ADVERTISEMENT

ಹೊಸ ಶಕೆಗೆ ನಾಂದಿ?

ಮಹಮ್ಮದ್ ನೂಮಾನ್
Published 29 ಜನವರಿ 2017, 19:30 IST
Last Updated 29 ಜನವರಿ 2017, 19:30 IST
ಕೇಂದ್ರ ಕ್ರೀಡಾ ಸಚಿವ ವಿಜಯ್‌ ಗೊಯೆಲ್‌ (ಎಡದಿಂದ ಆರನೇಯವರು) ಮತ್ತು ಎಐಎಫ್‌ಎಫ್‌ ಅಧ್ಯಕ್ಷ ಪ್ರಫುಲ್‌ ಪಟೇಲ್‌ ಅವರು ಹೋದ ವಾರ ಚೊಚ್ಚಲ ಭಾರತೀಯ ಮಹಿಳಾ ಫುಟ್‌ಬಾಲ್‌ ಲೀಗ್‌ನ ಟ್ರೋಫಿ ಅನಾವರಣ ಮಾಡಿದ್ದರು. ಈ ವೇಳೆ ಎಲ್ಲಾ ತಂಡಗಳ ನಾಯಕಿಯರು ಹಾಜರಿದ್ದರು .
ಕೇಂದ್ರ ಕ್ರೀಡಾ ಸಚಿವ ವಿಜಯ್‌ ಗೊಯೆಲ್‌ (ಎಡದಿಂದ ಆರನೇಯವರು) ಮತ್ತು ಎಐಎಫ್‌ಎಫ್‌ ಅಧ್ಯಕ್ಷ ಪ್ರಫುಲ್‌ ಪಟೇಲ್‌ ಅವರು ಹೋದ ವಾರ ಚೊಚ್ಚಲ ಭಾರತೀಯ ಮಹಿಳಾ ಫುಟ್‌ಬಾಲ್‌ ಲೀಗ್‌ನ ಟ್ರೋಫಿ ಅನಾವರಣ ಮಾಡಿದ್ದರು. ಈ ವೇಳೆ ಎಲ್ಲಾ ತಂಡಗಳ ನಾಯಕಿಯರು ಹಾಜರಿದ್ದರು .   

ಭಾರತದಲ್ಲಿರುವ ವೃತ್ತಿಪರ ಲೀಗ್‌ಗಳ ಪಟ್ಟಿಗೆ ಮತ್ತೊಂದು ಹೆಸರು ಸೇರಿಕೊಂಡಿದೆ. ಮಹಿಳಾ ಫುಟ್‌ಬಾಲ್‌ ಕ್ರೀಡೆಯ ದಿಕ್ಕನ್ನೇ ಬದಲಿಸುವ ಮಹತ್ವಾಕಾಂಕ್ಷೆಯೊಂದಿಗೆ ಭಾರತೀಯ ಮಹಿಳಾ ಲೀಗ್‌ಗೆ (ಐಡಬ್ಲ್ಯುಎಲ್‌) ಚಾಲನೆ ನೀಡಲಾಗಿದೆ.

ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್‌) ಆರಂಭಿಸಿರುವ ಲೀಗ್‌ ಸಾಕಷ್ಟು ನಿರೀಕ್ಷೆ, ಕುತೂಹಲ ಮೂಡಿಸಿದೆ. ಚೊಚ್ಚಲ ಲೀಗ್‌ನ ಪಂದ್ಯಗಳಿಗೆ ಶನಿವಾರ (ಜ.28) ಚಾಲನೆ ದೊರೆತಿದ್ದು,  ಫೆಬ್ರುವರಿ 14ರಂದು ತೆರೆಬೀಳಲಿದೆ.

ಮೊದಲ ವರ್ಷದ ಲೀಗ್‌ಅನ್ನು ಚುಟುಕಾಗಿ ನಡೆಸಲು ಎಐಎಫ್‌ಎಫ್‌ ನಿರ್ಧರಿಸಿದೆ. ಈ ಬಾರಿ ಆರು ತಂಡಗಳು ಪೈಪೋಟಿ ನಡೆಸುತ್ತಿದ್ದು, ಎಲ್ಲಾ ಪಂದ್ಯಗಳನ್ನು ನವದೆಹಲಿಯ ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.

ಲೀಗ್‌ನ ಅರ್ಹತಾ ಸುತ್ತಿನಲ್ಲಿ 9 ರಾಜ್ಯಗಳ 20 ತಂಡಗಳು ಪಾಲ್ಗೊಂಡಿದ್ದವು. ಅಂತಿಮ ಸುತ್ತಿಗೆ ಆರು ತಂಡಗಳನ್ನು ಆಯ್ಕೆ ಮಾಡಲಾಗಿದೆ. ಮುಂದಿನ ವರ್ಷ ತಂಡಗಳ ಸಂಖ್ಯೆಯನ್ನು 16ಕ್ಕೆ ಏರಿಸಲಾಗುವುದು ಎಂದು ಎಐಎಫ್‌ಎಫ್‌ ಹೇಳಿದೆ. ಅದೇ ರೀತಿ ಪಂದ್ಯಗಳನ್ನು ವಿವಿಧ ತಾಣಗಳಲ್ಲಿ ನಡೆಸುವ ಬಗ್ಗೆಯೂ ಚಿಂತನೆ ನಡೆಸಿದೆ. ಆ ಮೂಲಕ ಹಂತಹಂತವಾಗಿ ಲೀಗ್‌ನ ಜನಪ್ರಿಯತೆಯನ್ನು ಹೆಚ್ಚಿಸುವ ಲೆಕ್ಕಾಚಾರ ಹಾಕಿಕೊಂಡಿದೆ.

ಯುವ ಪ್ರತಿಭೆಗಳಿಗೆ ಅವಕಾಶ
ಭಾರತ ಮಹಿಳಾ ತಂಡದವರು ವಿಶ್ವ ರ್‍ಯಾಂಕಿಂಗ್‌ ಪಟ್ಟಿಯಲ್ಲಿ  ಪ್ರಸ್ತುತ 54ನೇ ಸ್ಥಾನದಲ್ಲಿದ್ದಾರೆ. ಪುರುಷರ ತಂಡಕ್ಕೆ (129 ರ್‍ಯಾಂಕ್‌) ಹೋಲಿಸಿದರೆ ಮಹಿಳಾ ತಂಡ ಮೇಲಿನ ಸ್ಥಾನದಲ್ಲಿದೆ. ಕಳೆದ ನಾಲ್ಕು ಸ್ಯಾಫ್‌ ಚಾಂಪಿಯನ್‌ಷಿಪ್‌ಗಳಲ್ಲಿ ಭಾರತ ಮಹಿಳಾ ತಂಡ ಚಾಂಪಿಯನ್‌ ಆಗಿತ್ತು.

ಆದರೂ ಆಟಗಾರರಿಗೆ ಸಿಗುವಷ್ಟು ಸೌಲಭ್ಯ, ಅವಕಾಶಗಳು ಆಟಗಾರ್ತಿಯರಿಗೆ ಸಿಗುತ್ತಿಲ್ಲ. ಪುರುಷರಿಗೆ ಪ್ರತಿಭೆ ತೋರಿಸಲು ಐ–ಲೀಗ್‌ ಮತ್ತು ಐಎಸ್‌ಎಲ್‌ನಂತಹ ಟೂರ್ನಿಗಳಿವೆ. ಮಹಿಳೆಯರಿಗೆ ಇದುವರೆಗೆ ಯಾವುದೇ ಲೀಗ್‌ ಇರಲಿಲ್ಲ. ಇದರಿಂದ ಪ್ರತಿಭಾನ್ವಿತ ಆಟಗಾರ್ತಿಯರು ಅನಿವಾರ್ಯವಾಗಿ  ತೆರೆಮರೆಯಲ್ಲೇ ಇರಬೇಕಾಗಿತ್ತು. ಜಿಲ್ಲಾ ಅಥವಾ ರಾಜ್ಯಮಟ್ಟದ ಟೂರ್ನಿಗಳಲ್ಲಿ ಆಡಿ ಸುಮ್ಮನಾಗಬೇಕಿತ್ತು.

ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವ ಹಂಬಲವಿದ್ದರೂ, ಪ್ರತಿಭೆ ತೋರಿಸಲು ಅವಕಾಶ ಸಿಗದ ಎಷ್ಟೋ ಮಂದಿ ಇದ್ದಾರೆ. ಐಡಬ್ಲ್ಯುಎಲ್‌ ಆರಂಭವಾಗಿರುವ ಕಾರಣ ಯುವ ಹಾಗೂ ಪ್ರತಿಭಾನ್ವಿತ ಆಟಗಾರ್ತಿಯರ ಮೊಗದಲ್ಲಿ ಮಂದಹಾಸ ಮೂಡಿದೆ. ಈ ಲೀಗ್‌ ರಾಷ್ಟ್ರೀಯ ತಂಡದ ಬಲ  ಹೆಚ್ಚಿಸಲು ಕಾರಣವಾಗಬಹುದು.

ಹಲವು ದೇಶಗಳಲ್ಲಿವೆ
ವಿದೇಶಗಳಲ್ಲಿ ಮಹಿಳೆಯರ ವೃತ್ತಿಪರ ಫುಟ್‌ಬಾಲ್‌ ಲೀಗ್‌ ಆರಂಭವಾಗಿ ಕೆಲ ವರ್ಷಗಳು ಕಳೆದಿವೆ. ಫುಟ್‌ಬಾಲ್‌ ಕ್ರೀಡೆ ಜನಪ್ರಿಯತೆ ಹೊಂದಿರುವ ಹೆಚ್ಚಿನ ಎಲ್ಲ ರಾಷ್ಟ್ರಗಳಲ್ಲೂ ಮಹಿಳಾ ಲೀಗ್‌ಗಳು ನಡೆಯುತ್ತಿವೆ. ಆದರೆ ಪುರುಷರ ಲೀಗ್‌ಗಳಷ್ಟು (ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌, ಯುರೋಪಿಯನ್‌ ಪ್ರೀಮಿಯರ್‌ ಲೀಗ್‌, ಚಾಂಪಿಯನ್ಸ್‌ ಲೀಗ್‌) ಜನಪ್ರಿಯತೆ ಗಳಿಸಿಲ್ಲ.

ನ್ಯಾಷನಲ್‌ ವಿಮೆನ್ಸ್‌ ಸಾಕರ್‌ ಲೀಗ್‌ (ಅಮೆರಿಕ), ಬುಂಡೆಸ್‌ಲಿಗಾ (ಜರ್ಮನಿ), ಎಲ್‌.ಲೀಗ್‌ (ಜಪಾನ್‌), ವಿಮೆನ್ಸ್‌ ಸೂಪರ್‌ ಲೀಗ್‌ (ಇಂಗ್ಲೆಂಡ್‌), ವೆಸ್ಟ್‌ಫೀಲ್‌ ವಿಮೆನ್ಸ್‌ ಲೀಗ್‌ (ಆಸ್ಟ್ರೇಲಿಯಾ), ಸೀರೀ ಎ (ಇಟಲಿ), ಡಮಾಲ್ಸ್‌ವೆನ್‌ಸ್ಕನ್‌ (ಸ್ವೀಡನ್‌) ಕೆಲವೊಂದು ಜನಪ್ರಿಯ ಮಹಿಳಾ ಲೀಗ್‌ಗಳಾಗಿವೆ. ಇಂತಹ ಲೀಗ್‌ಗಳಿಂದಾಗಿ ಅಲ್ಲಿನ ಆಟಗಾರ್ತಿಯರಿಗೆ ವರ್ಷವಿಡೀ ತರಬೇತಿ ದೊರೆಯುತ್ತದೆ. ಇದರಿಂದ ಅಲ್ಲಿನ ರಾಷ್ಟ್ರೀಯ ತಂಡಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತವೆ.

ಯಶಸ್ವಿಯಾಗುವುದೇ?
ಮಹಿಳಾ ಫುಟ್‌ಬಾಲ್‌ ಕ್ರೀಡೆಯಲ್ಲಿ ವೃತ್ತಿಪರತೆ ತರುವುದು ಲೀಗ್‌ನ ಉದ್ದೇಶ ಎಂದು ಎಐಎಫ್‌ಎಫ್‌ ಹೇಳಿದೆ. ಲೀಗ್‌ ಎಷ್ಟರಮಟ್ಟಿಗೆ  ಯಶಸ್ವಿಯಾಗಲಿದೆ ಎಂಬ ಪ್ರಶ್ನೆ ಕ್ರೀಡಾಭಿಮಾನಿಗಳನ್ನು ಕಾಡುತ್ತಿದೆ.

ಐಡಬ್ಲ್ಯುಎಲ್‌ ರಾತ್ರಿ ಬೆಳಗಾಗುವುದರೊಳಗೆ ಭಾರತದ ಮಹಿಳಾ ಫುಟ್‌ಬಾಲ್‌ ಕ್ರೀಡೆಯ ದಿಕ್ಕನ್ನು ಬದಲಿಸಬಹುದು ಎಂದು ನಿರೀಕ್ಷಿಸುವುದು ತಪ್ಪು. ಅದಕ್ಕಾಗಿ ಕೆಲವು ವರ್ಷಗಳೇ ಹಿಡಿಯಬಹುದು.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿ ಗಳಿಸಿರುವ ಯಶಸ್ಸು ಏನೆಂಬುದು ಎಲ್ಲರಿಗೂ ತಿಳಿದಿದೆ. ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಇದು ಹಣ ಹಾಗೂ ಹೆಸರನ್ನು ತಂದಿತ್ತಿದೆ. ಆದರೂ ಬಿಸಿಸಿಐ ಮಹಿಳೆಯರಿಗಾಗಿ ಕ್ರಿಕೆಟ್‌ ಲೀಗ್‌ ಆರಂಭಿಸುವ ಧೈರ್ಯ ತೋರಿಸಿಲ್ಲ. ಎಷ್ಟೇ ಕಸರತ್ತು ನಡೆಸಿದರೂ ಮಹಿಳೆಯರ ಪಂದ್ಯಗಳಿಗೆ ಪ್ರೇಕ್ಷಕರನ್ನು ಸೆಳೆಯುವುದು ಕಷ್ಟ ಎಂಬುದು ಬಿಸಿಸಿಐಗೆ ಗೊತ್ತು. ಒಂದು ಲೀಗ್‌ನ ಯಶಸ್ಸಿನಲ್ಲಿ ಪ್ರೇಕ್ಷಕರು ನಿರ್ಣಾಯಕ ಪಾತ್ರ ವಹಿಸುತ್ತಾರೆ.

ಭಾರತದಲ್ಲಿ ಮಹಿಳಾ ಕ್ರಿಕೆಟ್‌ ಜನಪ್ರಿಯತೆ ಪಡೆದಿಲ್ಲ. ಅದೇ ರೀತಿ ಮಹಿಳೆಯರ ಫುಟ್‌ಬಾಲ್‌ ಕೂಡಾ ಪ್ರೇಕ್ಷಕರನ್ನು ಸೆಳೆಯುವುದಿಲ್ಲ. ಇಂತಹ ಸವಾಲಿನ ನಡುವೆಯೂ ಎಐಎಫ್‌ಎಫ್‌ ಲೀಗ್‌ ಆರಂಭಿಸಿರುವುದು ಶ್ಲಾಘನೀಯ.

ಪಾಲ್ಗೊಳ್ಳುವ  ತಂಡಗಳು
ಜೆಪ್ಪಿಯಾರ್ ಎಫ್‌ಸಿ (ಪುದುಚೇರಿ), ಈಸ್ಟರ್ನ್ ಸ್ಪೋರ್ಟಿಂಗ್ ಯೂನಿಯನ್ (ಮಣಿಪುರ), ರೈಸಿಂಗ್ ಸ್ಟೂಡೆಂಟ್ಸ್‌ ಕ್ಲಬ್ (ಒಡಿಶಾ), ಎಫ್‌ಸಿ ಅಲಕಪುರ (ಹರಿಯಾಣ), ಐಜ್ವಾಲ್ ಫುಟ್‌ಬಾಲ್ ಕ್ಲಬ್ (ಮಿಜೊರಾಂ) ಎಫ್‌ಸಿ ಪುಣೆ ಸಿಟಿ (ಮಹಾರಾಷ್ಟ್ರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT