ADVERTISEMENT

ಬಿ.ಪಿ ಇದೆಯಾ, ಜೋಕೆ...

ಡಾ.ಕೆ.ಎಸ್‌.ಪಲ್ಲವಿ
Published 5 ಡಿಸೆಂಬರ್ 2014, 19:30 IST
Last Updated 5 ಡಿಸೆಂಬರ್ 2014, 19:30 IST

ತಾಯ್ತನ ಎನ್ನುವುದು ಒಂದು ಖುಷಿಯ ಅವಸ್ಥೆ. ತಾಯಿ ತನ್ನ ಮಕ್ಕಳಿಗೋಸ್ಕರ ತನ್ನ ಜೀವವನ್ನೂ ಲೆಕ್ಕಿಸುವುದಿಲ್ಲ ಎನ್ನುವುದಕ್ಕೆ ಪ್ರಕೃತಿಯು ಪೂರಕವಾಗಿರುತ್ತದೆ. ತನ್ನ ಮಗು ಹೊಟ್ಟೆಯಲ್ಲಿದ್ದಾಗಾಗಲಿ, ಹುಟ್ಟಿದ ನಂತರವಾಗಲಿ ಅದರ ರಕ್ಷಣೆಗೆ ತನ್ನ ಜೀವವನ್ನೇ ಒತ್ತೆ ಇಟ್ಟಿರುತ್ತಾಳೆ. ಮಗುವಿನ ಆರೈಕೆಗೆ ತನ್ನ ಸಂಪೂರ್ಣ ಜೀವ, ಜೀವನವನ್ನು ಸಮರ್ಪಿಸುತ್ತಾಳೆ.

ಇದು ಕೇವಲ ತಾಯಿಯ ಮನಸ್ಥಿತಿಯಲ್ಲದೆ ಪ್ರಕೃತಿ ನಿಯಮವೂ. ಇದರ ಕೆಲವು ನಿದರ್ಶನಗಳು ಮಗುವು ಹೊಟ್ಟೆಯಲ್ಲಿರುವಾಗಿನ ತೊಂದರೆಯೂ ಆಗಿರುವುದನ್ನು ನಾವು ಇಲ್ಲಿ ನೋಡೋಣ. ಲಲಿತಾ ಮೊದಲನೆಯ ಮಗುವಾಗಿ 8 ವರ್ಷದ ನಂತರ ಎರಡನೇ ಬಾರಿ ಬಸುರಾದಳು. ಮೊದಲ 3 ತಿಂಗಳು ವಿಪರೀತ ವಾಂತಿಯಾಗಿ ಅವಳು ಸುಸ್ತಾದಳು. 4ನೆ ತಿಂಗಳಿಂದ ಅವಳಿಗೆ ತಲೆ ಸುತ್ತು, ಕಣ್ಣು ಕತ್ತಲೆ ಇಡುವುದಕ್ಕೆ ಶುರುವಾಯಿತು. ಸುಸ್ತಿಗಾಗಿ ಎಂದು ಅವಳು ಹೆಚ್ಚು ಪೌಷ್ಟಿಕ ಆಹಾರವನ್ನು ಸೇವಿಸಲು ಶುರುಮಾಡಿದಳು. ಆದರೆ ತಲೆ ಸುತ್ತು ಕಡಿಮೆಯಾಗಲೇ ಇಲ್ಲ ಬದಲಾಗಿ ವಿಪರೀತ ತಲೆನೋವು ವಾಂತಿ ಶುರುವಾಯಿತು.

ವೈದ್ಯರ ಬಳಿ ಹೋದಾಗ ಅವಳಿಗೆ ವಿಪರೀತ ಬಿ.ಪಿ ಇದೆ ಎಂದು ತಿಳಿಯಿತು. ಅದಕ್ಕೆ ಮಾತ್ರೆಗಳನ್ನು ಕೊಟ್ಟರು. ಆದರೆ ಅವಳಿಗೆ ಆ ಮಾತ್ರೆ ತೆಗೆದುಕೊಂಡಾಗಲೆಲ್ಲ ವಿಪರೀತ ಭೇದಿಯಾಗುತ್ತಿತ್ತು. ವೈದ್ಯರ ಬಳಿ ಹೇಳಿದರೆ ಅದಕ್ಕೆ ಔಷಧಿಯನ್ನು ಕೊಟ್ಟರು. ಆದರೆ ಯಾವುದರಿಂದ ಹಾಗಾಗಿದ್ದೆಂದು ತಿಳಿಯಲು ಸಾಧ್ಯವಾಗಲೇ ಇಲ್ಲ. ಮಗುವಿಗೆ ತೊಂದರೆಯಾಗಬಾರದೆಂದು ದಿನ ತುಂಬುವ ಮುಂಚಿತವಾಗಿಯೇ ಶಸ್ತ್ರಚಿಕಿತ್ಸೆ ಮಾಡಿ ಮಗುವನ್ನು ತೆಗೆದರು.

ಹುಟ್ಟುವಾಗ ಅದರ ತೂಕ ಕೇವಲ ಒಂದೂವರೆ ಕೆ.ಜಿ ಇದ್ದು, ನವಜಾತ ಶಿಶುವನ್ನು ಐಸಿಯುನಲ್ಲಿ ಇಟ್ಟು ನೋಡಿಕೊಂಡ 1 ವಾರದ ನಂತರ ಆ ಮಗು ಸುಧಾರಿಸಿಕೊಂಡಿತು. ಆದರೆ 3 ತಿಂಗಳ ನಂತರ ಆ ಮಗುವಿನ ಬಲ ಕೈ ಮತ್ತು ಬಲ ಕಾಲು ಸ್ವಾಧೀನವಿಲ್ಲವೆಂದು ತಿಳಿಯಿತು. ಸ್ಕ್ಯಾನಿಂಗ್‌ ಮಾಡಿಸಿ ನೋಡಿದಾಗ ಅದರ ಮೆದುಳಿನಲ್ಲಿ ರಕ್ತವು ಹೆಪ್ಪುಗಟ್ಟಿದ್ದು, ಯಾವುದೇ ಸಮಯದಲ್ಲಿ ಅದಕ್ಕೆ ಫಿಟ್ಸ್‌ ಬರಬಹುದೆಂದು ತಿಳಿಯಿತು. 3 ವರ್ಷಗಳವರೆಗೂ ಏನೂ ತೊಂದರೆ ಆಗಲಿಲ್ಲ. ಆದರೆ 3ನೇ ವರ್ಷದಲ್ಲಿ ಅದಕ್ಕೆ ತೀವ್ರವಾಗಿ ಫಿಟ್ಸ್‌ ಬಂದು ಆಸ್ಪತ್ರೆಗೆ ಸೇರಿಸಲಾಯಿತು. ಅದರ ನಂತರ ಜೀವನ ಪರ್ಯಂತ ಮಾತ್ರೆ ಔಷಧಿಗಳು ತಪ್ಪಲಿಲ್ಲ. ಇದರೊಂದಿಗೆ ಮಗುವಿನ ತಾಯಿಗೂ ಬಿ.ಪಿ ಮುಂದುವರೆಯಿತು.

ಶಿಶಿರ, ಸ್ಥೂಲ ಕಾಯದ ಹುಡುಗಿ. ಮದುವೆಯಾಗಿ 6 ವರ್ಷಗಳಾದರೂ ಮಗುವಾಗಲಿಲ್ಲ. ಅದಕ್ಕಾಗಿ ಕಾಣದ ವೈದ್ಯರಿಲ್ಲ, ಮಾಡದ ಪೂಜೆಗಳಿಲ್ಲ. ಯಾವುದರ ಫಲವೋ ಅಂತು ಅವಳು ಗರ್ಭವತಿಯಾದಳು. 5 ತಿಂಗಳು ಕಳೆಯುತ್ತಿದ್ದಂತೆ ಕಾಲು ಊದಿಕೊಳ್ಳುವುದು, ಮಲಗಿ ಎದ್ದಾಗ ಮುಖ ಬಾತುಕೊಳ್ಳುವುದಕ್ಕೆ ಶುರುವಾಯಿತು. ಆ ತಿಂಗಳು ವೈದ್ಯರ ಬಳಿ ಹೋದಾಗ ಅವಳಿಗೆ ಬಿ.ಪಿ ಇರುವುದು ತಿಳಿದು ಬಂದಿತು. ಮಾತ್ರೆಗಳನ್ನು ಶುರುಮಾಡಿದರೂ ಕಡಿಮೆಯಾಗಲಿಲ್ಲ. 7ನೇ ತಿಂಗಳಲ್ಲಿ ಅವಳಿಗೆ ಸ್ವಲ್ಪಸ್ವಲ್ಪ ನೀರು ಹೋಗಲು ಶುರುವಾಯಿತು.

ವಿಪರೀತ ಬಿ.ಪಿ ಇರುವುದರಿಂದ ಮತ್ತು ನೀರು ಹೋಗುತ್ತಿರುವುದರಿಂದ ವೈದ್ಯರು ಆಸ್ಪತ್ರೆಯಲ್ಲೇ ಇಟ್ಟುಕೊಂಡರು. ಆದರೆ ಮಾರನೇ ದಿನ ಸಂಪೂರ್ಣ ನೀರುಹೋಗಿ ತುರ್ತು ಪರಿಸ್ಥಿತಿಯಲ್ಲಿ ಮಗುವನ್ನು ಹೊರತೆಗೆಯಬೇಕಾಯಿತು. ಮಗುವನ್ನು ತೆಗೆದರೂ ಅದನ್ನು ಉಳಿಸಲು ಆಗಲಿಲ್ಲ. ಬಾಣಂತಿಯನ್ನು 3 ದಿನ ಆಸ್ಪತ್ರೆಯಲ್ಲಿಟ್ಟು ಕೊಂಡಾಗಲೇ ತಾಯಿಗೆ ಫಿಟ್ಸ್ ಬಂದಿತು. ಇದು ಗರ್ಭವತಿಯರಲ್ಲಿ ಒಂದು ಸಾಮಾನ್ಯ ಸಮಸ್ಯೆಯಾದರೂ ಇದನ್ನು ನಿರ್ಲಕ್ಷಿಸಿದಲ್ಲಿ ತಾಯಿ ಮತ್ತು ಮಗುವಿನ ಜೀವಕ್ಕೆ ಅಪಾಯವಾಗುವುದು ಖಂಡಿತ. ಶೇ 3ರಿಂದ 5ರಷ್ಟು ಗರ್ಭಿಣಿಯರಲ್ಲಿ ರಕ್ತದೊತ್ತಡವನನು  ಕಾಣಬಹುದಾಗಿದೆ.

ಇದು ಹೆಚ್ಚಿನದಾಗಿ ಕೊನೆಯ ತಿಂಗಳಲ್ಲಿ ಕಾಣಿಸಿಕೊಳ್ಳುತ್ತದೆ. ಹೆಚ್ಚಿನವರಲ್ಲಿ ತುಂಬ ಕಡಿಮೆ ಪ್ರಮಾಣದಲ್ಲಿ ಕಾಣಿಸಿಕೊಂಡು ಏನೂ ತೊಂದರೆ ಕೊಡುವುದಿಲ್ಲ. ಇವರಿಗೆ ಸಹಜ ಹೆರಿಗೆ ಕೂಡ ಆಗಬಹುದು. ಆದರೆ ಇದು 6, 7ನೇ ತಿಂಗಳಲ್ಲಿ ಕಾಣಿಸಿಕೊಂಡರೆ ತೊಂದರೆಯು ಹೆಚ್ಚು ಮತ್ತು ಮಗುವಿನ ಜೀವವನ್ನು ಉಳಿಸಲು ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ. ಇವರು ಪ್ರತಿ ತಿಂಗಳು ಸರಿಯಾಗಿ ವೈದ್ಯರನ್ನು ಸಂಪರ್ಕಿಸಿ ಔಷಧಿಯನ್ನು ಸೇವಿಸಬೇಕು, ನಿರ್ಲಕ್ಷಿಸಿದಲ್ಲಿ ಫಿಟ್ಸ್‌ ಬರುವ ಸಾಧ್ಯತೆಗಳಿರುತ್ತವೆ. ಮಗುವಿನ ಜೀವಕ್ಕೆ ತೊಂದರೆಯಾಗುತ್ತದೆ.  ಕಡಿಮೆ ತೂಕದ ಮಗು ಹುಟ್ಟಬಹುದು, ಸತ್ತು ಹುಟ್ಟಬಹುದು, ಮಗುವಿಗೆ ಫಿಟ್ಸ್‌ ಬರಬಹುದು.

ಗರ್ಭಿಣಿಯರಿಗೆ ಬಿ.ಪಿ ಹೆಚ್ಚಲು ಕಾರಣ
ತಾಯಿಯ ರಕ್ತವು ಮಗುವಿಗೆ ಬೇಕಾದ ಪ್ರಮಾಣದಲ್ಲಿ ಸಿಗುವುದಿಲ್ಲ ಆದ ಕಾರಣ ತಾಯಿ ರಕ್ತದ ಒತ್ತಡ ಹೆಚ್ಚಾಗಿ ಮಗುವಿಗೆ ಆಹಾರ ತಲುಪಿಸಲು ಪ್ರಯತ್ನ ಪಡುತ್ತದೆ. ಅದು ಸಾಧ್ಯವಾಗದಾಗ ರಕ್ತದೊತ್ತಡ ಹೆಚ್ಚುತ್ತಲೇ ಹೋಗುತ್ತದೆ.
* ಹೆಚ್ಚಿನದಾಗಿ ಮೊದಲು ಬಾರಿ ಗರ್ಭವತಿಯಾದಾಗ ಬಿ.ಪಿ ಹೆಚ್ಚಿರುತ್ತದೆ.
* ತಾಯಿಗೆ 40 ವರ್ಷ ದಾಟಿದಾಗ ಬಿ.ಪಿ ಬರುವ ಸಂಭವ ಹೆಚ್ಚು.
* 8–10 ವರ್ಷಗಳ ನಂತರ ಎರಡನೇ ಬಾರಿ ಗರ್ಭಿಣಿಯಾದರೆ, ತೂಕ ಹೆಚ್ಚಿದ್ದರೆ.
* ಮನೆತನದಲ್ಲಿ ಈ ರೀತಿಯ ತೊಂದರೆ ಇದ್ದರೆ
* 1ಕ್ಕಿಂತ ಹೆಚ್ಚು ಅಂದರೆ ಅವಳಿ, ತ್ರಿವಳಿ ಮಕ್ಕಳಿದ್ದರೆ ಬಿ.ಪಿ ಹೆಚ್ಚಿರುವ ಸಾಧ್ಯತೆಗಳಿರುತ್ತದೆ.
* ಗರ್ಭ ಧರಿಸುವ ಮುಂಚೆಯೇ ಬಿ.ಪಿ ಇದ್ದಲ್ಲಿ, ಹಿಂದಿನ ಗರ್ಭಾವಸ್ಥೆಯಲ್ಲಿ ಬಿ.ಪಿ ಇದ್ದರೆ, ಮೂತ್ರಪಿಂಡದ ತೊಂದರೆ ಇದ್ದಲ್ಲಿ ಗರ್ಭಿಣಿಯರಿಗೆ ಬಿ.ಪಿ ಹೆಚ್ಚಿರುವ ಸಂಭವ ಹೆಚ್ಚು.

ಬಿ.ಪಿ ಹೆಚ್ಚಿದ್ದಾಗ ಕಾಣುವ ಲಕ್ಷಣಗಳು
ತಾಯಿಗೆ- ಕಾಲು, ಕೈ, ಮುಖ ಊತ, ತಲೆ ನೋವು, ಕಣ್ಣು ಮಂಜಾಗುವುದು, ವಾಂತಿ, ವಾಕರಿಕೆ, ತಲೆ ಸುತ್ತು, ಅತಿಯಾಗಿ ತೂಕ ಹೆಚ್ಚುವುದು, ಕಿರಿಕಿರಿ. ಇದನ್ನು ನಿರ್ಲಕ್ಷಿಸಿದರೆ ಫಿಟ್ಸ್, ರಕ್ತಸ್ರಾವ, ಸ್ಟ್ರೋಕ್‌ ಸಂಭವಿಸುತ್ತದೆ. ಮಗುವಿಗೆ -ತೂಕ ಕಡಿಮೆಯಿರುವುದು, ಅಂಗಾಂಗಗಳು ಸರಿಯಾಗಿ ಬೆಳೆಯದೇ ಇರುವುದು, ಉಸಿರಾಟದ ತೊಂದರೆ, ಫಿಟ್ಸ್, ಸ್ಟ್ರೋಕ್‌.

ಇದನ್ನು ಕಂಡು ಹಿಡಿಯುವುದು ಹೇಗೆ
ಗರ್ಭಿಣಿಯರ ಬಿ.ಪಿ 120/80mmHgಗಿಂತ ಹೆಚ್ಚಿದ್ದಲ್ಲಿ, ಹಾಗು ಮೂತ್ರದಲ್ಲಿ ಪ್ರೋಟಿನ್‌‌ ಹೆಚ್ಚಿದ್ದಲ್ಲಿ ತೊಂದರೆ ಇರುವುದಾಗಿ ಹೇಳಬಹುದು.

ಪರಿಹಾರೋಪಾಯ
ಬಿ.ಪಿ ಅತಿ ಹೆಚ್ಚಿದ್ದಲ್ಲಿ ಗರ್ಭಿಣಿಯರನ್ನು ಆಸ್ಪತ್ರೆಯಲ್ಲೇ ಇಟ್ಟುಕೊಂಡು ದಿನದಲ್ಲಿ 4-6 ಬಾರಿ ಬಿ.ಪಿ ಪರೀಕ್ಷಿಸಿ ಸೂಕ್ತ ಚಿಕಿತ್ಸೆ ಕೊಡಬೇಕಾಗಿರುತ್ತದೆ. ಆದಷ್ಟು ಬೇಗ ಹೆರಿಗೆ ಮಾಡಿಸಬೇಕಾಗಿರುತ್ತದೆ.

ಆಯುರ್ವೇದ ಪರಿಹಾರೋಪಾಯ
ಗರ್ಭಾವಸ್ಥೆಯನ್ನು ನಾವು ಎಂದೂ ಪೂರ್ವ ತಯಾರಿಯೊಂದಿಗೆ ಯೋಜಿಸಬೇಕಾಗಿರುತ್ತದೆ. ಹೀಗೆ ಯೋಜಿಸುವಾಗ ನಾವು ತಂದೆ ತಾಯಿ ಇಬ್ಬರಿಗೂ ದೇಹ ಶೋಧನವನ್ನು ಮಾಡುವುದರಿಂದ ಮತ್ತು ಸರಿಯಾಗಿ ಗರ್ಭಕಟ್ಟಲು, ಸರಿಯಾಗಿ ಗರ್ಭ ಬೆಳೆಯಲು ಔಷಧಿಯನ್ನು ಕ್ರಮವಾಗಿ ತೆಗೆದುಕೊಳ್ಳುವುದರಿಂದ ಗರ್ಭಾವಸ್ಥೆಯ ಎಲ್ಲಾ ತೊಂದರೆಗಳನ್ನೂ ನಿವಾರಿಸ ಬಹುದಾಗಿರುತ್ತದೆ.

ಗರ್ಭಿಣಿಯರಿಗೆ ಬಿ.ಪಿ ಹೆಚ್ಚಿರುವುದು ಕಂಡುಬಂದಲ್ಲಿ, ಶಿರೋಧಾರ, ಶಿರೋಪಿಚು, ನಸ್ಯ, ತಕ್ರ ಧಾರ, ಲಘು ಅಭ್ಯಂಗ, ಶಿರೋ ಅಭ್ಯಂಗ, ಮಾಡಬಹುದಾಗಿರುತ್ತದೆ. ಔಷಧಿಗಳಾದ- ಕಾಮದುಗ ವಟಿ, ಸುಕುಮಾರ ಗೃತ, ತಿಕ್ತಕ ಗೃತ, ಚಂದನಾದಿ ಚೂರ್ಣ, ಉಪಯುಕ್ತವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.