ADVERTISEMENT

ಟೆನಿಸ್‌: ಕ್ವಾರ್ಟರ್‌ ಫೈನಲ್‌ಗೆ ಒಸಾಕ

ಏಜೆನ್ಸೀಸ್
Published 4 ಅಕ್ಟೋಬರ್ 2018, 15:32 IST
Last Updated 4 ಅಕ್ಟೋಬರ್ 2018, 15:32 IST
ಜಪಾನ್‌ನ ನವೊಮಿ ಒಸಾಕ ಚೆಂಡನ್ನು ಹಿಂತಿರುಗಿಸಲು ಪ್ರಯತ್ನಿಸಿದರು -ರಾಯಿಟರ್ಸ್‌ ಚಿತ್ರ
ಜಪಾನ್‌ನ ನವೊಮಿ ಒಸಾಕ ಚೆಂಡನ್ನು ಹಿಂತಿರುಗಿಸಲು ಪ್ರಯತ್ನಿಸಿದರು -ರಾಯಿಟರ್ಸ್‌ ಚಿತ್ರ   

ಬೀಜಿಂಗ್‌: ಜಪಾನ್‌ನ ನವೊಮಿ ಒಸಾಕ, ಚೀನಾ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ್ದಾರೆ.

ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಮೂರನೇ ಸುತ್ತಿನ ಪೈಪೋಟಿಯಲ್ಲಿ ಒಸಾಕ 6-1, 6-2ರ ನೇರ ಸೆಟ್‌ಗಳಿಂದ ಜರ್ಮನಿಯ ಜೂಲಿಯಾ ಜಾರ್ಜಸ್‌ ಅವರನ್ನು ಪರಾಭವಗೊಳಿಸಿದರು. ಈ ಹೋರಾಟ 65 ನಿಮಿಷ ನಡೆಯಿತು.

ಇತ್ತೀಚೆಗೆ ನಡೆದಿದ್ದ ಅಮೆರಿಕ ಓಪನ್‌ ಟೂರ್ನಿಯ ಫೈನಲ್‌ನಲ್ಲಿ ಸೆರೆನಾ ವಿಲಿಯಮ್ಸ್‌ ಅವರನ್ನು ಮಣಿಸಿ ಚೊಚ್ಚಲ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದಿದ್ದ ಒಸಾಕ, ಜೂಲಿಯಾ ವಿರುದ್ಧದ ಹೋರಾಟದ ಮೊದಲ ಸೆಟ್‌ನಲ್ಲಿ ಮಿಂಚಿದರು.

ADVERTISEMENT

ಶರವೇಗದ ಸರ್ವ್‌ಗಳನ್ನು ಮಾಡಿದ ಜಪಾನ್‌ನ ಆಟಗಾರ್ತಿ, ಚುರುಕಿನ ಡ್ರಾಪ್‌ಗಳ ಮೂಲಕ ಗೇಮ್‌ ಗೆದ್ದರು.

ಎರಡನೇ ಸೆಟ್‌ನಲ್ಲೂ ಒಸಾಕ ಅಬ್ಬರಿಸಿದರು. ಬೇಸ್‌ಲೈನ್‌ ಮತ್ತು ಕ್ರಾಸ್‌ಕೋರ್ಟ್‌ ಹೊಡೆತಗಳ ಮೂಲಕ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿ ನಿರಾಯಾಸವಾಗಿ ಗೆಲುವಿನ ತೋರಣ ಕಟ್ಟಿದರು.

ಮೂರನೇ ಸುತ್ತಿನ ಇತರ ಪಂದ್ಯಗಳಲ್ಲಿ ಲಾಟ್ವಿಯಾದ ಅನಸ್ತೇಸಿಜಾ ಸೆವಾಸ್ಟೋವಾ 6–3, 6–2ರಲ್ಲಿ ಕ್ರೊವೇಷ್ಯಾದ ಡೊನ್ನಾ ವೆಕಿಕ್‌ ಎದುರೂ, ಸ್ಲೊವೇಕಿಯಾದ ಡಾಮಿನಿಕ್‌ ಸಿಬುಲ್ಕೋವಾ 4–6, 6–2, 6–3ರಲ್ಲಿ ಅಮೆರಿಕದ ಸ್ಲೋನ್‌ ಸ್ಟೀಫನ್ಸ್‌ ವಿರುದ್ಧವೂ ಗೆದ್ದರು.

ಎರಡನೇ ಸುತ್ತಿನ ಪಂದ್ಯಗಳಲ್ಲಿ ಜಾಂಗ್‌ ಶೂಯಿ 6–1, 6–2ರಲ್ಲಿ ಟೈಮಿ ಬಾಬೊಸ್‌ ಎದುರೂ, ಕ್ಯಾರೋಲಿನಾ ಪ್ಲಿಸ್ಕೋವಾ 6–3, 6–4ರಲ್ಲಿ ಅಲಿಯಾಕ್ಸಾಂಡ್ರಾ ಸಸನೊವಿಚ್‌ ಮೇಲೂ, ಕ್ಯಾರೋಲಿನ್‌ ವೋಜ್ನಿಯಾಕಿ 7–5, 6–3ರಲ್ಲಿ ಪೆಟ್ರಾ ಮಾರ್ಟಿಕ್‌ ವಿರುದ್ಧವೂ ವಿಜಯಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.