ADVERTISEMENT

ಪತಿ–ಪತ್ನಿ, ಅವಳು ಮತ್ತು ಕೋರ್ಟ್‌!

ಸುಚೇತನಾ ನಾಯ್ಕ
Published 24 ಫೆಬ್ರುವರಿ 2017, 19:30 IST
Last Updated 24 ಫೆಬ್ರುವರಿ 2017, 19:30 IST
ಪತಿ–ಪತ್ನಿ, ಅವಳು ಮತ್ತು ಕೋರ್ಟ್‌!
ಪತಿ–ಪತ್ನಿ, ಅವಳು ಮತ್ತು ಕೋರ್ಟ್‌!   

ಗೀತಾ ಹಾಗೂ ಕುಮಾರ್‌ ಮದುವೆಯಾಗಿ ಸುಖವಾಗಿದ್ದರು. ಅಷ್ಟರಲ್ಲಿಯೇ ಕುಮಾರ್‌ ಜೀವನದಲ್ಲಿ ಪ್ರೇಮಾ ಎಂಬಾಕೆಯ ಪ್ರವೇಶವಾಯಿತು. ಪ್ರೇಮಾಳ ಬೆನ್ನಹಿಂದೆ ಬಿದ್ದ ಕುಮಾರ್‌, ಹೆಂಡತಿ ಗೀತಾಳಿಂದ ದೂರವಾಗತೊಡಗಿದ. ಕುಮಾರ್‌ ಹಾಗೂ ಗೀತಾ ಅವರ ಸಂಬಂಧ ಮಿತಿಮೀರಿದಾಗ ಇದು ಪ್ರೇಮಾಳಿಗೆ ಸಹಿಸದಾಯಿತು. ಆಕೆಯ ಸಹವಾಸ ಮಾಡದಂತೆ ಗಂಡನಿಗೆ ಹಲವು ಬಾರಿ ಹೇಳಿದರೂ ಪ್ರಯೋಜನವಾಗಲಿಲ್ಲ.  ಸಂಸಾರ ಹದಗೆಟ್ಟಿತು. ಗಂಡ ತನ್ನನ್ನು ಸಂಪೂರ್ಣ ಕಡೆಗಣಿಸುವುದನ್ನು ತಾಳಲಾಗದೇ ಗೀತಾ ಆತ್ಮಹತ್ಯೆ ಮಾಡಿಕೊಂಡಳು.

ಬೆಂಗಳೂರಿನಲ್ಲಿ ನಡೆದ ಈ ಪ್ರಕರಣದಲ್ಲಿ (ಎಲ್ಲ ಹೆಸರೂ ಕಾಲ್ಪನಿಕ) ಗೀತಾಳ ಸಾವಿಗೆ ಕಾರಣ ಗಂಡನ ಅಕ್ರಮ ಸಂಬಂಧ ಎನ್ನುವಲ್ಲಿ ಎರಡು ಮಾತಿಲ್ಲ. ಗಂಡ ಬೇರೊಬ್ಬಳ ಜೊತೆ ಅನೈತಿಕ ಸಂಬಂಧ ಹೊಂದಿದಾಗ ಹೆಂಡತಿಗೆ ಅದು ಮಾನಸಿಕ ದೌರ್ಜನ್ಯವೇ. ಗಟ್ಟಿಗಿತ್ತಿ ಹೆಂಡತಿಯಾದರೆ ಆ ಹೆಣ್ಣನ್ನು ಗಂಡನಿಂದ ಬಿಡಿಸುವಲ್ಲಿ ಯತ್ನ ಮಾಡಿ ಯಶಸ್ವಿಯಾಗುತ್ತಾಳೆ. ಅದು ಸಾಧ್ಯವೇ ಇಲ್ಲದಿದ್ದರೆ ದಿಟ್ಟತನ ಪ್ರದರ್ಶಿಸಿ ವಿಚ್ಛೇದನ ಪಡೆಯುತ್ತಾಳೆ. ಗಟ್ಟಿಗಿತ್ತಿಯೂ, ದಿಟ್ಟೆಯೂ ಆಗದಿದ್ದರೆ? ತನ್ನ ಭವಿಷ್ಯ ನೆನೆದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ!

ಈ ಪ್ರಕರಣದಲ್ಲಿ ಗೀತಾ ಆಯ್ಕೆ ಮಾಡಿಕೊಂಡಿದ್ದು ಮೂರನೆಯದ್ದನ್ನು. ತನ್ನನ್ನು ಬಿಟ್ಟು ಬೇರೊಬ್ಬಳ ಸಂಗ ಮಾಡಿದ್ದರಿಂದ ನೊಂದು ಗೀತಾ ಆತ್ಮಹತ್ಯೆ ಮಾಡಿಕೊಂಡಳು.

ಇಲ್ಲಿ ಗೀತಾ ಆತ್ಮಹತ್ಯೆ ಮಾಡಿಕೊಂಡಿದ್ದು ತಪ್ಪೋ ಸರಿಯೋ ಎನ್ನುವುದು ಬೇರೆಯ ಮಾತು. ಆದರೆ ಕಳೆದ ನವೆಂಬರ್‌ನಲ್ಲಿ ಸುಪ್ರೀಂಕೋರ್ಟ್‌ನಿಂದ ಹೊರಟ ತೀರ್ಪು ಮಾತ್ರ ಇಂಥ ನೊಂದ ಮಹಿಳೆಯರಿಗೆ ಆಘಾತವಾಗಿರುವುದಂತೂ ಸತ್ಯ. ಅದೇನೆಂದರೆ ಈ ಪ್ರಕರಣದಲ್ಲಿ, ಕುಮಾರ್‌, ಗೀತಾಳ ಮೇಲೆ ಎಸಗಿದ್ದು ಮಾನಸಿಕ ದೌರ್ಜನ್ಯ ಅಲ್ಲ ಎಂದು ಅಭಿಪ್ರಾಯ ಪಟ್ಟ ಕೋರ್ಟ್‌, ‘ಯಾವುದೇ ವ್ಯಕ್ತಿ ವಿವಾಹೇತರ ಸಂಬಂಧ ಹೊಂದಿರುವುದನ್ನೇ  ‘ಕ್ರೌರ್ಯ’ ಎಂದು ಭಾವಿಸಿ ಆರೋಪಿಗಳನ್ನು ‘ತಪ್ಪಿತಸ್ಥ’ ಎಂದು ಜೈಲು ಶಿಕ್ಷೆಗೆ ಗುರಿಪಡಿಸುವುದು ಸರಿಯಲ್ಲ. ಪತಿಯ ವಿವಾಹೇತರ ಸಂಬಂಧದ ಶಂಕೆಯಿಂದ ಹೆಂಡತಿ ಆತ್ಮಹತ್ಯೆ ಮಾಡಿಕೊಂಡರೆ ಅದು ಪತಿಯಿಂದ ಆತ್ಮಹತ್ಯೆಗೆ ಕುಮ್ಮಕ್ಕು ಎಂದಾಗದು’ ಎಂದಿದೆ!

ಅದೇ ಭಾರತೀಯ ದಂಡಸಂಹಿತೆ, ಅದೇ ಕಾನೂನು, ಅದೇ ಕಲಮು... ಆದರೆ  ಕೋರ್ಟ್‌ಗಳ ತೀರ್ಪು ಮಾತ್ರ ಭಿನ್ನ ಭಿನ್ನ ಎನ್ನುವುದು ವಾಸ್ತವದ ಸತ್ಯ. ಈ ಪ್ರಕರಣದಲ್ಲೂ  ಹಾಗೇ ಆಗಿದೆ. ಮೊದಲು ಸೆಷನ್ಸ್‌ ಕೋರ್ಟ್‌, ನಂತರ ಹೈಕೋರ್ಟ್‌ ಗಂಡನಿಗೆ 10 ವರ್ಷಗಳ ಶಿಕ್ಷೆ ನೀಡಿದೆ. ಆದರೆ ಅದೇ ಕಾಯ್ದೆ, ಕಲಮಿನ ಅನ್ವಯ ಸುಪ್ರೀಂ ಕೋರ್ಟ್‌ ಆತನನ್ನು ಆರೋಪಮುಕ್ತಗೊಳಿಸಿದೆ! ‘ಗೀತಾಳಿಗೆ ವಿಚ್ಛೇದನ ಪಡೆಯುವ ಅವಕಾಶ ಇದ್ದರೂ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಸರಿಯಲ್ಲ’ ಎಂಬುದು ಸುಪ್ರೀಂಕೋರ್ಟ್‌ನ ಅಭಿಪ್ರಾಯ. 2013ರಲ್ಲಿ ಕೂಡ ಗುಜರಾತಿನ ‘ಪಿನಾಕಿನ್‌ ರಾವಲ್‌’ ಪ್ರಕರಣದಲ್ಲೂ ಸುಪ್ರೀಂ ಕೋರ್ಟ್‌ ಇದೇ ನಿಲುವನ್ನು ತಾಳಿತ್ತು. ಅದರ ನಂತರ ಗುಜರಾತ್‌ನ ಗೌಸಾಬಾಯಿ ಪ್ರಕರಣದಲ್ಲೂ ಹೀಗೇ ಹೇಳಿತ್ತು.

‘ಹೆಂಡತಿಗೆ ಕಿರುಕುಳ ನೀಡಿದ ಕುರಿತು ಸೂಕ್ತ ಸಾಕ್ಷ್ಯಗಳಿದ್ದಲ್ಲಿ ಗಂಡನನ್ನು ಶಿಕ್ಷಿಸುವ ಅವಕಾಶ ಕಾನೂನಿನ ಅಡಿ ಇದೆ’ ಎನ್ನುತ್ತದೆ ನಮ್ಮ ಕಾನೂನು. ಆದರೆ ‘ವಿವಾಹೇತರ ಸಂಬಂಧ ಇದ್ದರೆ ಹೆಂಡತಿ ವಿಚ್ಛೇದನ ಪಡೆಯಬೇಕೇ ವಿನಾ ಆತ್ಮಹತ್ಯೆಗೆ ಮುಂದಾದಲ್ಲಿ  ಅದಕ್ಕೆ ಗಂಡ ಕಾರಣನಲ್ಲ’ ಎನ್ನುತ್ತದೆ ಕೋರ್ಟ್‌!
ಕಾನೂನುಗಳೆಲ್ಲಾ ಹೆಣ್ಣುಮಕ್ಕಳ ಪರವಾಗಿಯೇ ಇವೆ ಎಂದು ಅನೇಕ ಪುರುಷ-ಸಂಘಟನೆಗಳು ಬೀದಿಗಿಳಿದು ಹೋರಾಟಕ್ಕೆ ನಿಂತಿವೆ. ಆದರೆ ಈ ಪ್ರಕರಣಗಳ ತೀರ್ಪುಗಳು  ಮಹಿಳೆಯರ ಅಸ್ತಿತ್ವವನ್ನೇ ಅಲ್ಲಾಡಿಸುವಂತಿವೆ.

ಗಂಡ ಅನೈತಿಕ ಸಂಬಂಧ ಹೊಂದಿರುವುದು ಹೆಂಡತಿಗೆ ತಿಳಿದುಬಂದರೂ ಆಕೆಯ ಮನಃಸ್ಥಿತಿ ಚೆನ್ನಾಗಿ ಇರಲು ಸಾಧ್ಯವೇ? ಗಂಡ ತನಗೆ ಮೋಸ ಮಾಡುತ್ತಿದ್ದಾನೆ ಎಂದು ದೂರಿ ಹೆಂಡತಿ ಕೋರ್ಟ್‌ ಮೊರೆ ಹೋದರೆ ಕೋರ್ಟ್‌, ಗಂಡನಿಗೆ ಬುದ್ಧಿ ಹೇಳಿ ದಂಪತಿಯನ್ನು ಒಟ್ಟು ಮಾಡಲು ನೋಡುತ್ತದೆಯೇ ಅಥವಾ ‘ನಿನ್ನ ಗಂಡ ಬೇರೆ ಸಂಬಂಧ ಹೊಂದಿದ್ದರೆ ನೀನು ವಿಚ್ಛೇದನ ನೀಡು.  ಇದೊಂದೇ ನಿನಗಿರುವ ದಾರಿ’ ಎಂದು ಸಾರಾಸಗಟಾಗಿ ಹೇಳುತ್ತದೆಯೇ...? ಇಂಥ ಪ್ರಶ್ನೆ ಈಗ ಕಾಡಲು ಶುರುವಾಗಿದೆ.

ವಾಸ್ತವಿಕತೆ ಅರಿವು ಇಲ್ಲವೇ...?
ಆತ್ಮಹತ್ಯೆಯಂಥ ಘಟನೆಗಳ ಹಲವಾರು ಆದೇಶ–ತೀರ್ಪುಗಳನ್ನು ಗಮನಿಸಿದಾಗ ಕೋರ್ಟ್‌ಗಳಿಗೆ ವಾಸ್ತವಿಕತೆಯ ಅರಿವು ಇರುವುದಿಲ್ಲವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಗಂಡನಾದವ ಇನ್ನೊಂದು ಸಂಬಂಧ ಹೊಂದಿದಾಗ ಹೆಣ್ಣಿನ ಮನಸ್ಸಿನಲ್ಲಿ ಆಗುವ ತೊಳಲಾಟ, ಜೀವನದಲ್ಲಿ ಉಂಟಾಗುವ ಜುಗುಪ್ಸೆಯ ಅರಿವು ನ್ಯಾಯಾಲಯಕ್ಕೆ, ನಮ್ಮ ಕಾನೂನಿಗೆ ತಿಳಿಯುವುದಿಲ್ಲವೇ ಎಂಬ ಸಂದೇಹವೂ  ಕಾಡುತ್ತದೆ.  ಆತ್ಮಹತ್ಯೆ ಮಾಡಿಕೊಳ್ಳುವುದು ಸರಿಯಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ. ಯಾರೂ ಬೇಕೆಂದೇ ಇಂಥ ಕೃತ್ಯಕ್ಕೆ ಮುಂದಾಗುವುದಿಲ್ಲ. ಆದರೆ ‘ಗಂಡ ಅನೈತಿಕ ಸಂಬಂಧ ಹೊಂದಿದ್ದರೆ ವಿಚ್ಛೇದನ ನೀಡಿಬಿಡಿ’ ಎಂದು ಕೋರ್ಟ್‌ಗಳು ಹೇಳುವುದು ಉಚಿತವಲ್ಲ.

ನಮ್ಮ ಕಾನೂನಿನ ವಿಷಯಕ್ಕೆ ಬರೋಣ. ಭಾರತೀಯ ದಂಡ ಸಂಹಿತೆಯ (ಐಪಿಸಿ) ‘498ಎ’ ಪ್ರಕಾರ ಮಾನಸಿಕ ಕಿರುಕುಳವೂ ಕ್ರೌರ್ಯವೇ. ‘ದೈಹಿಕ ಕಿರುಕುಳವನ್ನು ಸಾಕ್ಷ್ಯದ ರೂಪದಲ್ಲಿ ತೋರಿಸಬಹುದೇ ವಿನಾ ಮಾನಸಿಕ ಕಿರುಕುಳಗಳನ್ನು ತೋರಿಸಲು ಆಗದು’ ಎಂದು ಸುಪ್ರೀಂಕೋರ್ಟ್‌ ಸೇರಿದಂತೆ ಈಗಾಗಲೇ ಹಲವು ನ್ಯಾಯಾಲಯಗಳೂ ಒಪ್ಪಿಕೊಂಡಿವೆ. ಆದರೆ ಸುಪ್ರೀಂಕೋರ್ಟ್‌ ಈಗ ನೀಡಿರುವ ತೀರ್ಪಿನ ಅನ್ವಯವೇ ಹೋಗುವುದಾದಲ್ಲಿ, ಗಂಡನ ಅನೈತಿಕ ಸಂಬಂಧ ಹೆಂಡತಿಯಾದವಳಿಗೆ ಮಾನಸಿಕ ಕಿರುಕುಳ ಆಗುವುದಿಲ್ಲ ಹಾಗೂ ತನಗೆ ಜೀವನವೇ ಬೇಡ ಎಂದು ಸಾಯುವ ನಿರ್ಧಾರಕ್ಕೆ ಹೆಂಡತಿ ಬಂದಿದ್ದಾಳೆ ಎಂದರೆ ಅದೂ ಆಕೆಗೆ ಆಗಿದ್ದ ಮಾನಸಿಕ ಯಾತನೆ ಅಲ್ಲ ಎಂಬ ತಾತ್ಪರ್ಯವೇ ಆದಂತಿದೆ!

2002ರಲ್ಲಿ ಸುಪ್ರೀಂಕೋರ್ಟ್‌ ‘ಕ್ರೌರ್ಯ’ ಶಬ್ದಕ್ಕೆ ವಿಸ್ತಾರವಾದ ಅರ್ಥ ನೀಡಿ, ‘ಒಂದು ವೇಳೆ ಗಂಡನಿಂದ ಹೆಂಡತಿ ಮಾನಸಿಕ ದೌರ್ಜನ್ಯಕ್ಕೆ ಒಳಗಾದರೆ, ಅಂಥ ದೌರ್ಜನ್ಯ ಸಹಿಸದೇ ಮಹಿಳೆ ಆತ್ಮಹತ್ಯೆ ಮಾಡಿಕೊಂಡರೆ ಅದು ಗಂಡನಿಂದಾದ ಶಿಕ್ಷಾರ್ಹ ಅಪರಾಧ’ ಎಂದಿದೆ.

ವಿಚ್ಛೇದನ ವಿಷಯದ ಬಗ್ಗೆ ಹೇಳುವುದಾದರೆ, ಈಗ ಚಿಕ್ಕಪುಟ್ಟ ಕಾರಣಗಳಿಗೆ ವಿಚ್ಛೇದನ ಆಗುವುದು ಮಾಮೂಲು. ಆದರೆ ಗಂಡನ ಅನೈತಿಕತೆ ಕುರಿತು ಹೆಂಡತಿಯಾದವಳಿಗೆ ತಿಳಿದಾಗ, ಎಲ್ಲ ಮಹಿಳೆಯರ ಮನಃಸ್ಥಿತಿಯೂ ಒಂದೇ ತೆರನಾಗಿ ಇರುವುದಿಲ್ಲ. ಒಮ್ಮೆ ಪತಿಯಿಂದ ವಿಚ್ಛೇದನ ಪಡೆದರೆ ಆಕೆ ಭವಿಷ್ಯದಲ್ಲಿ ಎದುರಿಸುವ ಸವಾಲುಗಳು ಎಂಥವು? ವಿಚ್ಛೇದಿತ ಮಹಿಳೆ ಅನುಭವಿಸಬೇಕಾಗುವ ಸಮಸ್ಯೆಗಳು ಏನು...? ಕಾಮುಕರ ದೃಷ್ಟಿಯಿಂದ ಬಚಾವಾಗಲು ಹೇಗೆಲ್ಲ ಕಷ್ಟಪಡಬೇಕು...? ಇಂಥದ್ದನ್ನೆಲ್ಲಾ ಸಾಮಾನ್ಯ ಮಹಿಳೆಯೊಬ್ಬಳು ಯೋಚಿಸಿದರೆ ಆ ನರಕಕ್ಕಿಂತ ಸಾಯುವುದೇ ಮೇಲು ಎನ್ನುವ ಮನಃಸ್ಥಿತಿಗೆ ತಲುಪಿದರೆ ಅಚ್ಚರಿಯೇನಲ್ಲ.    ಹಾಗಿದ್ದ ಮೇಲೆ ಇದನ್ನು ಮಾನಸಿಕ ಕ್ರೌರ್ಯದ ವ್ಯಾಪ್ತಿಯಿಂದ ದೂರ ಇರಿಸಿರುವುದು ಸರಿಯೇ?

ಆದರೆ ವಿಚಿತ್ರ ಎಂದರೆ, ಈ ತೀರ್ಪನ್ನು ಪ್ರಕಟಿಸುವ 3–4 ವಾರಗಳ ಮುನ್ನ ಇದೇ ಪೀಠವು ವಿಭಿನ್ನ ನಿಲುವು ತಾಳಿತ್ತು! ತನ್ನ ಹೆಂಡತಿ ಅಕ್ರಮ ಸಂಬಂಧ ಹೊಂದಿದ್ದರಿಂದ ಬೇಸತ್ತ ಗಂಡ ಆತ್ಮಹತ್ಯೆ ಮಾಡಿಕೊಂಡ ಎಂಬ ಪ್ರಕರಣವದು. ಹೆಂಡತಿಯ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಇಲ್ಲದ ಹಿನ್ನೆಲೆಯಲ್ಲಿ ಆಕೆಯ ಬಿಡುಗಡೆಯನ್ನೇನೋ ಕೋರ್ಟ್‌ ಮಾಡಿತ್ತು. ಆದರೆ ಬಿಡುಗಡೆ ಮಾಡುವ ಪೂರ್ವದಲ್ಲಿ, ‘ಹೆಂಡತಿಯು ಅನೈತಿಕ ಕೃತ್ಯ ಮತ್ತು  ಅಕ್ರಮ ಚಟುವಟಿಕೆಯಲ್ಲಿ ತೊಡಗಿರುವ ಆರೋಪ ನಿಜವೇ ಆಗಿದ್ದಲ್ಲಿ, ಅದಕ್ಕಿಂತ ಗಂಡನಿಗೆ ಆಗುವ ಮಾನಸಿಕ ದೌರ್ಜನ್ಯ ಬೇರೊಂದಿಲ್ಲ. ಈ ದೌರ್ಜನ್ಯವನ್ನು ತಾಳಲಾರದೇ ಆತ ಆತ್ಮಹತ್ಯೆ ಮಾಡಿಕೊಂಡಿರಲೂ ಸಾಕು ಎಂಬುದನ್ನು ಅಲ್ಲಗಳೆಯಲು ಆಗುವುದಿಲ್ಲ’ ಎಂದಿತ್ತು.

ಎಂದರೆ ಈ ಪ್ರಕರಣದಲ್ಲಿ ಕೋರ್ಟ್‌ ಗಂಡನಿಗೆ ಹೆಂಡತಿಯಿಂದ ಆಗಿರುವುದು ಮಾನಸಿಕ ದೌರ್ಜನ್ಯ ಎಂದು ಒಪ್ಪಿಕೊಂಡಿದ್ದರೆ, ಹೆಣ್ಣಿನ ವಿಷಯದಲ್ಲಿ ಮಾತ್ರ ‘ಮಾನಸಿಕ ಕ್ರೌರ್ಯ ಅಲ್ಲ’ ಎಂದಿದೆ! ಕೌಟುಂಬಿಕ ದೌರ್ಜನ್ಯ ಕಾಯ್ದೆಯ ದುರುಪಯೋಗ ಮಹಿಳೆಯರು ಮಾಡುತ್ತಿದ್ದಾರೆ ಎನ್ನುವುದು ಈಗ ಎಲ್ಲೆಡೆ ಕೇಳಿಬರುವ ಮಾತು. ಕೆಲವು ಪ್ರಕರಣಗಳಲ್ಲಿ ಈ ಮಾತು ನಿಜವೂ ಆಗಿದೆ. ಹಾಗೆಂದು ಅನೈತಿಕ ಸಂಬಂಧದ ವಿಷಯದಲ್ಲಿ ಈ ರೀತಿಯ ತೀರ್ಪು ನ್ಯಾಯಾಲಯಗಳು ನೀಡುವುದು ತರವಲ್ಲ ಅಲ್ಲವೇ...?

ಯಾರೇ ಆಗಲಿ, ಅಕ್ರಮ ಸಂಬಂಧ ಹೊಂದಲು ಇಂಥದ್ದೇ ಕಾರಣ ಎಂದೇನೂ ಬೇಕಿಲ್ಲ. ಆದರೆ ಸಾಧಾರಣವಾಗಿ ಗಂಡು, ಪರಸ್ತ್ರೀ ವ್ಯಾಮೋಹದಲ್ಲಿ ಸಿಲುಕಿದ ಎಂದು ಬಹಿರಂಗಗೊಂಡಾಗ ಅಂಥ ಸಂದರ್ಭದಲ್ಲಿ ಮೊದಲು ಬೊಟ್ಟು ಮಾಡಿ ತೋರಿಸುವುದು ಆತನ ಹೆಂಡತಿಯ ಮೇಲೆ. ಆಕೆ ತನ್ನ ಗಂಡನಿಗೆ  ದೈಹಿಕ ಸುಖ ನೀಡದಿದ್ದ ಕಾರಣ ಆತ ಬೇರೊಬ್ಬಳನ್ನು ಹುಡುಕಿ ಹೋದ ಎಂದೇ ಮಾತನಾಡಿಕೊಳ್ಳುವುದು ಸಹಜ. ಇದು ನಿಜವೋ, ಸುಳ್ಳೋ ಎನ್ನುವುದು ಯಾರಿಗೂ ಬೇಕಿರುವುದಿಲ್ಲ! ಅಂಥ ಪರಿಸ್ಥಿತಿಯಲ್ಲಿ ಹೆಣ್ಣಿನ ಮನಸ್ಸಿಗೆ ಆಗುವ ನೋವು ಆಕೆಯ ಮೇಲೆ ಆಗಿರುವ ಮಾನಸಿಕ ಕ್ರೌರ್ಯ ಆಗಲಾರದೇ...? ಪ್ರತಿಯೊಬ್ಬರಿಗೂ ಅವರದ್ದೇ ಆದ ಜೀವನಮೌಲ್ಯಗಳು ಇರುತ್ತವೆ ಎನ್ನುವುದು ನ್ಯಾಯಾಲಯದ ಗ್ರಹಿಕೆಗೆ ನಿಲುಕದ ವಿಷಯವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.