ಗಾಂಧೀಜಿ ಎನ್ನುವ ಮಹಾಸಂತ, ಫಕೀರ, ಪ್ರವಾದಿ, ಸೂಫಿ ವಿಶ್ವದಲ್ಲೇ ಅಜರಾಮರ. ನಮ್ಮ ದೇಶದ ಅವಿಭಾಜ್ಯ ಭಾಗ. ಅವರ ವ್ಯಕ್ತಿತ್ವ ಬೃಹದಾಕಾರದ ಅರಳಿ ಮರದಂತೆ. ಅದರಲ್ಲಿರುವ ಸಮಸ್ತ ಜೀವಕೋಟಿಗಳೂ ಮರದ ಮುಂದೆ ನಗಣ್ಯ. ಗಾಂಧಿ ಎನ್ನುವ ಪ್ರಖರ ಪ್ರತಿಭೆಯ ಪ್ರಭಾವಳಿಯಡಿ ಕಸ್ತೂರಬಾ ಇದ್ದರೂ ಇಲ್ಲದಂತೆ.
ಗಾಂಧಿಯ ಹೋರಾಟ, ಅವರ ಹಟಮಾರಿತನ, ಧೋರಣೆ, ಸಣ್ಣತನ, ಸಿಡುಕುತನ, ಕಠೋರ ನಿಲುವು ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಿದ ಸಾಧ್ವಿ ಆಕೆ. ಗಾಂಧಿ ಎನ್ನುವ ಬೆಳಕು ಬೆಳಗಲು ಕಸ್ತೂರಬಾ ದೀಪವಾದರು, ಎಣ್ಣೆಯಾದರು, ಬತ್ತಿಯೂ ಆದರು, ಕೊನೆಗೆ ಉರಿಯುವ ದೀಪದ ಕೆಳಗಿನ ಕತ್ತಲು ಎನ್ನುವಂತಾದರು.
ಗಾಂಧಿ ಅವರ ಮೇರು ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ಕಸ್ತೂರಬಾರ ತ್ಯಾಗವಿದೆ. ತದೇಕಚಿತ್ತದಿಂದ ತೇಯ್ದ ಬದುಕಿದೆ. ಅವರ ಪ್ರತಿ ಹೋರಾಟದಲ್ಲೂ ಕಸ್ತೂರಬಾ ಇದ್ದಾರೆ. ಅವರ ನಿಸ್ವಾರ್ಥ ಸೇವೆ ಇದೆ. ತಂದೆ– ಮಗನ ನಡುವಿನ ಬಂಡಾಯದಲ್ಲಿ ಹೆತ್ತ ಮಗನ ಸ್ಥಿತಿ ಕಂಡು ಮರುಗುವಾಗ ಕಸ್ತೂರಬಾ ಮಹಾನ್ ತಾಯಿಯಾಗಿ ಕಾಣುತ್ತಾರೆ. ಮರುಗಳಿಗೆಯಲ್ಲೇ ಗಾಂಧಿಯ ನೆರಳಿನಂತೆ ಅವರು ಸಾಗಿದ ಹಾದಿಯಲ್ಲೇ ಹೆಜ್ಜೆ ಇಡುತ್ತಾರೆ.
ದೇಶ ಸೇವೆಗಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟ ಗಾಂಧಿಯೇ ಅವರಿಗೆ ಮಕ್ಕಳಿಗಿಂತ ಹೆಚ್ಚು ಆಪ್ತರಾಗುತ್ತಾರೆ. ಆದರೂ ಹೆತ್ತ ಮಕ್ಕಳ ಸ್ಥಿತಿ ಕಂಡು ಮರುಗುತ್ತಾರೆ. ಅವರಿಗೊಂದು ಬದುಕನ್ನು ಕಟ್ಟಿಕೊಡಲು ಹೆಣಗುತ್ತಾರೆ. ಹೆತ್ತ ತಾಯಿಗಿರುವ ಹಪಾಹಪಿತನ, ಕಕ್ಕುಲತೆ, ಮಮತೆ, ಮಕ್ಕಳ ಬದುಕು ಎಲ್ಲವೂ ಗಾಂಧಿಯ ತತ್ವ, ಸಿದ್ಧಾಂತಗಳ ಮುಂದೆ ಗೌಣವಾಗುತ್ತವೆ. ಕಸ್ತೂರಿಬಾಯಿ ಆಗಿದ್ದ ಅವರು ಕಸ್ತೂರಬಾ ಆಗುತ್ತಾರೆ. ಬಾ ಎಂದರೆ ತಾಯಿ. ಎಲ್ಲರಿಂದಲೂ ತಾಯಿ ಎಂದು ಕರೆಸಿಕೊಂಡಾಕೆಗೆ, ತನ್ನ ಮಕ್ಕಳಿಗೆ ಉತ್ತಮ ತಾಯಿ ಆಗಲಿಲ್ಲವಲ್ಲ ಎನ್ನುವ ಕೊರಗು ಕೊನೆಯವರೆಗೂ ಇನ್ನಿಲ್ಲದಂತೆ ಕಾಡುತ್ತದೆ.
ಸುದೀರ್ಘ ದಾಂಪತ್ಯ
ಗಾಂಧಿ ಹಾಗೂ ಕಸ್ತೂರಬಾ ಗುಜರಾತಿನ ಪೋರಬಂದರಿನವರು. ಇಬ್ಬರೂ ಹುಟ್ಟಿದ್ದು ಒಂದೇ ವರ್ಷ. ಗಾಂಧಿ ಅವರಿಗಿಂತ ಕಸ್ತೂರಬಾ ಆರು ತಿಂಗಳು ದೊಡ್ಡವರು. ತಂದೆ ಗೋಪಾಲದಾಸ ಮುಖರ್ಜಿ, ಆಗರ್ಭ ಶ್ರೀಮಂತ ವ್ಯಾಪಾರಿ. ನೋಡಲು ಲಕ್ಷಣವಂತೆ. ಶಾಲೆಗೂ ಹೋದವಳಲ್ಲ. ಆದರೂ ತಂದೆ ಕಡೆಯಿಂದ ವ್ಯವಹಾರ ಜ್ಞಾನವಿತ್ತು. ಜೊತೆಗೆ ಸುಸಂಸ್ಕೃತೆ. ಇಂತಹ ಕಸ್ತೂರಬಾ ಏನೂ ಅರಿಯದ ಹದಿಮೂರರ ಎಳೆವಯಸ್ಸಿನಲ್ಲಿ ಗಾಂಧಿ ಕುಟುಂಬಕ್ಕೆ ಸೊಸೆಯಾಗಿ 1882ರಲ್ಲಿ ಸೇರ್ಪಡೆಯಾಗುತ್ತಾರೆ.
ಅರುಂಧತಿ ನಕ್ಷತ್ರ |
ಗಾಂಧಿ– ಕಸ್ತೂರಬಾ ದಂಪತಿಯ ಮೂರನೇ ಮಗ ರಾಮದಾಸ ಗಾಂಧಿ ಅವರ ಮಗಳು ಸುಮಿತ್ರಾ ಕುಲಕರ್ಣಿ ತಮ್ಮ ಅಜ್ಜನ ಕುರಿತು ‘ಮಹಾತ್ಮ ಗಾಂಧಿ ಮೇರೆ ಪಿತಾಮಹ’ ಎನ್ನುವ ಪುಸ್ತಕ ಬರೆದಿದ್ದಾರೆ. ಅದರಲ್ಲಿ ತಮ್ಮ ಅಜ್ಜಿಯನ್ನು ನೆನೆಯುತ್ತಾ, ಅವರನ್ನು ಅರುಂಧತಿ ನಕ್ಷತ್ರಕ್ಕೆ ಹೋಲಿಸಿದ್ದಾರೆ. ರಾತ್ರಿ ಆಕಾಶದಲ್ಲಿ ಏಳು ಚುಕ್ಕೆಗಳನ್ನು ‘ಸಪ್ತರ್ಷಿ ಮಂಡಲ’ ಎಂದು ಕರೆಯುತ್ತಾರೆ. ಈ ನಕ್ಷತ್ರಗಳ ಜೊತೆಗೆ ಮಿನುಗುವ ಸಣ್ಣ ನಕ್ಷತ್ರವೊಂದಿದೆ. ಪುಟ್ಟದಾಗಿದ್ದರೂ ಫಳಫಳನೆ ಹೊಳೆಯುವ ಇದೇ ಅರುಂಧತಿ ನಕ್ಷತ್ರ. ಅರುಂಧತಿ ಬ್ರಹ್ಮರ್ಷಿ ವಸಿಷ್ಠರ ಧರ್ಮಪತ್ನಿ. ನ್ಯಾಯನೀತಿಯ ಬದುಕಿಗೆ ಹೆಸರಾದವರು ವಸಿಷ್ಠರು. ಸಪ್ತರ್ಷಿ ಮಂಡಲದಲ್ಲಿ ಅವರಿಗೆ ವಿಶಿಷ್ಟ ಸ್ಥಾನ ತಂದುಕೊಡಲು ಪ್ರೇರಣೆಯಾದವರು ಅರುಂಧತಿ. ಅಂತೆಯೇ ಗಾಂಧಿ ಎನ್ನುವ ಸಂತನಿಗೆ ಸರಿಸಮಾನವಾಗಿ ಅವರೆಲ್ಲ ಹೋರಾಟಗಳಲ್ಲಿ ಹೆಗಲು ಕೊಟ್ಟವರು ಕಸ್ತೂರಬಾ. ಹೀಗೆ ಗಾಂಧಿ ನಮ್ಮ ನಡುವೆ ಹೇಗೆ ಮಹಾತ್ಮರಾಗಿದ್ದಾರೋ ಅದೇ ರೀತಿ ಕಸ್ತೂರಬಾ ಸಹ ಆ ಸ್ಥಾನಕ್ಕೆ ಅರ್ಹರು ಎಂದು ಸುಮಿತ್ರಾ ಬಣ್ಣಿಸಿದ್ದಾರೆ. ಕಸ್ತೂರಬಾ ಅವರ ಬದುಕನ್ನು ಗಮನಿಸಿದರೆ ಈ ಮಾತು ಅಕ್ಷರಶಃ ಸತ್ಯ ಎನಿಸದೇ ಇರದು. |
ಆಕೆಗೆ ಓದು ಬರಹ ಕಲಿಸಿದ ಮೊದಲ ಗುರು ಗಾಂಧಿ. ಕೂಡು ಕುಟುಂಬ, ಮನೆ ಕೆಲಸ ಜಾಸ್ತಿ. ನಡುನಡುವೆ ಗಾಂಧಿ ಮುಂದೆ ಓದಲು– ಬರೆಯಲು ಕೂರಬೇಕು. ಚೂರು ಹೆಚ್ಚು ಕಡಿಮೆಯಾದರೂ ನಿಂದನೆ. ಕಸ್ತೂರಬಾಗೆ ದೇವರ ಮೇಲೆ ನಂಬಿಕೆ. ಓದು ಬರಹ ಬಿಟ್ಟು ದೇವಸ್ಥಾನಕ್ಕೆ ಹೋಗಿ ಬಂದಿದ್ದು ತಿಳಿದರೂ ಬೈಗುಳ ತಪ್ಪಿದ್ದಲ್ಲ. ಅದಕ್ಕೆ ಅವರ ಕಣ್ಣೀರೇ ಉತ್ತರ.
ಗಾಂಧಿ ಅವರ ಆಚಾರ, ವಿಚಾರ ಆಕೆಗೆ ಅರ್ಥವಾಗುತ್ತಿರಲಿಲ್ಲ. ಗಾಂಧಿ ಅವರ ಕೈಹಿಡಿದಾಗ ಆತ ಮುಂದೊಂದು ದಿನ ಮಹಾತ್ಮನಾಗುತ್ತಾನೆ ಇಲ್ಲವೇ ಜಗತ್ತಿನ ಮಹಾನ್ ನಾಯಕನಾಗುತ್ತಾನೆ ಅಥವಾ ಅಹಿಂಸಾವಾದವನ್ನು ಸಾರುವ ಸಂತನಾಗುತ್ತಾನೆ ಎನ್ನುವ ಕಲ್ಪನೆಯೂ ಇರಲಿಲ್ಲ. ಆದರೂ ಗಾಂಧಿಯ ಸಿದ್ಧಾಂತ, ತತ್ವಗಳನ್ನು ತನ್ನ ಅಳತೆಯಲ್ಲೇ ಅರಿತುಕೊಂಡು ಕಷ್ಟಪಟ್ಟು ಮೈಗೂಡಿಸಿಕೊಂಡು ಶಿರಸಾವಹಿಸಿ ಪಾಲಿಸಿದರು. ಒಟ್ಟಿನಲ್ಲಿ ಗಾಂಧಿಯ ನಿಗರಾಣಿಯಲ್ಲೇ ಬೆಳೆದರು. ಸಮಸ್ತವನ್ನೂ ಅವರಿಗೇ ಅರ್ಪಿಸಿಕೊಂಡರು. ಗಾಂಧಿ ಪರಿಧಿಯೊಳಗೆ ನೊಂದು, ಬೆಂದು, ಬೆಳೆದು ಅವರ ಕಣ್ಣಳತೆಯಲ್ಲೇ ಪರಿಪಕ್ವ ಮೂರ್ತಿಯಾದರು.
ಅರಿವಾಗುವ ಮುನ್ನ...
ಮದುವೆಯಾದಾಗ ಕಸ್ತೂರಬಾಗೆ ತಂದೆ ಮನೆಯಿಂದ ವಜ್ರದ ಬೆಂಡೋಲೆಗಳು ಕೊಡುಗೆಯಾಗಿ ಬಂದಿದ್ದವು. ಅದನ್ನು ಹಾಕಿಕೊಳ್ಳುವ ಭಾಗ್ಯವೂ ಅವರದ್ದಾಗಿರಲಿಲ್ಲ. ಹಾಕದಂತೆ ಗಾಂಧಿ ತಾಕೀತು ಮಾಡಿದ್ದರು. ಆಡಂಬರದ ಯಾವ ವಸ್ತುವನ್ನೂ ಧರಿಸದಂತೆ ಕಟ್ಟಪ್ಪಣೆ ಹೊರಡಿಸಿದ್ದರು.
ಅದನ್ನು ಕಸ್ತೂರಬಾ ಕೊನೆಯವರೆಗೂ ಪಾಲಿಸಿಕೊಂಡು ಬಂದರು.
ಗಾಂಧಿ 1888ರಲ್ಲಿ ಲಂಡನ್‌ಗೆ ಹೊರಟಿದ್ದರು. ತಾನೆಂದೂ ತೊಡದ ಒಡವೆಗಳನ್ನು ಮಾರಿ ಕಸ್ತೂರಬಾ ಅದಕ್ಕೆ ಬೇಕಾದ ಹಣವನ್ನು ಹೊಂದಿಸಿಕೊಟ್ಟಿದ್ದರು.
ಇದರ ನಡುವೆ ಮೊದಲ ಮಗ ಹರಿಲಾಲ ಹುಟ್ಟಿದ್ದ. 1892ರಲ್ಲಿ ಮಣಿಲಾಲ, 1897ರಲ್ಲಿ ರಾಮದಾಸ ಮತ್ತು 1900ರಲ್ಲಿ ದೇವದಾಸ ಹುಟ್ಟಿದರು. ಅದಾದ ಆರು ವರ್ಷಗಳಲ್ಲೇ ಗಾಂಧಿಗೆ ವೈರಾಗ್ಯ. 1906ರಲ್ಲಿ ತಮ್ಮ 37ನೇ ವಯಸ್ಸಿನಲ್ಲಿ ಗಾಂಧಿ ಬ್ರಹ್ಮಚರ್ಯ ಪಾಲಿಸುವ ವಚನ ತೊಟ್ಟರು. ಕಸ್ತೂರಬಾಗೆ ಆಗ 38 ವರ್ಷ. ಗಾಂಧಿ ವಚನಕ್ಕೆ ಭಂಗವಾಗದಂತೆ ಅವರೂ ಅದನ್ನು ಪಾಲಿಸಿದರು.
ಕಸ್ತೂರಬಾ 1897ರಲ್ಲಿ ಗಾಂಧಿ ಜೊತೆ ದಕ್ಷಿಣ ಆಫ್ರಿಕಾಕ್ಕೆ ಹೋಗುತ್ತಾರೆ. ಹೋಗುವಾಗ ಬೂಟು ಹಾಕಿಕೊಳ್ಳಲು ಒಲ್ಲದ ಅವರಿಗೆ ಗಾಂಧಿ ಹಾಕಿಕೊಳ್ಳುವಂತೆ ಕಟ್ಟಪ್ಪಣೆ ಹೊರಡಿಸುತ್ತಾರೆ. ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಆರಂಭಿಸಿದ ಆಶ್ರಮದ ಉಸ್ತುವಾರಿಯನ್ನು ಹೊತ್ತುಕೊಳ್ಳುತ್ತಾರೆ. ಅಲ್ಲಿಗೆ ಬರುವವರ ಬೇಕು, ಬೇಡಗಳ ಜವಾಬ್ದಾರಿ ಕಸ್ತೂರಬಾ ಅವರದೇ. ತಾವೇ ಶೌಚಾಲಯ ಶುಚಿಗೊಳಿಸಬೇಕು ಎಂಬ ಗಾಂಧಿ ತತ್ವವನ್ನು ಒಪ್ಪದ ಕಸ್ತೂರಬಾ ‘ನಿಮ್ಮೊಂದಿಗೆ ನನಗೆ ಸ್ವಾತಂತ್ರ್ಯವೇ ಇಲ್ಲ’ ಎಂದು ರೋದಿಸುತ್ತಾರೆ. ಕೈಹಿಡಿದು ಹೊರಗೆ ಕರೆದೊಯ್ಯುವ ಗಾಂಧಿ, ಗೇಟಿನ ಬಾಗಿಲು ತೆಗೆದು ‘ಬೇಕೆಂದಲ್ಲಿಗೆ ಹೋಗು. ನಿನಗೆ ಮುಕ್ತ ಸ್ವಾತಂತ್ರ್ಯವಿದೆ.
ನಾನು ಪ್ರತಿರೋಧಿಸುವುದಿಲ್ಲ’ ಎನ್ನುತ್ತಾರೆ. ವಿದೇಶದಲ್ಲಿ ಹೋಗುವುದಾದರೂ ಎಲ್ಲಿಗೆ? ದಾರಿ ಕಾಣದ ಕಸ್ತೂರಬಾ ಆಶ್ರಮಕ್ಕೆ ಮರಳುತ್ತಾರೆ. ಒಲ್ಲದ ಕೆಲಸವನ್ನು ಒಪ್ಪಿಕೊಳ್ಳುತ್ತಾರೆ. ಅಂತಹ ಹಟಮಾರಿತನ ಗಾಂಧಿಯದ್ದು. ಮೂರ್ತಿಯೊಂದು ರೂಪುಗೊಳ್ಳುವುದು ಇಂತಹ ಹೊಡೆತಗಳಿಂದಲೇ ಅಲ್ಲವೇ?
ಜೊತೆಗೆ 1904ರಿಂದ 1914ರ ನಡುವಿನ ಅವಧಿಯಲ್ಲಿ ಅಲ್ಲಿ ನಡೆದ ಹೋರಾಟಗಳಲ್ಲಿ ಗಾಂಧಿಯೊಂದಿಗೆ ಸಕ್ರಿಯವಾಗಿ ತೊಡಗಿಕೊಳ್ಳುತ್ತಾರೆ. ಮೂರು ತಿಂಗಳ ಸೆರೆವಾಸವನ್ನೂ ಅನುಭವಿಸುತ್ತಾರೆ. 1915ರಲ್ಲಿ ಭಾರತಕ್ಕೆ ಮರಳುತ್ತಾರೆ. ಗಾಂಧೀಜಿ ಸ್ವದೇಶಿ ಚಳವಳಿಯ ಹಿಂದೆ ಕಸ್ತೂರಬಾ ಅವರ ಚಿಂತನೆಗಳು ಹೆಚ್ಚು ಪ್ರಭಾವ ಬೀರಿದ್ದನ್ನು ಮರೆಯುವಂತಿಲ್ಲ. ಗಾಂಧಿ ಖಾದಿ ತೊಡುವ ಚಳವಳಿ ಆರಂಭಿಸಿದಾಗ ಕಸ್ತೂರಬಾ ಅದರ ಪ್ರಚಾರ ತಂತ್ರವನ್ನು ರೂಪಿಸುತ್ತಾರೆ.
ಗುಜರಾತ್‌ನ ಸಬರಮತಿಯಲ್ಲಿ ಗಾಂಧಿ ಸ್ಥಾಪಿಸುವ ಆಶ್ರಮದ ಉಸ್ತುವಾರಿ ಕಸ್ತೂರಬಾ ಅವರದ್ದೇ. ಬಂದು ಹೋಗುವವರ ಕಾಳಜಿಯ ಜೊತೆಗೆ ನಾಲ್ವರು ಮಕ್ಕಳ ಪಾಲನೆ ಪೋಷಣೆ. ಇಲ್ಲೂ ಗಾಂಧಿ ಶೌಚಾಲಯ ಶುಚಿಯ ಆಜ್ಞೆ ಹೊರಡಿಸುತ್ತಾರೆ. ಅದಾಗಲೇ ಅವರು ವಿದೇಶದಲ್ಲಿ ಮಾಡಿದ್ದ ಕೆಲಸವೇ ಆಗಿತ್ತಾದರೂ, ಇಲ್ಲಿ ಸರೀಕರ ಎದುರಿಗೆ ಅದನ್ನು ಮಾಡಲು ಕಸ್ತೂರಬಾ ಅವರ ಮನಸ್ಸು ಒಪ್ಪುವುದಿಲ್ಲ. ಆದರೂ ಅವರು ಅದನ್ನು ಒಪ್ಪಿಕೊಂಡು ಆಜ್ಞಾಪಾಲಕರಾಗುತ್ತಾರೆ.
ಬಳಿಕ ಬಹುತೇಕ ವಿಷಯಗಳಲ್ಲಿ ಅವರ ಮನಸ್ಸು ಪರಿವರ್ತನೆಗೊಳ್ಳುತ್ತದೆ. ಮುಂದೆ ಅಸ್ಪೃಶ್ಯರಾದ ಮಣಿಭಾಯಿ ಮತ್ತು ಖಂಡೂರ ಅವರನ್ನು ಆಶ್ರಮದ ಅಡುಗೆ ಸಹಾಯಕರನ್ನಾಗಿ ನೇಮಿಸಿಕೊಳ್ಳುತ್ತಾರೆ. ಇವರ ಅಡುಗೆಯನ್ನು ಗಾಂಧಿ ಸವಿಯುವಾಗ ಸಂತೋಷ ಪಡುತ್ತಾರೆ. ಅಡುಗೆಗೆ ಉಪ್ಪು– ಬೇಳೆ ಬೇಡ ಎನ್ನುವ ಗಾಂಧಿ ಮಾತನ್ನೂ ಪಾಲಿಸುತ್ತಾರೆ.
ತಂದೆ– ಮಗನ ನಡುವೆ
ಹಿರಿಯವನಾದ ಹರಿಲಾಲ ಕಸ್ತೂರಬಾರ ಮೆಚ್ಚಿನ ಮಗ. ಆಶ್ರಮಕ್ಕೆ ಬಂದ ಮಗನಿಗೆ ಸಕ್ಕರೆ ಬೆರೆಸಿದ ಹಾಲು ಕೊಡುತ್ತಾರೆ. ಗಾಂಧಿಗೆ ಇದು ತಪ್ಪಾಗಿ ಕಾಣುತ್ತದೆ. ‘ಸಕ್ಕರೆ ಮಕ್ಕಳ ಮೂಳೆ ಕರಗಿಸುತ್ತದೆ. ಇದು ನಿನಗೆ ತಿಳಿಯುವುದಿಲ್ಲವೇ?’ ಎಂಬ ಅವರ ಮೂದಲಿಕೆಗೆ ತಾಯಿ– ಮಗನ ಮೂಕರೋದನವೇ ಉತ್ತರವಾಗುತ್ತದೆ. ಇದರಿಂದ ಹಾಲಿನಲ್ಲಿ ಬೆರೆತ ಸಕ್ಕರೆ ಕಸ್ತೂರಬಾ– ಹರಿ ಪಾಲಿಗೆ ಕಹಿಯಾದರೆ, ಅದು ಆಮದು ಸಕ್ಕರೆ ಎಂಬ ಕಾರಣಕ್ಕೆ ಗಾಂಧಿಗೂ ಅದು ಕಹಿ ಆಗಿರುತ್ತದೆ. ಮಗನ ಮುಂದೆ ಮೂಳೆ ಕರಗಿಸುತ್ತದೆ ಎಂದು ಹೆದರಿಸುವ ತಂದೆಯ ಮಮಕಾರವೂ ಇಲ್ಲಿ ಇದೆ, ಹಾಗೆಯೇ ಕಸ್ತೂರಬಾಗೆ ಸ್ವದೇಶಿ ಚಳವಳಿಯ ಅಗತ್ಯವನ್ನು ಮನವರಿಕೆ ಮಾಡಿಕೊಡುವ ಮಾತುಗಳೂ ಇವೆ.
ಕಸ್ತೂರಬಾ ಒಮ್ಮೊಮ್ಮೆ ಗಾಂಧಿ ಅವರನ್ನು ವಿರೋಧಿಸುತ್ತಾರೆ. ಅವರೇ ಕಲಿಸಿದ ಮಾತಿನ ಮೂಲಕವೇ ಛಾಟಿ ಬೀಸುತ್ತಾರೆ. ಇದಕ್ಕೊಂದು ಉದಾಹರಣೆ, ಕಸ್ತೂರಬಾಗೆ ಶ್ರೀಮಂತರೊಬ್ಬರು ಉಡುಗೊರೆಯಾಗಿ ಬಂಗಾರದ ಹಾರ ನೀಡುತ್ತಾರೆ. ಅದನ್ನು ಇಟ್ಟುಕೊಳ್ಳುವ ಬಗ್ಗೆ ದಂಪತಿಯಲ್ಲಿ ವಾಗ್ವಾದ ನಡೆಯುತ್ತದೆ. ‘ಈ ಹಾರ ನನ್ನ ಸೇವೆಗೆ ಸಂದ ಪುರಸ್ಕಾರ. ನೀನು ನನ್ನ ಹೆಂಡತಿ. ಅದಕ್ಕಾಗಿ ನಿನಗೆ ಬಳುವಳಿಯಾಗಿ ನೀಡಿದ್ದಾರೆ. ನಿನ್ನ ಸೇವೆಗಾಗಿ ಸಿಕ್ಕಿದ್ದಲ್ಲ’ ಎಂದು ಗಾಂಧಿ ಹೇಳುತ್ತಾರೆ.
ಕಸ್ತೂರಬಾ ಸಹ ಅಷ್ಟೇ ಮಾರ್ಮಿಕವಾಗಿ ‘ಹೌದು ಗೊತ್ತಿದೆ. ನಿಮ್ಮ ಸೇವೆಗಿಂತಲೂ ನನ್ನ ಸೇವೆಯೇನೂ ಕಡಿಮೆಯಿಲ್ಲ. ನಿಮ್ಮ ಸೇವೆಗೆ ಕುಂದು ಬಾರದಂತೆ ನಿಮಗಾಗಿ ಹಗಲು ರಾತ್ರಿ ಎನ್ನದೇ ನಾನು ದುಡಿಯುತ್ತೇನೆ. ಊರಿಂದ ಊರಿಗೆ ನೀವು ತಿರುಗುವಾಗ ಮನೆ, ಮಕ್ಕಳ ಬಗ್ಗೆ ವಿಚಾರಿಸಿದ್ದೀರಾ? ನಿಮಗಾಗಿ ದುಡಿಯುತ್ತಿರುವ ನನ್ನದು ಸಹ ಸೇವೆಯಲ್ಲವೇ’ ಎಂದು ಪ್ರಶ್ನಿಸುತ್ತಾರೆ. ಆದರೆ ಗಾಂಧಿಗೆ ಇವೆಲ್ಲವೂ ನಗಣ್ಯ. ಕೊನೆಗೂ ಹಾರವನ್ನು ಮರಳಿ ಕೊಡಿಸಲು ಅವರು ಸಫಲರಾಗುತ್ತಾರೆ.
ತಂದೆಯ ನಿಷ್ಠುರತೆ ಮತ್ತು ಕಷ್ಟಸಹಿಷ್ಣು ಜೀವನಕ್ಕೆ ಹೊಂದಿಕೊಳ್ಳಲು ಹರಿಲಾಲ ಹೆಣಗಾಡುತ್ತಾನೆ. ಅಪ್ಪನಂತೆ ಬ್ಯಾರಿಸ್ಟರ್ ಆಗಲು ಬಯಸುತ್ತಾನೆ. ಓದಲು ಲಂಡನ್‌ಗೆ ಹೋಗುವುದಾಗಿ ಹಟ ಹಿಡಿಯುತ್ತಾನೆ. ಹಣಕಾಸಿನ ಮುಗ್ಗಟ್ಟನ್ನು ಗಾಂಧಿ ಪ್ರಸ್ತಾಪಿಸುತ್ತಾರೆ. ಅವರಿವರಿಂದ ಹಣ ಹೊಂದಿಸುವುದಾಗಿ ಕಸ್ತೂರಬಾ ಹೇಳುತ್ತಾರೆ. ಮತ್ತೆ ಸ್ವದೇಶಿ– ವಿದೇಶಿ ಗೊಂದಲಗಳು ಎದುರಾಗುತ್ತವೆ. ಕೊನೆಗೂ ಗಾಂಧಿ ಒಪ್ಪುವುದಿಲ್ಲ, ಕಸ್ತೂರಬಾ ತಲ್ಲಣಿಸುತ್ತಾರೆ. ಮಗ ತಪ್ಪಿದ ಅವಕಾಶಕ್ಕಾಗಿ ಮರುಗುತ್ತಾನೆ. ಅಂದು ಗಾಂಧಿಯೇ ಗೆಲ್ಲುತ್ತಾರೆ.
ಆದರೆ ಮಗ ಅವರನ್ನೇ ಧಿಕ್ಕರಿಸುತ್ತಾನೆ. ಮನೆ ಬಿಟ್ಟು ಹೋಗಿ ಸಾಲಗಾರನಾಗುತ್ತಾನೆ. ತಾಯಿಯನ್ನು ಮಾತ್ರ ಇನ್ನಿಲ್ಲದಂತೆ ಪ್ರೀತಿಸುತ್ತಾನೆ. ಅವಕಾಶ ಸಿಕ್ಕಾಗಲೆಲ್ಲ ತಂದೆಯನ್ನು ಜರಿಯುತ್ತಾನೆ. ಮುಸಲ್ಮಾನನಾಗಿ ಮತಾಂತರಗೊಳ್ಳುತ್ತಾನೆ. ಇವೆಲ್ಲವೂ ‘ಬಾ’ರನ್ನು ಹಿಂಡಿ ಹಿಪ್ಪೆ ಮಾಡುತ್ತವೆ.
ಪ್ರೇರಕ ಶಕ್ತಿ
ಗಾಂಧಿ ಉಪವಾಸ ಕುಳಿತಾಗ ಅವರೊಂದಿಗೆ ಕಸ್ತೂರಬಾ ಸಹ ಇರುತ್ತಿದ್ದರು. ಗಾಂಧಿ ಸ್ವಾತಂತ್ರ್ಯ ಹೋರಾಟದ ಹಿಂದೆ ಪ್ರೇರಣೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೂ ಇದ್ದೂ ಇಲ್ಲದ ರೀತಿಯಲ್ಲಿ ತಮ್ಮನ್ನೇ ಅರ್ಪಿಸಿಕೊಂಡ ಅವರು ನಮಗೆ ದೊಡ್ಡ ಸ್ವಾತಂತ್ರ್ಯ ಹೋರಾಟಗಾರರಾಗಿ ಕಾಣಿಸುವುದೇ ಇಲ್ಲ. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಂಧೀಜಿ ನೇತೃತ್ವದಲ್ಲಿ ನಡೆದ ದಂಡಿ ಯಾತ್ರೆ ಅಥವಾ ಉಪ್ಪಿನ ಸತ್ಯಾಗ್ರಹ ಒಂದು ಮಹತ್ತರ ಘಟನೆ. ಉಪ್ಪಿನ ಮೇಲಿನ ತೆರಿಗೆಯನ್ನು ತೆಗೆದುಹಾಕುವಂತೆ ಒತ್ತಾಯಿಸಿ 1930ರಲ್ಲಿ ಗಾಂಧೀಜಿ ನಡೆಸಿದ 24 ದಿನಗಳ ಯಾತ್ರೆ ಅವಿಸ್ಮರಣೀಯ.
ಜನರ ಬದುಕಿನ ಒಂದು ವಸ್ತುವಾದ ಉಪ್ಪನ್ನು ಹೋರಾಟಕ್ಕೆ ಆಯ್ದುಕೊಂಡಿದ್ದು ಈ ಆಂದೋಲನಕ್ಕೆ ಹೊಸ ಮೆರುಗು ನೀಡಿತ್ತು. ಈ ಸತ್ಯಾಗ್ರಹಕ್ಕೆ ಚಾಲನೆ ನೀಡಿದ್ದು ಕಸ್ತೂರಬಾ. ಉಪ್ಪನ್ನು ಹೆಚ್ಚಾಗಿ ಬಳಸುವವರು ಮಹಿಳೆಯರು. ಹೀಗಾಗಿ ಈ ಹೋರಾಟದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಧಾನ್ಯ ನೀಡಲಾಗಿತ್ತು.
‘ಭಾರತ ಬಿಟ್ಟು ತೊಲಗಿ’ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಕಸ್ತೂರಬಾ ಅವರನ್ನು ಬಂಧಿಸಲಾಗುತ್ತದೆ. ಆಗಲೇ ತೀವ್ರ ಉಬ್ಬಸದಿಂದ ಬಳಲುತ್ತಿದ್ದ ಅವರ ಸ್ಥಿತಿ ಜೈಲಿನಲ್ಲಿ ಇನ್ನಷ್ಟು ಬಿಗಡಾಯಿಸಿ ನ್ಯುಮೋನಿಯಾಕ್ಕೆ ತಿರುಗುತ್ತದೆ. ಕಡೆಗೂ ದೇಶ ಸ್ವಾತಂತ್ರ್ಯ ಪಡೆಯುವುದನ್ನು ನೋಡುವ ಭಾಗ್ಯ ಅವರದ್ದಾಗಲಿಲ್ಲ. 1944ರ ಫೆಬ್ರುವರಿ 22ರಂದು ಜೈಲಿನ ಗೋಡೆಗಳ ನಡುವೆ ಗಾಂಧಿಯ ತೊಡೆಯ ಮೇಲೆ ಮಲಗಿಕೊಂಡೇ ಅವರು ಚಿರನಿದ್ರೆಗೆ ಜಾರುತ್ತಾರೆ.
ಗಾಂಧಿ ಅವರೊಟ್ಟಿಗೆ 60 ವರ್ಷ ಸಂಸಾರ ನಡೆಸುವ ಕಸ್ತೂರಬಾ, ತನಗಿಂತ ಕಿರಿಯ ವ್ಯಕ್ತಿಯನ್ನು ಹಿರಿಯ ವ್ಯಕ್ತಿಯನ್ನಾಗಿಸಲು ತಮ್ಮ ಬದುಕನ್ನು ಸವೆಸುತ್ತಾರೆ. ಗಾಂಧಿ ಎಂಬ ಸಾಮಾನ್ಯ ವ್ಯಕ್ತಿ ಮಹಾತ್ಮ ಗಾಂಧಿಯಾಗಿ ರೂಪಾಂತರ ಹೊಂದುವಲ್ಲಿ ಕಸ್ತೂರಬಾರ ಪಾತ್ರ ಅನನ್ಯ. ಗಾಂಧಿ ತಮ್ಮ ಆತ್ಮಚರಿತ್ರೆಯಲ್ಲಿ ‘ಕಸ್ತೂರಬಾ ಇಲ್ಲದ ಜೀವನವನ್ನು ಕಲ್ಪಿಸಿಕೊಳ್ಳಲಾರೆ’ ಎಂದು ಹೇಳಿಕೊಂಡಿದ್ದಾರೆ.
ದೇಶದಲ್ಲಿ ಕಸ್ತೂರಬಾ ಗಾಂಧಿ ಎನ್ನುವ ಹೆಸರಿಲ್ಲದ ನಗರಗಳಿಲ್ಲ. ಕಸ್ತೂರಬಾ ಶಾಲಾ, ಕಾಲೇಜು, ವಸತಿ ಶಾಲೆಗಳಿವೆ, ರಸ್ತೆಗಳಿವೆ. ಅವರ ನಿಧನದ ಬಳಿಕ ಕಸ್ತೂರಬಾ ಟ್ರಸ್‌್ಟ ಸ್ಥಾಪನೆಗೊಂಡಿತು. ಈ ಟ್ರಸ್‌್ಟನ ಮೂಲಕವೇ ಗಾಂಧೀಜಿಯ ಮೌಲ್ಯಗಳು, ಅವರ ಆದರ್ಶ, ತತ್ವ, ಸಿದ್ಧಾಂತ, ವಿಚಾರಗಳ ಪ್ರಚಾರ ಕಾರ್ಯ ನಡೆದುಕೊಂಡು ಬರುತ್ತಿದೆ. ಹೀಗೆ ಸಾವಿನ ನಂತರವೂ ಒಬ್ಬರನ್ನೊಬ್ಬರು ಬಿಟ್ಟಿರಲಾರದ ಸಂಬಂಧಗಳಿವು.
ಎಲ್ಲವೂ ‘ಬಾ’ನ ಕೊಡುಗೆ
ಒಮ್ಮೆ ರೈಲು ನಿಲ್ದಾಣಕ್ಕೆ ತಾಯಿಯನ್ನು ನೋಡಲು ಹರಿಲಾಲ ಬರುತ್ತಾನೆ. ಜೊತೆಯಲ್ಲಿ ಹಣ್ಣುಗಳನ್ನು ತಂದಿರುತ್ತಾನೆ. ಅಮ್ಮನಿಗೆ ಜೈಕಾರ ಹಾಕುತ್ತಾನೆ. ಕಸ್ತೂರಬಾ ಕೈಗೆ ಹಣ್ಣು ಕೊಡುತ್ತಾನೆ. ಹಿಂದೆಯೇ ಇದ್ದ ಗಾಂಧಿ ‘ಹರಿ ನನಗೇನು ತಂದೆ’ ಎನ್ನುತ್ತಾರೆ. ‘ನಿನಗೆ ಏನೂ ಇಲ್ಲ. ‘ಬಾ’ಗೆ ನೀನು ಕಷ್ಟ ಕೊಡುತ್ತೀ. ನಿನಗೇಕೆ ತರಬೇಕು? ಇಂದು ನೀನು ಏನಾಗಿದ್ದೀಯೋ ಅವೆಲ್ಲವೂ ನನ್ನ ‘ಬಾ’ನ ಕೊಡುಗೆ.
ಆಕೆಯ ತ್ಯಾಗವೇ ನಿನಗೆ ಈ ಸ್ಥಾನಮಾನ ತಂದುಕೊಟ್ಟಿದೆ’ ಎಂದು ಹೇಳುತ್ತಾನೆ. ತಮ್ಮ ಆತ್ಮಕಥೆಯಲ್ಲಿ ಗಾಂಧಿ ‘ಕುರುಡು ಪ್ರೀತಿಯಿಂದ ಕಸ್ತೂರಬಾನನ್ನು ಇನ್ನಿಲ್ಲದಂತೆ ಕಾಡಿದೆ. ನಾನು ಇಂದು ಏನಾಗಿದ್ದೇನೋ ಅದಕ್ಕೆ ಅವಳೇ ಕಾರಣ. ಶಾಲೆಯಲ್ಲಿ ಕಲಿಯದವಳು ನನಗೆ ಬದುಕಿನ ಪಾಠವನ್ನು ಕಲಿಸಿದಳು. ಏಳೇಳು ಜನ್ಮಕ್ಕೂ ಆಕೆಯೇ ನನ್ನ ಪತ್ನಿಯಾಗಲಿ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.