ADVERTISEMENT

ಏಕಾಂಗಿಯಾಗಿ ನಡೆಯುತ್ತಾ ಸಂತೃಪ್ತರಾಗಿರಿ...

ಸ್ವಸ್ಥ ಬದುಕು

ಪ್ರಜಾವಾಣಿ ವಿಶೇಷ
Published 12 ಡಿಸೆಂಬರ್ 2014, 19:30 IST
Last Updated 12 ಡಿಸೆಂಬರ್ 2014, 19:30 IST
ಏಕಾಂಗಿಯಾಗಿ ನಡೆಯುತ್ತಾ ಸಂತೃಪ್ತರಾಗಿರಿ...
ಏಕಾಂಗಿಯಾಗಿ ನಡೆಯುತ್ತಾ ಸಂತೃಪ್ತರಾಗಿರಿ...   

ಬದುಕು ಒಂದು ಸುಂದರ ಪಯಣ. ನಮಗೆಲ್ಲರಿಗೂ ನಮ್ಮದೇ ಆದ ಹಾದಿಯಿದೆ. ಆ ಹಾದಿಯಲ್ಲೇ ಕ್ರಮಿಸಬೇಕು. ನಮ್ಮ ಹಾಡು ನಮ್ಮದೇ. ನಮ್ಮ ಲಯ ನಮ್ಮದೇ. ಹಾಗಾಗಿ ಮಂದೆಯಲ್ಲಿನ ಕುರಿಯಂತೆ ಆಗಬೇಡಿ. ನಿಮ್ಮ ಸ್ನೇಹಿತರು ಯಾವುದೋ ಕೋರ್ಸ್‌ಗೆ ಸೇರಿಕೊಳ್ಳುತ್ತಾರೆ ಎಂದು ನೀವು ಕಣ್ಣುಮುಚ್ಚಿಕೊಂಡು ಹೋಗಿ ಸೇರಿಕೊಳ್ಳಬೇಡಿ. ಅದು ನಿಮ್ಮ ಹಾದಿ ಎಂದು ಅನಿಸಿದಲ್ಲಿ ಮಾತ್ರ ಅಲ್ಲಿಗೆ ಹೋಗಿ.

ಏಕಾಂಗಿಯಾಗಿ ನಡೆಯುವದರಲ್ಲಿ ತಪ್ಪೇನಿಲ್ಲ. ಸನ್ಯಾಸಿಯೊಬ್ಬ ಒಂದು ಸಣ್ಣ ಕೋಣೆಯಲ್ಲಿ ಆರು ತಿಂಗಳು ಒಬ್ಬಂಟಿಯಾಗಿದ್ದ. ಊಟ, ತಿಂಡಿ, ಧ್ಯಾನ, ನಿದ್ದೆ ಎಲ್ಲವೂ ಒಬ್ಬನೇ ಮಾಡುತ್ತಿದ್ದ. ಒಟ್ಟಿನಲ್ಲಿ ಮೌನ ಸಾಂಗತ್ಯದಲ್ಲಿದ್ದ. ನಾನು ಯಾವಾಗಲೂ ಒಂಟಿಯಾಗಿರಲಿಲ್ಲ ನನ್ನೊಂದಿಗೆ ಒಬ್ಬರು ಸದಾ ಇದ್ದರು. ಅದು ನಾನೇ. ನಾನೇ ನನಗೆ ಅತ್ಯುತ್ತಮ ಸಂಗಾತಿಯಾಗಿದ್ದೆ.

ಏಕಾಂತದಲ್ಲಿರುವುದು ನಿಮ್ಮನ್ನು ಕವಿಯಾಗಿಸುತ್ತದೆ. ನೀವು ಶ್ರೀಮಂತ ಬದುಕು ಬದುಕುತ್ತೀರಿ. ಆಗ ನೀವು ನೀವಾಗಿಯೇ ಇರಲು ಸಾಧ್ಯ. ಆದರೆ ಗುಂಪಿನಲ್ಲಿ ಇದ್ದಾಗ ನೀವು ಸ್ಪರ್ಧೆಗೆ ಬೀಳುತ್ತೀರಿ. ಅನಗತ್ಯ ಕಿರಿಕಿರಿಗೆ ಒಳಗಾಗುತ್ತೀರಿ. ಮೇಲರಿಮೆ, ಕೀಳರಿಮೆ, ಅಸೂಯೆ ದಣಿವು, ನಿಮ್ಮನ್ನು ನೀವು ಸಮರ್ಥಿಸಿಕೊಳ್ಳುವುದು ಎಲ್ಲವುಗಳ ಮೇಲಾಟ ನಡೆಯುತ್ತದೆ.

ದೀದಿ ಅಮೆರಿಕದಲ್ಲಿ ಇದ್ದಾಗ ಆಕೆ ಉದ್ಯಾನವೊಂದರಲ್ಲಿ 2 ತಾಸು ವಾಕ್ ಮಾಡುತ್ತಿದ್ದಳು. ಒಂದೇ ಒಂದು ದಿನ ಆಕೆಗೆ ದಣಿವಿನ ಅನುಭವವಾಗಲಿಲ್ಲ. ಕೀಲುಗಳು ನೋಯಲಿಲ್ಲ. ಅವಳು ಸಂತಸ, ಉಲ್ಲಾಸಭರಿತಳಾಗಿ ಇದ್ದಳು. ಭಾರತದಲ್ಲಿದ್ದಾಗ ಹಾಗಾಗುತ್ತಿರಲಿಲ್ಲ. ಕೇವಲ 15 ನಿಮಿಷ ವಾಕ್ ಮಾಡಿದರೂ ಆಕೆಗೆ ಎಲ್ಲಿಲ್ಲದ ದಣಿವಾಗುತ್ತಿತ್ತು. ಕೀಲುಗಳು ನೋಯುತ್ತಿದ್ದವು. ಆಕೆ ಆತ್ಮಾವಲೋಕನ ಮಾಡಿಕೊಂಡಾಗ ದಣಿವಿನ ಮೂಲಕಾರಣ ಹೊಳೆಯಿತು. ಅಮೆರಿಕದಲ್ಲಿ ಪಾರ್ಕಿಗೆ ಹೋದಾದ ಅವಳು ಒಬ್ಬಳೇ ಇದ್ದಳು. ಅವಳ ಜತೆ ಜಾಗ್ ಮಾಡಲು ಯಾರೂ ಇರಲಿಲ್ಲ. ಯಾವುದೇ ವಿಚಾರಗಳ ತೊಡಕು, ಸ್ಪರ್ಧೆಗಳು ಇಲ್ಲದೆ ವಾಕ್ ಮಾಡುತ್ತಿದ್ದಳು. ಹಕ್ಕಿಯಂತೆ ಆಕೆ ತನ್ನ ಕೈಯನ್ನು ಚಾಚಬಹುದಿತ್ತು. ಜಿಗಿದಾಡಬಹುದಿತ್ತು. ಹುಲ್ಲುಹಾಸಿನ ಮೇಲೆ ಉರುಳಿ ಮನಬಂದಂತೆ ಕೈಕಾಲು ಆಡಿಸಬಹುದಿತ್ತು. ಭಾರತದಲ್ಲಿ ಇದು ಸಾಧ್ಯವಿರಲಿಲ್ಲ. ಅವಳ ಸುತ್ತ ಯಾವಾಗಲೂ ಜನ ತುಂಬಿರುತ್ತಿದ್ದರು. ಅವರನ್ನು ಹಿಂದೆ ಹಾಕಲು ಆಕೆ ಒಮ್ಮೊಮ್ಮೆ ಓಡುತ್ತಿದ್ದಳು. ಹಾಗೆ ಮಾಡುತ್ತಾ ತನ್ನ ಲಯ ಮತ್ತು ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಿದ್ದಳು. ಹಾಗಾಗಿಯೇ ಅವಳ ಕೀಲುಗಳು ನೋಯುತ್ತಿದ್ದವು. ತನ್ನದೇ ಮನಸ್ಸಿನ ಒತ್ತಡಕ್ಕೆ ಗುರಿಯಾಗುತ್ತಿದ್ದಳು.

ನಿಮ್ಮನ್ನು ನೀವು ಅರಿತುಕೊಳ್ಳುವುದು ಬಹುಮುಖ್ಯ. ಕನ್ನಡಿಯೊಳಗೆ ನೋಡಿಕೊಳ್ಳುತ್ತಾ ಮೃದುವಾಗಿ ನಿಮ್ಮ ಕಣ್ಣುಗಳನ್ನು ನೋಡಿಕೊಳ್ಳಿ. ನಿಮ್ಮೊಳಗಿನ ಸೌಂದರ್ಯ ನಿಮಗೆ ಕಾಣುತ್ತದೆ. ನಿಮ್ಮ ಆಂತರಿಕ ಸೌಂದರ್ಯವನ್ನು ಬಿಂಬಿಸುವ ಚಟುವಟಿಕೆಗಳನ್ನು ಒಬ್ಬರೇ ಮಾಡಿ. ಇದು ಝೆನ್ ಮಾದರಿ.

ಸಂಗೀತ ಕೇಳುತ್ತಾ ಅದರ ಮಾಧುರ್ಯವನ್ನು ಆಸ್ವಾದಿಸುತ್ತಾ ಅದರಲ್ಲೇ ಮುಳುಗಿಹೋಗಿ. ನಿಮ್ಮ ಹೃದಯವೂ ಅದರೊಂದಿಗೆ ಹಾಡಲಿ. ಹಾಗೆಯೇ ಬಿಡುಬೀಸಾಗಿ ನರ್ತಿಸಿ. ನಿಮ್ಮ ಮೈಮನಗಳೊಳಗೆ ಮಿಂಚು ಸುಳಿದಾಡಲಿ. ಕವಿತೆ ಬರೆಯಿರಿ.

ದಿನವೂ ಏನನ್ನಾದರೂ ಸುಂದರವಾಗಿ ಕೈಬರಹದಲ್ಲಿ ಬರೆಯಿರಿ. ನಿಮ್ಮಿಷ್ಟದ ಸಾಲು, ಹೊಳೆದ ಮಾತುಗಳಿಗೆ ಅಂದವಾದ ಅಕ್ಷರ ರೂಪ ಕೊಡಿ. ಪ್ರಕೃತಿಯಲ್ಲಿ ಒಂದಾಗಿ ನಡೆಯಿರಿ, ಮರದ ನೆರಳಿನಲ್ಲಿ ನೆಮ್ಮದಿಯಿಂದ ಕುಳಿತುಕೊಳ್ಳಿ. ತಣ್ಣೆಳಲು, ತಂಗಾಳಿಯನ್ನು ಆಸ್ವಾದಿಸಿ, ಗೋಡೆಗೆ ಬಣ್ಣಹಚ್ಚಿ. ನಿಮಗಿಷ್ಟವಾದ ವಿಷಯದ ಕುರಿತು ಧ್ಯಾನಿಸಿ. ಏಕಾಗ್ರತೆ ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ. ಅಭಿಪ್ರಾಯ, ಪೂರ್ವಗ್ರಹಗಳಿಂದ ನಿಮ್ಮನ್ನು ಬಿಡಿಸುತ್ತದೆ.

ಫ್ರಾನ್ಸ್‌ನ ಕೆಲ ಸನ್ಯಾಸಿಗಳು ದಿನಚರಿ ಪುಸ್ತಕವನ್ನು ತಮ್ಮೊಂದಿಗೆ ಇಟ್ಟುಕೊಳ್ಳುತ್ತಾರೆ. ಅದರಲ್ಲಿ ಹಸುಗಳ ಹೆಸರು ಬರೆಯುತ್ತಾ ಧ್ಯಾನ ಮಾಡುತ್ತಾರೆ. ಕೆಲವೊಮ್ಮೆ ತಾವು ಆ ದಿನ ಒಂಟಿಯಾಗಿ ಮಾಡಬೇಕಾದ ಕೆಲಸಗಳನ್ನು ಪಟ್ಟಿ ಮಾಡುತ್ತಾರೆ. ಇಂತಹ ಚಟುವಟಿಕೆಗಳು ಮನಸ್ಸಿನ ಚಡಪಡಿಕೆಯನ್ನು ಶಾಂತಗೊಳಿಸುತ್ತವೆ. ಈ ಪರಿಶುಭ್ರತೆಯಲ್ಲಿ ನೀವು ಶೂನ್ಯವಾಗುತ್ತೀರಿ. ಸ್ತಬ್ಧರಾಗುತ್ತೀರಿ. ಮನಸ್ಸಿನಲ್ಲಿ ಸಂತೃಪ್ತಿ ತುಂಬುತ್ತದೆ. ಮನಸ್ಸು ಮಗುವಿನಂತಾಗುತ್ತದೆ. ರಾತ್ರಿ ನೆಮ್ಮದಿಯಾಗಿ ನಿದ್ರಿಸುತ್ತೀರಿ. ಎಲ್ಲ ರೋಗಗಳೂ ನಿವಾರಣೆಯಾಗುತ್ತವೆ.

ರೋಗ ನಿವಾರಣೆಯಾಗುವುದೂ ಗುಣಮುಖರಾಗುವುದೂ ಎರಡೂ ಬೇರೆಬೇರೆ. ರೋಗ ನಿವಾರಣೆ ಯಾಗಬೇಕಾದರೆ ಔಷಧಗಳನ್ನು ಸೇವಿಸಬೇಕಾಗುತ್ತದೆ. ಇದು ಹೊರಗಿನಿಂದ ಬರುವಂಥದ್ದು. ಆದರೆ ಗುಣಮುಖರಾಗುವುದು ನಮ್ಮೊಳಗಿನಿಂದಲೇ ಹುಟ್ಟುತ್ತದೆ. ಕೆಲ ಬೇಡ ಚಟಕ್ಕೆ, ಅಭಿಪ್ರಾಯಗಳಿಗೆ ಕಟ್ಟುಬಿದ್ದಿರುವುದರಿಂದ ಅಸ್ವಾಸ್ಥ್ಯ, ಖಿನ್ನತೆ ನಮ್ಮೊಳಗೆ ಮನೆ ಮಾಡಿರುತ್ತದೆ. ಗುಣಮುಖರಾಗುವಾಗ ನಾವು ನಮ್ಮನ್ನು ಗಾಯಗೊಳಿಸಿದ ಹಳೆಯ ನಂಬಿಕೆಗಳನ್ನೆಲ್ಲಾ ಕಿತ್ತೊಗೆಯುತ್ತೇವೆ. ಎಲ್ಲ ಪ್ರತಿರೋಧಗಳನ್ನು ತೆಗೆದೆಸೆದು ಬದುಕಿನ ಹರಿವಿನೊಂದಿಗೆ ಒಂದಾಗುತ್ತೇವೆ. ಮನಸ್ಸು ಮತ್ತು ಚೈತನ್ಯ ಮುಕ್ತವಾದಾಗ ದೇಹ ಸಂಭ್ರಮಿಸುತ್ತದೆ. ಬದುಕಿನ ಸುಂದರ ಪಯಣ ಮತ್ತಷ್ಟು ಸೊಗಸುಗೊಳ್ಳುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.