ADVERTISEMENT

ಚಳಿಗಾಲಕ್ಕೆ ಮಲೆನಾಡ ಕಷಾಯ

ಸುಧಾ ಎಚ್‌.ಎಸ್.
Published 21 ನವೆಂಬರ್ 2014, 19:30 IST
Last Updated 21 ನವೆಂಬರ್ 2014, 19:30 IST

ಕಾಫಿ, ಚಹಾದ ಬದಲು ಕಷಾಯ ಕುಡಿದರೆ ಆರೋಗ್ಯದಿಂದಿರಬಹುದು ಎಂಬ ತಿಳಿವಳಿಕೆ ಈಗ ಜನರಲ್ಲಿ ಹೆಚ್ಚುತ್ತಿದೆ. ಆದ್ದರಿಂದ ನಗರ ಪ್ರದೇಶಗಳ ಅನೇಕ ಕಾಫಿ, ಚಹದ ಮಳಿಗೆಗಳಲ್ಲೂ ಕಷಾಯ ಕಾಣಿಸುತ್ತಿದೆ. ಇದು ಎಲ್ಲರೂ ದಿನನಿತ್ಯ ಕುಡಿಯಬಹುದಾದ ಕಷಾಯ. ಆದರೆ ಮನೆಯಂಗಳದಲ್ಲಿ ಬೆಳೆದಿರುವ ಗಿಡಗಳ ಎಲೆ, ಬೇರುಗಳಿಂದ ಹಾಗೂ ಸದಾ ಅಡುಗೆ ಮನೆಯಲ್ಲಿ ಸಿಗುವ ಪದಾರ್ಥಗಳಿಂದ ಕಷಾಯ ತಯಾರಿಸಿ ಆಯಾ ಕಾಲಕ್ಕೆ ಬರುವ ಚಿಕ್ಕಪುಟ್ಟ ಆರೋಗ್ಯ ಸಮಸ್ಯೆ ಹೋಗಲಾಡಿಸುವುದು ಮಲೆನಾಡಿನ ಜನರ ವಿಶೇಷ.

ಚಳಿಗಾಲ ಕಾಲಿಟ್ಟಿದೆ. ಈಗ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ನೆಗಡಿ, ಜ್ವರ, ಗಂಟಲು ನೋವು ಇತ್ಯಾದಿ ಸಮಸ್ಯೆಗಳಿಗೆ ಯಾವೆಲ್ಲ ಕಷಾಯ ತಯಾರಿಸಬಹುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ...

ದೊಡ್ಡಪತ್ರೆಯ (ಸಾಸಂಬರ್‌) ಕಷಾಯ
ಸಾಮಗ್ರಿ:
10-12 ದೊಡ್ಡಪತ್ರೆ ಎಲೆ, 2 ಚಮಚ ಕಾಳುಮೆಣಸು, 2 ಚಮಚ ಜೀರಿಗೆ, 3 ಚಮಚ ಬೆಲ್ಲದ ಪುಡಿ, 4 ಕಪ್‌ ನೀರು.

ವಿಧಾನ: ದೊಡ್ಡಪತ್ರೆ ಎಲೆಯನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಕಾಳುಮೆಣಸು, ಬೆಲ್ಲ, ಜೀರಿಗೆ ಜಜ್ಜಿಕೊಳ್ಳಿ. ಇದನ್ನು ನೀರಿಗೆ ಹಾಕಿ ಕುದಿಸಿ. ಇದು ಕುದಿಯುತ್ತಿರುವಾಗ ದೊಡ್ಡಪತ್ರೆ ಸೊಪ್ಪನ್ನು ಹಾಕಿ ಚೆನ್ನಾಗಿ ಕುದಿಸಿ. ಇದನ್ನು ಬಿಸಿಯಾಗಿರುವಾಗಲೇ ಸ್ವಲ್ಪ ಸ್ವಲ್ಪವೇ ಕುಡಿಯಿರಿ. ದೊಡ್ಡಪತ್ರೆಯ ಬದಲು ನಿಂಬೆಹುಲ್ಲನ್ನು ಹಾಕಿಯೂ ಈ ರೀತಿ ಕಷಾಯ ತಯಾರಿಸಿಕೊಳ್ಳಬಹುದು. ಅದನ್ನು ಜೇನುತುಪ್ಪದ ಜೊತೆ ಕುಡಿದರೆ ಉತ್ತಮ.

ಪ್ರಯೋಜನ: ಗಂಟಲ ಕೆರೆತ, ಕಫ, ಹೊಟ್ಟೆ ಉಬ್ಬರ, ಶೀತದಿಂದ ತಲೆನೋವಿಗೆ ಇದು ಉತ್ತಮ ಔಷಧ.

ADVERTISEMENT

ಲಿಂಬು ಕಷಾಯ
ಸಾಮಗ್ರಿ:
2 ನಿಂಬೆಹಣ್ಣು, 3 ಚಮಚ ಜೀರಿಗೆ, ಒಂದೆರಡು ಮೆಣಸಿನಕಾಳು, 3 ಎಲೆ ತುಳಸಿ, ಚಿಟಿಕೆ ಉಪ್ಪು, ಸ್ವಲ್ಪ ಕಲ್ಲುಸಕ್ಕರೆ, 3 ಲೋಟ ನೀರು.

ವಿಧಾನ: ಒಂದು ಪಾತ್ರೆಯಲ್ಲಿ ನೀರು ಹಾಕಿ. ಅದಕ್ಕೆ ನಿಂಬೆಹಣ್ಣು ಸೇರಿದಂತೆ ಮೇಲೆ ತಿಳಿಸಿರುವ ಎಲ್ಲ ಪದಾರ್ಥಗಳನ್ನೂ ಹಾಕಿ ಸಣ್ಣ ಉರಿಯಲ್ಲಿ ಕುದಿಸಿ. ಪಾತ್ರೆಯಲ್ಲಿರುವ ನೀರು ಕಾದು ಕಾದು ಅರ್ಧಭಾಗಕ್ಕೆ ಬರುವವರೆಗೂ ಕುದಿಸಿದರೆ ಕಷಾಯ ಸಿದ್ಧ.

ಪ್ರಯೋಜನ: ಜ್ವರ, ನೆಗಡಿ ಇದ್ದರೆ ದಿನಕ್ಕೆ ಮೂರು ಬಾರಿ ಸೇವಿಸಿದರೆ ಅದು ಶೀಘ್ರ ವಾಸಿಯಾಗುವುದು. ಇದನ್ನು ಆರೋಗ್ಯವಂತರೂ ದಿನಕ್ಕೊಂದು ಬಾರಿ ಕುಡಿಯಬಹುದು.

ಕೊತ್ತಂಬರಿ- ಕಷಾಯ
ಸಾಮಗ್ರಿ:
1 ಚಮಚ ಜೀರಿಗೆ, 1 ಚಮಚ ಧನಿಯಾ, 1 ಜ್ಯೇಷ್ಠಮಧು, ಕಾಲು ಚಮಚ ಮೆಂತ್ಯ, 10 ಕಾಳುಮೆಣಸು, ಕಾಲು ಚಮಚ ಓಮದ ಪುಡಿ, ಒಂದು ಚಮಚ ಅರಿಶಿಣ, 4 ಲವಂಗ, 1 ಚಮಚ ಶುಂಠಿ ಪುಡಿ, ಕಾಲು ಹಿಪ್ಪಲಿ, ಕಾಲು ಕಪ್‌ ಹಾಲು, 1 ಚಮಚ ಬೆಲ್ಲದ ಪುಡಿ, 3 ಕಪ್‌ ನೀರು.

ವಿಧಾನ: ಬೆಲ್ಲ ಬಿಟ್ಟು ಮೇಲೆ ತಿಳಿಸಿರುವ ಎಲ್ಲ ಪದಾರ್ಥಗಳನ್ನೂ ಹುರಿದುಕೊಳ್ಳಿ. ಅದು ಆರಿದ ಮೇಲೆ ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿ. ಈ ಪುಡಿಯನ್ನು ನೀರಿಗೆ ಸೇರಿಸಿ ಚೆನ್ನಾಗಿ ಕುದಿಸಿ ಶೋಧಿಸಿ. ಇದಕ್ಕೆ ಹಾಲು ಸೇರಿಸಿ ಕುಡಿಯಿರಿ.

ಪ್ರಯೋಜನ: ದಿನಕ್ಕೆರಡು ಬಾರಿ ಊಟಕ್ಕಿಂತ ಮುಂಚೆ ಸೇವಿಸಿದರೆ ಶೀತದಿಂದ ಕಟ್ಟಿದ ಮೂಗು ತೆರೆದುಕೊಳ್ಳುತ್ತದೆ, ಶೀತ ವಾಸಿಯಾಗುತ್ತದೆ.

ಹಿಪ್ಪಲಿ ಕಷಾಯ
ಸಾಮಗ್ರಿ:
ಒಂದು ಹಿಪ್ಪಲಿ, ಅರ್ಧ ಇಂಚು ಒಣಶುಂಠಿ, 8- 10 ಕಾಳುಮೆಣಸು, ನಾಲ್ಕೈದು ಎಲೆ ತುಳಸಿ, ನಾಲ್ಕು ಚಮಚ ಬೆಲ್ಲದ ಪುಡಿ, 2 ಲೋಟ ನೀರು.

ವಿಧಾನ: ಮೇಲಿನ ಎಲ್ಲ ಪದಾರ್ಥಗಳನ್ನು ಚೆನ್ನಾಗಿ ಜಜ್ಜಿಕೊಳ್ಳಿ. ಎರಡು ಲೋಟ ನೀರಿಗೆ ಎಲ್ಲವನ್ನೂ ಸೇರಿಸಿ ಸಣ್ಣ ಉರಿಯಲ್ಲಿ ಕುದಿಸಿ. ನೀರು ಅರ್ಧ ಭಾಗಕ್ಕೆ ಬರುವವರೆಗೂ ಕಾಯಿಸಿ. ಸ್ವಲ್ಪ ಬಿಸಿಯಾಗಿದ್ದಲೇ ಕುಡಿಯಿರಿ.

ಪ್ರಯೋಜನ: ಕೆಮ್ಮು ಮತ್ತು ಗಂಟಲು ನೋವಿಗೆ ಇದು ಉತ್ತಮ ಔಷಧ. ಆಹಾರದ ಮೊದಲು ದಿನಕ್ಕೆ ಮೂರು ಸಲದಂತೆ ಸೇವಿಸಿ. ಶೀತವಾಗಿದ್ದರೆ ಇದಕ್ಕೆ ಸ್ವಲ್ಪ ಹಾಲು ಸೇರಿಸಿಕೊಳ್ಳಿ. ಅದಕ್ಕೆ ಚಿಟಿಕೆಯಷ್ಟು ಅರಿಶಿಣ ಹಾಕಿ ಚೆನ್ನಾಗಿ ಕುದಿಸಿ. ಕುಡಿಯುವ ಸಂದರ್ಭದಲ್ಲಿ ಸ್ವಲ್ಪ ಜೇನುತುಪ್ಪ ಸೇರಿಸಿ.

ಕರಿಮೆಣಸಿನ ಕಷಾಯ
ಸಾಮಗ್ರಿ:
2 ಚಮಚ ಕರಿಮೆಣಸು, ಅರ್ಧ ಚಮಚ ಜೀರಿಗೆ, ಅರ್ಧ ಇಂಚು ಒಣಶುಂಠಿ, ಕಾಲು ಚಮಚ ಕೊತ್ತಂಬರಿ, ಕಾಲು ಚಮಚ ಉದ್ದಿನ ಬೇಳೆ, ಒಂದು ಏಲಕ್ಕಿ, 2 ಲವಂಗ, ಕಾಲು ಚಮಚ ಅರಿಶಿಣ.
ಈ ಮೇಲಿನ ಎಲ್ಲ ಪದಾರ್ಥಗಳನ್ನು ಹುರಿದು ಪುಡಿ ಮಾಡಿಕೊಳ್ಳಿ. ಇದನ್ನು ಬಾಟಲಿಯಲ್ಲಿ ಹಾಕಿಟ್ಟುಕೊಂಡು ಬೇಕಾದಾಗ ಬಳಸಿಕೊಳ್ಳಬಹುದು.

ಕಷಾಯ ಮಾಡುವ ವಿಧಾನ: ಎರಡು ಲೋಟ ನೀರಿಗೆ ಈ ಪುಡಿಯನ್ನು  ಸೇರಿಸಿ ಕುದಿಸಿ. ಕುದಿಯುವ ನೀರಿಗೆ ಸ್ವಲ್ಪ ಬೆಲ್ಲದ ಚೂರು, ಸ್ವಲ್ಪ ಉಪ್ಪು,  ತುಳಸಿ ಎಲೆ ಹಾಕಿ. ಪ್ರಯೋಜನ: ಇದು ಜ್ವರ, ಶೀತ, ನೆಗಡಿ ಕಡಿಮೆ ಮಾಡುತ್ತದೆ. ಶೀತದಿಂದ ಬಾಯಿ ರುಚಿಸದಿದ್ದರೆ ಈ ಕಷಾಯ ಕುಡಿದು ನೋಡಿ.

ಹಸಿ ಶುಂಠಿ ಕಷಾಯ
ಸಾಮಗ್ರಿ:
ಒಂದು ದೊಡ್ಡ ಶುಂಠಿ, ಒಂದು ಚಮಚ ಬೆಲ್ಲ, ಕಾಲು ಕಪ್‌ ಹಾಲು, ಎರಡು ಕಪ್‌ ನೀರು,

ವಿಧಾನ: ಶುಂಠಿಯನ್ನು ಜಜ್ಜಿ ನೀರಿಗೆ ಹಾಕಿ ಕುದಿಸಿ. ನಂತರ ಇದಕ್ಕೆ ಬೆಲ್ಲ ಹಾಕಿ ಪುನಃ ಕುದಿಸಿ ಗ್ಯಾಸ್‌ ಆರಿಸಿ. ಇದಕ್ಕೆ ಹಾಲು ಸೇರಿಸಿ. ಬಿಸಿ ಇರುವಾಗಲೇ ಸೇವಿಸಿ

ಪ್ರಯೋಜನ: ಗಂಟಲು ಕೆರೆತ, ಶೀತ, ತಲೆಭಾರ ಈ ಸಮಸ್ಯೆಗಳಿಂದ ಮುಕ್ತಿ ಪಡೆಯಲು ದಿನಕ್ಕೆ 2– 3 ಬಾರಿ ಸೇವಿಸಿ. ಇದಕ್ಕೆ ಒಂದು ಚಿಕ್ಕ ಜೇಷ್ಠಮಧುವನ್ನು ಸೇರಿಸಿ ಕುದಿಸಿದರೆ ಕೆಮ್ಮು ಕಡಿಮೆಯಾಗುತ್ತದೆ.

ಒಣಶುಂಠಿ ಕಷಾಯ
ಸಾಮಗ್ರಿ:
ಚಿಕ್ಕ ಒಣ ಶುಂಠಿ, 1 ಚಮಚ ಕರಿ ಮೆಣಸು, 1 ಚಮಚ ಜೀರಿಗೆ, 1 ಚಮಚ ಕೊತ್ತಂಬರಿ ಬೀಜ, 1 ನಿಂಬೆ ಹಣ್ಣು,
ಚಿಟಿಕೆ ಉಪ್ಪು, 1 ಚಮಚ ಬೆಲ್ಲದ ಪುಡಿ, ಒಂದು ಚಮಚ ಕೆಂಪು ಕಲ್ಲುಸಕ್ಕರೆ. 
ಒಣ ಶುಂಠಿಯನ್ನು ತುಂಡು ಮಾಡಿ ಅಥವಾ ಜಜ್ಜಿಕೊಳ್ಳಿ. ಕರಿಮೆಣಸು, ಜೀರಿಗೆ ಮತ್ತು ಕೊತ್ತಂಬರಿ ಬೀಜಗಳನ್ನು ಪ್ರತ್ಯೇಕವಾಗಿ ಹುರಿಯಿರಿ. ಇದಕ್ಕೆ ಒಣ ಶುಂಠಿ ಹಾಕಿ ಪುಡಿಮಾಡಿ. ಈ ಪುಡಿಯನ್ನು ಬಾಟಲಿಯಲ್ಲಿ ತುಂಬಿಸಿಕೊಂಡು ಆಗತ್ಯವಿರುವಾಗ ಕಷಾಯ ತಯಾರಿಸಲು ಉಪಯೋಗಿಸಬಹುದು.

ವಿಧಾನ: ನಾಲ್ಕು ಕಪ್‌ ನೀರಿಟ್ಟು ಕುದಿಸಿ. ಕುದಿಯುತ್ತಿರುವ ನೀರಿಗೆ ನಿಂಬೆ ಹಣ್ಣಿನ ರಸ, ಉಪ್ಪು, ಪುಡಿ ಮಾಡಿದ ಬೆಲ್ಲ ಮತ್ತು ಮೇಲೆ ತಯಾರಿಸಿಕೊಂಡ ಪುಡಿಯನ್ನು ಹಾಕಿ. 8 -10 ನಿಮಿಷ ಕುದಿಸಿ. ಬೇಕೆಂದರೆ ಕುದಿಸುವಾಗ ಕೆಂಪು ಕಲ್ಲುಸಕ್ಕರೆ ಸೇರಿಸಬಹುದು. ಬಿಸಿಯಿರುವಾಗಲೇ ಹಾಲು ಸೇರಿಸಿ ಅಥವಾ ಹಾಲು ಸೇರಿಸದೆಯೇ ಕುಡಿಯಿರಿ.

ಪ್ರಯೋಜನ: ನೆಗಡಿ, ಶೀತ, ಮೂಗು ಕಟ್ಟುವಿಕೆಗೆ ಇದು ರಾಮಬಾಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.