ADVERTISEMENT

ಗ್ರಾಹಕರಿಗಾಗಿ ವಿಜಯಾ ಬ್ಯಾಂಕ್‌ ಹೊಸ ಇ ಸೇವೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2014, 19:30 IST
Last Updated 30 ಸೆಪ್ಟೆಂಬರ್ 2014, 19:30 IST

ಇದು ತಂತ್ರಜ್ಞಾನದ ಕಾಲ. ಮೊಬೈಲ್‌, ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್‌ಗಳ ಯುಗ. ಕಾಗದ ರಹಿತ ಕಾರ್ಯ ನಿರ್ವಹಣೆ ಕಾಲವಿದು. ಈ ನಿಟ್ಟಿನಲ್ಲಿ  ವಿಜಯಾ ಬ್ಯಾಂಕ್‌ ಇತ್ತೀಚೆಗೆ ಏಳು ಬಗೆಯ ಗ್ರಾಹಕ ಸ್ನೇಹಿ ‘ಇ–ಸೇವೆ’ಗಳನ್ನು ಪರಿಚಯಿಸಿದೆ. ಕೆಲ ಪರಿಷ್ಕೃತಗೊಂಡ ಸೇವೆಗಳೂ ಇದರ­ಲ್ಲಿವೆ.

*ವಿ –ಆನ್‌ಲೈನ್‌: www.vijayabank.com ವೈಬ್‌ಸೈಟ್‌ನಲ್ಲಿ ತಮಗೆ ಅನುಕೂಲ­ಕರವಾದ ಬ್ರಾಂಚ್‌ನಲ್ಲಿ ಉಳಿತಾಯ ಖಾತೆ ತೆರೆಯಲು ಗ್ರಾಹಕರಿಗೆ ಅವಕಾಶ ನೀಡುವ ಸೇವೆ ಇದಾಗಿದೆ.

*ವಿ–ಜ್ಞಾನಸಾಗರ: ವಿಜಯಾ ಬ್ಯಾಂಕ್‌ನ ವಿಶಿಷ್ಟ ಪ್ರಯತ್ನವಿದು.  ಸಾರ್ವಜನಿಕರಿಗೆ ಆರ್ಥಿಕ ಜ್ಞಾನ ಒದಗಿಸುವ ಭಾಗವಾಗಿ ಹಣಕಾಸಿನ ಮಾಹಿತಿಗಳನ್ನು ತಲುಪಿಸುವುದು ಇದರ ಉದ್ದೇಶ. ಇದೊಂದು ಆ್ಯಂಡ್ರಾಯ್ಡ್‌ ಮೊಬೈಲ್‌ ಅಪ್ಲಿಕೇಷನ್‌. ಈ ಆ್ಯಪ್‌ ಚಂದಾದಾರರಿಗೆ ಆರ್ಥಿಕ ಹಾಗೂ ಬ್ಯಾಂಕಿಂಗ್ ವಲಯದ ಸುದ್ದಿಗಳ ನಿತ್ಯ ಅಪ್‌ಡೇಟ್‌ ಒದಗಿಸುತ್ತದೆ.

*ವಿ–ಕ್ವಿಕ್‌ ಪೇ: ಇದು ಬಿಲ್‌ ಕಟ್ಟುವ ಮುಂದಿನ ತಲೆಮಾರಿನ ಸೇವೆ. ವಿಧಾನದಲ್ಲಿ ಸ್ಕಾನ್‌ ಮಾಡುವ ಮೂಲಕ ಬಿಲ್‌ ಪಾವತಿಸಬಹುದು. ವ್ಯಾಪಾರಿ ನೀಡುವ ಬಿಲ್ಲಿನಲ್ಲಿರುವ QR ಅನ್ನು ಗ್ರಾಹಕರೇ ಸ್ಕ್ಯಾನ್‌ ಮಾಡಿ ಮೊತ್ತವನ್ನು ಪಾವತಿಸಬಹುದು. ಡೆಬಿಟ್‌್/ಕ್ರೆಡಿಟ್‌ ಕಾರ್ಡ್‌ಗಳನ್ನು ಸ್ವೈಪ್‌ ಮಾಡುವ ಅಗತ್ಯವಿಲ್ಲ.  ಆದರೆ ಈ ಸೇವೆಯ ಲಾಭ ಪಡೆಯಲು  ವ್ಯಾಪಾರಿ ಹಾಗೂ ಗ್ರಾಹಕ ಇಬ್ಬರೂ ಈ ಸೌಲಭ್ಯ ಹೊಂದಿರಲೇಬೇಕು.

*ವಿ–ಇ–ಪಾಸ್‌ಬುಕ್‌+ 2.0: ಸುಮಾರು ಒಂದು ವರ್ಷದ ಹಿಂದೆಯೇ ಪರಿಚಯಿಸಿರುವ ಸೇವೆ ಇದು. ಪಾಸ್‌ವರ್ಡ್‌ಗಳ ಆನ್‌ಲೈನ್‌ ಬದ­ಲಾವಣೆ, ವಿವರಗಳನ್ನು ಹಿಂದಿ/ಕನ್ನಡ ಭಾಷೆಗಳಲ್ಲಿ ನೋಡು­ವುದು ಸೇರಿದಂತೆ ಹಲವು  ವಿಶೇಷತೆಗಳು ಪರಿಷ್ಕೃತ ಆವೃತ್ತಿಯಲ್ಲಿ ಸೇರ್ಪಡೆಗೊಂಡಿವೆ.

*ಎನ್‌ಯುಯುಪಿ: ಮೊಬೈಲ್‌ ಬ್ಯಾಂಕಿಂಗ್‌ ಸೇವೆಯನ್ನು ವಿಜಯಾ ಬ್ಯಾಂಕ್‌ 2009ರಷ್ಟು ಹಿಂದೆಯೇ ಆರಂಭಿಸಿದ್ದರೂ ಇದು ಕೇವಲ ಹೈ ಎಂಡ್‌ ಫೋನ್‌ ಉಳ್ಳವರಿಗೆ ಮಾತ್ರ ದೊರೆಯುತ್ತಿತ್ತು. ಇದೀಗ ಟೆಲಿಕಾಂ ಸಂಸ್ಥೆಗಳು ಒದಗಿಸುವ ಎನ್‌ಪಿಸಿಐನ  ಯುಎಸ್‌ಎಸ್‌ಡಿ ಬಳಸಿಕೊಂಡು ಬೇಸಿಕ್‌ ಮೊಬೈಲ್‌ ಹೊಂದಿರುವ ಗ್ರಾಹಕರಿಗೂ  ಮೊಬೈಲ್‌ ಬ್ಯಾಂಕಿಂಗ್‌ ಸೇವೆ ಒದಗಿಸುವ ಪ್ರಯತ್ನ ಇದಾಗಿದೆ.

*ವಿ–ಮೊಬೈಲ್‌ 2.0: ಮೊಬೈಲ್‌ ಬ್ಯಾಂಕಿಂಗ್‌ನ ಹೊಸ ಆವೃತ್ತಿ ಇದು. ಬ್ಯಾಂಕಿಂಗ್‌ ಅನ್ನು ಇನ್ನಷ್ಟು ಸರಳೀಕರಿ­ಸುವ ನಿಟ್ಟಿನಲ್ಲಿ ಹೊಸ ನೋಟ ಹಾಗೂ ಮತ್ತಷ್ಟು ವೈವಿಧ್ಯತೆ­ಯುಳ್ಳ ಸೌಲಭ್ಯ­ಗಳನ್ನು ಹೆಚ್ಚುವರಿ­ಯಾಗಿ ಸೇರಿಸ­ಲಾಗಿದೆ.

*ವಿ–ಅಬ್ಯಾಕಸ್‌: ಮೊಬೈಲ್‌ ಬ್ಯಾಂಕಿಂ­ಗ್‌­ನಂತೆಯೇ ‘ವಿ–ಅಬ್ಯಾಕಸ್‌’ ಬ್ರ್ಯಾಂಡ್‌ ಅಡಿಯಲ್ಲಿ  ಟ್ಯಾಬ್‌ ಬ್ಯಾಂಕಿಂಗ್ ಸೇವೆ ಒದಗಿಸುತ್ತಿದೆ ವಿಜಯಾ ಬ್ಯಾಂಕ್‌. ಈ ಸೇವೆಯಡಿ ಗ್ರಾಹಕರು ಬ್ಯಾಂಕಿನ ಯಾವುದೇ ಬ್ರ್ಯಾಂಚ್‌ಗೂ  ಭೇಟಿ ನೀಡದೇ ಮನೆ ಅಥವಾ ಕಚೇರಿ­ಯಿಂದಲೇ ನೇರವಾಗಿ ಖಾತೆ ತೆರೆಯುವ ಸೌಲಭ್ಯ ಒದಗಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.