ADVERTISEMENT

ತೆಂಗಿನ ಹಾಲು ಉಪಯೋಗ ಹಲವು

ಸವಿತಾ ಬೆಂಗಳೂರು
Published 31 ಅಕ್ಟೋಬರ್ 2014, 19:30 IST
Last Updated 31 ಅಕ್ಟೋಬರ್ 2014, 19:30 IST

ಕಾಮಧೇನು ಕಲ್ಪವೃಕ್ಷ ಎಂದರೆ ತೆಂಗಿನ ಗಿಡ. ಜೀವನದ ಪ್ರತಿ ಹಂತದಲ್ಲಿಯೂ ತೆಂಗಿನ ಅಗತ್ಯ ಒಂದಲ್ಲಾ ಒಂದು ರೀತಿಯಲ್ಲಿ ಇದ್ದೇ ಇರುತ್ತದೆ. ಅದರಂತೆ ತೆಂಗಿನಿಂದ ತೆಗೆದ ಹಾಲು ಕೂಡ ಆರೋಗ್ಯದಾಯಕ. ತೆಂಗಿನ ಕಾಯಿ ತುರಿದು ತಿಳುವಾದ ಬಟ್ಟೆಯಲ್ಲಿ ಅದನ್ನು ಹಿಂಡಿ ಹಾಲು ತೆಗೆಯಬಹುದು ಇಲ್ಲವೇ ಮಿಕ್ಸಿಯಲ್ಲಿ ತೆಂಗಿನ ತುರಿ ಹಾಕಿ ಅದರಿಂದಲೂ ಹಾಲು ತೆಗೆಯಬಹುದು.

ಬಲವಾಗುವ ಮೂಳೆ: ಮೂಳೆಗಳನ್ನು ಬಲವಾಗಿಸಲು ಕ್ಯಾಲ್ಸಿಯಂನಂತೆ ಪೊಟ್ಯಾಷಿಯಂ ಕೂಡ ದೇಹದ ಮೂಳೆಗಳನ್ನು ಬಲಗೊಳಿಸಲು ಅತ್ಯಗತ್ಯ.  ತೆಂಗಿನ ಹಾಲಿನಲ್ಲಿ ಪೊಟ್ಯಾಷಿಯಂ ಅಂಶ ಅಧಿಕವಾಗಿದೆ. ಹಾಲಿನ ಸೇವನೆಯಿಂದ ಮೂಳೆ ಬಲಗೊಳ್ಳುತ್ತದೆ.
ಸ್ನಾಯು, ನರಗಳಿಗೆ ಪ್ರಯೋಜನಕಾರಿ: ಸ್ನಾಯು ಸೆಳೆತ ಅಥವಾ ಸಹಿಸಲಾಗದ ನೋವಿಗೆ ತೆಂಗಿನ ಹಾಲು ರಾಮಬಾಣ. ಸ್ನಾಯು ಹಾಗೂ ನರ ಬಲಗೊಳ್ಳುತ್ತವೆ. ತೆಂಗಿನ ಹಾಲಿನಲ್ಲಿ ಮ್ಯಾಗ್ನಿಷಿಯಂ ಅಂಶ ಹೆಚ್ಚಿದೆ. ಇದು ನೋವು ನಿವಾರಕದಂತೆ ಕಾರ್ಯ ನಿರ್ವಹಿಸುತ್ತದೆ.

ತೂಕ ಕಾಪಾಡಿಕೊಳ್ಳಲು: ಸಮತೂಕ ಕಾಪಾಡಿಕೊಳ್ಳುವಲ್ಲಿ ಸಹಾಯಕವಾಗಿದೆ ತೆಂಗಿನ ಹಾಲು. ಈ ಹಾಲನ್ನು ಕುಡಿದರೆ ಹೊಟ್ಟೆ ಬೇಗ ತುಂಬಿದಂತೆ ಅನ್ನಿಸುತ್ತದೆ.  ಹೆಚ್ಚು ತಿನ್ನಲಾಗುವುದಿಲ್ಲ. ಆದ್ದರಿಂದ ಸಮತೂಕ ಕಾಪಾಡಿಕೊಳ್ಳಬಹುದು.

ರಕ್ತಹೀನತೆ: ರಕ್ತಹೀನತೆಗೆ ಕಬ್ಬಿಣದ ಕೊರತೆಯೇ ಮುಖ್ಯ ಕಾರಣ. ಒಂದು ಕಪ್ ತೆಂಗಿನ ಹಾಲಿನಲ್ಲಿ ದಿನಕ್ಕೆ ಬೇಕಾದ ಕಾಲು ಭಾಗದ ಕಬ್ಬಿಣದ ಅಂಶ ಸಿಗುತ್ತದೆ.

ಸಂಧಿವಾತ ಸಮಸ್ಯೆ: ಸಂಧಿವಾತ  ಉರಿಯೂತದ ಸಮಸ್ಯೆ ಇರುವವರಿಗೆ  ತೆಂಗಿನ ಹಾಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ದೇಹಕ್ಕೆ ಸೆಲೆನಿಯಮ್ ಅಂಶದ ಅತ್ಯಗತ್ಯ. ಇದು ಕಡಿಮೆ ಆದಲ್ಲಿ ಸಂಧಿವಾತ ಕಾಣಿಸಿಕೊಳ್ಳುತ್ತದೆ.

ಸುಂದರ ಕೂದಲಿಗೆ: ತೆಂಗಿನ ಕಾಯಿಯಿಂದ ಹಾಲನ್ನು ತೆಗೆದು ಅದಕ್ಕೆ ಜೇನುತುಪ್ಪ ಮಿಶ್ರಣ ಮಾಡಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಬೇಕು. ಅದನ್ನು ಕೂದಲಿಗೆ ಹಚ್ಚಿ. ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿ.  ಈ ರೀತಿ ಆಗ್ಗಾಗ್ಗೆ ಮಾಡುತ್ತಿದ್ದರೆ ಕೂದಲು ಉದುರುವ ಸಮಸ್ಯೆಯಿಂದ ಮುಕ್ತಿ ಹೊಂದಬಹುದು. ಜೇನಿನ ಬದಲು ಮೆಂತ್ಯ ಅರೆದು ಮಿಶ್ರಣ ಮಾಡಿ. ತಲೆಯ ಬುಡಕ್ಕೆ ಈ ಮಿಶ್ರಣವನ್ನು ಚೆನ್ನಾಗಿ ಹಚ್ಚಿ ಅದು ಒಣಗುವವರೆಗೆ ಬಿಡಿ (20 ರಿಂದ 25 ನಿಮಿಷ) ನಂತರ ತಲೆಯನ್ನು ಚೆನ್ನಾಗಿ ತೊಳೆಯಿರಿ. ಈ ರೀತಿ ಮಾಡುವುದರಿಂದ ಕೂದಲು ಉದುರುವ ಸಮಸ್ಯೆ, ಹೊಟ್ಟು ಸಮಸ್ಯೆಯಿಂದಲೂ ಮುಕ್ತಿ ಹೊಂದಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.