ADVERTISEMENT

ಭಾರತೀಯ ವಿದ್ಯಾರ್ಥಿಗಳಿಗೆ ಡಬ್ಲಿನ್‌ ಸ್ಕಾಲರ್‌ಶಿಪ್‌

ವಿದ್ಯಾ ಧನ

ಪ್ರಜಾವಾಣಿ ವಿಶೇಷ
Published 21 ಡಿಸೆಂಬರ್ 2014, 19:30 IST
Last Updated 21 ಡಿಸೆಂಬರ್ 2014, 19:30 IST
ಭಾರತೀಯ ವಿದ್ಯಾರ್ಥಿಗಳಿಗೆ ಡಬ್ಲಿನ್‌ ಸ್ಕಾಲರ್‌ಶಿಪ್‌
ಭಾರತೀಯ ವಿದ್ಯಾರ್ಥಿಗಳಿಗೆ ಡಬ್ಲಿನ್‌ ಸ್ಕಾಲರ್‌ಶಿಪ್‌   

ಐರ್ಲೆಂಡ್‌ ದೇಶದ ಪ್ರಸಿದ್ಧ ಯೂನಿವರ್ಸಿಟಿ ಕಾಲೇಜ್‌ ಆಫ್‌ ಡಬ್ಲಿನ್‌ ವಿಶ್ವವಿದ್ಯಾಲಯ ಭಾರತೀಯ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ನೀಡಲು ಅರ್ಜಿ ಆಹ್ವಾನಿಸಿದೆ. ಸ್ನಾತಕ ಪದವಿ, ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಭಾರತದ ನಾಲ್ಕನೇ ರಾಷ್ಟ್ರಪತಿಯಾಗಿದ್ದ ವಿವಿ ಗಿರಿ ಅವರ ಸ್ಮರಣಾರ್ಥ ಡಬ್ಲಿನ್‌ ವಿಶ್ವವಿದ್ಯಾಲಯವು ಭಾರತೀಯ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ನೀಡುತ್ತಿದೆ.

ವಿವಿ ಗಿರಿ ಅವರು 1913ರಲ್ಲಿ ಡಬ್ಲಿನ್‌ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದಿದ್ದರು. 1854ರಲ್ಲಿ ಆರಂಭವಾದ ಈ ವಿಶ್ವವಿದ್ಯಾಲಯ ಅಂತರರಾಷ್ಟ್ರೀಯವಾಗಿ ಬಾರೀ ಜನಪ್ರಿಯತೆ ಪಡೆದಿದೆ. ಇಲ್ಲಿ ಪದವಿ ಪಡೆದಿರುವ ಲಕ್ಷಾಂತರ ವಿದ್ಯಾರ್ಥಿಗಳು ಅಂತರರಾಷ್ಟ್ರೀಯವಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ರಾಜಕೀಯ, ವಿಜ್ಞಾನ, ಕಾನೂನು, ವೈದ್ಯಕೀಯ, ಎಂಜಿನಿಯರಿಂಗ್‌ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಅಸಮಾನ್ಯ ಸಾಧನೆ ಮಾಡಿದ್ದಾರೆ.

ಡಬ್ಲಿನ್‌ ವಿಶ್ವವಿದ್ಯಾಲಯ ಪ್ರತಿ ವರ್ಷ 27000 ಸ್ಕಾಲರ್‌ಶಿಪ್‌ಗಳನ್ನು ನೀಡುತ್ತಿದೆ. ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ 6000 ಸ್ಕಾಲರ್‌ಶಿಪ್‌ಗಳನ್ನು ನೀಡುತ್ತಿದೆ. ಪ್ರಸಕ್ತ ಸಾಲಿನಲ್ಲಿ 308 ಭಾರತೀಯ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
  ದೆಹಲಿ ವಿಶ್ವವಿದ್ಯಾಲಯ, ಐಐಟಿ ಕಾನ್ಪುರ, ಐಐಎಂ ಬೆಂಗಳೂರು ಮತ್ತು ಬರೋಡ ವಿಶ್ವವಿದ್ಯಾಲಯದೊಂದಿಗೆ ಡಬ್ಲಿನ್‌ ವಿಶ್ವವಿದ್ಯಾಲಯ ಸ್ಕಾಲರ್‌ಶಿಪ್‌ ನೀಡುವ ಒಪ್ಪಂದ  ಮಾಡಿಕೊಂಡಿದ್ದು ಇಲ್ಲಿನ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಐರ್ಲೆಂಡ್‌ ವಿಶ್ವವಿದ್ಯಾಲಯಗಳಲ್ಲಿ ಅಭ್ಯಾಸ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳು ಸಹ ಅರ್ಜಿ ಸಲ್ಲಿಸಬಹುದಾಗಿದೆ. ಡಬ್ಲಿನ್‌ ವಿಶ್ವವಿದ್ಯಾಲಯದಲ್ಲಿರುವ ಹಣಕಾಸು ನಿಧಿಯನ್ನು ಅವಲಂಭಿಸಿ ವಿದ್ಯಾರ್ಥಿವೇತನ ನೀಡಲಾಗುವುದು.
ಸ್ಕಾಲರ್‌ಶಿಪ್‌ ವಿವರಗಳು...
* ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗಮಾಡುತ್ತಿರುವ ವಿದ್ಯಾರ್ಥಿಗಳಿಗೆ ನಾಲ್ಕು ವಿವಿ ಗಿರಿ ಸ್ಕಾಲರ್‌ಶಿಪ್‌ಗಳು.
* ಭಾರತೀಯ ಮೆರಿಟ್‌ ವಿದ್ಯಾರ್ಥಿಗಳಿಗೆ 5 ಗ್ಲೊಬಲ್‌ ಪದವಿ ಸ್ಕಾಲರ್‌ಶಿಪ್‌ಗಳನ್ನು ನೀಡಲಾಗುವುದು. ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಸ್ನಾತಕೊತ್ತರ ಪದವಿಯಲ್ಲಿ ಅಭ್ಯಾಸ ಮಾಡುತ್ತಿರಬೇಕು.

* ನೂರು ವಿದ್ಯಾರ್ಥಿಗಳಿಗೆ ಮೆರಿಟ್‌ ಆಧಾರದ ಮೇಲೆ ಸ್ಕಾಲರ್‌ಶಿಪ್‌ ನೀಡಲಾಗುವುದು, ಈ ಸ್ಕಾಲರ್‌ಶಿಪ್‌ ಪಡೆಯಲು ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು. ಒಬ್ಬ ವಿದ್ಯಾರ್ಥಿಗೆ ಮೂರು ಸಾವಿರ ಪೌಂಡ್‌ ಶಿಶ್ಯವೇತನ ಲಭಿಸುವುದು.
* ಪಿಯುಸಿ, ಡಿಪ್ಲೋಮಾ, ಐಟಿಐ ಇತರೆ ಕೋರ್ಸ್‌ಗಳಲ್ಲಿ ಓದುತ್ತಿರುವ 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೂ ಸ್ಕಾಲರ್‌ಶಿಪ್‌ ನೀಡಲಾಗುವುದು.

* ಐರ್ಲೆಂಡ್‌ ಸರ್ಕಾರ ಮಾಸ್ಟರ್‌ ಕೋರ್ಸ್‌ಗಳಿಗೂ ವಿದ್ಯಾರ್ಥಿವೇತನ ನೀಡಲಿದೆ. ಪ್ರತಿ ವಿದ್ಯಾರ್ಥಿಗೆ 10,000 ಯುರೋ ವಿದ್ಯಾರ್ಥಿವೇತನ ದೊರೆಯಲಿದೆ.
* ಐರ್ಲೆಂಡ್‌ನ ಮೈಕಲ್‌ ಬ್ಯುಸಿನೆಸ್‌ ಸ್ಕೂಲ್‌ ಕೂಡ ಭಾರತೀಯ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ನೀಡಲಿದೆ. ಎಂಎಸ್‌ಸಿ, ಎಂಬಿಎ ಓದುತ್ತಿರುವ ವಿದ್ಯಾರ್ಥಿಗಳು ಈ ಸ್ಕಾಲರ್‌ಶಿಪ್‌ ಪಡೆಯಬಹುದು.

ಶೈಕ್ಷಣಿಕ ಅರ್ಹತೆಗಳು
ಡಬ್ಲಿನ್‌ ವಿಶ್ವವಿದ್ಯಾಲಯದ ಸ್ಕಾಲರ್‌ಶಿಪ್‌ ಪಡೆಯುವ ವಿದ್ಯಾರ್ಥಿಗಳು ಈ ಕೆಳಕಂಡ ಅರ್ಹತೆಗಳನ್ನು ಹೊಂದಿರಬೇಕು.
* ಅಭ್ಯರ್ಥಿಗಳು ಭಾರತೀಯ ಪ್ರಜೆಗಳಾಗಿರಬೇಕು.
* ಅನಿವಾಸಿ ಭಾರತೀಯರು ಅರ್ಜಿ ಸಲ್ಲಿಸುವಂತಿಲ್ಲ
* 2014 –15ನೇ ಸಾಲಿನಲ್ಲಿ ಪಿಯುಸಿ, ಡಿಪ್ಲೊಮಾ ಅಥವಾ ತತ್ಸಮಾನ ಕೋರ್ಸ್‌ಗಳು ಹಾಗೂ ಪದವಿ, ಸ್ನಾತಕೋತ್ತರ ಪದವಿಯಲ್ಲಿ ಓದುತ್ತಿರಬೇಕು.
* ಭಾರತ ಹಾಗೂ ಐರ್ಲೆಂಡ್‌ ವಿಶ್ವವಿದ್ಯಾಲಯಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಸ್ಕಾಲರ್‌ಶಿಪ್‌ ಅವಧಿ/ ವೇತನ: ವಿದ್ಯಾರ್ಥಿಗಳ ಕೋರ್ಸ್‌ ಮುಕ್ತಾಯವಾಗುವವರೆಗೂ ಸ್ಕಾಲರ್‌ಶಿಪ್‌ ನೀಡಲಾಗುವುದು. ವಿವಿಧ ಕೋರ್ಸ್‌ಗಳಿಗೆ ಅನುಗುಣವಾಗಿ ಶಿಶ್ಯವೇತನ ನೀಡಲಾಗುವುದು.

ಆಯ್ಕೆ ವಿಧಾನ: ಅರ್ಜಿ ಸಲ್ಲಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುವುದಿಲ್ಲ. ವಿದ್ಯಾರ್ಥಿಗಳ ಶೇಕಡವಾರು ಅಂಕಗಳನ್ನು ಪರಿಗಣಿಸಿ ವಿದ್ಯಾರ್ಥಿವೇತನ ನೀಡಲಾಗುವುದು. ಅರ್ಜಿ ಸಲ್ಲಿಸುವ ವಿಧಾನ; ವಿದ್ಯಾರ್ಥಿಗಳು ಅರ್ಜಿಯನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು. ಇತರೆ ವಿಧಾನದಲ್ಲಿ ಸಲ್ಲಿಸುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಅಭ್ಯರ್ಥಿಗಳು www.ucd.ie ಈ ವೆಬ್‌ಸೈಟ್‌ಗೆ ಲಾಗಿನ್‌ ಆಗಬೇಕು. ನಂತರ ನಿಬಂಧನೆಗಳು ಮತ್ತು ಮಾರ್ಗಸೂಚಿಗಳನ್ನು ನಿಖರವಾಗಿ ಓದಿಕೊಂಡು ಆನ್‌ಲೈನ್‌ ಅರ್ಜಿಯನ್ನು ಭರ್ತಿ ಮಾಡಬೇಕು. ತಪ್ಪು ಮಾಹಿತಿಯಿಂದ ಕೂಡಿದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಅರ್ಜಿಸಲ್ಲಿಸಲು 2015ರ ಮಾರ್ಚ್‌ 31 ಕಡೆಯ ದಿನವಾಗಿರುತ್ತದೆ.

ಹೆಚ್ಚಿನ ಮಾಹಿತಿಗೆ ಈ ಕೆಳಕಂಡ ವೆಬ್‌ಸೈಟ್‌ ಅಥವಾ ಇ–ಮೇಲ್‌ ಸಂಪರ್ಕಿಸಬಹುದು. www.ucd.ie/international/study-at-ucd-global/comingto-ireland/scholarships-and-funding/ or contact the UCD International Student Scholarships & Funding Coordinator at internationalscholarships@ucd.ie

ಏನಿದು ಯುಸಿಡಿ?
ಐರ್ಲೆಂಡ್‌ ದೇಶದ ಡಬ್ಲಿನ್‌ ವಿಶ್ವವಿದ್ಯಾಲಯವನ್ನು ಯೂನಿವರ್ಸಿಟಿ ಕಾಲೇಜ್‌ ಆಫ್‌ ಡಬ್ಲಿನ್‌ (ಯುಸಿಡಿ) ಎಂದು ಕರೆಯಲಾಗುತ್ತದೆ. ಈ ವಿಶ್ವವಿದ್ಯಾಲಯದಲ್ಲಿ ಸುಮಾರು 26000 ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. 127 ದೇಶಗಳ 6 ಸಾವಿರ ವಿದೇಶಿ ವಿದ್ಯಾರ್ಥಿಗಳು ಸಹ ಇಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಈ ವಿಶ್ವವಿದ್ಯಾಲಯ 127ಕ್ಕೂ ಹೆಚ್ಚು ದೇಶಗಳ ವಿದ್ಯಾರ್ಥಿಗಳಿಗೆ ಬಾರೀ ಮೊತ್ತದ ಸ್ಕಾಲರ್‌ಶಿಪ್‌ ನೀಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.