ADVERTISEMENT

ಕಾಣದ ಸಂಹಿತೆಗಳ ಸೆರಗಿನಲ್ಲಿ...

​ಪ್ರಜಾವಾಣಿ ವಾರ್ತೆ
Published 28 ಜುಲೈ 2017, 19:30 IST
Last Updated 28 ಜುಲೈ 2017, 19:30 IST
ಚಿತ್ರ: ಮದನ್‌ ಸಿ.ಪಿ.
ಚಿತ್ರ: ಮದನ್‌ ಸಿ.ಪಿ.   

–ಕಾವ್ಯಾ ಎನ್‌.

**

ಹಾಂಗೆ ನೋಡಿದ್ರೆ ನನ್ ಗಂಡ ಲಿಬರಲ್‌ ಮನಃಸ್ಥಿತಿಯವನೇ ಕಣೆ’ - ಹೀಗೆಂದು ದೊಡ್ಡದಾಗಿ ನಕ್ಕವಳನ್ನು ಕಿಚಾಯಿಸುವ ಮನಸ್ಸಾಗಿ ‘‘ಹಾಂಗೆ ನೋಡಿದ್ರೆ’ ಅಂದ್ರೆ...? ಇನ್ಮೆಂಗೆ ನೋಡೂದು?’’ ಅಂತ ಕೇಳಿದೆ.

ADVERTISEMENT

ಕ್ಷಣಹೊತ್ತು ಗಂಭೀರವಾಗಿ ಏನೋ ಯೋಚಿಸಿದವಳು ಮತ್ತೆ ನಕ್ಕುಬಿಟ್ಟಳು.

ಅವಳು ಮತ್ತು ನಾನು ಪಿಯುಸಿಯಲ್ಲಿ ಸಹಪಾಠಿಗಳು. ಬಿ.ಎ. ಮೊದಲ ವರ್ಷದಲ್ಲಿಯೂ ಜೊತೆಗೇ ಓದುತ್ತಿದ್ದಾಗ ಅವಳಿಗೆ ಮನೆಯಲ್ಲಿ ಗಂಡು ನೋಡಿ ಮದುವೆ ಮಾಡಿಬಿಟ್ಟರು. ಮದುವೆಯಾಗಿ ಐದಾರು ತಿಂಗಳ ನಂತರ ಅಚಾನಕ್ಕಾಗಿ ಸಿಕ್ಕು ಮಾತಿಗೆ ಕೂತಾಗ ನನಗೆ ಅವಳ ಸಂಸಾರದ ವಿವರಗಳನ್ನು ಕೇಳುವ ಕಾತರವಿತ್ತು. ಮದುವೆಯಾಗಿ ಗಂಡನ ಮನೆಗೆ ಹೋದ ಮರುದಿನವೇ ಅವಳನ್ನು ಪಕ್ಕ ಕೂಡಿಸಿಕಂಡ ಅತ್ತೆ ‘ನಮ್ಮದು ಸಂಪ್ರದಾಯಸ್ಥ ಕುಟುಂಬ. ಹೊರಗೆಲ್ಲಾದರೂ ಹೋಗುವಾಗ ಸೀರೆಯನ್ನೇ ಉಟ್ಟುಕೊಂಡು ಹೋಗಬೇಕು’ ಎಂದೆಲ್ಲ ಬುದ್ದಿ ಹೇಳಿದ್ದರು.

ಆಗಲೇ ಹೇಳಿದ್ದು ಅವಳು ‘ಹಾಂಗೆ ನೋಡಿದ್ರೆ ನನ್ನ ಗಂಡ ಲಿಬರಲ್‌ ಮನಃಸ್ಥಿತಿಯವನೇ’ ಎಂದು ಹೇಳಿದ್ದು.

‘ನನ್ನ ಗಂಡನಿಗೆ ನಾನು ಬರೀ ಸೀರೆ ಉಟ್ಟುಕೊಂಡಿರುವುದು ಬೇಕಾಗಿಲ್ಲ. ‘ನಿನಗಿಷ್ಟವಾದ ಡ್ರೆಸ್‌ ಹಾಕಿಕೋ’ ಅಂದಿದ್ದಾರೆ. ವೇಲ್‌ ಇಲ್ಲದ, ಮೈಗಂಟಿಕೊಳ್ಳುವ ಉಡುಪು ಧರಿಸಿಕೊಂಡಾಗ ಸ್ವಲ್ಪ ಸಿಡಿಮಿಡಿ ಮಾಡುತ್ತಾನೆ. ಅಪರೂಪಕ್ಕೊಮ್ಮೆ ಊರಿಗೆ ಹೊರಟಾಗ ನಾನು ಸೀರೆಯನ್ನೇ ಉಟ್ಟುಕೊಂಡರೆ ಖುಷಿಖುಷಿಯಾಗಿರುತ್ತಾನೆ. ಜೀನ್ಸ್‌ ಹಾಕ್ಕೊಳ್ಳಲಾ ಅಂತ ಕೇಳುವ ಧೈರ್ಯ ನನಗೇ ಬಂದಿಲ್ಲ’ ಎಂದು ನಗುನಗುತ್ತಲೇ ಹೇಳಿದ್ದಳು. ನಾನು ಸುಮ್ಮನೇ ಅವಳ ಮುಖವನ್ನೇ ನೋಡುತ್ತ ಕುಳಿತಿದ್ದೆ. ಆ ನಗು ನನ್ನನ್ನು ಅಣುಕಿಸುವಂತೇ ಕಾಣುತ್ತಿತ್ತು.

ಓದು ಮುಗಿಸಿದ ಹೊಸತು. ದಕ್ಷಿಣ ಧ್ರುವದ ತುತ್ತತುದಿಯಲ್ಲೊಂದು ಕೆಲಸ ಸಿಕ್ಕರೂ ಸಾಕು, ಹೋಗಿಯೇ ಬಿಡುವುದೇ ಎಂಬ ಉಮೇದು. ಎಪ್ಪತ್ತು ಕಿ.ಮೀ. ದೂರದ ಊರಿನ ಕಾಲೇಜೊಂದರಲ್ಲಿ ಅರೆಕಾಲಿಕ ಉಪನ್ಯಾಸಕಳಾಗಿ ಕೆಲಸ ಸಿಕ್ಕಾಗ ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದೆ. ಹೊಸದಾಗಿ ಹುಟ್ಟಿಕೊಂಡ ರೆಕ್ಕೆಗಳು, ಆರ್ಥಿಕ ಸ್ವಾವಲಂಬನೆಯ ನೆಮ್ಮದಿ, ಇಷ್ಟದ ಶಿಕ್ಷಕವೃತ್ತಿಯಲ್ಲಿಯೇ ಅವಕಾಶ ಸಿಕ್ಕದ ಖುಷಿ – ಎಲ್ಲವೂ ಸೇರಿ ಪ್ರತಿದಿನ ನೂರೈವತ್ತು ಕಿ.ಮೀ. ಪ್ರಯಾಣದ ಆಯಾಸವನ್ನೂ ಮರೆಸುತ್ತಿತ್ತು.

ಕೆಲಸಕ್ಕೆ ಸೇರಿದ ಮೂರನೇ ದಿನ. ಪ್ರಾಂಶುಪಾಲರಿಂದ ಕರೆ ಬಂತು. ಏನಿರಬಹುದು? ಪಾಠ ಮಾಡುತ್ತಿರುವುದು ಸರಿ ಆಗುತ್ತಿಲ್ಲವೇ? ವಿದ್ಯಾರ್ಥಿಗಳಿಗೆ ಅರ್ಥ ಆಗುತ್ತಿಲ್ಲ ಅಂತ ದೂರು ಹೋಗಿರಬಹುದೇ ಇನ್ನೊಂಚೂರು ಬೇರೆ ಬೇರೆ ಮೂಲಗಳನ್ನು ಅಭ್ಯಸನ ಮಾಡಿ ಹೇಳಬೇಕಾಗಿತ್ತೇನೋ ಹೀಗೆ ತಲೆತುಂಬ ಗೊಂದಲಗಳನ್ನು ತುಂಬಿಕೊಂಡು ಪ್ರಾಂಶುಪಾಲರ ಕೊಠಡಿ ಹೊಕ್ಕೆ. ಈಗಷ್ಟೇ ಯಾವುದೋ ವಿಷಯ ಗಂಭೀರವಾಗಿ ಚರ್ಚಿಸಿ ನನಗಾಗಿಯೇ ಕಾದವರಂತೆ ಎಲ್ಲರೂ ನನ್ನನ್ನೇ ನೋಡುತ್ತ ಮೌನವಾಗಿ ಕೂತಿದ್ದರು. ಆ ಮೌನದಲ್ಲಿಯ ತಾಪ ಅವರ ಮುಖಭಾವದ ಮೂಲಕವೇ ನನ್ನ ಅನುಭವಕ್ಕೂ ಬಂತು.

‘ನಮ್ಮ ಕಾಲೇಜಿನಲ್ಲಿ ಶಿಕ್ಷಕರಿಗೆ ಒಂದು ಡ್ರೆಸ್‌ ಕೋಡ್‌ ಇದೆ. ಅದನ್ನು ಯಾರೂ ಮುರಿಯೋ ಹಾಗಿಲ್ಲ’ ಎಂದು ಗಂಭೀರವಾಗಿ ಹೇಳಿದರು ಪ್ರಾಂಶುಪಾಲರು. ನಾನು ಮಿಕಿಮಿಕಿ ಅವರ ಮುಖವನ್ನೇ ನೋಡುತ್ತ ನಿಂತೆ.

ಪಕ್ಕ ಕೂತಿದ್ದ ಇನ್ನೊಬ್ಬ ಉಪನ್ಯಾಸಕರು ಅವರ ಮಾತಿನ ಮುಂದುವರಿಕೆಯಂತೆ ‘ನಾಳೆಯಿಂದ ನೀವು ಸೀರೆಯನ್ನು ಧರಿಸಿಯೇ ಕಾಲೇಜಿಗೆ ಬರಬೇಕು’ ಎಂದರು.

ವಿಷಯ ಈಗ ನನಗೆ ಪೂರ್ತಿ ಪರಿಸ್ಥಿತಿ ಅರ್ಥವಾಯಿತು. ನನ್ನ ನಿತ್ಯದ ದೀರ್ಘ ಪ್ರಯಾಣ, ಬೆಳಿಗ್ಗೆ ಆರಕ್ಕೆ ಎದ್ದು ಹೊರಡಬೇಕಾದ ಅನಿವಾರ್ಯತೆ. ಇತ್ಯಾದಿಗಳನ್ನೆಲ್ಲ ವಿಷದವಾಗಿಯೇ ಹೇಳಿ, ಸೀರೆ ಉಟ್ಟಕೊಂಡು ಬರುವುದು ಕಷ್ಟ ಎಂದು ವಿನಂತಿಸಿಕೊಂಡೆ.

‘ಸೀರೆ ಉಡೋಕೂ ಕಷ್ಟ ಆಗತ್ತೆ ಅನ್ನೋರು ಟೀಚಿಂಗಿಗೆ ಯಾಕ್ರಿ ಬರಬೇಕು? ಬೇರೆ ಎಲ್ಲಾದ್ರೂ ಕೆಲಸ ಹುಡ್ಕೋಬೇಕು. ಚೂಡಿದಾರ ಹಾಕ್ಕೊಂಡು ಬಂದ್ಬಿಟ್ರೆ ಯಾರು ಸ್ಟುಡೆಂಟು ಯಾರು ಟೀಚರು ಅಂತ್ಲೆ ಗೊತ್ತಾಗಲ್ಲ. ಪ್ರತಿಯೊಂದು ಕೆಲಸಕ್ಕೂ ಅದರದ್ದೇ ಆದ ಘನತೆ, ಗಾಂಭೀರ್ಯ ಇರತ್ತೆ. ನಿಮ್ಮ ಡ್ರೆಸ್‌ ಶಿಕ್ಷಕವೃತ್ತಿಯ ಪಾವಿತ್ರ್ಯವನ್ನು ಹೆಚ್ಚಿಸುವ ಹಾಗಿರಬೇಕು..’ ಎಂಬ ಸುದೀರ್ಘ ಪ್ರವಚನವೇ ನಿರರ್ಗಳವಾಗಿ ತೂರಿಬಂತು.

ಸೀರೆ ಉಡುವುದಕ್ಕೂ ಶಿಕ್ಷಕವೃತ್ತಿಗೂ, ಪಾವಿತ್ರ್ಯಕ್ಕೂ ಎಲ್ಲಿಂದೆಲ್ಲಿಯ ಸಂಬಂಧ ಎನ್ನುವುದು ಅರ್ಥವಾಗದಿದ್ದರೂ, ಸುಮ್ಮನೇ ಹೊರಬಂದೆ.

ಶಾಲಾ–ಕಾಲೇಜು, ಸಾರ್ವಜನಿಕ ಸ್ಥಳ ಸರಕಾರಿ ಕಚೇರಿಗಳಲ್ಲಿ ಧರಿಸಬೇಕಾದ ಉಡುಪಿನ ಕುರಿತಾದ ಚರ್ಚೆಗೆ ಕೊನೆ ಮೊದಲಿಲ್ಲ. ಜೀನ್ಸ್‌ ತೊಡಬೇಕಾ ಬೇಡವಾ? ಸ್ಕಾರ್ಫ್‌ ಬೇಕೇ ಬೇಕಾ? ಬಟ್ಟೆ ಪ್ರಚೋದನಕಾರಿ ಆಗಿದೆಯಾ? ಹೀಗೆಲ್ಲ ವಸ್ತ್ರಸಂಹಿತೆಯ ಕುರಿತು ಮಾಡಲಾಗುವ ಗಂಭೀರ ಚರ್ಚೆಗಳು ಎಲ್ಲೆಲ್ಲೋ ಸುತ್ತಿ ಕೊನೆಗೆ ತಲುಪುವುದು ಮಹಿಳೆಯನ್ನೇ. ಹಿಂದೆಲ್ಲ ಶಾಲಾಕಾಲೇಜುಗಳಲ್ಲಿ ವಿದ್ಯಾರ್ಥಿಗಳ ವಸ್ತ್ರಸಂಹಿತೆಯ ಕುರಿತು ಚರ್ಚೆಗಳಾಗುತ್ತಿದ್ದವು. ಈಗದು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಶಿಕ್ಷಕಿಯರನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ನಮ್ಮ ಬೋಧನಾ ಕ್ಷೇತ್ರದಲ್ಲಿ ಮಹಿಳೆಯರು ಮೊದಲಿನಿಂದಲೂ ಇರುವಾಗ, ಈ ಹಿಂದೆ ಎಲ್ಲಿಯೂ ಅಷ್ಟಾಗಿ ಇರದ ಚರ್ಚೆ ಮತ್ತೆ ಮತ್ತೆ ಮುನ್ನೆಲೆಗೆ ಬರುತ್ತಿರುವುದಕ್ಕೆ ಕಾರಣ ಏನಿರಬಹುದು?

ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರಿಗೆ ವಸ್ತ್ರಸಂಹಿತೆಯನ್ನು ಜಾರಿಗೊಳಿಸುವ ಕುರಿತು ವಿದ್ಯಾರ್ಥಿಗಳ ಅಭಿಪ್ರಾಯ ಸಂಗ್ರಹಿಸುವ ನಾಟಕ ಆಗಾಗ ನಡೆಯುತ್ತಲೇ ಇರುತ್ತದೆ. ಇತ್ತೀಚೆಗಂತೂ ಯಾರೋ ಕೊಟ್ಟ ದೂರನ್ನು ಪರಿಗಣಿಸಿ ಶಿಕ್ಷಣ ಇಲಾಖೆ ಉಪನ್ಯಾಸಕಿಯರಿಗೆ ಸೀರೆ ಕಡ್ಡಾಯಗೊಳಿಸಿ ಆದೇಶವನ್ನೂ ಹೊರಡಿಸಿ, ನಂತರ ಹಿಂಪಡೆದುಕೊಂಡಿತು. ಈ ಆದೇಶ ಸಾಕಷ್ಟು ಚರ್ಚೆಗೆ ಕಾರಣವಾದರೂ ಅದನ್ನು ಹಿಂಪಡೆದ ಕೂಡಲೇ ಆ ಚರ್ಚೆ ನಿಂತು ಹೋಗಿದೆ. ಅದರರ್ಥ ಸಮಸ್ಯೆ ನಿವಾರಣೆ ಆಗಿದೆ ಎಂದಲ್ಲ. ಆದೇಶ ಹಿಂಪಡೆಯುವುದರಿಂದಲ್ಲ, ಅದನ್ನು ಹೊರಡಿಸುವ ಮನಃಸ್ಥಿತಿಯಲ್ಲಿಯೇ ಸಮಸ್ಯೆ ಇರುವುದು. ಅದು ಬದಲಾಗದ ಹೊರತು ಸಮಸ್ಯೆಯೂ ರೂಪಬದಲಿಸಿಕೊಂಡು ಮತ್ತೆ ಮತ್ತೆ ಹಾಜರಾಗುತ್ತಲೇ ಇರುತ್ತದೆ.

ನಮ್ಮ ಶಿಕ್ಷಕ ತರಬೇತಿ ಸಂಸ್ಥೆಗಳಿಂದ ಆರಂಭಿಸಿ ಬಹುತೇಕ ಪ್ರಾಥಮಿಕ, ಪ್ರೌಢಶಾಲೆಗಳನ್ನೊಮ್ಮೆ ಅವಲೋಕಿಸಿ ಅಲ್ಲೆಲ್ಲ ಶಿಕ್ಷಕರ (ಅರ್ಥಾತ್‌ ಶಿಕ್ಷಕಿಯರ) ವಸ್ತ್ರಸಂಹಿತೆಯ ಕುರಿತು ಚರ್ಚೆಗಳಾಗುವುದಿಲ್ಲ. ಏಕೆಂದರೆ ಅಲ್ಲಿ ಮಹಿಳಾ ಪ್ರಶಿಕ್ಷಣಾರ್ಥಿಗಳಿಗೆ ಮತ್ತು ಶಿಕ್ಷಕಿಯರಿಗೆ ಸೀರೆಯನ್ನು ಧರಿಸಲೇಬೇಕಿರುವ ಸಮವಸ್ತ್ರವನ್ನಾಗಿ ಅಘೋಷಿತ ಕಡ್ಡಾಯ ಮಾಡಲಾಗಿದೆ. ಶಿಕ್ಷಕ ತರಬೇತಿ ನೀಡುವ ಡಿ ಇಡಿ, ಬಿ ಇಡಿ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರ ಸಮವಸ್ತ್ರ ಬಹುತೇಕ ಸೀರೆಯೇ ಆಗಿರುತ್ತದೆ.

ಇಂಥ ಕಾಲೇಜುಗಳಲ್ಲಿ ತರಬೇತಿ ಪಡೆದು ಬರುವ ರಾಜ್ಯದ ಪ್ರಾಥಮಿಕ– ಪ್ರೌಢಶಾಲೆಗಳ ಶಿಕ್ಷಕಿಯರು ಸೀರೆಯನ್ನು ಮರುಮಾತಿಲ್ಲದೇ ಒಪ್ಪಿಕೊಂಡಾಗಿದೆ. ಹೀಗಿರುವಾಗ ಕಾಲೇಜುಗಳಲ್ಲಿ ಅಧ್ಯಾಪಕಿಯರು ಚೂಡಿದಾರ ಧರಿಸಿ ಪಾಠ ಮಾಡುವುದು ಒಪ್ಪಿತ ಮೌಲ್ಯವೊಂದರ ನಿರಾಕರಣೆಯಂತೆ ಕಾಣತೊಡಗಿದೆ. ಇಷ್ಟೊಂದು ವರ್ಷಗಳ ಕಾಲ ಶಿಕ್ಷಕಿಯರನ್ನು ಸೀರೆಯಲ್ಲಿ ಮಾತ್ರ ಒಪ್ಪಿಕೊಂಡ ಸಮಾಜಮೌಲ್ಯ ಒಮ್ಮೆಲೇ ಅವರು ಬೇರೆ ದಿರಿಸಿನಲ್ಲಿ ಬಂದು ಪಾಠ ಮಾಡುತ್ತಾರೆಂದರೆ ಸಿಡಿಮಿಡಿಯಾಗುತ್ತದೆ. ‘ಕಾಲ ಕೆಟ್ಟು ಹೋಯ್ತು, ಶಿಕ್ಷಕವೃತ್ತಿಯ ಪಾವಿತ್ರ್ಯ ಹಾಳಾಯ್ತು’ – ಎಂಬೆಲ್ಲ ಗೊಣಗಾಟಗಳು ಕೇಳಿಬರುತ್ತವೆ.

ಕರಿಕೋಟು, ಪಂಚೆ, ಟೋಪಿಯನ್ನು ಧರಿಸುತ್ತಿದ್ದ ಮಾಸ್ತರುಗಳ ಹಳೆಯ ತಲೆಮಾರೊಂದಿತ್ತು. ವರ್ಷಗಳು ಕಳೆದಂತೆ ಅದು ಪ್ಯಾಂಟು–ಶರ್ಟ್‌ ಆಗಿ ಬದಲಾಯಿತು. ಸೂಟು ಬೂಟು ಟೈಗಳಂತೂ ಭಾರತೀಯ–ಪಾಶ್ಚಾತ್ಯ ಯಾವುದೇ ಭೇದವಿಲ್ಲದೆಯೇ ಮುಕ್ತವಾಗಿ ಸ್ವೀಕರಿಸಲ್ಪಟ್ಟಿದೆ. ಆದರೆ ಶಿಕ್ಷಕಿಯರ ಉಡುಪಿನ ವಿಚಾರದಲ್ಲಿ ತಲಮಾರುಗಳ ನಂತರವೂ ಕನಿಷ್ಠ ಬದಲಾವಣೆಯನ್ನೂ ಸಮಾಜ ಒಪ್ಪಿಕೊಳ್ಳುತ್ತಿಲ್ಲ. ಇದಕ್ಕೆ ಕಾರಣ ಏನಿರಬಹುದು? ನಿರ್ದಿಷ್ಟ ವೃತ್ತಿಗೂ ಧರಿಸುವ ಉಡುಪಿಗೂ ನಿರಾಕರಿಸಲಾಗದಂಥ ಸಂಬಂಧ ಇರುತ್ತದೆಯೇ? ಹೌದು, ಎಂದಾದರೆ ವೃತ್ತಿ ಘನತೆಯ ರಕ್ಷಣೆಯ ಜವಾಬ್ದಾರಿ ಸ್ತ್ರೀ–ಪುರುಷರಿಗೆ ಭಿನ್ನವಾಗಿರುತ್ತದೆಯೇ?

ಶಿಕ್ಷಕರ ವಸ್ತ್ರಸಂಹಿತೆಯ ಬಗ್ಗೆ ಈ ಹೊತ್ತಿನ ಕಾನೂನು ಯಾವುದೇ ಉಡುಪುಗಳು ಕಡ್ಡಾಯ ಮಾಡದೇ ಇರಬಹುದು. ಆದರೆ ಅಧಿಕೃತವಲ್ಲದ, ಅಘೋಷಿತ ವಸ್ತ್ರಸಂಹಿತೆ ಶಾಲಾ–ಕಾಲೇಜುಗಳ ಶೈಕ್ಷಣಿಕ ವಾತಾವರಣದಲ್ಲಿ ಸದಾ ಕ್ರಿಯಾಶೀಲವಾಗಿರುತ್ತದೆ. ಬಹುತೇಕ ಖಾಸಗಿ ಶಾಲಾ ಕಾಲೇಜುಗಳಲ್ಲಿ ಸೀರೆಯನ್ನು ಧರಿಸಿಯೇ ಬರಬೇಕು ಎಂಬ ಅಲಿಖಿತ ಷರತ್ತಿನೊಂದಿಗೇ ಮಹಿಳೆಯರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗುತ್ತದೆ. ಒಮ್ಮೊಮ್ಮೆ ಅನಿವಾರ್ಯ ಕಾರಣಗಳಿಂದ ಸೀರೆಯನ್ನು ಧರಿಸಲಾಗದ ದಿನ, ದಂಡ ವಿಧಿಸುವ ಶಾಲಾ–ಕಾಲೇಜುಗಳೂ ಇವೆ. ಪ್ರತಿದಿನ ಕುಹುಕ, ಕಿರಿಕಿರಿ, ಚುಚ್ಚುಮಾತುಗಳನ್ನು ಎದುರಿಸಲಾಗದೇ ವಸ್ತ್ರಸಂಹಿತೆಯನ್ನು ಪಾಲಿಸುತ್ತಿರುವ ಶಿಕ್ಷಕಿಯರ ದೊಡ್ಡ ಸಮೂಹವೇ ನಮ್ಮಲ್ಲಿದೆ.

ಕೊನೆಯಲ್ಲಿ ನನ್ನದೇ ಒಂದು ಅನುಭವದೊಂದಿಗೇ ಈ ಬರಹವನ್ನು ಮುಗಿಸುತ್ತೇನೆ.

ನನ್ನ ಅರೆಕಾಲಿಕ ಬೋಧನಾವೃತ್ತಿ ಕೊನೆಗೊಂಡು, ಬೇರೊಂದು ಕಾಲೇಜಿಗೆ ಹೋಗಬೇಕಾದಾಗ ನನ್ನ ಹಿರಿಯ ಸಹೋದ್ಯೋಗಿಗಳ್ಯಾರೂ ವೃತ್ತಿಶಿಸ್ತು, ಓದು, ಸಂಶೋಧನೆ, ಅಧ್ಯಾಪನ ಜವಾಬ್ದಾರಿಗಳ ಬಗ್ಗೆ ಸಲಹೆ ಕೊಡಲಿಲ್ಲ. ಬದಲಾಗಿ ‘ಇನ್ನಾದರೂ ಸೀರೆ ಧರಿಸಿಯೇ ಕಾಲೇಜಿಗೆ ಹೋಗುವ ಮೂಲಕ ಪರಿಪೂರ್ಣ ಶಿಕ್ಷಕಿಯಾಗು’ ಎಂದು ಸಲಹೆ ನೀಡಿದರು!

ಯಾವುದೇ ವೃತ್ತಿಯ ಘನತೆ ಹೆಚ್ಚುವುದು ನಾವು ಮಾಡುವ ಕೆಲಸದ ಬಗೆಯಿಂದಲೇ ಹೊರತು ಧರಿಸುವ ದಿರಿಸಿನಿಂದಲ್ಲ, ಹಾಗೆಯೇ ಈ ಪಾವಿತ್ರ್ಯ, ಸಂಸ್ಕೃತಿ ಉಳಿಸುವ ಜವಾಬ್ದಾರಿಗಳಿಗೆ ಹೆಣ್ಣು ಮಾತ್ರ ಹೊಣೆಗಾರಳಲ್ಲ ಎಂಬ ಅರಿವು ನಮ್ಮ ಅಂತರಂಗದಲ್ಲಿಯೇ ಉದಯಿಸದ ಹೊರತು ಸಮಾಜದಲ್ಲಿ ಹೆಚ್ಚಿನ ಬದಲಾವಣೆಯನ್ನು ನಿರೀಕ್ಷಿಸುವುದು ಅಸಾಧ್ಯ. ಸರ್ಕಾರಿ ಇಲಾಖೆಗಳು ಹೊರಡಿಸುವ ಸರ್ಕ್ಯುಲರ್‌ಗಳು ವಾಪಾಸ್‌ ತೆಗೆದುಕೊಳ್ಳಬಹುದು; ಆದರೆ ಎಷ್ಟೋ ಜನರ ಮನಸ್ಸಿನಲ್ಲಿ ಬಲವಾಗಿ ಬೇರೂರಿರು ಅಗೋಚರ ಸರ್ಕ್ಯುಲರ್‌ಗಳನ್ನು ಹಿಂಪಡೆದುಕೊಳ್ಳುವುದು ಹೇಗೆ?

**

ಸೀರೆಯನ್ನು ಧರಿಸುವುದು ಏಕೆ ಕಷ್ಟ?

ಸೀರೆಯೆಂದರೆ ಯಾರಿಗೆ ಇಷ್ಟವಿಲ್ಲ? ಇಷ್ಟವೇ. ಆದರೆ ಅದನ್ನು ಪ್ರತಿನಿತ್ಯ ಧರಿಸಲಾಗದು. ಉಡುಪಿನ ಆಯ್ಕೆಯಲ್ಲಿ ಕಂಫರ್ಟ್‌ (ಆರಾಮದಾಯಕ) ಆದ್ಯತೆ ಇರಬೇಕು. ಎರಡು ಮೂರು ಬಸ್ ಹತ್ತಿಳಿದು ಬರುವಾಗ, ದ್ವಿಚಕ್ರ ವಾಹನ ಚಲಾಯಿಸುವಾಗ, ಅದೂ ಮಳೆಗಾಲದಲ್ಲಿ ಸೀರೆ ತೊಪ್ಪೆಯಾಗಿ ಬಸಿಯುತ್ತಿರುವಾಗ ತೊಡಕಿನದು ಎನಿಸುತ್ತದೆ. ತರಗತಿಯಲ್ಲಿ ಮುಕ್ತವಾಗಿ ಓಡಾಡುತ್ತಾ ಪಾಠ ಮಾಡುವಾಗಲೂ ಚೂಡಿದಾರದಷ್ಟು ಆರಾಮದಾಯಕ ಉಡುಪು ಬೇರೊಂದಿಲ್ಲ. ಸೀರೆ ಧರಿಸುವಾಗಿನ ಸಮಯ, ಪೂರ್ವ ತಯಾರಿಗಳು ಧಾವಂತದ ಬದುಕಿನೊಂದಿಗೆ ಸಹಕರಿಸುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.