ADVERTISEMENT

ಒಣಕುಳಿ ಸಮಸ್ಯೆ ಇದೆಯೇ?

ಡಾ .ಕೆ.ಎಸ್.ಚೈತ್ರಾ
Published 19 ಡಿಸೆಂಬರ್ 2014, 19:30 IST
Last Updated 19 ಡಿಸೆಂಬರ್ 2014, 19:30 IST

ಹಲ್ಲು ಕೀಳಿಸುವುದು ಎಂದಾಗ ಹೇಗೋ, ಏನಾಗುತ್ತೋ ಎಂಬ ಹೆದರಿಕೆ ಸಹಜ.  ಅನಿವಾರ್ಯವಾಗಿ ಹಲ್ಲು ಕೀಳಿಸಲೇಬೇಕಾದಾಗ ಒಂದೆರಡು ದಿನ ಸ್ವಲ್ಪ ನೋವು - ಊತ ನಿರೀಕ್ಷಿತ.  ಆದರೆ ಹಲ್ಲು ಕಿತ್ತ ಕೆಲ ದಿನಗಳ ಬಳಿಕ ತೀವ್ರತರವಾದ ನೋವು ಇದ್ದು, ಗಾಯ ಮಾಯದೇ ಇದ್ದಾಗ ‘ಒಣಕುಳಿ’ ಎಂದು ಕರೆಯಲಾಗುತ್ತದೆ.

ನಮ್ಮ ಬಾಯಿಯಲ್ಲಿ ಹಲ್ಲುಗಳು, ದವಡೆಗೆ ಬೇರಿನ ಮೂಲಕ ಪ್ರತ್ಯೇಕ ಕುಳಿಗಳಲ್ಲಿ ನರ-ಮೂಳೆಗೆ ಅಂಟಿಕೊಂಡಿರುತ್ತದೆ. ಹಲ್ಲನ್ನು ತೆಗೆಯುವಾಗ ಬೇರು ಸಮೇತ ಈ ಕುಳಿಯಿಂದ ಬೇರ್ಪಡಿಸಬೇಕು. ಬುದ್ದಿ ಹಲ್ಲು / ಗಟ್ಟಿ / ಮುರಿದ ಹಲ್ಲಾದರೆ ಅದನ್ನು ಭಾಗ ಮಾಡಿ, ಸುತ್ತಲಿನ ಮೂಳೆ ಸ್ವಲ್ಪ ತೆಗೆದು, ಹಲ್ಲನ್ನು ತೆಗೆಯಬೇಕಾಗುತ್ತದೆ. ಈ ಚಿಕ್ಕ ಶಸ್ತ್ರಚಿಕಿತ್ಸಾಕ್ರಮ ಕೆಲ ಸಂದರ್ಭಗಳಲ್ಲಿ ಅನಿವಾರ್ಯ. ಇಂಥ ಕಠಿಣ ಕೀಳುವಿಕೆಯಲ್ಲಿ ಉಂಟಾಗಬಹುದಾದ ತೊಂದರೆ ಒಣಕುಳಿ.

ಆಗುವುದು ಹೇಗೆ?
ಸಾಧಾರಣವಾಗಿ ಹಲ್ಲು ತೆಗೆದ ಕೂಡಲೇ ಕುಳಿಯಲ್ಲಿ ರಕ್ತಸ್ರಾವ ಇರುತ್ತದೆ. ಕೆಲವೇ ನಿಮಿಷಗಳಲ್ಲಿ ಅದು ನಿಂತು ರಕ್ತ ಹೆಪ್ಪುಗಟ್ಟಲು ಆರಂಭವಾಗಿರುತ್ತದೆ. ಈ ಹೆಪ್ಪುಗಟ್ಟಿದ ರಕ್ತ, ಅಡಿಯಲ್ಲಿರುವ ಮೂಳೆ ಹಾಗೂ ನರತಂತುಗಳ ಮೇಲೆ ರಕ್ಷಣಾ ಕವಚದಂತೆ ಕೆಲಸ ಮಾಡುತ್ತದೆ. ಮಾತ್ರವಲ್ಲ ಹೊಸ ಮೂಳೆಯ ಬೆಳವಣಿಗೆಗೆ ಮತ್ತು ವಸಡು ಕೂಡಿಕೊಳ್ಳಲು ಅಡಿಪಾಯ ಹಾಕುತ್ತದೆ. ಹೀಗಾಗಿ ಗಾಯ ಮಾಯಲು ಈ ಹೆಪ್ಪುಗಟ್ಟಿದ ರಕ್ತದ ಪಾತ್ರ ಮಹತ್ವದ್ದು.

ಕೆಲವು ಬಾರಿ ಗಾಯ ಮಾಯುವ ಮುನ್ನವೇ ರಕ್ತದ ಹೆಪ್ಪು, ಸ್ಥಾನ ಪಲ್ಲಟ/ಛಿದ್ರವಾಗುತ್ತದೆ. ಹೀಗಾದಾಗ ಮೂಳೆ ಮತ್ತು ನರತಂತುಗಳು ಗಾಳಿ, ದ್ರವ, ಆಹಾರ, ಸೂಕ್ಷ್ಮಾಣು ಜೀವಿಗಳು ಹೀಗೆ ಹೊರಗಿನ ವಾತಾವರಣಕ್ಕೆ ತೆರೆದುಕೊಳ್ಳುತ್ತವೆ.  ಇದರಿಂದಾಗಿ ಅಸಹನೀಯವಾದ ನೋವು ಕಾಣಿಸಿಕೊಳ್ಳುತ್ತದೆ. ಇದು ಒಣಕುಳಿ.

ಕಾರಣ
ಒಣಕುಳಿಗೆ ಇಂಥದ್ದೇ ಕಾರಣ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಪ್ರಮುಖ ಕಾರಣಗಳು ಹೀಗಿವೆ.
* ಬ್ಯಾಕ್ಟೀರಿಯಾಗಳಿಂದ
* ಬಾಯಿಯಲ್ಲಿರುವ ಕೆಲವು ಬ್ಯಾಕ್ಟೀರಿಯಾಗಳು ಹೆಪ್ಪುಗಟ್ಟಿದ ರಕ್ತದ ಮೇಲೆ ದಾಳಿ ನಡೆಸಿ ಅದನ್ನು ಛಿದ್ರ ಮಾಡಬಲ್ಲವು.  ಹಲ್ಲು ಕೀಳಿಸುವ ಮುಂಚೆ ವಸಡು-ಮೂಳೆಯ ಸೋಂಕು ಇದ್ದಲ್ಲಿ ಹೀಗಾಗುವ ಸಾಧ್ಯತೆ ಇದೆ.
* ರಾಸಾಯನಿಕಗಳು
* ನಿಕೋಟಿನ್‌ನಂಥ ರಾಸಾಯನಿಕ, ಗಾಯವಾದ ಜಾಗಕ್ಕೆ ರಕ್ತ ಪೂರೈಕೆಯನ್ನು ತಗ್ಗಿಸುತ್ತದೆ. ಆದ್ದರಿಂದ ರಕ್ತ ಹೆಪ್ಪುಗಟ್ಟುವಿಕೆ ಹಾಗೂ ಮಾಯುವಿಕೆ ನಿಧಾನ.
* ಯಾಂತ್ರಿಕ
* ಜೋರಾಗಿ ಬಾಯಿ ಮುಕ್ಕಳಿಸುವುದು, ರಭಸವಾಗಿ ಉಗಿಯುವುದು, ಹೀರುಕೊಳವೆಯಿಂದ ಕುಡಿಯುವುದು, ಬಾಯಿಯಿಂದ ಗಾಳಿ ಎಳೆಯುವುದು ಇವುಗಳಿಂದ ಅನಗತ್ಯ ಒತ್ತಡ ಬಿದ್ದು ರಕ್ತದ ಹೆಪ್ಪು ಸ್ಥಾನ ಪಲ್ಲಟವಾಗಬಹುದು.
* ಶಾರೀರಿಕ
* ಹಾರ್ಮೋನುಗಳ ಪ್ರಭಾವ, ದಪ್ಪನೆಯ ದವಡೆ ಮೂಳೆ, ಗಟ್ಟಿ ಹಲ್ಲು, ಅಸಮರ್ಪಕ ರಕ್ತ ಚಲನೆಯಿಂದ ರಕ್ತ ಹೆಪ್ಪುಗಟ್ಟುವಿಕೆಯಲ್ಲಿ ತೊಂದರೆ ಆಗಬಹುದು.

ಯಾರಲ್ಲಿ - ಯಾವಾಗ ಹೆಚ್ಚು?
* ಧೂಮಪಾನಿಗಳಲ್ಲಿ / ತಂಬಾಕು ಸೇವಿಸುವವರಲ್ಲಿ
* ಬುದ್ಧಿ ಹಲ್ಲು ತೆಗೆಯುವಾಗ
* ಒಣ ಕುಳಿ ಶಾಶ್ವತ ಹಲ್ಲನ್ನು ತೆಗೆದಾಗ ಶೇಕಡಾ ಐದರಷ್ಟು ಸಂದರ್ಭದಲ್ಲಿ ಕಂಡುಬಂದರೆ ಬುದ್ಧಿ ಹಲ್ಲು ತೆಗೆದಾಗ ಶೇಕಡಾ ಮೂವತ್ತರಷ್ಟು ಸಾರಿ ಆಗಬಹುದು
* ಮಹಿಳೆಯರಲ್ಲಿ
* ಗರ್ಭ ನಿರೋಧಕ ಮಾತ್ರೆ ಸೇವಿಸುವಾಗ, ಋತುಚಕ್ರದಿಂದ ಈಸ್ಟ್ರೋಜನ್ ಹಾರ್ಮೋನಿನ ಏರುಪೇರಿನಿಂದಾಗಿ ಒಣಕುಳಿ ಹೆಚ್ಚು.
* ಮೂವತ್ತರ ನಂತರ
* ದವಡೆ ಮೂಳೆ ವಯಸ್ಸಾದಂತೆ ಹೆಚ್ಚು ಗಡುಸಾಗುತ್ತದೆ.  ರಕ್ತ ಪೂರೈಕೆಯೂ ಕಡಿಮೆಯಾಗುತ್ತದೆ.  ರಕ್ತ ಹೆಪ್ಪುಗಟ್ಟುವಿಕೆಯಲ್ಲಿ ತಡವಾಗಬಹುದು.

ಲಕ್ಷಣಗಳು
* ಹಲ್ಲು ಕಿತ್ತ ಎರಡು-ಮೂರು ದಿನಗಳ ನಂತರ ವಿಪರೀತ ನೋವು
* ರಕ್ತ ಹೆಪ್ಪು ಇಲ್ಲದೇ ಶುಷ್ಕವಾಗಿ ಕಾಣುವ ಕುಳಿ
* ಬರಿಗಣ್ಣಿಗೆ ಕಾಣುವ ದವಡೆ ಮೂಳೆ
* ಕುಳಿಯಿಂದ ನೋವು ಕಿವಿ, ಕಣ್ಣು, ಕೆನ್ನೆ, ಕತ್ತುಗಳಲ್ಲೆಲ್ಲಾ ಹರಡುವುದು
* ಬಾಯಿಯ ದುರ್ವಾಸನೆ
* ರುಚಿಯಲ್ಲಿ ವ್ಯತ್ಯಾಸ
* ಸಣ್ಣದಾಗಿ ಜ್ವರ
* ಊದಿಕೊಂಡ ಲಿಂಫ್ ಗ್ರಂಥಿಗಳು

ಚಿಕಿತ್ಸೆ
ಒಣಕುಳಿಯಲ್ಲಿ ಕಾಣುವ ಪ್ರಮುಖ ಅಂಶ ಅಸಹನೀಯ ನೋವು ಮತ್ತು ಮಾಯದ ಗಾಯ. ಆದ್ದರಿಂದ ಚಿಕಿತ್ಸೆಯ ಉದ್ದೇಶ ನೋವು ನಿವಾರಣೆ ಹಾಗೂ ಗಾಯ ಮಾಯಲು ಸಹಾಯ.
* ಕುಳಿಯನ್ನು ವಿಶೇಷ ದ್ರಾವಣದಿಂದ ತೆಳೆಯಲಾಗುತ್ತದೆ.  ಇದರಿಂದ ಅಲ್ಲಿ ಗಾಯದ ಮೇಲೆ ಅಂಟಿರುವ ಕಸ, ಆಹಾರ ಎಲ್ಲಾ ಹೊರಬಂದು ಸ್ವಚ್ಛವಾಗಿ, ನೋವು ಕಡಿಮೆಯಾಗುತ್ತದೆ.
* ಔಷಧಿಯುಕ್ತ ಡ್ರೆಸ್ಸಿಂಗ್ ಅನ್ನು ಕುಳಿಯಲ್ಲಿ ಇದ್ದಾಗ ಬಲು ಬೇಗ ನೋವು ಕಡಿಮೆಯಾಗುತ್ತದೆ. ನೋವು / ಸೋಂಕಿನ ತೀವ್ರತೆ ಮೇಲೆ ಡ್ರೆಸ್ಸಿಂಗ್‌ನ ಅವಧಿ ಮತ್ತು ಬದಲಾಯಿಸುವಿಕೆ ನಿರ್ಧರಿಸಲಾಗುತ್ತದೆ.
* ಅಗತ್ಯ ಬಿದ್ದಲ್ಲಿ ಪ್ರತಿ ದಿನ ವೈದ್ಯರ ಭೇಟಿ ಅಥವಾ ಮನೆಯಲ್ಲೇ ಸ್ವತಃ ಸ್ವಚ್ಛ ಮಾಡಿಕೊಳ್ಳುವ ವಿಧಾನದ ಬಗ್ಗೆ ತಿಳಿಸಲಾಗುವುದು.
* ನೋವು ನಿವಾರಕ ಮಾತ್ರೆಗಳು
* ಸೋಂಕು ತಡೆಗಟ್ಟಲು ಆಂಟಿಬಯಾಟಿಕ್ಸ್
ಸಾಧಾರಣವಾಗಿ ಒಣಕುಳಿ ಗುಣವಾಗಲು ಒಂದರಿಂದ ಎರಡು ವಾರ ಸಮಯ ಬೇಕು. ಗಾಯದ ಅಂಗಾಂಶ ಕೂಡಿಕೊಳ್ಳಲು ಆರಂಭವಾದಂತೆ ನೋವು ಕಡಿಮೆಯಾಗುತ್ತದೆ.

ತಡೆಗಟ್ಟುವಿಕೆ
* ಹಲ್ಲನ್ನು ತೆಗೆಸಿದ ನಂತರ ವೈದ್ಯರು ನೀಡಿದ ಸಲಹೆಗಳನ್ನು ಸರಿಯಾಗಿ ಪಾಲಿಸಬೇಕು.  ಹೇಳಿದ ಮಾತ್ರೆ ಸೇವಿಸಬೇಕು.
* ಶಸ್ತ್ರ ಚಿಕಿತ್ಸೆ ನಂತರ ದೈನಂದಿನ ಚಟುವಟಿಕೆ ಮಾಡಬಹುದು. ಆದರೆ ಒಂದು ವಾರ ಕಠಿಣ ವ್ಯಾಯಾಮ, ಓಟ - ಆಟ ಬೇಡ. ಇದರಿಂದ ರಕ್ತ ಪಲ್ಲಟವಾಗುವ ಸಾಧ್ಯತೆ ಕಡಿಮೆಯಾಗುತ್ತದೆ.
* ಹಲ್ಲು ಕಿತ್ತ ಮೊದಲ ನಲವತ್ತೆಂಟು ಗಂಟೆಗಳ ಕಾಲ ಗಾಯಕ್ಕೆ ಹೊರಗಿನಿಂದ ಐಸ್ ಪ್ಯಾಕ್ ಕೊಡುವುದರಿಂದ ನೋವು - ಊತ ಕಡಿಮೆಯಾಗುತ್ತದೆ, ರಕ್ತ ಬೇಗ ಹೆಪ್ಪುಗಟ್ಟುತ್ತದೆ.
* ಮೊದಲ ಕನಿಷ್ಠ ಎರಡು ದಿನ ಧೂಮಪಾನ ಹಾಗೂ ಒಂದು ವಾರ ತಂಬಾಕು ಸೇವನೆ ಕೂಡದು.
* ಆರಂಭದಲ್ಲಿ ದ್ರವಾಹಾರ, ನಂತರ ಮೆತ್ತನೆ ಆಹಾರ, ನಿಧಾನವಾಗಿ ನಿತ್ಯದ ಆಹಾರ ಸೇವಿಸಬಹುದು. ಗಟ್ಟಿ, ಅಂಟು, ಮಸಾಲೆಯುಕ್ತ ಆಹಾರ ತಿಂದಲ್ಲಿ ಅದು ಕುಳಿಯೊಳಗೆ ಸಿಕ್ಕಿ ಗಾಯ ಮಾಯುವಿಕೆಗೆ ಅಡ್ಡಿ ಮಾಡಬಹುದು.
* ಮೊದಲ ದಿನ ಗಾಯದ ಜಾಗದಲ್ಲಿ ರಭಸವಾಗಿ ಉಜ್ಜುವುದು ಬೇಡ. ಅದಾದ ನಂತರ ಒಂದು ವಾರ ಉಗುರು ಬೆಚ್ಚಗಿನ ಉಪ್ಪು ನೀರಲ್ಲಿ ಆಗಾಗ್ಗೆ ಮತ್ತು ಆಹಾರ ತಿಂದ ಬಳಿಕ ಬಾಯಿ ಮುಕ್ಕಳಿಸಬೇಕು. ಬಾಯಿ ಸ್ವಚ್ಛವಾಗಿದ್ದಾಗ ಬ್ಯಾಕ್ಟೀರಿಯಾ ಸಂಖ್ಯೆ ಕಡಿಮೆಯಾಗುತ್ತದೆ.
ಅಸಹನೀಯ ನೋವು ನೀಡುವ ಒಣಕುಳಿಯನ್ನು ಬೇಗ ಪತ್ತೆ ಹಚ್ಚಿ ಚಿಕಿತ್ಸೆ ಪಡೆದರೆ ಗಾಯ ಗುಣ, ನೋವೂ ಮಾಯ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.