ADVERTISEMENT

ಪಾರ್ಶ್ವವಾಯು ಪೀಡಿತರೂ ನಡೆಯಬಹುದು!

ಸಿದ್ದೇಶ
Published 6 ಅಕ್ಟೋಬರ್ 2015, 19:47 IST
Last Updated 6 ಅಕ್ಟೋಬರ್ 2015, 19:47 IST

ಪಾರ್ಶ್ವವಾಯುನಿಂದಾಗಿ ಎರಡೂ ಕಾಲುಗಳ ಸ್ವಾದೀನ ಕಳೆದುಕೊಂಡಿದ್ದ ವ್ಯಕ್ತಿಯನ್ನು ನಡೆದಾಡುವಂತೆ ವಿಜ್ಞಾನಿಗಳು ಮಾಡಿದ್ದಾರೆ.  ಆಶ್ಚರ್ಯವಾದರೂ ಇದು ಸತ್ಯ!

ಕಳೆದ ಐದು ವರ್ಷಗಳಿಂದ ಜೀವಂತ ಶವದಂತಾಗಿದ್ದ ವ್ಯಕ್ತಿಯು ಸುಮಾರು 3.66 ಮೀಟರ್‌ ನಡೆಯಲು ವಿಜ್ಞಾನಿ ಗಳು ನೆರವಾಗಿದ್ದಾರೆ. ಮಿದುಳಿನ ಚಲನವಲನದ ಮೇಲೆ ನಿಗಾ ಇಡುವಂತಹ ಸೂಕ್ಷ್ಮ ಯಂತ್ರವನ್ನೇ ಬಳಸಿಕೊಂಡು ಈ ಕಾರ್ಯವನ್ನು ಸಾಧಿಸಿದ್ದಾರೆ.

ಈ ಯಂತ್ರವನ್ನು ಅಳವಡಿಸಿದರೂ, ಪಾರ್ಶ್ವವಾಯು ಪೀಡಿತ ವ್ಯಕ್ತಿಯ ಕಾಲುಗಳಲ್ಲಿ ಮತ್ತೆ ಚೈತನ್ಯ ಮೂಡಲು, ಕಾಲುಗಳಲ್ಲಿ ನಡಿಗೆ ಸಾಮರ್ಥ್ಯವನ್ನು ವ್ಯಕ್ತಿಯ ಮಿದುಳಿನಲ್ಲಿ ಪುನರ್‌ಸ್ಥಾಪಿಸಬೇಕು. ಅದಕ್ಕಾಗಿ ಮೊದಲಿಗೆ ವ್ಯಕ್ತಿಗೆ ಮಾನಸಿಕ ತರಬೇತಿಯನ್ನೂ ನೀಡಬೇಕಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

‘ಐದು ವರ್ಷಗಳಿಂದ ಪಾರ್ಶವಾಯುವಿನಿಂದ ಬಳಲು ತ್ತಿದ್ದರೂ ಸಾಮಾನ್ಯವಾಗಿ ತಿರುಗಾಡಲು ಅವಶ್ಯವಾದ ಅಲೆಗಳು ಮಿದುಳಿನಲ್ಲಿ ಕಾರ್ಯಪ್ರವೃತ್ತವಾಗಿರುತ್ತವೆ’ ಎನ್ನುತ್ತಾರೆ ಕ್ಯಾಲಿಫೋರ್ನಿಯಾ–ಇರ್ವಿನ್‌ ವಿಶ್ವವಿದ್ಯಾಲ ಯದ ಪ್ರಮುಖ ಸಂಶೋಧಕ ಆ್ಯನ್‌ ಡ್ಯು.
‘ಬೆನ್ನುಹುರಿಗೆ ತೊಂದರೆಯಾದರೂ ಮಿದುಳನ್ನು ಕಾರ್ಯಪ್ರವೃತ್ತಗೊಳಿಸುವುದರಿಂದ ಮತ್ತೆ ಕಾಲುಗಳಿಗೆ ನಡೆದಾಡುವ ಶಕ್ತಿ ಬರುತ್ತದೆ.

ಪಾರ್ಶ್ವವಾಯು ಪೀಡಿತರೂ ಮತ್ತೆ ನಡೆದಾಡಲು ಸಾಧ್ಯವಿದೆ ಎಂಬುದನ್ನು ತೋರಿಸಿಕೊಟ್ಟಿದ್ದೇವೆ’ ಎನ್ನುತ್ತಾರೆ ಡಾ. ಡ್ಯು.
ಎಲೆಕ್ಟ್ರೊಎನ್ಸೇಫಾಲೋಗ್ರಾಮ್‌ ಕ್ಯಾಪನ್ನು ತಲೆಗೆ ಅಳವಡಿಸಿ ಮಿದುಳಿನ ಅಲೆಗಳನ್ನು  ಅಧ್ಯಯನ ಮಾಡಿ ರೋಗಿಗೆ ಚಿಕಿತ್ಸೆ ನೀಡಲಾಗುತ್ತದೆ. ಮಾನಸಿಕ ತರಬೇತಿ ಮತ್ತು ಕೈಕಾಲುಗಳ ಚಲನವಲನ ಪ್ರಯತ್ನಗಳ ಜತೆಗೇ ದೈಹಿಕ ಚಟುವಟಿಕೆಗಳನ್ನು ಮತ್ತೆ ರೂಢಿಸಿಕೊಳ್ಳುವುದೂ ಮುಖ್ಯ ಎನ್ನುವುದು ಸಂಶೋಧಕರ ಅಭಿಮತ.

ಯಾವುದೇ ಸಾಧನಗಳ ನೆರವಿಲ್ಲದೇ ತಿರುಗಾಡುವ ತರಬೇತಿಯನ್ನು ರೋಗಿಗೆ ನೀಡಲಾಗಿತ್ತು. ಕೆಳಗೆ ಬೀಳಬಹುದಾದ ಅಪಾಯದಿಂದ ತಪ್ಪಿಸಲು ದೇಹದ ಭಾರ ನಿಭಾಯಿಸಬಲ್ಲ ಸಾಧನ ಅಳವಡಿಸುವ ಮೂಲಕ ರೋಗಿಯ ನಡಿಗೆ ಸಾಮರ್ಥ್ಯ ಪರೀಕ್ಷಿಸಲಾಗಿದೆ.
ಸುಮಾರು 19 ವಾರಗಳ ತರಬೇತಿಯಿಂದ ರೋಗಿಯು ದೇಹದ ಮೇಲೆ ಮತ್ತಷ್ಟು ಹತೋಟಿ ಸಾಧಿಸಿದ್ದು, ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ತೋರಿದ್ದಾರೆ.

‘ಮಿದುಳಿಗೆ ಯಾವುದೇ ತೊಂದರೆಯಾಗದ ಈ ಯಂತ್ರದ ಸಾಧಕ–ಬಾಧಕಗಳನ್ನು ಪರಿಶೀಲಿಸಿ, ಮಿದುಳಿನ ಕಸಿಯ ಬಗ್ಗೆಯೂ ಚಿಂತಿಸಲಾಗುವುದು’ ಎಂದು ಹಿರಿಯ ಸಂಶೋಧಕ ಡಾ. ಜೋರನ್‌ ನೆನಾಡಿಕ್‌ ಹೇಳಿದ್ದಾರೆ.

ಕಸಿ ಮಾಡುವುದರಿಂದ ಬಳಕೆದಾರರಿಗೆ ಕಾಲಿನ ಸ್ವಾಧೀನದ ಅರಿವು ರೋಗಿಗೆ ಬರುತ್ತದೆ ಎಂದು ಸಂಶೋಧನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.