ADVERTISEMENT

ರಾಷ್ಟ್ರಮಟ್ಟದ ಪವರ್ ಲಿಫ್ಟರ್‌ : ಸ್ವಾತಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 6:16 IST
Last Updated 25 ಏಪ್ರಿಲ್ 2018, 6:16 IST
ತನ್ನ ಕ್ರೀಡಾ ಸಾಧನೆಗಗಾಗಿ ಪಡೆದ ಪದಕಗಳೊಂದಿಗೆ ಸ್ವಾತಿ
ತನ್ನ ಕ್ರೀಡಾ ಸಾಧನೆಗಗಾಗಿ ಪಡೆದ ಪದಕಗಳೊಂದಿಗೆ ಸ್ವಾತಿ   

ಮನಸ್ಸು ಮಾಡಿದರೆ ಅಸಾಧ್ಯಎಂಬುದು ಯಾವುದೂ ಇಲ್ಲ ಎನ್ನುವುದಕ್ಕೆ ಕಾರ್ಕ‌ಳದ ಕ್ರೀಡಾಪಟು ಸ್ವಾತಿ ಸಾಕ್ಷಿ. ಕ್ರೀಡೆಯಲ್ಲಿ ಸಾಧನೆ ಮೆರೆಯಲು ಅನೇಕ ವರ್ಷಗಳ ತರಬೇತಿ ಪಡೆಯ ಬೇಕಾಗುತ್ತದೆ. ಆದರೆ ಸ್ವಾತಿ ಕೇವಲ ಏಳು ತಿಂಗಳ ಕಠಿಣ ಅಭ್ಯಾಸದಿಂದ ರಾಷ್ಟ್ರಮಟ್ಟದಲ್ಲಿ ಮಿಂಚಿದವರು.

ಕಾರ್ಕಳದ ಎಸ್‍ವಿಟಿ ಮಹಿಳಾ ಕಾಲೇಜಿನ ಹಳೆವಿದ್ಯಾರ್ಥಿನಿಯಾಗಿರುವ ಸ್ವಾತಿ ತಾನು ಕಾಲೇಜಿನಲ್ಲಿ ಅಧ್ಯಯನ ನಿರತರಾಗಿರುವಾಗ ರೆಸ್ಲಿಂಗ್, ಜಿಮ್ ಅಭ್ಯಾಸ ನಡೆಸುತ್ತಿದ್ದರು. ನಂತರ ಶಟಲ್ ಬ್ಯಾಡ್ಮಿಂಟನ್, ತ್ರೋಬಾಲ್ ಆಟಗಾರ್ತಿಯಾಗಿಯೂ ಅನುಭವ ಪಡೆದದ್ದುಂಟು. ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಒಂದು ಚಿನ್ನ ಹಾಗೂ ಕಂಚಿನ ಪದಕ ಗೆದ್ದ ಕೀರ್ತಿಯೂ ಸ್ವಾತಿಯದ್ದಾಗಿದೆ.

ಪವರ್ ಲಿಫ್ಟಿಂಗ್ ಆಸಕ್ತಿ: ಪವರ್‌ ಲಿಫ್ಟಿಂಗ್‌ನಲ್ಲಿ  ಪ್ರದೀಪ್ ಕುಮಾರ್ ಮತ್ತು ವಿಶ್ವನಾಥ ಭಾಸ್ಕರ್ ಗಾಣಿಗ ಅವರ ಸಾಧನೆ ನೋಡಿ ಸ್ವಾತಿ ಸ್ಫೂರ್ತಿಗೊಂಡಿದ್ದರು. ಹೀಗಾಗಿ ಇವರು ಪವರ್ಲಿಫ್ಟಿಂಗ್‍ನಲ್ಲಿ ಮತ್ತಷ್ಟು ಆಸಕ್ತಿ ತಾಳುವಂತಾಯಿತು. ಪ್ರದೀಪ್ ಅವರಿಂದಲೇ ತರಬೇತಿ ಪಡೆಯಲಾರಂಭಿಸಿದರು. ಪ್ರತೀದಿನ ಮಂಗಳೂರಿಗೆ ತೆರಳಿ ತರಬೇತಿ ಪಡೆಯುತ್ತಿದ್ದಾರೆ. ಇವರ ಕ್ರೀಡಾಕ್ಷೇತ್ರದ ಬೆಳವಣಿಗೆಯಲ್ಲಿ ಸತೀಶ್ ಕುಮಾರ್ ಕುದ್ರೋಳಿ ಅವರ ಸಹಕಾರವೂ ಇದೆ. ಸ್ವಾತಿ ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಎರಡು ಚಿನ್ನದ ಪದಕ ಪಡೆದಿದ್ದರು. ಅನಂತರ ಇತ್ತೀಚೆಗೆ ರಾಂಚಿಯಲ್ಲಿ ನಡೆದ ರಾಷ್ಟ್ರಮಟ್ಟದ 57 ಕೆ.ಜಿ. ವಿಭಾಗದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿಎರಡು ಕಂಚಿನ ಪದಕ ಪಡೆದು ರಾಷ್ಟ್ರಮಟ್ಟದಲ್ಲೂ ಮಿಂಚಿದ್ದಾರೆ. ಸ್ವಾತಿ ಬಡತನದ ಕುಟುಂಬದಿಂದ ಬೆಳೆದು ಬಂದವರು. ಅವರ ತಾಯಿ ಕಾರ್ಕಳದಲ್ಲಿ ಬಟ್ಟೆಯ ಅಂಗಡಿನಡೆಸುತ್ತಿದ್ದಾರೆ. ಹೀಗಾಗಿ ಸಂಸಾರನಡೆಸಲು ಹಾಗೂ ಇತರ ಖರ್ಚುವೆಚ್ಚಗಳಿಗೆ ತಾಯಿಯೇ ಇವರಿಗೆ ಆಸರೆ.  ಬಾಡಿಗೆ ಮನೆಯಲ್ಲಿಯೇ ನೆಲೆಸಿದ್ದಾರೆ.

ಸ್ವಾತಿ ಪವರ್ ಲಿಫ್ಟಿಂಗ್ ತರಬೇತಿ ಪಡೆಯುತ್ತಿರುವುದು

ADVERTISEMENT

ಸ್ವಾತಿಯ ರಾಷ್ಟ್ರಮಟ್ಟದ ಸಾಧನೆಯ ಹಿಂದೆ ತಾಯಿಯ ಪಾತ್ರ ಪ್ರಮುಖವಾಗಿದೆ. ಪವರ್ ಲಿಫ್ಟಿಂಗ್‍ಗೆ ಹೆಣ್ಣು ಮಕ್ಕಳನ್ನು ಕಳಿಸುವುದು ಕಡಿಮೆ. ಆದರೆ ಸ್ವಾತಿಯ ತಾಯಿ ಮಗಳಿಗೆ ಎಲ್ಲ ಬಗೆಯ ಪ್ರೋತ್ಸಾಹ ನೀಡುತ್ತಿದ್ದಾರೆ. ಪವರ್ ಲಿಫ್ಟರ್ ಆಗಬೇಕಾದರೆ ಹೆಚ್ಚು ಖರ್ಚುವೆಚ್ಚದ ಅವಶ್ಯಕತೆಯೂ ಇರುತ್ತದೆ. ಇವೆಲ್ಲವನ್ನು ಸ್ವಾತಿಯ ತಾಯಿ ಭರಿಸುತ್ತಿದ್ದಾರೆ. ಮಗಳ ಸಾಧನೆಯಿಂದ ಅವರು ಈಗ ಸಂತೋಷ ಪಡುತ್ತಿದ್ದಾರೆ.ಸ್ವಾತಿ 2017ರಲ್ಲಿ ಪದವಿ ಶಿಕ್ಷಣ ಪೂರ್ಣಗೊಳಿಸಿದ್ದು, ಈಗ ಕೆಎಎಸ್ ಪರೀಕ್ಷೆ ಬರೆಯಲು ಸಿದ್ಧತೆ ನಡೆಸುತ್ತಿದ್ದಾರೆ.

ರಾಷ್ಟ್ರೀಯ ಪಂದ್ಯದಲ್ಲಿ ಕಂಚಿನ ಪದಕ ಗಳಿಸಿದ ಸ್ವಾತಿ ಮುಂದಿನ ಸೆಪ್ಟೆಂಬರ್‌ ನಲ್ಲಿ ದುಬೈಯಲ್ಲಿ ನಡೆಯಲಿರುವ ಏಷ್ಯನ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸುವ ಗುರಿ ಹೊಂದಿದ್ದಾರೆ. ಅದಕ್ಕೂ ಮುನ್ನ ನಡೆಯುವ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಾಗಿದೆ. ಹೀಗಾಗಿ ಸ್ವಾತಿ ಪ್ರಸ್ತುತ ಮಂಗಳೂರಿನ ಸದ್ಗುರು ಫೀಟ್‍ನೆಸ್ ಅಂಡ್ ಸ್ಫೋರ್ಟ್ಸ್‌ ನಲ್ಲಿ ನಿರಂತರ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಎಸ್‌.ವಾಸುದೇವ ಭಟ್‌, ಕಾರ್ಕಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.