ADVERTISEMENT

ನೆನಪು ಮರಳಿಸಿದ ಕಾನನ ಯಾತ್ರೆ

ಜೆಸ್ಸಿ ಪಿ.ವಿ.
Published 6 ಮೇ 2016, 19:30 IST
Last Updated 6 ಮೇ 2016, 19:30 IST
ನೆನಪು ಮರಳಿಸಿದ ಕಾನನ ಯಾತ್ರೆ
ನೆನಪು ಮರಳಿಸಿದ ಕಾನನ ಯಾತ್ರೆ   

ಬೇಸಿಗೆ ರಜೆ ನಮಗೆ ಏಪ್ರಿಲ್ 11ರಿಂದ ಆರಂಭವಾಗಿದ್ದರೂ ಎಸ್.ಎಸ್.ಎಲ್.ಸಿ ಪರೀಕ್ಷೆಗಳಿನ್ನೂ ಮುಗಿದಿರಲಿಲ್ಲ. ವಿದ್ಯಾರ್ಥಿಗಳ ಬಹುಕಾಲದ ಬೇಡಿಕೆ, ವಿಜ್ಞಾನ ಶಿಕ್ಷಕರಾದ ನಮ್ಮ ಮುಖ್ಯೋಪಾಧ್ಯಾಯರ ಯೋಜನೆಯಂತೆ, ಏಪ್ರಿಲ್ 14 ರಂದು ಅಂಬೇಡ್ಕರ್ ಜಯಂತಿ ಆಚರಣೆಯ ಬಳಿಕ ನಮ್ಮ ಶಾಲೆಯಿಂದ ಐದು ಕಿ.ಮೀ ದೂರದಲ್ಲಿರುವ ಕಾಡಿಗೆ ಹೊರಸಂಚಾರ ಹೊರಟೆವು. ಬೇಸಿಗೆಯ ರಣಬಿಸಿಲು ಕಾಡಲ್ಲಿ ಅನುಭವಕ್ಕೆ ಬರಲಿಲ್ಲವಾದರೂ, ದೂರಕ್ಕೆ ನಡೆದಂತೆಲ್ಲಾ ಸಣ್ಣಗೆ ಹಸಿವು ಪ್ರಾರಂಭವಾಗಿತ್ತು.

ಅಷ್ಟರಲ್ಲಿ ನನ್ನ ದೃಷ್ಟಿ  ದಾರಿಬದಿಯ ಗಿಡಗಳೆಡೆ ಬಿತ್ತು. ಅಲ್ಲೆಲ್ಲಾ ಕೆಂಪಗೆ ಹೊಳೆವ ಕೇಪುಳ ಹಣ್ಣುಗಳು ಸಣ್ಣ ಸಣ್ಣ ಗೊಂಚಲುಗಳಲ್ಲಿ ತುಂಬಿದ್ದವು. ನನಗೆ ನನ್ನ ಬಾಲ್ಯದ ನೆನಪಾಯ್ತು. ಕಾಡಿನ ಸಮೀಪದ ದಾರಿಯಲ್ಲಿ ನಡೆದು ಶಾಲೆಗೆ ಹೋಗಬೇಕಾಗಿದ್ದ ನಾವು ಆ ದಾರಿಯಲ್ಲಿ ನಡೆದದ್ದೇ ಇಲ್ಲ. ಕಾಡಿನೊಳಗಿಂದ ಕಾಲುದಾರಿ ಮಾಡಿಕೊಂಡಿದ್ದೆವು. ಅಲ್ಲಿ ಸಿಗುವ ನೆಲ್ಲಿಕಾಯಿ, ಕಾರೆಕಾಯಿ, ಚೂರಿಕಾಯಿ, ಕೇಪುಳ ಹಣ್ಣು, ನೇರಳೆ ಹಣ್ಣು ಇತ್ಯಾದಿ ಹಣ್ಣುಗಳನ್ನು ಕಿತ್ತು ತಿನ್ನದಿದ್ದರೆ ನಮಗೆ ದಿನ ಸಾಗುತ್ತಿರಲಿಲ್ಲ.

ಈಗ ವರ್ಷಗಳ ನಂತರ ಈ ಹಣ್ಣುಗಳು ನನ್ನನ್ನು ನೋಡಿ ನಕ್ಕರೆ ಸುಮ್ಮನಿರಲಾದೀತೇ? ನಾನು ಶಿಕ್ಷಕಿಯೆಂಬ ಬಿಗುಮಾನ ಬದಿಗಿಟ್ಟು ಮೆಲ್ಲನೆ ಒಂದು ಗೊಂಚಲು ಹಣ್ಣು ಕಿತ್ತೆ. ಒಂದೆರಡು ಹಣ್ಣು ಚಪ್ಪರಿಸಿದೆ. ಜೊತೆಗಿದ್ದ ವಿದ್ಯಾರ್ಥಿಗಳಿಗೂ ತಿನ್ನಲು ಕೊಟ್ಟು ಅದರ ಪರಿಚಯ ಮಾಡಿಕೊಟ್ಟೆ. ನಂತರ ದಾರಿಯುದ್ದಕ್ಕೂ ಸಿಕ್ಕಂತಹ ತಿನ್ನಲು ಯೋಗ್ಯವಾದ ಹಣ್ಣುಗಳನ್ನೆಲ್ಲಾ ಕೀಳುತ್ತಾ, ಹಂಚಿ ತಿನ್ನುತ್ತಾ ಸಾಗಿದೆವು. ನನ್ನ ವಿದ್ಯಾರ್ಥಿನಿಯೊಬ್ಬಳು, ‘ಮೇಡಂ,ಅದು ನಿಮಗೆ ಅಷ್ಟೊಂದು ಇಷ್ಟಾನಾ? ನಮ್ಮ ಮನೆ ಕಡೆ ಅದು ತುಂಬಾ ಇದೆ. ನಿಮಗೆ ತಂದು ಕೊಡುತ್ತೇನೆ’ ಎಂದಳು. ‘ಆ ಹಣ್ಣಿನ ರುಚಿಗಿಂತ ಅದು ನಮ್ಮ ಬಾಲ್ಯವನ್ನು ನೆನಪಿಸುತ್ತದೆ.

ಅದಕ್ಕೆ ಇಷ್ಟ’ ಎಂದೆ. ವಿದ್ಯಾರ್ಥಿಗಳಿಗೆ ನನ್ನ ಫೀಲಿಂಗ್ ಎಷ್ಟು ಅರ್ಥವಾಯ್ತೋ ಗೊತ್ತಿಲ್ಲ. ಆದರೆ ಪ್ರಸ್ತುತ ಪಟ್ಟಣ ಪ್ರದೇಶದಿಂದ ಬರುವ ಶಿಕ್ಷಕರಾದ ನಾವೆಲ್ಲಾ ಬಿಗುಮಾನ ಬಿಟ್ಟು ಅವರೊಂದಿಗೆ ಬೆರೆತದ್ದು ನೋಡಿ ವಿದ್ಯಾರ್ಥಿಗಳಿಗೆ ಖುಷಿಯಾಗಿತ್ತು. ಹುಡುಗರಂತೂ ನಮಗೋಸ್ಕರ ಕಲ್ಲೆಸೆದು ಅಬ್ಲುಕ, ಬಿರಿಂಡ ಇತ್ಯಾದಿ  ಹಣ್ಣುಗಳನ್ನು ಬೀಳಿಸಿ ತಂದುಕೊಟ್ಟರು. ಸಣ್ಣ ಮಟ್ಟಿಗೆ ಹೊಟ್ಟೆ ತಂಪಾಗಿ, ಪ್ರಯಾಣಕ್ಕೆ ಹೊಸ ಹುರುಪು ಬಂದು ಮುಂದೆ ಹೋದೆವು. ಕಾಡಿನ ದೃಶ್ಯಗಳನ್ನು ಕಣ್ತುಂಬಿಕೊಳ್ಳುವಾಗ ಕಳೆದು ಹೋದ ಬಾಲ್ಯ ಮತ್ತೆ ಮತ್ತೆ ನೆನಪಾಗಿ ಖುಷಿಯೆನಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.