ADVERTISEMENT

ಕಿವಿಗಳಿಗೆ ಬಟ್ಟೆ ಕಟ್ಟಿಕೊಂಡ ಹುಡುಗಿಯರು!

​ಪ್ರಜಾವಾಣಿ ವಾರ್ತೆ
Published 24 ಜೂನ್ 2016, 19:30 IST
Last Updated 24 ಜೂನ್ 2016, 19:30 IST
ಕಿವಿಗಳಿಗೆ ಬಟ್ಟೆ ಕಟ್ಟಿಕೊಂಡ ಹುಡುಗಿಯರು!
ಕಿವಿಗಳಿಗೆ ಬಟ್ಟೆ ಕಟ್ಟಿಕೊಂಡ ಹುಡುಗಿಯರು!   

ಹಾಸ್ಟೆಲ್‌ ಎಂಬುದು ಮರೆತರೂ ಮರೆಯಲಾಗದ ಸವಿ ನೆನಪುಗಳ ತಾಣ. ನನ್ನ ಜೀವನದ ಅದೇ ಮೊದಲ ಅದೇ ಕೊನೆಯ ಹಾಸ್ಟಲ್ ಲೈಫ್. ಬೆಚ್ಚನೆಯ ಮನೆಯಲ್ಲಿದ್ದುಕೊಂಡು ಇಚ್ಛೆ ಬಂದಂತೆ ಅಪ್ಪ, ಅಮ್ಮ, ತಂಗಿ, ತಮ್ಮನ ಜೊತೆ ಹರಟೆ ಹೊಡೆಯುತ್ತ ಪದವಿಯನ್ನು ಹಾಯಾಗಿ ಓದಿ ರ್‌್ಯಾಂಕ್‌ನಲ್ಲಿ ಪಾಸಾದೆ.

ಹಲವಾರು ಗೊಂದಲಗಳ ನಡುವೆ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಪಿ.ಜಿ. ಅಡ್ಮಿಶನ್ ಪಡೆದೆ. ಉಳಿದುಕೊಳ್ಳಲಿಕ್ಕೆ ಬಿ.ಸಿ.ಎಮ್. ಹಾಸ್ಟೆಲ್‌ನಲ್ಲಿ  – ನನ್ನ ಅಕ್ಕಂದಿರು ಅಲ್ಲೆ ಅಧ್ಯಯನ ಮಾಡುತ್ತಿದ್ದರಿಂದ – ನನ್ನನ್ನೂ ಸೇರಿಸಿದರು. ಹಾಸ್ಟೆಲ್‌ಗೆ ಹೋಗುವಾಗ ನನ್ನ ಕುಟುಂಬದ ಸದಸ್ಯರೆಲ್ಲ ಬೀಳ್ಕೊಟ್ಟ ಕ್ಷಣ ಈಗಲೂ ನೆನೆದರೆ ಕಣ್ಣುಗಳು ತೇವವಾಗುತ್ತವೆ.

ನನ್ನ ರೂಮ್‌ಮೇಟ್ಸ್‌ಗಳಾಗಿ ಅಕ್ಕಂದಿರೇ ಇರುವುದರಿಂದ ಭಯವಿರಲಿಲ್ಲ, ಆದರೇ ಬಂದ ಎರಡೇ ದಿನದಲ್ಲಿ ಅಮ್ಮನ ನೆನಪಾಗಿ ಗೋಳೋ ಎಂದು ಅತ್ತಿದ್ದು, ನನ್ನ ಜೀವದ ಗೆಳತಿಯರಾಗಿದ್ದ ಲಕ್ಷ್ಮೀ, ಬಸ್ಸಮ್ಮ ಸಮಾಧಾನ ಹೇಳಿದ್ದು ಈಗಲೂ ನೆನಪಿದೆ.

ಆರಂಭದಲ್ಲಿ ಕಷ್ಟವೆನಿಸಿದರೂ ಬಿಟ್ಟು ಹೋಗುವಾಗ ಎರಡು ವರ್ಷ ಎಷ್ಟು ಬೇಗ ಕಳೆಯಿತು ಎಂಬ ನೋವು ಕಾಡುತ್ತಿತ್ತು. ಆದರೂ ಹಾಸ್ಟೆಲ್ ಜೀವನಕ್ಕೆ ನೋವಿನಿಂದಲೇ ವಿದಾಯ ಹೇಳುವುದು ಅನಿವಾರ್ಯ.

ಇನ್ನೊಂದು ನೆನಪು ಅನ್ನೊದಕ್ಕಿಂತ ಘಟನೆ ಅನ್ನೋದು ಸೂಕ್ತವೆನಿಸುತ್ತದೆ. ನಾನು ಹಾಸ್ಟಲ್‌ನಲ್ಲಿದ್ದಾಗ ಅದು ನನ್ನ ಪಿ.ಜಿ ಯ ಎರಡನೆಯ ವರ್ಷ; ಮಳೆಗಾಲ. ಒಂದು ರಾತ್ರಿ ಮಲಗಿದ್ದೆ.

ನನ್ನ ಕಿವಿಯಲ್ಲಿ ಹುಳುವೊಂದು ಹೊಕ್ಕಿತು. ಅಬ್ಬಾ, ಆ ರಾತ್ರಿ ಇಡೀ ಹಾಸ್ಟೆಲ್ ಹುಡುಗಿಯರೆಲ್ಲ ಎದ್ದೇಳುವಂತೆ ಚೀರಿದೆ. ನೋವು ಕಡಿಮೆಯಾಗಲಿಲ್ಲ, ಕಿವಿಯಿಂದ ರಕ್ತ ಬರಲು ಶುರುವಾಯ್ತು;

ಆಗ ನನ್ನ ರೂಮ್‌ಮೇಟ್ಸ್ ಮಾಡೋ ಎಲ್ಲ ಪ್ರಯತ್ನ ಮಾಡಿದ ಮೇಲೆ ಕೊನೆಗೆ ನನ್ನ ಆತ್ಮೀಯ ಗೆಳೆಯ ಬಸವರಾಜ್‌ಗೆ ಕರೆ ಮಾಡಿದರು. ಆಗ ಸಮಯ ರಾತ್ರಿ ಒಂದು ಗಂಟೆ. ಆ ಹೊತ್ತಿಗೆ ಹುಡುಗಿಯರ ಹಾಸ್ಟೆಲ್‌ಗೆ ಹೋಗುವುದಿರಲಿ, ಆ ಕಡೆ ಸುಳಿಯೋ ಹಾಗೂ ಇರಲಿಲ್ಲ.

ದೇವರೇ ಬಲ್ಲ ಆತ ಹೇಗೋ ಬಂದನೋ! ಬಸವೇಶ್ವರ ಆಸ್ಪತ್ರೆ ಸೇರಿಸಿದರು. ಅಲ್ಲಿ ನನ್ನ ಕಿವಿಯಿಂದ ಹುಳುವನ್ನು ತೆಗೆದಾಗ ನನಗೆ ರಿಲೀಫ್ ಆಯಿತು. ಅಂದು ನನ್ನ ಗೆಳೆಯ ಮಾಡಿದ್ದ ಸಹಾಯಕ್ಕೆ ಬೆಲೆ ಕಟ್ಟಲಾಗದು.

ಎಷ್ಟು ಧನ್ಯವಾದ ಹೇಳಿದರೂ ಸಾಲದು. ಮರಳಿ ಹಾಸ್ಟೆಲ್‌ಗೆ ಬಂದಾಗ ಎಲ್ಲ ಹುಡುಗಿಯರೂ ತಮ್ಮ ಕಿವಿಗಳಿಗೆ ಬಟ್ಟೆ ಕಟ್ಟಿದ್ದನ್ನು ನೋಡಿ ನಕ್ಕಿದ್ದು... ಈ ಎಲ್ಲ ನೆನಪುಗಳು ಮನದಾಳದಲ್ಲಿ ಹಸಿರಾಗಿ ಉಳಿಯುವಂತೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.