ADVERTISEMENT

ಪುಟ್ಟ ಪ್ರತಿಭೆಯ ದೊಡ್ಡ ಸಾಧನೆ

ಕೆ.ಓಂಕಾರ ಮೂರ್ತಿ
Published 5 ಮಾರ್ಚ್ 2017, 19:30 IST
Last Updated 5 ಮಾರ್ಚ್ 2017, 19:30 IST
ಎ.ಎನ್.ಶಿಫಾಲಿ
ಎ.ಎನ್.ಶಿಫಾಲಿ   

ಚೆಸ್‌ ಆಟದಲ್ಲಿ ಹಳೆ ಮೈಸೂರು ಭಾಗದ ಆಟಗಾರರ ಜಾಣ್ಮೆ ಅನನ್ಯ. ಚೆಸ್‌ ಕ್ರೀಡೆಯನ್ನು ಆಡುವವರ ಸಂಖ್ಯೆ ಈ ಭಾಗದಲ್ಲಿ ಅಧಿಕ. ಗ್ರ್ಯಾಂಡ್‌ಮಾಸ್ಟರ್‌ ಪಟ್ಟ ಪಡೆಯಲು ಹಿರಿಯ ಆಟಗಾರ ಎಂ.ಎಸ್‌.ತೇಜ್‌ಕುಮಾರ್‌ ಅವರಿಗೆ ಕೆಲವೇ ಇಎಲ್‌ಒ ಪಾಯಿಂಟ್‌ಗಳ ಅಗತ್ಯವಿದ್ದರೆ, ಇತ್ತ ಎ.ಎನ್.ಶಿಫಾಲಿ ಎಂಬ ಪುಟ್ಟ ಬಾಲಕಿ ರಾಷ್ಟ್ರಮಟ್ಟದಲ್ಲಿ ಮಿಂಚು ಹರಿಸುತ್ತಿದ್ದಾಳೆ.

ಮಂಡ್ಯ ನಗರದ ಶಿಫಾಲಿ ಕಳೆದ ವರ್ಷ ಶ್ರೀಲಂಕಾದಲ್ಲಿ ನಡೆದ ಕಾಮನ್‌ವೆಲ್ತ್‌ ಚೆಸ್‌ ಚಾಂಪಿಯನ್‌ಷಿಪ್‌ನ 8 ವರ್ಷದೊಳಗಿನವರ ವಿಭಾಗದಲ್ಲಿ ಚಾಂಪಿಯನ್‌ ಆಗುವ ಮೂಲಕ ಎಲ್ಲರ ಗಮನ ಸೆಳೆದಳು. ಈ ವಿಭಾಗದಲ್ಲಿ ಈ ಸಾಧನೆ ಮಾಡಿದ ರಾಜ್ಯದ ಮೊದಲ ಆಟಗಾರ್ತಿ ಕೂಡ. ಸ್ಯಾಂತೋಮ್‌ ಪಬ್ಲಿಕ್‌ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿರುವ ಈ ಬಾಲಕಿ ಸುಮಾರು 60 ಟೂರ್ನಿಗಳಲ್ಲಿ ಪಾಲ್ಗೊಂಡು 40 ಪ್ರಶಸ್ತಿ ಜಯಿಸಿದ್ದಾಳೆ.

ಸಿಂಗಪುರದಲ್ಲಿ ನಡೆದ ಏಷ್ಯನ್‌ ಯೂತ್‌ ಚೆಸ್‌ ಚಾಂಪಿಯನ್‌ಷಿಪ್‌, ಪುದುಚೇರಿಯ ರಾಷ್ಟ್ರೀಯ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ 7 ವರ್ಷ
ದೊಳಗಿನವರ ವಿಭಾಗದಲ್ಲಿ ಚಾಂಪಿಯನ್ ಆಗಿದ್ದಾಳೆ. ರಾಷ್ಟ್ರೀಯ ಶಾಲಾ ಚೆಸ್‌ ಚಾಂಪಿಯನ್‌ಷಿಪ್, ವಿಶ್ವ ಕೆಡೆಟ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿದ್ದಳು. ವಿಶ್ವ ಕ್ಯಾಂಡಿಡೇಟ್‌ ಮಾಸ್ಟರ್‌ ಪಟ್ಟ ಕೂಡ ಲಭಿಸಿದೆ.

‘ಐದನೇ ವಯಸ್ಸಿನಿಂದಲೇ ವಿವಿಧ ಟೂರ್ನಿಗಳಲ್ಲಿ ಪಾಲ್ಗೊಳ್ಳುತ್ತಿದ್ದಾಳೆ. ಚೆಸ್‌ ಕೋಚಿಂಗ್‌ಗೆಂದು ತೆರಳುತ್ತಿದ್ದ ಸಹೋದರ ಜೊತೆ ಈಕೆಯೂ ಹೋಗುತ್ತಿದ್ದಳು. ಆಗ ಚೆಸ್‌ನತ್ತ ಆಕರ್ಷಿತಳಾಗಿದ್ದಾಳೆ. ಈಗಂತೂ ಚೆಸ್‌ ಆಟವೆಂದರೆ ಆಕೆಗೆ ತುಂಬಾ ಇಷ್ಟ. ಆನ್‌ಲೈನ್‌ನಲ್ಲಿ ಅಭ್ಯಾಸ ನಡೆಸುತ್ತಾಳೆ. ಚೆಸ್‌ ಪುಸ್ತಕಗಳಲ್ಲಿರುವ ಶ್ರೇಷ್ಠ ಆಟಗಾರರ ಪಂದ್ಯಗಳನ್ನು ವಿಶ್ಲೇಷಿಸುತ್ತಾಳೆ’ ಎಂದು ತಂದೆ ನರೇಂದ್ರ ಬಾಬು ಅವರು ಹೆಮ್ಮೆಯಿಂದ ಹೇಳುತ್ತಾರೆ.

ಇದೇ ತಿಂಗಳ ಅಂತ್ಯದಲ್ಲಿ ಉಜ್‌ಬೇಕಿಸ್ತಾನದಲ್ಲಿ ನಡೆಯಲಿರುವ ಏಷ್ಯನ್‌ ಯೂತ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಸಿದ್ಧತೆ ನಡೆಸುತ್ತಿದ್ದಾಳೆ. ಅಲ್ಲದೇ, ಮೇನಲ್ಲಿ ಬ್ರೆಜಿಲ್‌ನಲ್ಲಿ ಜರುಗಲಿರುವ ವಿಶ್ವ ಕೆಡೆಟ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದುಕೊಂಡಿದ್ದಾಳೆ. ಚೆಸ್‌ ಆಡಲು ವಿವಿಧ ರಾಜ್ಯ ಹಾಗೂ ದೇಶಗಳಿಗೆ ಪುತ್ರಿಯ ಜೊತೆ ತಾಯಿ ನಿರ್ಮಲಾ ತೆರಳುತ್ತಾರೆ.

ಗ್ರ್ಯಾಂಡ್‌ಮಾಸ್ಟರ್‌ ಪಟ್ಟ ಪಡೆಯುವುದು ಶಿಫಾಲಿ ಕನಸು. ವಿಶ್ವ ಚೆಸ್‌ ಚಾಂಪಿಯನ್ ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್ ಈಕೆಯ ನೆಚ್ಚಿನ ಆಟಗಾರ. 1165 ಫಿಡೆ ರೇಟಿಂಗ್‌ ಹೊಂದಿರುವ ಈ ಬಾಲಕಿ 8 ವರ್ಷದೊಳಗಿನವರ ವಿಭಾಗದಲ್ಲಿ ದೇಶದಲ್ಲಿ ಮೂರನೇ ಸ್ಥಾನದಲ್ಲಿದ್ದಾಳೆ. ವಿಶ್ವ ಅಮೆಚೂರ್‌ ಚಾಂಪಿಯನ್ ಎಂ.ಪಿ.ಅಜಿತ್‌ ಅವರು ಕೂಡ ಈ ಹುಡುಗಿಗೆ ಕೆಲ ದಿನ ತರಬೇತಿ ನೀಡಿದ್ದಾರೆ. 

‘ಪುತ್ರಿ ಉತ್ತಮ ಸಾಧನೆ ಮಾಡಬೇಕೆಂಬುದು ನಮ್ಮ ಕನಸು. ಈ ನಿಟ್ಟಿನಲ್ಲಿ ಉತ್ತಮ ಕೋಚ್‌ಗಳಿಂದ ಮಾರ್ಗದರ್ಶನ ಸಿಗಬೇಕು. ಅದಕ್ಕಾಗಿ ಹುಡುಕಾಟ ನಡೆಸಿದ್ದೇವೆ’ ಎಂದು ನರೇಂದ್ರ ಬಾಬು ಹೇಳುತ್ತಾರೆ. 

ಸಾಧಕಿಯ ಹೆಜ್ಜೆಗಳು
*ಕಾಮನ್‌ವೆಲ್ತ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ (8 ವರ್ಷ) ಪ್ರಶಸ್ತಿ
*ರಾಷ್ಟ್ರೀಯ ಚೆಸ್‌ ಟೂರ್ನಿಯಲ್ಲಿ (7 ವರ್ಷ) ಚಾಂಪಿಯನ್‌
*ಏಷ್ಯನ್‌ ಯೂತ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಅಗ್ರಸ್ಥಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT