ADVERTISEMENT

ಜಡೇಜಾ ಮೊಬೈಲ್ ಆ್ಯಪ್..

​ಪ್ರಜಾವಾಣಿ ವಾರ್ತೆ
Published 25 ಜುಲೈ 2017, 19:30 IST
Last Updated 25 ಜುಲೈ 2017, 19:30 IST
ಜಡೇಜಾ ಮೊಬೈಲ್ ಆ್ಯಪ್..
ಜಡೇಜಾ ಮೊಬೈಲ್ ಆ್ಯಪ್..   

ಭಾರತದ ಜನಪ್ರಿಯ ಕ್ರಿಕೆಟ್ ಆಟಗಾರ ರವೀಂದ್ರ ಜಡೇಜಾ ತಮ್ಮ ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಲ್ಲಿರಲು ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ. ಈ ಆ್ಯಪ್ ಅನ್ನು ಅಮೆರಿಕದ ಸಾಫ್ಟ್‌ವೇರ್‌ ಕಂಪೆನಿಯೊಂದು ಅಭಿವೃದ್ಧಿಪಡಿಸಿದೆ. ಈ ರೀತಿ ಆ್ಯಪ್ ಹೊಂದಿರುವ ದೇಶದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೂ ಜಡೇಜಾ ಪಾತ್ರರಾಗಿದ್ದಾರೆ.

ಅಭಿಮಾನಿಗಳು ಗೂಗಲ್‌ ಪ್ಲೇಸ್ಟೋರ್‌ ನಲ್ಲಿರುವ ಈ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಜಡೇಜಾ ಅವರನ್ನು ನೇರವಾಗಿ ಸಂಪರ್ಕ ಮಾಡಬಹುದು. ಇದರಲ್ಲಿ ವಿವಿಧ ಸಾಮಾಜಿಕ ಜಾಲತಾಣಗಳು ಒಂದೇ ವೇದಿಕೆಯಲ್ಲಿ ದೊರೆಯುತ್ತವೆ. ಜಡೇಜಾ ಅವರು ಟ್ವೀಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹಾಗೂ ಜಿಪ್ಲೆಸ್ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡುತ್ತಾರೆ. ಇವರನ್ನು ಲಕ್ಷಾಂತರ ಜನರು ಫಾಲೋ ಮಾಡುತ್ತಿದ್ದಾರೆ.

ಇಂದು ಜಡೇಜಾ ಏನು ಬರೆದಿದ್ದಾರೆ, ಯಾವ ಫೋಟೊ, ವಿಡಿಯೊ ಹಾಕಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಿಗೆ ಇದ್ದೆ ಇರುತ್ತದೆ. ಅದಕ್ಕಾಗಿ ಅವರು ಟ್ವೀಟರ್ ಖಾತೆ ನೋಡಿದ ಬಳಿಕ ಅದನ್ನು ಲಾಗ್್ಔಟ್ ಮಾಡಿ ಪುನಃ ಫೇಸ್‌ಬುಕ್ ಖಾತೆಗೆ ಲಾಗ್ ಇನ್ ಆಗಬೇಕಾಗುತ್ತದೆ. ಇದೇ ರೀತಿ ಇನ್ಸ್‌ಸ್ಟಾಗ್ರಾಂ ಹಾಗೂ ಜಿಪ್ಲೆಸ್ ಖಾತೆಗಳಿಗೂ ಲಾಗ್ ಇನ್ ಆಗಬೇಕಾಗುತ್ತದೆ. ಇದು ಬಳಕೆದಾರರಿಗೆ ಕಿರಿಕಿರಿಯಾಗುತ್ತದೆ. ಅಭಿಮಾನಿಗಳಿಗೆ ಈ ಕಿರಿ ಕಿರಿಯನ್ನು ತಪ್ಪಿಸುವ ಸಲುವಾಗಿ ಜಡೇಜಾ ಈ ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ.

ADVERTISEMENT

ಈ ಆ್ಯಪ್‌ನಲ್ಲಿ ಜಡೇಜಾ ಬಯೋಡೇಟಾವನ್ನು ಅಪ್‌ಲೋಡ್‌ ಮಾಡಲಾಗಿದೆ. ಕ್ರಿಕೆಟ್ ಪಂದ್ಯಗಳ ಮಾಹಿತಿ, ಲೈವ್ ಸ್ಕೋರ್ ಸೇರಿದಂತೆ ಅಭಿಮಾನಿಗಳು ಜಡೇಜಾ ಜತೆಯಲ್ಲಿ ನೇರವಾಗಿ ವಿಡಿಯೊ ಅಥವಾ ಆಡಿಯೊ ಸಂವಹನ ನಡೆಸಬಹುದು. ನನ್ನ ಅಭಿಮಾನಿಗಳನ್ನು ನೇರವಾಗಿ ಸಂಪರ್ಕ ಮಾಡುವುದಕ್ಕೆ ಈ ಆ್ಯಪ್ ಉತ್ತಮ ವೇದಿಕೆಯಾಗಿದೆ. ಇದನ್ನು ಅಭಿಮಾನಿಗಳಿಗೆ ಅರ್ಪಿಸಿರುವುದಾಗಿ ಜಡೇಜಾ ತಿಳಿಸಿದ್ದಾರೆ.

ಗೂಗಲ್ ಪ್ಲೇಸ್ಟೋರ್: jadeja mobile app

**

ಫೋನ್‌ ಭದ್ರತೆಗೆ ಫೈರ್‌ವಾಲ್‌ ಪ್ರೋಗ್ರಾಂ

ಇಸ್ರೇಲ್ ದೇಶದ ವಿಜ್ಞಾನಿಗಳು ಸ್ಮಾರ್ಟ್‌ಫೋನ್‌ ಭದ್ರತೆಗಾಗಿ ಫೈರ್‌ವಾಲ್‌ ಪ್ರೋಗ್ರಾಂ ಅಭಿವೃದ್ಧಿಪಡಿಸಿದ್ದಾರೆ.

ಈ ಫೈರ್‌ವಾಲ್‌ ಪ್ರೋಗ್ರಾಂ ಮೂಲಕ ಕಂಪ್ಯೂಟರ್, ಲ್ಯಾಪ್‌ಟಾಪ್‌, ಟ್ಯಾಬ್ಲೆಟ್ ಹಾಗೂ ಸ್ಮಾರ್ಟ್‌ಫೋನ್‌ಗಳನ್ನು ಹ್ಯಾಕರ್‌ಗಳು ಮತ್ತು ವೈರಸ್‌ಗಳಿಂದ ರಕ್ಷಣೆ ಮಾಡಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಫೈರ್‌ವಾಲ್‌ ಒಂದು ಆ್ಯಂಟಿ ವೈರಸ್ ಸಾಫ್ಟ್‌ವೇರ್‌ ಅಲ್ಲ! ಬದಲಿಗೆ ಇದೊಂದು ಪ್ರೋಗ್ರಾಂ ಆಗಿದೆ. ನಮ್ಮ ಕಂಪ್ಯೂಟರ್ ಗಳಲ್ಲಿ ಈ ಫೈರ್‌ವಾಲ್‌ ಪ್ರೋಗ್ರಾಂ ಅನ್ನು ಸೇವ್ ಮಾಡಿಕೊಂಡರೇ ಸಾಕು. ಯಾವುದೇ ವೈರಸ್ ಅಥವಾ ಹ್ಯಾಕಿಂಗ್ ದಾಳಿ ನಡೆಯುವುದಿಲ್ಲ. ಹಾಗೆಯೇ ಇದನ್ನು ಪದೇ ಪದೇ ಅಪ್‌ಡೇಟ್‌ ಮಾಡುವ ಅಗತ್ಯವೂ ಇರುವುದಿಲ್ಲ ಎನ್ನುತ್ತಾರೆ ವಿಜ್ಞಾನಿಗಳು.

ಇನ್ನು ಮೊಬೈಲ್ ಅಥವಾ ಸ್ಮಾರ್ಟ್‌ಫೋನ್‌ ಬಳಕೆದಾರರು ಈ ಫೈರ್‌ವಾಲ್‌ ಪ್ರೋಗ್ರಾಂ ಅನ್ನು ಮೈಕ್ರೊ ಚಿಪ್‌ನಲ್ಲಿ ಸೇವ್ ಮಾಡಿಕೊಂಡು ಅದನ್ನು ಫೋನ್‌ನಲ್ಲಿ ಅಳವಡಿಸಿಕೊಂಡರೇ ಅದು ಸ್ವಯಂ ಚಾಲಿತವಾಗಿ ರಕ್ಷಣೆ ಒದಗಿಸುತ್ತದೆ. ಇನ್ನು ಮುಂದೆ ಪದೇ ಪದೇ ಆ್ಯಂಟಿ ವೈರಸ್ ಕೊಳ್ಳುವುದು, ಅಪ್‌ಗ್ರೇಡ್‌ ಮಾಡುವ ಪ್ರಮೆಯವೇ ಇರುವುದಿಲ್ಲ ಎನ್ನುತ್ತಾರೆ ವಿಜ್ಞಾನಿಗಳು.
ಬಹುತೇಕ ಈ ಫೈರ್‌ವಾಲ್‌ ಪ್ರೋಗ್ರಾಂ ಶೀಘ್ರವೇ ಬಿಡುಗಡೆ ಆಗಲಿದೆ.
www.firewallprogramme.org

**

ಮಹಿಳಾ ಸುರಕ್ಷತೆಯ ಹಿಮ್ಮತ್‌ ಆ್ಯಪ್…

ದೇಶದ ರಾಜಧಾನಿ ನವದೆಹಲಿಯಲ್ಲಿ ಮಹಿಳೆಯರಿಗೆ ರಕ್ಷಣೆ ಸಿಗುತ್ತಿಲ್ಲ ಎಂಬ ಕೂಗುಗಳ ನಡುವೆ ದೆಹಲಿ ಸರ್ಕಾರ ಮಹಿಳೆಯರ ಭದ್ರತೆಗಾಗಿ ಹೊಸ ಆ್ಯಪ್ ಅಭಿವೃದ್ಧಿಪಡಿಸಿದೆ. ಇದಕ್ಕೆ ಹಿಮ್ಮತ್ ಆ್ಯಪ್ ಎಂದು ಹೆಸರಿಡಲಾಗಿದೆ.

ಈ ಆ್ಯಪ್ ಅನ್ನು 2015ರಲ್ಲೇ ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ ಹಲವು ದೋಷಗಳು ಕಂಡು ಬಂದಿದ್ದರಿಂದ ಅದನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿತ್ತು. ಅನಕ್ಷರಸ್ಥರು ಈ ಆ್ಯಪ್ ಬಳಕೆ ಮಾಡಲು ಕಷ್ಟವಾಗಿತ್ತು. ನೋಂದಣಿಗಾಗಿ ಹಲವಾರು ಮಾಹಿತಿಯನ್ನು ನೀಡಬೇಕಾಗಿತ್ತು. ಇದೀಗ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ವಿಳಾಸದೊಂದಿಗೆ ಸರಳವಾಗಿ ನೋಂದಣಿ ಮಾಡಿಕೊಳ್ಳಬಹುದು. ಆಪತ್ತಿನಲ್ಲಿರುವ ಮಹಿಳೆಯರು ಈ ಆ್ಯಪ್ ಮೂಲಕ ಪೊಲೀಸರು, ಸಂಬಂಧಿಕರು, ಕುಟುಂಬದವರು ಹಾಗೂ ಗೆಳೆಯರನ್ನು ಸಂಪರ್ಕಿಸಬಹುದು.

ಆಂಡ್ರಾಯ್ಡ್‌ ಮತ್ತು ಐಒಎಸ್ ಮಾದರಿಯಲ್ಲಿ ಆ್ಯಪ್ ಅನ್ನು ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಉದಾಹರಣೆಗೆ ಯುವತಿಯೊಬ್ಬರು ಆಪತ್ತಿನಲ್ಲಿ ಇರುತ್ತಾರೆ ಎಂದಿಟ್ಟುಕೊಳ್ಳಿ. ಸಂಕಷ್ಟಕ್ಕೆ ಸಿಲುಕಿದ ಯುವತಿ ತನ್ನ ಮೊಬೈಲ್‌ನಲ್ಲಿರುವ ಹಿಮ್ಮತ್‌ ಆ್ಯಪ್ ಅನ್ನು ಆನ್ ಮಾಡಿದ ಕೂಡಲೇ ಈ ಮೊಬೈಲ್ ಸಂಖ್ಯೆಯಿಂದ ಪೊಲೀಸರಿಗೆ ಮಾಹಿತಿ ರವಾನೆಯಾಗುತ್ತದೆ.

ಜತೆಗೆ, ಕುಟುಂಬದವರು ಮತ್ತು ಗೆಳೆಯರಿಗೂ ಆಪತ್ತಿನಲ್ಲಿ ಇರುವ ವಿಷಯ ತಿಳಿಯುತ್ತದೆ. ಗೂಗಲ್ ಮ್ಯಾಪ್ ನೆರವಿನಿಂದ ಪೊಲೀಸರು ಯುವತಿ ಇರುವ ಸ್ಥಳವನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಇದರಿಂದ ಎಲ್ಲ ದಿಕ್ಕಿನಲ್ಲೂ ಕಾರ್ಯಾಚರಣೆ ನಡೆಸಲು ಅನುಕೂಲವಾಗುತ್ತದೆ.
ಗೂಗಲ್ ಪ್ಲೇಸ್ಟೋರ್: Himmat app

**

ಇದೀಗ ಬಂತು ಗೊಡ್ಯಾಡಿ ಇ-ಮೇಲ್‌

ವಿಶ್ವದ ಅತಿದೊಡ್ಡ ಇಂಟರ್‌ನೆಟ್ ಡೊಮೈನ್ ಸೇವೆ ಒದಗಿಸುವ ಗೊಡ್ಯಾಡಿ(GoDaddy) ಇದೀಗ ಸಣ್ಣ ವ್ಯಾಪಾರಸ್ಥರು ಮತ್ತು ಸಣ್ಣ ಉದ್ದಿಮೆದಾರರ ಅನುಕೂಲಕ್ಕಾಗಿ ಇ–ಮೇಲ್ ಸೇವೆಯನ್ನು ಆರಂಭಿಸಿದೆ. ಇ-ಮೇಲ್ ಸೇವೆಯ ಮೂಲಕ ಬಳಕೆದಾರರು ತಮ್ಮ ವಹಿವಾಟಿನ ಮಾಹಿತಿಯನ್ನು ಗೌಪ್ಯವಾಗಿ ಇಟ್ಟುಕೊಳ್ಳುವುದರ ಜೊತೆಗೆ ತಮ್ಮ ವ್ಯಾಪಾರವನ್ನು ಮತ್ತಷ್ಟು ವಿಸ್ತಾರ ಮಾಡಿಕೊಳ್ಳಬಹುದು ಎಂದು ಸಂಸ್ಥೆ ತಿಳಿಸಿದೆ.

ಭಾರತದಲ್ಲಿ ಗ್ರಾಹಕರು ಈ ಸೇವೆಯನ್ನು ಬಳಸಿಕೊಳ್ಳಲು ತಿಂಗಳಿಗೆ ₹ 39 ಪಾವತಿಸಬೇಕು. 10 ಜಿ.ಬಿ. ವರೆಗೆ ಮಾತ್ರ ಮಾಹಿತಿಯನ್ನು ಉಚಿತವಾಗಿ ಸಂಗ್ರಹಿಸಿಟ್ಟುಕೊಳ್ಳಬಹುದು. ಗೊಡ್ಯಾಡಿ ಮೇಲ್‌ಗೆ ಯಾವುದೇ ಹ್ಯಾಕರ್‌ಗಳು ಕನ್ನ ಹಾಕದಂತೆ ವಿನ್ಯಾಸ ಮಾಡಿರುವುದು ವಿಶೇಷ ಎಂದು ಕಂಪೆನಿಯ ಮುಖ್ಯಸ್ಥರಾದ ಆ್ಯಂಡ್ರಿವ್ ಲೂ ಕೀ ಹೇಳುತ್ತಾರೆ.

ಬಳಕೆದಾರರು ಈ ಸೇವೆಯನ್ನು ಮೊಬೈಲ್, ಡೆಸ್ಕ್‌ಟಾಪ್‌, ಟ್ಯಾಬ್ಲೆಟ್ ಸಾಧನಗಳ ಮೂಲಕವು ಪಡೆಯಬಹುದು. ಗೊಡ್ಯಾಡಿ ಇ-ಮೇಲ್ ಸೇವೆ ಜಿ–ಮೇಲ್ ಅಕೌಂಟ್ ಸೇವೆಯ ಮಾದರಿಯಲ್ಲಿದೆ. ನಮಗೆ ಜಿ–ಮೇಲ್ ಉಚಿತವಾಗಿ ದೊರೆಯುತ್ತದೆ. ಆದರೆ ಗೊಡ್ಯಾಡಿ ಮೇಲ್ ಬಳಸುವವರು ತಿಂಗಳಿಗೆ ಇಂತಿಷ್ಟು ಹಣ ಪಾವತಿಸಬೇಕಾಗುತ್ತದೆ. ವ್ಯವಹಾರಕ್ಕೆ ಅನುಕೂಲವಾಗುವಂತಹ ಹಲವು ವೈಶಿಷ್ಟ್ಯಗಳು ಈ ಮೇಲ್‌ನಲ್ಲಿ ಇರುವುದರಿಂದ ವ್ಯಾಪಾರಸ್ಥರಿಗೆ ಮತ್ತು ಉದ್ದಿಮೆದಾರರಿಗೆ ಗೊಡ್ಯಾಡಿ ಮೇಲ್ ಸೇವೆ ಲಾಭದಾಯಕವಾದುದು ಎಂಬುದು ತಜ್ಞರ ಅಭಿಪ್ರಾಯ.

**

ಹಿರಿಯ ನಾಗರಿಕರ ಸಹಾಯಕ್ಕೆ ಆ್ಯಪ್…

ಮುಂಬೈ ಮೂಲದ ಸ್ವಯಂ ಸೇವಾ ಸಂಸ್ಥೆಯೊಂದು ಹಿರಿಯ ನಾಗರಿಕರ ಸಮಸ್ಯೆಗಳನ್ನು ಕೇಳಲು ಹಾಗೂ ಅವರಿಗೆ ನೆರವು ನೀಡುವ ಸಲುವಾಗಿ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ. ಸಮಸ್ಯೆಯಲ್ಲಿರುವ ಹಿರಿಯ ನಾಗರಿಕರು ಅಜ್ಜಿ ಕೇರ್ ಅಥವಾ ಹೆಲ್ಪ್್ಏಜ್ ಆ್ಯಪ್ ಮೂಲಕ ದೂರು ಸಲ್ಲಿಸಿ ಪರಿಹಾರವನ್ನು ಕಂಡಕೊಳ್ಳಬಹುದು. ಮುಂಬೈನಲ್ಲಿರುವ ಹಿರಿಯ ನಾಗರಿಕರಿಗೆ ಮಾತ್ರ ಈ ಸೇವೆ ಲಭ್ಯವಿದೆ. ಈ ಎರಡು ಆ್ಯಪ್‌ಗಳಲ್ಲಿ ತುರ್ತು ಸಂದರ್ಭಗಳಲ್ಲಿ ನೆರವಾಗುವ ಸಂಖ್ಯೆಯನ್ನು ನಮೂದಿಸಲಾಗಿದೆ. ಸುಲಭವಾಗಿ ದೂರು ನೀಡುವಂತೆ ಈ ಆ್ಯಪ್‌ಗಳನ್ನು ವಿನ್ಯಾಸ ಮಾಡಲಾಗಿದೆ. ಉದಾಹರಣೆಗೆ, ಈ ಆ್ಯಪ್ ಅನ್ನು ತೆರೆದು ಯಾವುದೇ ಸಂಖ್ಯೆಯನ್ನು ಒತ್ತಿದರೂ ಅದು ಅಜಿಕೇರ್ ಅಥವಾ ಹೆಲ್ಪ್್ಏಜ್ ಗೆ ಲಾಗಿನ ಆಗುತ್ತದೆ. ನಂತರ ಸಂಬಂಧಪಟ್ಟರು ಅವರ ನೆರವಿಗೆ ಬರುತ್ತಾರೆ.
ಗೂಗಲ್ ಪ್ಲೇಸ್ಟೋರ್: ajicare/ helpage apps

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.