಳತ್ತ ಸರಿಯಾಗಿ ಗಮನಹರಿಸಲು ಆಗುತ್ತಿಲ್ಲ. ನಗರದಲ್ಲಿ ಜೀವನ ಸಾಗಿಸಬೇಕಾದರೆ ಇಬ್ಬರೂ ದುಡಿಯಲೇಬೇಕಾದ ಅನಿವಾರ್ಯ. ಮಕ್ಕಳೊಂದಿಗೆ ಹೆಚ್ಚಾಗಿ ಬೆರೆಯಲು ಸಮಯ ಇರುವುದಿಲ್ಲ. ಬೆಳಿಗ್ಗೆ ಸ್ಕೂಲು, ಮಧ್ಯಾಹ್ನದ ನಂತರ ಮನೆಪಾಠ ಎಂದು ಹೆಚ್ಚಿನ ಸಮಯವನ್ನು ಮಕ್ಕಳು ಮನೆಯ ಹೊರಗೆ ಕಳೆಯುತ್ತಾರೆ.

ಇದು ಮಕ್ಕಳ ಮನಸ್ಸಿನ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಬಹುತೇಕ ಪೋಷಕರು ಅರಿತಂತೆ ಕಾಣುವುದಿಲ್ಲ. ಒಂದು ವೇಳೆ ಗೊತ್ತಿದ್ದರೂ, ಪರಿಸ್ಥಿತಿಯ ಅನಿವಾರ್ಯದಿಂದಾಗಿ ಅಸಹಾಯಕ ಸ್ಥಿತಿಯಲ್ಲಿ ಇರಬಹುದು. ಸ್ಪರ್ಧೆ ಎದುರಿಸಲು ಮಗುವನ್ನು ಈಗಿನಿಂದಲೇ ಸಜ್ಜುಗೊಳಿಸುತ್ತಿದ್ದೇವೆ ಎಂಬ ಭ್ರಮೆಯಲ್ಲಿ ಇರುವ ಪೋಷಕರು ನಮ್ಮ ನಡುವೆ ಇದ್ದಾರೆ. ಅಂತಹವರಿಗೆ ಮಗುವಿನ ಮಾನಸಿಕ ಸ್ಥಿತಿಯ ಬಗ್ಗೆ ಸರಿಯಾದ ಅರಿವು ಇದ್ದಂತೆ ಕಾಣುವುದಿಲ್ಲ.

ಚಿಕ್ಕ ಮಕ್ಕಳಿಗೆ ಹೋಂವರ್ಕ್, ಮನೆಪಾಠದ ಅಗತ್ಯವೇ ಇಲ್ಲ. ಶಾಲೆಯಲ್ಲಿ ಹೇಳಿಕೊಡುವ ಪಠ್ಯವನ್ನೇ ಹೋಂವರ್ಕ್‌ಗೆ ನೀಡುವ ಬದಲು, ಪಠ್ಯೇತರ ಚಟುವಟಿಕೆಗಳಲ್ಲಿ ಮಗುವನ್ನು ತೊಡಗಿಸಬೇಕು. ಇದರಿಂದ ಮಗುವಿನ ಬೌದ್ಧಿಕ ವಿಕಸನ, ಸಂವಹನ ಕೌಶಲ, ಆತ್ಮವಿಶ್ವಾಸವೃದ್ಧಿಗೆ ಅನುಕೂಲವಾಗಲಿದೆ ಎನ್ನುತ್ತಾರೆ ಮನಶಾಸ್ತ್ರಜ್ಞರೂ ಆದ ವಿಶ್ರಾಂತ ಕುಲಪತಿ ಡಾ. ಎಂ.ಎಸ್. ತಿಮ್ಮಪ್ಪ.
ಹೋಂವರ್ಕ್, ಮನೆಪಾಠದಿಂದ ಮೆದುಳಿಗೆ ಭಾರವಾಗುತ್ತದೆ. ಮಾನಸಿಕ ಒತ್ತಡದಿಂದ ಖಿನ್ನತೆಗೆ ಒಳಗಾಗುತ್ತಾರೆ.

ಉತ್ಸಾಹ ಕಳೆದುಕೊಳ್ಳುತ್ತಾರೆ. ಸಂಬಂಧಿಕರು, ಬೇರೆಯವರೊಂದಿಗೆ ಬೆರೆಯುವುದಿಲ್ಲ. ಇದೆಲ್ಲವೂ ಮಗುವಿನ ಬೆಳವಣಿಗೆ ಮೇಲೆ ಪರಿಣಾಮ ಬೀರಲಿದೆ. ಶಾಲೆ, ಮನೆಪಾಠದಿಂದಲೇ ಮಗು ಎಲ್ಲವನ್ನೂ ಕಲಿಯುತ್ತದೆ ಎಂಬುದು ತಪ್ಪು ಕಲ್ಪನೆ ಎಂಬುದು ಅವರ ವಿಶ್ಲೇಷಣೆ. ಶಾಲೆಯಲ್ಲಿ ಹೇಳಿಕೊಟ್ಟ ಪಠ್ಯವನ್ನೇ ಹೋಂವರ್ಕ್‌ಗೆ ನೀಡುವುದು, ಮನೆಪಾಠದಲ್ಲಿ ಹೇಳಿಕೊಡುವುದರಿಂದ ಪುನರಾವರ್ತನೆ ಅಗುತ್ತದೆ. ಅದರ ಬದಲು ಪಠ್ಯೇತರ ಚಟುವಟಿಕೆಯಲ್ಲಿ ತೊಡಗಲು ಅವಕಾಶ ನೀಡಬೇಕು.

ಯಾವುದಾದರೂ ಒಂದು ವಿಷಯವನ್ನು ನೀಡಿ, ಅದರ ಬಗ್ಗೆ ಪೋಷಕರು, ಸ್ನೇಹಿತರೊಂದಿಗೆ ಚರ್ಚೆ ಮಾಡಿ ಮರುದಿನ ತನಗೆ ಅನಿಸಿದ್ದನ್ನು ತರಗತಿಯಲ್ಲಿ ಹೇಳುವಂತೆ ಮಕ್ಕಳಿಗೆ ತಿಳಿಸಬೇಕು. ಇದರಿಂದ ಸಂವಹನ ಕೌಶಲ, ಕುಶಲತೆ, ಕ್ರಿಯಾಶೀಲತೆ ಬೆಳೆಯುತ್ತದೆ. ತನ್ನನ್ನು ತಾನು ಕಂಡುಕೊಳ್ಳಲು, ತಿಳಿವಳಿಕೆ, ಧೋರಣೆಗಳನ್ನು ರೂಪಿಸಿಕೊಳ್ಳಲು ಅನುಕೂಲವಾಗುತ್ತದೆ. ಕಂಠಪಾಠ ಮಾಡಿಸುವುದರಿಂದ ಜ್ಞಾಪಕ ಇಟ್ಟುಕೊಳ್ಳುತ್ತಾರೆ ಅಷ್ಟೆ. ಅದು ನಿಜವಾದ ಗಟ್ಟಿಕಲಿಕೆ ಅಲ್ಲ. ಕ್ರಿಯಾಶೀಲತೆ ಇರುವುದಿಲ್ಲ. ಅದು ಕೇವಲ ಪರೀಕ್ಷೆಗೆ ಓದುವಂತಹದು. ಬದುಕಿಗಾಗಿ ಕಲಿಯುವಂತಹದ್ದಲ್ಲ. ಇಂತಹ ಶಿಕ್ಷಣ ಪಡೆದರೆ, ಓದಿದ ನಂತರ ಬದುಕಿಗಾಗಿ ಮತ್ತೆ ಕಲಿಯ ಬೇಕಾಗುತ್ತದೆ ಎನ್ನುತ್ತಾರೆ ತಿಮ್ಮಪ್ಪ.

ಆರು ಗಂಟೆ ಸಾಕು: ಬೋಧನೆಗೆ ಆರು ಗಂಟೆ ಸಾಕು. ಅದರ ಮೇಲೆ ಕಲಿಸಬಾರದು. ಕುಶಲತೆ ಇತ್ಯಾದಿ ಚಟುವಟಿಕೆಗಳಿಗೆ 6 ಗಂಟೆ ಕಾಲಾವಕಾಶ ನೀಡಬೇಕು. ಉಳಿದ 12 ಗಂಟೆಯಲ್ಲಿ ನಿದ್ದೆಗೆ 8 ಗಂಟೆ ಮೀಸಲಿಡಬೇಕು. ಊಟ-ತಿಂಡಿ, ಸ್ನಾನ ಇತ್ಯಾದಿಗೆ ಒಂದು ಗಂಟೆ ಬೇಕಾಗುತ್ತದೆ. ಉಳಿದ 3 ಗಂಟೆಯನ್ನು ಆಟಕ್ಕೆ, ಬೇರೆಯವರೊಂದಿಗೆ ಬೆರೆಯಲು ಮೀಸಲಿಡಬೇಕು ಎಂಬುದು ತಿಮ್ಮಪ್ಪ ಅವರ ಸಲಹೆ.
ಯಾವ ಮಗುವೂ ಪೆದ್ದಲ್ಲ, ಖಾಲಿ ಕಾಗದ ಅಲ್ಲ. ಪ್ರತಿಯೊಬ್ಬರಲ್ಲೂ ವಿಶಿಷ್ಟವಾದ ಗುಣ, ಆಸಕ್ತಿದಾಯಕ ವಿಷಯಗಳು ಇದ್ದೇ ಇರುತ್ತವೆ. ಅವನ್ನು ಕಂಡುಕೊಳ್ಳಬೇಕು.

ಮಕ್ಕಳ ಅಭಿಪ್ರಾಯ ತಿಳಿದುಕೊಳ್ಳಲು ಮುಂದಾಗಬೇಕು. ಯಾವುದೇ ವಿಷಯ ಇರಲಿ, ಅದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಮಕ್ಕಳನ್ನು ಕೇಳಬೇಕು. ಯೋಚನೆ ಮಾಡಿ ತಿಳಿಸಲು ಅವಕಾಶ ನೀಡಬೇಕು. ಇದರಿಂದ ಮಕ್ಕಳಲ್ಲಿನ ಸಾಮರ್ಥ್ಯ, ಬುದ್ಧಿಶಕ್ತಿ, ಆಸಕ್ತಿದಾಯಕ ಚಟುವಟಿಕೆಗಳನ್ನು ಅರಿಯಲು ಸಾಧ್ಯವಾಗುತ್ತದೆ. ಅಲ್ಲದೆ ಅವರಲ್ಲಿ ಕುಶಲತೆ ಬೆಳೆಸಲು ಸಹಕಾರಿ ಆಗುತ್ತದೆ.

ಪಠ್ಯಬೋಧನೆಯೇ ವಿದ್ಯೆ ಅಲ್ಲ. ವಿಶಿಷ್ಟವಾದ ಗುಣಗಳ ಬೆಳವಣಿಗೆಗೆ ಅವಕಾಶ ನೀಡುವುದೇ ನಿಜವಾದ ವಿದ್ಯೆ. ಶಾಲೆಯಲ್ಲಿ ಶೇ 25ರಷ್ಟನ್ನು ಮಾತ್ರ ಕಲಿಯಲು ಸಾಧ್ಯ. ಶೇ 100ರಷ್ಟನ್ನು ಅಲ್ಲಿಯೇ ಕಲಿಯಬೇಕು ಎಂದು ಬಯಸುವುದು ತಪ್ಪು. ಶಿಕ್ಷಕರ ಕೇಂದ್ರೀತ ಶಿಕ್ಷಣವಾಗದೆ, ವಿದ್ಯಾರ್ಥಿ ಕೇಂದ್ರೀತ ಶಿಕ್ಷಣವಾಗಬೇಕು. ಪರೀಕ್ಷೆಗಾಗಿ ಓದು ಎಂಬುದನ್ನು ದೂರ ಮಾಡಿ, ತನ್ನ ಸಾಮರ್ಥ್ಯ ಹೆಚ್ಚಿಸಿಕೊಳ್ಳುವುದಕ್ಕಾಗಿ ಓದು ಎಂಬ ಭಾವನೆಯನ್ನು ಮೂಡಿಸಬೇಕು ಎಂಬುದು ಅವರ ಕಿವಿಮಾತು.

ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರ ರಚನೆಯಾದ ಅನೇಕ ಶಿಕ್ಷಣ ಆಯೋಗಗಳು ವಿದ್ಯಾರ್ಥಿ ಕೇಂದ್ರೀತ ಶಿಕ್ಷಣಕ್ಕೆ ಒತ್ತು ನೀಡುವ ಸಂಬಂಧ ಶಿಫಾರಸುಗಳನ್ನು ಮಾಡಿವೆ. ಆದರೆ, ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ಈ ವಿಷಯಗಳು ಕೇವಲ ಚರ್ಚೆಯಲ್ಲೇ ಉಳಿದಿವೆ. ಆಡುತ್ತಾ, ನಲಿಯುತ್ತಾ ಕಲಿಯಬೇಕಾದ ಮಕ್ಕಳನ್ನು ಮಾನಸಿಕ ಖಿನ್ನತೆಗೆ ದೂಡುವುದನ್ನು ತಪ್ಪಿಸಬೇಕಾದರೆ ಶೈಕ್ಷಣಿಕ ವ್ಯವಸ್ಥೆ, ಪೋಷಕರ ಮನೋಭಾವ ಬದಲಾಗಬೇಕು. ಇದು ಕಾನೂನಿನಿಂದ ಆಗುವ ಕೆಲಸ ಅಲ್ಲ. ಪೋಷಕರು, ಸಮಾಜ, ಶಿಕ್ಷಕರು ಒಟ್ಟಾಗಿ ಸೇರಿ ಸುಧಾರಣೆಯತ್ತ ದಾಪುಗಾಲು ಹಾಕಬೇಕು.

ಶುದ್ಧಸುಳ್ಳು


ಶೇ 25ರಷ್ಟನ್ನು ಮಾತ್ರ ಮಗು ಶಿಕ್ಷಕರಿಂದ ಕಲಿಯುತ್ತದೆ. ಶೇ 25ರಷ್ಟನ್ನು ತನ್ನ ಬುದ್ಧಿಯಿಂದ, ಶೇ 25ರಷ್ಟನ್ನು ಸಹಪಾಠಿಗಳಿಂದ ಕಲಿಯಲಿದೆ. ಇನ್ನುಳಿದ ಶೇ 25ರಷ್ಟನ್ನು ಕಾಲಕ್ರಮೇಣ ಅನುಭವದಿಂದ ಕಲಿಯಲಿದೆ ಎಂಬುದನ್ನು ವೇದಗಳಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ಅರ್ಥ ಮಾಡಿಕೊಂಡು ಸ್ವತಂತ್ರವಾಗಿ ಬೆಳೆಯಲು ಮಗುವಿಗೆ ಅವಕಾಶ ಮಾಡಿಕೊಡಬೇಕು. ಮಗುವಿಗೆ ಏನೂ ಗೊತ್ತಿಲ್ಲ ಎಂಬುದು ಶುದ್ಧಸುಳ್ಳು.
–ಡಾ. ಎಂ.ಎಸ್. ತಿಮ್ಮಪ್ಪ

ಬೆಸ್ಟ್ ಇನ್‌ವೆಸ್ಟ್‌ಮೆಂಟ್...
ಶಾಲೆ, ಮನೆಪಾಠಕ್ಕೆ ಸೀಮಿತವಾಗುವುದರಿಂದ ಮಕ್ಕಳ ಮಾನಸಿಕ, ದೈಹಿಕ ಬೆಳವಣಿಗೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮೊಬೈಲ್, ಕಂಪ್ಯೂಟರ್ ಗೇಮ್ಸ್‌ನತ್ತ ಮಕ್ಕಳು ಆಕರ್ಷಿತರಾಗಿದ್ದು, ದೈಹಿಕ ಚಟುವಟಿಕೆಯೇ ಇಲ್ಲದಂತಾಗಿದೆ. ಬೇರೆಯವರ ಜೊತೆ ಬೆರೆಯುವುದೂ ಇಲ್ಲ.

ತಂದೆ-ತಾಯಿ ಇಬ್ಬರೂ ಕೆಲಸಕ್ಕೆ ಹೋಗುವುದರಿಂದ ಮನೆಯಲ್ಲಿ ನೋಡಿಕೊಳ್ಳಲು ಯಾರೂ ಇರುವುದಿಲ್ಲ. ಹೀಗಾಗಿ ಮಕ್ಕಳು ಶಾಲೆ, ಡೇಕೆರ್ ಸೆಂಟರ್‌ನಲ್ಲಿ ಹೆಚ್ಚು ಕಾಲ ಇರುತ್ತವೆ. ಮಗುವನ್ನು ಸಹ ‘ಬೆಸ್ಟ್ ಇನ್‌ವೆಸ್ಟ್‌ಮೆಂಟ್’ ಎಂದು ಭಾವಿಸಿ, ಅದರೊಂದಿಗೆ ಬೆರೆಯಲು ಪೋಷಕರು ಸಮಯ ಹೊಂದಾಣಿಕೆ ಮಾಡಿಕೊಳ್ಳಬೇಕು.
– ಡಾ. ಪದ್ಮಶ್ರೀ, ಮಕ್ಕಳ ತಜ್ಞರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.