ADVERTISEMENT

ಏನಾದ್ರೂ ಕೇಳ್ಬೋದು

​ಪ್ರಜಾವಾಣಿ ವಾರ್ತೆ
Published 12 ಮೇ 2017, 19:30 IST
Last Updated 12 ಮೇ 2017, 19:30 IST
ಸುನೀತಾ ರಾವ್‌,ಆಪ್ತ ಸಮಾಲೋಚಕಿ
ಸುನೀತಾ ರಾವ್‌,ಆಪ್ತ ಸಮಾಲೋಚಕಿ   

*ಮೇಡಂ, ನನಗೆ ಮದುವೆಯಾಗಿದೆ, ಹೆಂಡತಿ ಕೆಲಸದಲ್ಲಿದ್ದಾಳೆ. ಕಳೆದ ಮೂರು ವರ್ಷಗಳಿಂದ ಅವಳು ಕೆಲಸ ಮಾಡುವ ಸ್ಥಳ ಕಲಬುರ್ಗಿಯಲ್ಲಿರುತ್ತಾಳೆ ಅಥವಾ ಅವಳ ತಾಯಿಯ ಜೊತೆ ಕಾರವಾರದಲ್ಲಿ ಇರುತ್ತಾಳೆ. ನಾನು ಬೆಂಗಳೂರಿನಲ್ಲಿದ್ದೇನೆ. ನಾನು ನನ್ನ ಹೆಂಡತಿಯನ್ನು ಹೇಗೆ ವಿಶ್ವಾಸಕ್ಕೆ ತೆಗೆದುಕೊಳ್ಳಲಿ?
ಮದುವೆಯಾದ ಪ್ರತಿ ಗಂಡ ಹೆಂಡತಿಯ ಸಮಸ್ಯೆ ಇದು. ತಮ್ಮ ವೃತ್ತಿ ಜೀವನಕ್ಕಾಗಿ ಕುಟುಂಬಿಕ ಜೀವನವನ್ನು ತ್ಯಾಗ ಮಾಡುವವರು ಅನೇಕರು.  ಗಂಡ ಹೆಂಡತಿ ಇಬ್ಬರ ನಡುವೆ ಉತ್ತಮ ಬಾಂಧವ್ಯ ಒಡಮೂಡಿದಾಗಲಷ್ಟೇ ಇಬ್ಬರು ಸಂತೋಷದಿಂದ ಬಾಳ್ವೆ ನಡೆಸಲು ಸಾಧ್ಯ. ನಿಮ್ಮ ಹೆಂಡತಿಯನ್ನು ಕೂರಿಸಿಕೊಂಡು ಮಾತನಾಡಿ. ಅವರ  ಆದ್ಯತೆ ಹಾಗೂ ಯೋಜನೆಗಳನ್ನು ತಿಳಿದುಕೊಳ್ಳಲು ಪ್ರಯ್ನತಿಸಿ.

ಇಬ್ಬರೂ ಸೇರಿ ಸಮಸ್ಯೆಗೆ ಪರಿಹಾರ ಕಂಡುಕೊಂಡು, ಇಬ್ಬರೂ ಒಂದೆಡೆ ಕೆಲಸ ಮಾಡೋಣ ಎಂಬ ನಿರ್ಧಾರಕ್ಕೆ ಬನ್ನಿ. ‘ನಿನ್ನ ನಿರ್ಧಾರಗಳಿಂದ ನಮ್ಮ ಸಂಸಾರಕ್ಕೆ ಒಳ್ಳೆಯದಾಗುತ್ತದೆ ಎಂದರೆ ನಾನು ನಿನ್ನ ನಿರ್ಧಾರಗಳಿಗೆ ಮನ್ನಣೆ ನೀಡುತ್ತೇನೆ ಎಂದು ನಿಮ್ಮ ಹೆಂಡತಿಗೆ ಆಶ್ವಾಸನೆ ನೀಡಿ.  ನಮ್ಮ ಕುಟುಂಬದ ಒಳಿತಿನ ದೃಷ್ಟಿಯಿಂದ ಇಬ್ಬರೂ ಒಂದೇ ಕಡೆ ಬದುಕು ನಡೆಸೋಣ ಎಂದು ನಿಮ್ಮ ಹೆಂಡತಿಯನ್ನು ಒಪ್ಪಿಸಲು ಪ್ರಯ್ನತಿಸಿ.

*ನನ್ನೊಂದಿಗೆ ಅತಿ ಸ್ನೇಹ ಪರವಾಗಿಯೇ ಇರುತ್ತಿದ್ದ 18 ವರ್ಷದ ಬಿ.ಕಾಂ. ಓದುತ್ತಿರುವ ಮಗ ಒಮ್ಮೆ ಆತ ಸ್ನಾನ ಮಾಡಿ ಬಂದಾಗ ಸಣ್ಣ ಸ್ತನಗಳಂತೆ ಇದ್ದ ಆತನ ಎದೆಯ ಭಾಗ ಮುಟ್ಟಿದೆ. ಆ ಕ್ಷಣದಲ್ಲಿ ಆತನಿಗೆ ಏನನ್ನಿಸಿತೋ ಏನೋ ಕಾಲಿನಿಂದ ನನ್ನ ಮರ್ಮಾಂಗಕ್ಕೆ ಒದ್ದ. ಈ ಅನಿರೀಕ್ಷಿತ ಹೊಡೆತದಿಂದ ನಾನು ಸುಧಾರಿಸಿಕೊಂಡೆನಾದರೂ ಆತನ ಈ ವರ್ತನೆಯಿಂದ ನಾನು ಕೋಪಗೊಂಡು ಆತನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದೆ. ಆತ ನನ್ನ ಬಳಿ ಕ್ಷಮೆ ಕೇಳಿದರೆ ಮಾತನಾಡುವ ಎಂದು ಸುಮ್ಮನಾದೆ. ಆದರೆ ಇದುವರೆಗೆ ಆತ ನನ್ನ ಕ್ಷಮೆ ಕೇಳಲಿಲ್ಲ. ನಮ್ಮಿಬ್ಬರ ನಡುವೆ ಮಾತು ನಿಂತು ಮೂರು ತಿಂಗಳುಗಳಾದವು. ಈಗ ನಾನೇನು ಮಾಡಬೇಕು.
ಕ್ಷಮಿಸಿ, ನೀವು ಇಲ್ಲಿ ನಿಮ್ಮ ಸಂಬಂಧವನ್ನು ತಿಳಿಸಿಲ್ಲ. ಅಂದರೆ, ನೀವು ನಿಮ್ಮ 18 ವರ್ಷದ ಮಗನಿಗೆ ತಂದೆಯೋ, ತಾಯಿಯೋ ಎಂಬುದನ್ನು ತಿಳಿಸಿಲ್ಲ. ಸ್ನೇಹಿತನಂತಿರುವ ನಿಮ್ಮ ಮಗನೊಂದಿಗೆ ಇದ್ದ ಸ್ವಾತಂತ್ರ್ಯವನ್ನು ನೀವು ಮೀರಿದ್ದೀರಿ ಎಂದು ನಿಮಗೆ ಅನ್ನಿಸುತ್ತಿಲ್ಲವೇ ಕೃಷ್ಣಮೂರ್ತಿ ಅವರೇ, ನೀವು ನಿಮ್ಮ ಅಹಂ ಅನ್ನು ಬದಿಗೊತ್ತಿ  ಮಗನ ಬಳಿ ಸಾರಿ ಕೇಳಿ.

ನೀನು ಆ ದಿನ ಯಾಕೆ ಹಾಗೇ ವರ್ತಿಸಿದೆ ಎಂದು ಸಮಾಧಾನವಾಗಿ ಕೇಳಿ.  ನಿಮ್ಮಿಬ್ಬರ ನಡುವೆ  ಸಂವಹನದಿಂದಷ್ಟೇ ಉತ್ತಮ ಬಾಂಧವ್ಯ ಬೆಳೆಯಲು ಸಾಧ್ಯ. ಇದೆಲ್ಲಾ ತುಂಬಾ ಸೂಕ್ಷ್ಮವಾದ ವಿಷಯಗಳು. ಮಕ್ಕಳು ಹಾಗೂ ತಂದೆ ತಾಯಿಯರ ಮಧ್ಯೆ ಎಷ್ಟೇ ಉತ್ತಮ ಬಾಂಧವ್ಯವಿದ್ದರೂ ಪೋಷಕರು ಮಕ್ಕಳ ಬಳಿ ಪ್ರೌಢತೆಯಿಂದ ವರ್ತಿಸಬೇಕು. ಯಾಕೆಂದರೆ ನಿಮ್ಮ ಒಂದು ಕೆಟ್ಟ ವರ್ತನೆ  ಮಕ್ಕಳ ಮನಸ್ಸಿನ ಮೇಲೆ ದೀರ್ಘಕಾಲದವರೆಗೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ. 

ಕೌಟುಂಬಿಕ ಸಮಸ್ಯೆ, ವೈಯಕ್ತಿಕ ಸಮಸ್ಯೆ, ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳ ಕುರಿತ ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಿಮ್ಮ ಪ್ರಶ್ನೆಗೆ ಡಾ. ಸುನೀತಾ ರಾವ್ ಉತ್ತರಿಸಲಿದ್ದಾರೆ.
ಇ–ಮೇಲ್: bhoomika@prajavani.co.in ವಾಟ್ಯ್ಸಪ್‌ ಸಂಖ್ಯೆ: 9482006746

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT