ADVERTISEMENT

‘ಬದುಕು ಕಲಿಸಿದ ತಾಣವದು’

ಹಾಸ್ಟೆಲ್‌ ನೆನಪು

​ಪ್ರಜಾವಾಣಿ ವಾರ್ತೆ
Published 17 ಜೂನ್ 2016, 19:30 IST
Last Updated 17 ಜೂನ್ 2016, 19:30 IST
‘ಬದುಕು ಕಲಿಸಿದ ತಾಣವದು’
‘ಬದುಕು ಕಲಿಸಿದ ತಾಣವದು’   

ಅದು ತುಂಬ ಸುಂದರ ನಗರ. ಆಗ ತಾನೆ ಪಿಯುಸಿ ಶಿಕ್ಷಣಕ್ಕೆಂದು ಬಂದೆ. ಕಾಲೇಜು ಎದುರು ಲೇಡಿಸ್ ಹಾಸ್ಟೆಲ್. ಎಂದೂ ಮನೆಯವರನ್ನು ಬಿಟ್ಟಿರದ ನನಗೆ ಹಾಸ್ಟೆಲ್ ನೋಡಿ ಜೈಲನ್ನು ನೋಡಿದ ಅನುಭವವಾಯಿತು. ನನ್ನನ್ನು ಅಡ್ಮಿಷನ್ ಮಾಡಿಸಿ ಕೈಗೆ ದುಡ್ಡು ಕೊಟ್ಟು ಅಪ್ಪ ಅಮ್ಮ ಊರಿಗೆ ತೆರಳಿದರು.


ಹಾಸ್ಟೆಲ್ ಅಂದ್ರೆ ಹುಷಾರಾಗಿರಬೇಕು; ಹಾಗೆ, ಹೀಗೆ – ಅಂತೆಲ್ಲ ಎಲ್ಲರೂ ಹೆದರಿಸಿದ್ದರು. ಯಾವ ತರದ ಫ್ರೆಂಡ್ಸ್‌ ಸಿಗುತ್ತಾರೋ ಎಂಬ ಭಯ ಇತ್ತು. ಆದರೆ ನನ್ನ ರೂಂ–ಮೇಟ್ಸ್ ಎಲ್ಲರೂ ನನಗೆ ಒಳ್ಳೆಯವರೆ ಸಿಕ್ಕಿದ್ದರು. ಅಲ್ಲಿ ನಾವೇ ಜೂನಿಯರ್ಸ್. ಹಾಸ್ಟೆಲ್‌ನಲ್ಲಿ ಪದವಿ ಓದುತ್ತಿರೋ ಹುಡುಗಿಯರಿದ್ದರು.

ಅವರೆಲ್ಲ ಸೇರಿಕೊಂಡು ನಮ್ಮನ್ನು ರ್‌್ಯಾಗ್ ಮಾಡೋಕೆ ಶುರು ಮಾಡಿದರು. ಒಂದು ದಿನ ನಾನು ಹೋಗುವಾಗ ಹಿಂದಿನಿಂದ ಯಾರೋ ‘ಶ್ರೀ’ ಅಂತ ಕರೆದರು. ಕರೆದವರು ನಮ್ಮ ಸೀನಿಯರ್ಸ್. ಏನು ಅಂತ ಕೇಳಿದೆ. ‘ಏ ನಿನ್ನನ್ನು ಯಾರು ಕರೆದಿದ್ದು.

ಶ್ರೀ ಅಂತ ನೀನೊಬ್ಳೇನಾ ಇರೋದು. ತಿರುಗಿ ನೋಡ್ಬೇಡ, ಹೋಗ್ತಾ ಇರು’ ಎಂದರು. ಮೆಸ್‌ಗೆ ಹೋದರೆ ಊಟ ಸರಿಯಾಗಿ ಕೊಡುತ್ತಿರಲಿಲ್ಲ. ಟಿ.ವಿ. ನೋಡಲು ಬಿಡುತ್ತಿರಲ್ಲ.

ಒಂದಲ್ಲ ಒಂದು ಕಾಟ ಕೊಟ್ಟು ಮಜಾ ತೆಗೆದುಕೊಳ್ಳುತ್ತಿದ್ದರು. ಅವರ ಕಾಟ ತಡಿಯಲಾರದೇ ವಾರ್ಡನ್‌ಗೆ ದೂರು ಕೊಟ್ಟೆವು. ಆಮೇಲೆ ಎಲ್ಲರೂ ತೆಪ್ಪಗಾದರೂ ದ್ವೇಷ ಇದ್ದೇ ಇತ್ತು. ಅವರು ಯಾವಾಗ ಪದವಿ ಮುಗಿಸಿ ಹೊಗುತ್ತಾರೋ ಎಂದು ಅನಿಸುತ್ತಿತ್ತು.

ಅಂತೂ ಇಂತೂ ಆ ದಿನಗಳು ಬಂದವು. ನಮಗೆ ಸ್ವಾತಂತ್ರ ಸಿಕ್ಕಷ್ಟು ಸಂತೋಷ. ಈ ಎಲ್ಲ ಘಟನೆಗಳ ಕಾರಣದಿಂದಾಗಿ ನಾವೆಲ್ಲ ಜೂನಿಯರ್ಸ್‌ಗೆ ತುಂಬ ಹತ್ತಿರವಾದೆವು.

ಎಲ್ಲರೂ ಒಟ್ಟಿಗೆ ಊಟ ಮಾಡೋದು, ಒದುವುದು, ಹಾಡುವುದು, ಒಬ್ಬರಿಗೊಬ್ಬರು ಸಹಾಯ ಮಾಡುವುದು, ಓದುವಾಗ ಸಂದೇಹ ಇದ್ದರೆ ಪರಿಹಾರ ಮಾಡಿಕೊಳ್ಳುವುದು ಮಾಡುತ್ತಿದ್ದೆವು. ಇಂಥ ವಾತಾವರಣದಿಂದಾಗಿ ಹಾಸ್ಟೆಲ್ ತುಂಬಾನೆ ಇಷ್ಟವಾಗುತ್ತಹೋಯಿತು.

ಹೀಗೆ ವರ್ಷಗಳು ಕಳೆದಂತೆ ನಾವು ಸೀನಿಯರ್ಸ್ ಆದೆವು. ನಮ್ಮ ಸೀನಿಯರ್ಸ್ ತರಹ ನಾವು ರ್‌್ಯಾಗ್ ಮಾಡಬಾರದು ಎಂದು ತೀರ್ಮಾನಿಸಿ ನಮ್ಮ ಕಿರಿಯ ಸ್ನೇಹಿತರನ್ನು ತುಂಬ ಚೆನ್ನಾಗಿ ಮಾತನಾಡಿಸುತ್ತಿದ್ದೆವು.

ಕೊನೆಗೂ ನಾವು ಹಾಸ್ಟೆಲ್ ಬಿಟ್ಟು ಹೋಗುವ ಸಮಯ ಬಂದೇ ಬಿಟ್ಟಿತು. ನಮ್ಮ ಜೂನಿಯರ್ಸ್ ನಮಗೋಸ್ಕರ ಫೇರ್‌ವೆಲ್ ಪಾರ್ಟಿ ಇಟ್ಟುಕೋಂಡಿದ್ದರು. ಎಲ್ಲ ಸೀನಿಯರ್ಸ್‌ಗೂ ಗಿಫ್ಟ್‌ ಕೊಟ್ಟು, ಒಳ್ಳೆಯ ಟೈಟಲ್ ಕೊಟ್ಟೆವು, ಹಾಡು ನೃತ್ಯದ ಮೂಲಕ ನಮ್ಮನ್ನು ರಂಜಿಸಿದರು. ಎಲ್ಲರನ್ನು ಬಿಟ್ಟು ಹೊರಡುವ ಸಮಯ. ಎಲ್ಲರ ಕಣ್ಣುಗಳೂ ಒದ್ದೆಯಾದವು.

ಇಂದಿಗೆ ಆ ದಿನಗಳು ಕಳೆದು 13 ವರ್ಷ. ಇನ್ನೂ ಆ ನೆನಪುಗಳು ಮಾಸದಂತಿವೆ. ಅಲ್ಲಿನ ಪ್ರತಿಯೊಂದು ಘಟನೆಯೂ ಏನಾದರೊಂದನ್ನು ಕಲಿಸಿಕೊಟ್ಟಿದೆ. ಅಲ್ಲಿ ಎಲ್ಲ ಮನೋಭಾವದ ಹುಡುಗಿಯರಿರುತ್ತಾರೆ. ಮುಗ್ಧತೆಯಿಂದ ಬರುವ ಎಲ್ಲ ಹುಡುಗಿಯರಿಗೂ ಮೊದಲು ಭಯ ಕಾಡುವುದಂತೂ ಸಹಜ.

ಆದರೆ ಕ್ರಮೇಣ ಎಲ್ಲವೂ ಸರಿ ಹೋಗುತ್ತದೆ. ಎಲ್ಲರ ಜೊತೆ ಹೊಂದಿಕೊಂಡು, ಕೆಟ್ಟದನ್ನು ಕಡೆಗಣಿಸಿ, ಒಳ್ಳೆಯದನ್ನು ಸ್ವೀಕರಿಸಿ ಬದುಕುವುದನ್ನು ಹಾಸ್ಟೆಲ್‌ನ ಜೀವನ ಹೇಳಿಕೊಟ್ಟಿದೆ... ಥಾಂಕ್ಸ್ ಟು ಹಾಸ್ಟೆಲ್. ಮತ್ತೆ ಹಾಸ್ಟೆಲ್‌ಗೆ ಹೋಗೋಣ ಅನ್ನಿಸುತ್ತಿದೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT